ಚಂದಬಾರಿ ರಾಧೆ ಗೋಪಾಲ
ಪುರಾಣದ ಕಲ್ಪನೆಗಿಂತ ಭಿನ್ನವಾಗಿ, ತುಳು ಜಾನಪದ ಪಾಡ್ದನಗಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲುಪ, ಲಂಪಟ ಎಂಬಂತೆ ಚಿತ್ರಿಸಿರುವುದು ತುಳು ಜನಪದರಲ್ಲಿದ್ದ ನಿಂದಾಸ್ತುತಿಯ ಹೊಳಹನ್ನು ನೀಡುತ್ತದೆ. ದೇವರನ್ನು ಕೂಡ ತಮ್ಮ ಲ್ಲೇ ಒಬ್ಬನಂತೆ ಪರಿಭಾವಿಸುವ ಮುಗ್ಧ ಸ್ವಾತಂತ್ರ್ಯ ಜನಪದರಿಗಷ್ಟೇ ಇರಲು ಸಾಧ್ಯವೇನೋ....
ತುಳು ಜನಪದ ಸಾಹಿತ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಾಡ್ದನಗಳಲ್ಲಿ ಈಶ್ವರ,ಕೃಷ್ಣ ಮೊದಲಾದ ದೇವರುಗಳ ಉಲ್ಲೇಖವಿದೆ. ಇಲ್ಲಿ ದೇವರುಗಳು ಪುರಾಣದ ಕಲ್ಪನೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿದ್ದಾರೆ. ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣ ಪ್ರಧಾನ ಪಾತ್ರವಾಗಿದ್ದಾನೆ. ನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಕೃಷ್ಣನ ಪ್ರಸ್ತಾಪವಿದೆ. ಇಲ್ಲೆಲ್ಲ ಶ್ರೀಕೃಷ್ಣನನ್ನು ಮಹಾತ್ಮನನ್ನಾಗಿ ಚಿತ್ರಿಸಿಲ್ಲ, ಈ ಪಾಡ್ದನಗಳಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲನಾಗಿ, ವಿಷಯಲಂಪಟನಂತೆ, ಕಳ್ಳರ ಕಳ್ಳನಂತೆ ಚಿತ್ರಿಸಲಾಗಿದೆ.
ಪುರಾಣದ ಪರಿಕಲ್ಪನೆಯಲ್ಲಿ ಶ್ರೀಕೃಷ್ಣ-ರಾಧೆಯರು ರಾಧೆಯರು ಅನುಪಮ ಪ್ರೇಮಿಗಳು. ಕೃಷ್ಣನಿಗೆ ಒಲಿದ ರಾಧೆ ತಾನಾಗಿಯೇ ಕೃಷ್ಣನೆಡೆಗೆ ಬಂದಂತೆ ಕತೆ ಪುರಾಣಗಳಲ್ಲಿದೆ. ಆದರೆ ಚಂದಬಾರಿ ರಾಧೆ ಸಿರಿಕೃಷ್ಣಕತೆ ಪಾಡ್ದನದಲ್ಲಿ ಶ್ರೀಕೃಷ್ಣನು ರಾಧೆಯನ್ನು ಮೋಸದಿಂದ ವಶಪಡಿಸಿಕೊಂಡ ಕಥಾನಕವಿದೆ. ಚಂದಬಾರಿಯನ್ನು ಶ್ರೀಕೃಷ್ಣನಿಗೆಕೊಟ್ಟು ಮದುವೆ ಮಾಡಿಕೊಟ್ಟಿರುವುದರಿಂದ ರಾಧೆಗೆ ತನಗೋರ್ವ ಅಕ್ಕಇರುವುದು ತಿಳಿದಿರುವುದಿಲ್ಲ. ಒಂದು ದಿನ ರಾಧೆ ತನ್ನ ಪತಿ ಗೋಪಾಲನಲ್ಲಿ ನನಗೆ ಯಾರು ಸಂಬಂಧಿಕರು ಇಲ್ಲವೇ? ಎಂದು ಪ್ರಶ್ನಿಸುತ್ತಾಳೆ.
ಆಗ ಗೋಪಾಲನ್ನು `ನಿನಗೆ ಚಂದಬಾರಿ ಎಂಬ ಅಕ್ಕ ಇದ್ದಾಳೆ. ಅವಳಿಗೆ ಮೇಲಿನ ಮಿರಿಲೋಕದ ಶ್ರೀಕೃಷ್ಣನೊಂದಿಗೆ ಮದುವೆಯಾಗಿದೆ’ ಎಂದು ಹೇಳುತ್ತಾನೆ.
ತನಗೆ ಅಕ್ಕ ಇದ್ದಾಳೆಂಬ ತಿಳಿದಾಗ ಸಂತಸಗೊಂಡರಾಧೆ, ಆಕೆಯನ್ನು ನೋಡಬೇಕು ಎಂದು ಹಠ ಮಾಡುತ್ತಾಳೆ. ಆಗ ಗೋಪಾಲ, ನಿನ್ನ ಭಾವ ಶ್ರೀಕೃಷ್ಣನಿಗೆ ಒಳ್ಳೆಯ ಗುಣಗಳಿಲ್ಲ, ಹೋಗಬೇಡ ಎನ್ನುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಆದರೆ ರಾಧ ಹಠ ಮಾಡಿ ಊಟ ತಿಂಡಿ ಸ್ನಾನಾದಿಗಳನ್ನು ತ್ಯಜಿಸುತ್ತಾಳೆ. ಆಗ ಮನ ಕರಗಿದ ಗೋಪಾಲ ದಂಡಿಗೆ ಸಿದ್ಧಪಡಿಸಿ ಕಳುಹಿಸಿಕೊಡುತ್ತಾನೆ.
ಮೇಲು ಮಿರಿಲೋಕದಲ್ಲಿ ಕಂಬಳ ಗದ್ದೆಯ ಕಟ್ಟಹುಣೆಯಲ್ಲಿ ದಂಡಿಗೆ ಬರುವುದನ್ನು ನೋಡಿದ ಶ್ರೀಕೃಷ್ಣ ದಂಡಿಗೆ ಬರುತ್ತಿರುವ ಬಗ್ಗೆ ಹೇಳಿದಾಗ ಚಂದಬಾರಿಗೆ ಬರುತ್ತಿರುವುದು ತನ್ನ ತಂಗಿ ರಾಧೆ ಎಂದು ತಿಳಿಯುತ್ತದೆ. ಆಗ ಅವಳು ``ಅವಳು ನನ್ನ ತಂಗಿ ರಾಧೆ. ಅವಳು ಬರಲಿ, ಅವಳ ತಂಟೆಗೆ ಹೋಗಬೇಡಿ’’ ಎಂದು ಕೇಳಿಕೊಳ್ಳುತ್ತಾಳೆ.
ರಾಧೆಯನ್ನು ಪ್ರೀತಿಯಿಂದ ಬರಮಾಡಿಕೊಂಡ ಚಂದಬಾರಿ ಕೈಕಾಲು ತೊಳೆಯಲು ಮುತ್ತಿನ ಕೆರೆಗೆ ಕಳುಹಿಸುತ್ತಾಳೆ. ಅಲ್ಲಿ ಶ್ರೀಕೃಷ್ಣ ತಾವರೆ ಹೂವಾಗಿ ಬಂದು ರಾಧೆಯ ಮಡಲಿಗೆ ಬಿದ್ದು ತನ್ನ ನಿಜರೂಪ ತೋರಿದಾಗ ಕೃಷ್ಣನ ಕುರಿತು ಮೊದಲೇ ತಿಳಿದಿದ್ದ ರಾಧೆ ಅವನನ್ನು ಬೈದು, ಅವನಿಂದ ತಪ್ಪಿಸಿಕೊಂಡು ಅಕ್ಕನಿರುವಲ್ಲಿಗೆ ಬರುತ್ತಾಳೆ.
ಅಕ್ಕ-ತಂಗಿ ಅಕ್ಕಪಕ್ಕ ಕುಳಿತುಆತ್ಮೀಯತೆಯಿಂದ ಮಾತನಾಡಿ ಬೇಸರ ಕಳೆಯುತ್ತಾರೆ. ಸಂಜೆಯಾಗುತ್ತಲೇ ತಂಗಿ ರಾಧೆಯು ಅಕ್ಕನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.
ಇತ್ತ ಶ್ರೀಕೃಷ್ಣ ಚಂದಬಾರಿಯ ಒಂದು ಸೀರೆಯನ್ನು ಉಟ್ಟು ಚಂದಬಾರಿಯ ವೇಷವನ್ನು ಧರಿಸುತ್ತಾನೆ. ಅಕ್ಕನ ದಾರಿಯನ್ನುಕಾಯುತ್ತಿದ್ದ ರಾಧೆ ಚಂದಬಾರಿ ರೂಪದಲ್ಲಿ ಬಂದ ಶ್ರೀಕೃಷ್ಣನನ್ನು ಅಕ್ಕನೆಂದೇ ಭಾವಿಸಿ ಸ್ವಾಗತಿಸಿ ಸತ್ಕಾರ ಮಾಡುತ್ತಾಳೆ. ರಾತ್ರಿ ಊಟ ಮಾಡಿ ಏಳು ಮಾಳಿಗೆಯ ಉಪ್ಪರಿಗೆಯ ಮೇಲೆ ಹೋಗಿ ರಾಧೆ ಮತ್ತು ಚಂದಬಾರಿ ರೂಪದಲ್ಲಿರುವ ಶ್ರೀಕೃಷ್ಣ ಮಲಗಲು ಹೋಗುತ್ತಾರೆ. ತಂಗಿರಾಧೆ ಅಕ್ಕನಲ್ಲಿ ಕಥೆ ಹೇಳೆಂದು ಹೇಳುವಾಗ ನನಗೆ ಕಥೆಗಿತೆ ತಿಳಿದಿಲ್ಲ. ನಾನು ನನ್ನ ದೇವರುಶ್ರೀಕೃಷ್ಣ ನಾಮಸ್ಮರಣೆ ಮಾತ್ರ ಮಾಡುವುದು ಎಂದು ಚಂದಬಾರಿ ರೂಪ ಧರಿಸಿದ ಶ್ರೀಕೃಷ್ಣ ಹೇಳುತ್ತಾನೆ. ಹಾಗಾದರೆ ಅದನ್ನೇ ಹೇಳು ಎಂದು ರಾಧೆ ಹೇಳುತ್ತಾಳೆ. ಆಗ ನಾನು ಹೇಳುವುದಿಲ್ಲ. ನಾನು ಹೇಳಿದರೆ ನಿನ್ನ ಭಾವ ಇಲ್ಲಿ ಪ್ರತ್ಯೇಕ್ಷವಾಗುತ್ತಾನೆ ಎಂದುಚಂದಬಾರಿ ರೂಪದ ಶ್ರೀಕೃಷ್ಣ ಹೇಳುತ್ತಾನೆ. ತೊಂದರೆ ಇಲ್ಲ. ಅದನ್ನೇ ಹೇಳು ಎಂದು ರಾಧೆ ಹೇಳಿದಾಗ ಚಂದಬಾರಿ ರೂಪದ ಶ್ರೀಕೃಷ್ಣ.ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ ಏಳು ಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಆಗರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೆ? ನಾನು ಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ, ನೀನೇ ಕರಕೊಂಡು ಹೋಗು ಎನ್ನುತ್ತಾನೆ.
ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ. ಎಂದುಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.
ಇದೇ ರೀತಿನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಶ್ರೀಕೃಷ್ಣನನ್ನು ಸ್ತ್ರೀಲೋಲುಪನಂತೆ ಚಿತ್ರಿಸಲಾಗಿದೆ. ತುಳು ಜನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಶ್ರೀಕೃಷ್ಣನ ಪರಿಕಲ್ಪನೆ ವಿಶಿಷ್ಟವಾಗಿ ಮೂಡಿ ಬಂದಿದೆ. ದಾಸವರೇಣ್ಯರ ನಿಂದಾಸ್ತುತಿಗಳಂತೆ ಇವು ಕೂಡ ತುಳು ಜನಪದರ ನಿಂದಾಸ್ತುತಿಗಳೇ ಇರಬಹುದು.
3. ಮಧುರಗೆ ಮದುಮಗಳು
ಮದುವೆಗಿಂತ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ವಿಚಾರ ದೇಯಿ ಬೈದೆತಿ ಪಾಡ್ದನದಲ್ಲಿದೆ. ಅಂತಹ ಪದ್ಧತಿಯ ಕುರಿತು ರಚಿಸಲ್ಪಟ್ಟ ಪಾಡ್ದನವಿದು. ಏಳು ಜನ ಅಕ್ಕ ತಂಗಿಯರಲ್ಲಿ ಮಧುರಗೆ ಹಿರಿಯವಳು. ಆರು ಜನ ತಂಗಿಯರಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತದೆ. ಮಧುರಗೆ ಮದುವೆಯಾಗದೆ ಉಳಿದಾಗ ಆರು ಜನ ತಂಗಿಯರು ಹಾಗೂ ಮನೆ ಮಂದಿ ಒಟ್ಟಾಗಿ ಚರ್ಚಿಸಿ “ಅವಳ ಕಣ್ಣು ಕಟ್ಟಿ ಕಾಡಿಗೆ ಬಿಡಬೇಕು” ಎಂದು ನಿಶ್ಚಯಿಸುತ್ತಾರೆ. ದೊಡ್ಡಪ್ಪನ ಮಗನಿಗೆ ನೂಲ ಮದುವೆ(ಉಪನಯನ) ಎಂದು ಹೇಳಿ ಅವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಾಗ ಕಾಡಿನಲ್ಲಿ ಬಿಟ್ಟು ತಂದೆ ಹಿಂದಿರುಗುತ್ತಾರೆ. ಅವಳ ತಾಯಿ ‘ತನ್ನ ಮಗಳನ್ನು ಒಂದು ನೆಲೆಗೆ ಮುಟ್ಟಿಸುವಂತೆ’ ದೈವಗಳಲ್ಲಿ ಪ್ರಾರ್ಥಿಸುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಜುಮಾದಿ ದೈವವು ಮೂರ್ತೆ ತೆಗೆಯುವ ಬೈದ್ಯನ ರೂಪದಲ್ಲಿ ಬಂದು ಅವಳನ್ನು ಕರೆದೊಯ್ದು ಕದ್ರಿಯ ಬಂಗೇರ ಅರಸನಿಗೆ ಒಪ್ಪಿಸುತ್ತದೆ. ಆತ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಮಧುರಗೆಯ ಕಥೆ ಸುಖಾಂತವಾಗಿದೆಯಾದರೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಕಾಡಿನಲ್ಲಿ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬಿಡುತ್ತಿದ್ದ ಅನಿಷ್ಟ ಪದ್ಧತಿಯ ಕುರಿತು ತಿಳಿಸುತ್ತದೆ. ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಕಾಡಿನ ದಾರಿಯಲ್ಲಿ ಬಂದ ಯಾರೋ ಕರುಣಾಳು ವ್ಯಕ್ತಿಗಳು ಅವಳನ್ನು ಕರೆದುಕೊಂಡು ಹೋಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸಿರಬಹುದು. ಕಾಲಾಂತರದಲ್ಲಿ ಜುಮಾದಿಯ ಮಹಿಮೆ ಸೇರಿರಬಹುದು.
ಭಾರತ ದೇಶದಾದ್ಯಂತ ಪ್ರಚಲಿತವಿದ್ದ ಸತಿ ಪದ್ಧತಿಯ ಬಗ್ಗೆ ತುಳು ಪಾಡ್ದನಗಳು ಮೌನ ತಾಳಿವೆ. ಇದರಿಂದ ಸತಿಪದ್ಧತಿ ತುಳುನಾಡಿನಲ್ಲಿ ಅಷ್ಟಾಗಿ ಪ್ರಚಲಿತವಿರಲಿಲ್ಲ. ಇಂಥದೊಂದು ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಇರಲಿಲ್ಲ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತಲೂ ಕ್ರೂರವಾದ ಮದುವೆಯಾಗದ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದ ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಪ್ರಚಲಿತವಿತ್ತು ಎನ್ನುವುದಕ್ಕೆ ಈ ಪಾಡ್ದನ ಸಾಕ್ಷಿಯಾಗಿದೆ.
4. ಜಾಯಿಲ ಬಂಗೇತಿ
© ಡಾ.ಲಕ್ಷ್ಮೀ ಜಿ ಪ್ರಸಾದ್
ಮದುವೆಯಾಗದ ಹೆಣ್ಣು ಮಕ್ಕಳನ್ನು ನಮೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆ ಇದ್ದಂತೆ ಅಶುಭಗಳಿಗೆಯಲ್ಲಿ ಮೈನೆರೆದ ಹೆಣ್ಣು ಮಕ್ಕಳನ್ನು ಕೂಡ ಮನೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆಯಿದ್ದು ಅದರ ಸುತ್ತ ಈ ಪಾಡ್ದನವು ಹೆಣ್ಣೆಯಲ್ಪಟ್ಟಿದೆ. ಕನರಾಯ ಬಂಗೇರರ ಮುದ್ದಿನ ಸೊಸೆ ಜಾಯಿಲ ಬಂಗೇತಿ. ಅತ್ತೆ ಮುಂಡ್ಯಗಳಿಗೆ ಜಾಯಿಲ ಬಂಗೇತಿ ಬಗ್ಗೆ ಪ್ರೀತಿ ಆದರಗಳು ಇರಲಿಲ್ಲ. ಅದಕ್ಕೆ ಸರಿಯಾಗಿ ಜಾಯಿಲ ಬಂಗೇತಿ ಮಂಗಳವಾರ ಅಮವಾಸ್ಯೆಯ ಫಲದಲ್ಲಿ ಪುಷ್ಪವತಿಯಾಗುತ್ತಾಳೆ. ಆಗ ಅತ್ತೆ ಮುಂಡ್ಯಗ ‘ಅಶುಭ ಗಳಿಗೆಯಲ್ಲಿ ಮೈನೆರೆದ’ ಹೆಣ್ಣನ್ನು ಮನೆಯಲ್ಲಿರಿಸಿಕೊಳ್ಳಬಾರದು. ಹಾಗೆ ಒಂದು ವೇಳೆ ಇರಿಸಿಕೊಂಡರೆ ಬೀಡಿಗೆ ಕೊಟ್ಟು ಗುದ್ದಲಿ ಬೀಳುತ್ತದೆ. ಸರ್ವನಾಶವಾಗುತ್ತದೆ ಎಂದು ಹೇಳುತ್ತಾಳೆ. ಶಾಸ್ತ್ರದಲ್ಲಿ ಕೂಡ ಹಾಗೆ ಹೇಳಿದೆ ಎನ್ನುತ್ತಾರೆ ಕನರಾಯ ಬಂಗೇರರು. ಮುಂಡ್ಯಗ ಜಾಯಿಲ ಬಂಗೇತಿಯನ್ನು ಮನೆಯಿಂದ ಹೊರಹಾಕುವಾಗ ಬಂಗೇರರು ದುಃಖಿಸಿದರಾದರೂ ಅವಳನ್ನು ತಡೆಯುವುದಿಲ್ಲ.
ಮುಂದೆ ಜತುರಂಗದ ಬೀಡಿನ ಒಡತಿಯು ಕರುಣೆಯಿಂದ ಜಾಯಿಲ ಬಂಗೇತಿಗೆ ಆಶ್ರಯ ಕೊಡುತ್ತಾಳೆ. ಅವಳ ಮಗ ಬೊಳ್ಳಿಲ್ಲ ಕುಮಾರ ಜಾಯಿಲ ಬಂಗೇತಿಯನ್ನು ಮದುವೆಯಾಗುತ್ತಾನೆ. ಜಾಯಿಲ ಬಂಗೇತಿಯ ಕಥೆ ಜತುರಂದ ಬೀಡಿನ ಒಡತಿಯ ಅಂತಃಕರಣದ ಕಾರಣದಿಂದ ಸುಖಾಂತವಾಗಿರುವುದಾದರೂ ಶಾಸ್ತ್ರದ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯ ಮೇಲೆ ಆಗುತ್ತಿದ್ದ ಶೋಷಣೆಯನ್ನು ಈ ಪಾಡ್ದನವು ತಿಳಿಸುತ್ತದೆ.
5. ಕರಿಯ ಕನ್ಯಾ ಮದನು
ಏಳು ಮಂದಿ ಕಬ್ಬೀರರ ಮುದ್ದಿನ ತಂಗಿ ಮದನು. ಅವಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಅವಳು ಚೊಚ್ಚಲ ಬಸುರಿಯಾದಾಗ ಅವಳ ಸೀಮಂತಕ್ಕೆ ಸಮುದ್ರಕ್ಕೆ ಹೋಗಿ ಮುತ್ತುಗಳನ್ನು ತರುತ್ತಾರೆ ಅವಳ ಏಳು ಜನ ಅಣ್ಣಂದಿರು. ಸೀಮಂತ ಮುಗಿಸಿ ತಮ್ಮ ಮನೆಗೆ ಕರೆ ತರಲು ಅಣ್ಣಂದಿರು ಹೋಗುತ್ತಾರೆ. ಏಳು ಜನ ಅಣ್ಣಂದಿರು ಅವಳನ್ನು ಕರೆತರುತ್ತಾರೆ. ಕದ್ರಿಯ ಸಮೀಪಕ್ಕೆ ಬಂದಾಗ ಮಧ್ಯಾಹ್ನವಾಗುತ್ತದೆ. ಕಲ್ಲು ಜೋಡಿಸಿ, ಒಲೆ ಹೂಡಿ, ಸೌದೆ ಉರಿಸಿ, ಅಕ್ಕಿ ಬೇಯಿಸಿ, ಅಡುಗೆ ಮಾಡಿಟ್ಟು, ಸ್ನಾನ ಬರುವಾಗ ಏಳು ಜನ ಕಬ್ಬೀರರು ಹೋಗುತ್ತಾರೆ. ಸ್ನಾನ ಮಾಡಿ ಬರುವಾಗ ಮುಂದೆ ತಂಗಿಗೆ ಸುಖಪ್ರಸವವಾಗಲಿ ಎಂದು ಬೇಡಿಕೊಳ್ಳಲು ಕದ್ರಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ತೆಪ್ಪಂಗಾಯಿ, ಗುಬ್ಬಿ ಕಾಳಗ ಸೂಳೆಯರ ಮೇಳ ಮೊದಲಾದ ಸಾಹಸದ ಆಟಗಳು ಇರುತ್ತವೆ. ಇವರು ಎಲ್ಲದರಲ್ಲಿ ಗೆಲ್ಲುತ್ತಾರೆ. ಆಗ ಕದ್ರಿಯ ಅರಸ ಅಸೂಯಯಿಂದ ಅವರನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡ ಹಾಕುತ್ತಾನೆ. ತುಂಬು ಗರ್ಭಿಣಿ ಮದನು ಬಂದು ಅಣ್ಣಂದಿರನ್ನು ಬಿಡುವಂತೆ ಕೇಳಿಕೊಂಡರೂ ಬಿಡುವುದಿಲ್ಲ. ಆಗ ಅವಳು ‘ನೀನು ನನ್ನ ಅಣ್ಣಂದಿರನ್ನು ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗ ಮುಂದೆ ನಿನ್ನನ್ನು ಸೋಲಿಸಿ ಮಾವಂದಿರನ್ನು ಬಿಡಿಸುತ್ತಾನೆ’ ಎಂದು ಹೇಳಿ ಅಲ್ಲಿಂದ ಬಂದು ಕಾಡಿನಲ್ಲಿ ವಾಸಿಸುತ್ತಾಳೆ. ಒಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಆ ಮಗುವನ್ನು ತೆಕ್ಕಿ ಎಲೆಯಲ್ಲಿ ಮಲಗಿಸಿ ಸಮುದ್ರದಲ್ಲಿ ತೇಲಿಬಿಡುತ್ತಾಳೆ. ಆ ಮಗು ಮರಕಾಲರ ಕೈಗೆ ಸಿಕ್ಕುತ್ತದೆ. ಅವರು ಆ ಮಗುವನ್ನು ಸಂತಾನವಿಲ್ಲದ ನಂದಾರ ಅರಸನಿಗೆ ಕೊಡುತ್ತಾರೆ. ಆ ಮಗು ರಾಜನ ದತ್ತು ಮಗುವಾಗಿ ಬೆಳೆಯುತ್ತಾನೆ. ಮುಂದೊಂದು ದಿನ ಬೆಳೆದು ದೊಡ್ಡವನಾದ ನಂತರ ಕಾಡಿಗೆ ಬಂದಾಗ ಮರಕಾಲರ ಸಹಾಯದಿಂದ ತನ್ನ ತಾಯಿಯ ಗುರುತು ಹಿಡಿಯುತ್ತಾನೆ. © ಡಾ.ಲಕ್ಷ್ಮೀ ಜಿ ಪ್ರಸಾದ್
ಕದ್ರಿಯ ಅರಸರನ್ನು ಸೋಲಿಸಿ ತನ್ನ ಮಾವಂದಿರನ್ನು ಬಿಡಿಸಿಕೊಂಡು ಬರುತ್ತಾನೆ. ಅಪ್ರತಿಮ ವೀರರನ್ನು, ಸಾಹಸಿಗಳನ್ನು ಕಂಡರೆ ಅವರ ಮೇಲೆ ಮತ್ಸರ ಪಟ್ಟು ರಾಜರುಗಳು ತೊಂದರೆ ಕೊಡುವ ವಿಚಾರ ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಇಂಥಹ ವೀರರನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ತಮ್ಮ ಅಧಿಕಾರಕ್ಕೆ ಕುತ್ತು ಬಂದೀತೆಂಬ ಭಯದಿಂದ ಅವರನ್ನು ನಾಶಕ್ಕೆ ಯತ್ನಿಸುವ ವಿಚಾರ ಕರಿಮಲೆ ಜುಮಾದಿ, ಹಳ್ಳತ್ತಾಯ, ಕಲ್ಕುಡ ಕಲ್ಲುರ್ಟಿ ಮೊದಲಾದ ಪಾಡ್ದನಗಳಲ್ಲಿದೆ.
ಇಂಥಹದ್ದೇ ಒಂದು ಎಲ್ಲೋ ನಡೆದಿರಬಹುದಾದ ಘಟನೆಯನ್ನು ಆಧರಿಸಿ ಈ ಪಾಡ್ದನವು ರಚಿತವಾಗಿದೆ. ಇದರಲ್ಲಿ ಕೆಲವು ಅಲೌಕಿಕ ವಿಚಾರಗಳು ಕೂಡ ಸೇರಿಕೊಂಡಿವೆ.
6 ನಾಗಸಿರಿ ಕನ್ಯಗೆ
ತುಳು ಪಾಡ್ದೆನಗಳಲ್ಲಿ ಈಶ್ವರ ಕೃಷ್ಣ ಮೊದಲಾದ ಪೌರಾಣಿಕ ದೇವರುಗಳು ಲೌಕಿಕ ನೆಲೆಯ ಅರಸರಂತೆ ಚಿತ್ರಿಸಲ್ಪಟ್ಟಿದ್ದಾರೆ. ಪಾಡ್ದನಗಳಲ್ಲಿ ಅರಸರಲ್ಲಿದ್ದಿರಬಹುದಾದ ದರ್ಪ, ಅಹಮಿಕೆ, ಸ್ತ್ರೀ ವ್ಯಾಮೋಹಗಳು ಈಶ್ವರ, ಕೃಷ್ಣ ಮೊದಲಾದ ದೇವರುಗಳಿಗೆ ಹೇಳಲ್ಪಟ್ಟಿವೆ. ಅಂತೆಯೇ ನಾಗಸಿರಿ ಕನ್ಯಗೆ ಪಾಡ್ದನದಲ್ಲಿ ಬರುವ ಸಿರಿಕೃಷ್ಣ ದೇವರು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕುವ ಕೆಟ್ಟ ವ್ಯಕ್ತಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಸತ್ಯದಲ್ಲಿ ಹುಟ್ಟಿದ ನಾಗಸಿರಿ ಸಾಮಾನ್ಯ ಹೆಂಗಸರಂತೆ ನೀರು ತರಲು ಹೋಗುತ್ತಾಳೆ. ಶ್ರೀಕೃಷ್ಣ ದೇವರು ಅವಳ ಮೇಲೆ ಆರೋಪ ಹೊರಿಸಿದಾಗ ಕುದಿಯುವ ಎಣ್ಣೆಯಲ್ಲಿ ಮುಳುಗಿ ತನ್ನ ಪ್ರಾತಿವೃತ್ಯವನ್ನು ಪ್ರಮಾಣಿಸಿದ ನಂತರ ಕೂಡ ಸರ್ಪಗಳಿರುವ ಪೆಟ್ಟಿಗೆಗೆ ಕೈ ಹಾಕಿಸಿ ಪರೀಕ್ಷಿಸಬೇಕೆಂದು ಶ್ರೀಕೃಷ್ಣ ಹೇಳಿದಾಗ ‘ಈ ಜನ್ಮದ ಬಗ್ಗೆ ರೋಸಿ ಹೋಗುವ ನಾಗಸಿರಿ ಕಾಳೀಂಗ ಸರ್ಪದ ಹತ್ತಿರ ತನ್ನನ್ನು ಕಚ್ಚಿ ಸಾಯಿಸುವಂತೆ’ ಪ್ರಾರ್ಥಿಸುತ್ತಾಳೆ. © ಡಾ.ಲಕ್ಷ್ಮೀ ಜಿ ಪ್ರಸಾದ್
ಸರ್ಪ ಅವಳನ್ನು ಕಚ್ಚುತ್ತದೆ. ಅವಳು ಕಾಯ ಬಿಟ್ಟು ಕೈಲಾಸ ಸೇತುತ್ತಾಳೆ. ಇಲ್ಲಿ ನಾಗಸಿರಿಯಲ್ಲಿ ಲೌಕಿಕತೆ ಹಾಗೂ ಅಲೌಕಿಕತೆ ಎರಡು ಕೂಡ ಸೇರಿಕೊಂಡಿವೆ. ಶ್ರೀಕೃಷ್ಣ ಕೇರೆ ಹಾವಾಗಿ ಬಂದಾಗ ಕಾಗೆಯ ರೂಪವನ್ನು ಧರಿಸಿ ನಾಗಸಿರಿ ಕುಕ್ಕಲು ಹೋಗುತ್ತಾಳೆ. ಮುಂದೆ ಉಣುವಾಗಿ ಹಸುವಿನ ಕೆಚ್ಚಲಲ್ಲಿ ಅಡಗಿ ಕುಳಿತುಕೊಳ್ಳುತ್ತಾಳೆ. ಆಗ ಕೋಳಿಯಾಗಿ ಬಂದ ಶ್ರೀಕೃಷ್ಣನನ್ನು ಗಿಡುಗನಾಗಿ ಹಿಡಿಯಲು ಹೋಗುತ್ತಾಳೆ. ಇಷ್ಟೆಲ್ಲ ಮಹಿಮೆಯನ್ನು ತೋರುವ ನಾಗಸಿರಿ ಹಾದರದ ಆರೋಪಕ್ಕೆ ಸಿಲುಕಿ ಸಾಮಾನ್ಯ ಹೆಣ್ಣು ಮಕ್ಕಳಂತೆ ಸತ್ಯ ಪ್ರಮಾಣ ಮಾಡಬೇಕಾಗುತ್ತದೆ. ಸತ್ಯವನ್ನು ತೋರಿಸಿದ ನಂತರವೂ ತಾನಾಗಿಯೇ ಸರ್ಪವನ್ನು ಪ್ರಾರ್ಥಿಸಿ ಸಾವನ್ನು ತಂದುಕೊಳ್ಳುತ್ತಾಳೆ.
ನಾಗಸಿರಿ ಕನ್ಯಗೆಯ ಪಾಡ್ದನದಲ್ಲಿ ಸೇರಿಕೊಂಡಿರುವ ಅಲೌಕಿಕ ವಿಚಾರಗಳನ್ನು ಕೈ ಬಿಟ್ಟರೆ ‘ನಾಗಸಿರಿ ಒಬ್ಬ ರಾಜನ ಹೆಂಡತಿ, ರಾಜನ ಅಣ್ಣ ಅವಳ ಮೇಲೆ ಕಣ್ಣು ಹಾಕುತ್ತಾನೆ. ಅವಳು ದಕ್ಕದಿದ್ದಾಗ ಅವಳ ಮೇಲೆ ಹಾದರದ ಆರೋಪವನ್ನು ಮಾಡುತ್ತಾನೆ. ಆದ್ದರಿಂದ ಕುದಿಯುವ ಎಣ್ಣೆಯಲ್ಲಿ ಮುಳುಗಿ, ಜೀವಂತ ಸರ್ಪವನ್ನು ಕೈಯಲ್ಲಿ ಹಿಡಿದು ಸತ್ಯಪ್ರಮಾಣ ಮಾಡಬೇಕಾಗಿ ಬಂದು ಅದರಲ್ಲಿ ಮರಣವನ್ನಪ್ಪಿರಬಹುದು ಅಥವಾ ತನ್ನ ಮೇಲೆ ಬಂದ ಆರೋಪದಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಹೇಳಬಹುದು.
© ಡಾ.ಲಕ್ಷ್ಮೀ ಜಿ ಪ್ರಸಾದ್
ನಾಗಸಿರಿ ಕನ್ಯಗೆ ಪಾಡ್ದನಕ್ಕೆ ಪಾಠಾಂತರಗಳು ಪ್ರಚಲಿತವಿದ್ದು ಒಂದು ಪಾಠದಲ್ಲಿ ನಾಗಸಿರಿ ಕನ್ಯಗೆಗೆ ತೊಂದರೆ ಕೊಟ್ಟಾತನನ್ನು ಅಣ್ಣ ಸೂರ್ಯ ಭಾರೀ ನಾಗರಾಜ ದೇವರೆಂದು ಹೇಳಿದೆ. ನಾಗಸಿರಿಯ ಮರಣಾನಂತರ ಕೂಡ ಆಕೆಯ ಶವಕ್ಕೆ ಸರಿಯಾದ ಸಂಸ್ಕಾರ ಮಾಡದಂತೆ ಅಣ್ಣ ಭಾರೀ ಸೂರ್ಯ ನಾಗರಾಜ ದೇವರು ತಡೆಯುತ್ತಾನೆ. ಆಗ ನಾಗಸಿರಿಯು ಅವಳ ತಂಗಿ ರೂಪ ಧರಿಸಿ ಸಂಸ್ಕಾರವನ್ನು ಮಾಡುವಂತೆ ಮಾಡಿ ಬೊಜ್ಜದಂದು ಅಣ್ಣ ನಾಗರಾಜನಿಗೆ ಉಪಾಯವಾಗಿ ಕಂದಡಿ ಹಾವಿನ ವಿಷ ಉಣಬಡಿಸಿ ಆತನನ್ನು ಕೊಂದು ದ್ವೇಷ ತೀರಿಸಿಕೊಳ್ಳುತ್ತಾಳೆ.
7 . ಅಬ್ಬಿನ ಬಂಗಾರು
ಎದ್ದಾಡಿ ಎಣ್ಮೆದಡಿ ಬೀಡಿನಲ್ಲಿ ಎಮ್ಮೆ ಮೇಯಿಸಿಕೊಂಡು, ಎಳ್ಳಿನ ಗದ್ದೆಯನ್ನು ಕಾಯುವ ಹುಡುಗಿ ಅಬ್ಬಿನ ಬಂಗಾರಿ. ಬಲು ಧೈರ್ಯಸ್ಥೆ, ಚತುರಮತಿ ಹುಡುಗಿ. ಕುದುರೆಯ ಮೇಲೆ ಸವಾರಿ ಮಾಡುತ್ತ ಎಳ್ಳಿನ ಗದ್ದೆಯನ್ನು ಹಾಳು ಮಾಡಿದ ಕುಂದಯ ನಂದಾರನನ್ನು ಜೋರು ಮಾಡುತ್ತಾಳೆ. ಆಗ ಏಳೆಲೆ ಕೂಡ ಮೂಡದ ಎಳ್ಳಿನ ಸಸಿಯಲ್ಲಿ ಎಣ್ಣೆ ಎಲ್ಲಿದೆ? ಎಂದು ಇವಳನ್ನು ಕೇಳುತ್ತಾನೆ. ಆಗ “ಏಳೆಲೆ ಮೂಡಿದ ಎಳ್ಳಿನ ಸಸಿಯಲ್ಲಿ ಬೇರಿನಲ್ಲಿ ಎಣ್ಣೆ ಇದೆ” ಎಂದು ಉತ್ತರಿಸುವ ಅಬ್ಬಿನ ಬಂಗಾರು ‘ನಿನ್ನ ತಾಯಿ ಮದುಮಗಳಾದಾಗ ನೀನೆಲ್ಲಿದ್ದೆ? ಎಂದು ಪ್ರತಿ ಪ್ರಶ್ನೆಯನ್ನು ಹಾಕುತ್ತಾಳೆ. ಉತ್ತರ ತಿಳಿಯದೆ ಮಂಕಾಗಿ ತನ್ನ ತಂದೆಯಲ್ಲಿ ಕೇಳಿದಾಗ, ಕುಂದಯ ನಂದಾರನ ತಂದೆ ನಂದಾರ ಅರಸರಿಗೂ ಗೊತ್ತಿರಲಿಲ್ಲ. ಕೊನೆಗೆ ಹೇಳಿ ‘ನಿನ್ನನ್ನು ನಾನು ಮದುವೆಯಾದರೆ ಏನು ಮಾಡುತ್ತಿ?’ ಎಂದು ಕೇಳುತ್ತಾನೆ. ಆಗ ಅವಳ ತುಸು ಕೂಡ ಅಳುಕದೆ ‘ಮೂರು ವರ್ಷದೊಳಗೆ ಮೂರು ಮಕ್ಕಳನ್ನು ಹೆತ್ತು ಆಡಿಸುತ್ತೇನೆ’ ಎಂದುತ್ತರಿಸುತ್ತಾಳೆ. ಇಷ್ಟು ಪೊಗರಿರುವ ಹುಡುಗಿಯ ಮಾತನ್ನು ಸುಳ್ಳು ಮಾಡಿ, ಅವಳನ್ನು ಸೋಲಿಸುವುದಕ್ಕಾಗಿಯೇ ಆಖೆಯನ್ನು ಮದುವೆಯಾಗುತ್ತಾನೆ ಕುಂದಯ ಹೊರಬಾರದಂತೆ ವ್ಯವಸ್ಥೆ ಮಾಡಿ, ಕಾಳಗಕ್ಕೆಂದು ಹೊರ ರಾಜ್ಯಕ್ಕೆ ಹೋಗುತ್ತಾನೆ. ಅಬ್ಬಿನ ಬಂಗಾರು ಹೆಗ್ಗಣದ ಸಹಾಯದಿಂದ ತೂತು ಕೊರೆದು ಹೊರಬಂದು ಹೂಮಾರುವ ಹೆಣ್ಣಿನ ವೇಷದಿಂದ ಬಂದು, ವಯ್ಯಾರ ಮಾಡಿ ಕುಂದಯ ನಂದಾರನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು, ಅವನೊಂದಿಗೆ ಮೂರು ವರ್ಷ ಕಳೆಯುತ್ತಾಳೆ. ಒಂದು ಹೆಣ್ಣು ಹಾಗೂ ಎರಡು ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಇಷ್ಟಾದರೂ ತಾನು ಅಬ್ಬಿನ ಬಂಗಾರು ಎಂದು ಗೊತ್ತಾಗದಂತೆ ಜಾಗ್ರತೆ ವಹಿಸುತ್ತಾಲೆ. ಮೂರು ವರ್ಷದ ಗಡು ಮುಗಿಯುತ್ತಾ ಬರಲು ಕುಂದಯ ನಂದಾರನ ಮುದ್ರೆ ಉಂಗುರ, ಬಂಗಾರಿನ ನೇಗಿಲು, ಬೆಳ್ಳಿಯ ಸುಣ್ಣದ ಅಂಡೆಗಳನ್ನು ಉಪಾಯವಾಗಿ ಕೇಳಿ ಪಡೆದುಕೊಂಡು ಬಂದು, ನೆಲಮಾಳಿಗೆಯನ್ನು ಸೇರುತ್ತಾಳೆ
© ಡಾ.ಲಕ್ಷ್ಮೀ ಜಿ ಪ್ರಸಾದ್. ತನ್ನ ಮಾರು ವೇಷ ಕಳಚಿ ನಿಜರೂಪದಿಂದ ಮಕ್ಕಳನ್ನು ಆಟವಾಡಿಸುತ್ತಿರುತ್ತಾಳೆ. ಮೂರ ವರ್ಷ ಕಳೆದು ‘ಅಬ್ಬಿನ ಬಂಗಾರನ್ನು ಸೋಲಿಸಿದ್ದೇನೆ’ ಎಂದು ಗರ್ವದಿಂದ ಕುಂದಯ ನಂದಾರ ನೆಲಮಾಳಿಗೆಯ ಬಾಗಿಲು ತೆರೆದು ಒಳಗೆ ಬಂದರೆ ಅಲ್ಲಿ ಅಬ್ಬಿನ ಬಂಗಾರು ತನ್ನ ಮೂರು ಮಕ್ಕಳೊಂದಿಗೆ ಆಡುತ್ತಿರುತ್ತಾಳೆ. ಮಡದಿಯ ಜಾಣ್ಮೆಯನ್ನು ಮೆಚ್ಚಿ ಮಡದಿ ಮಕ್ಕಳೊಂದಿಗೆ ಬಾಳುತ್ತಾನೆ ಕುಂದಯ ನಂದಾರ. ಅವರಿಗೆ ಹುಟ್ಟಿದ ಅವಳಿ ಗಂಡು ಮಕ್ಕಳೇ ಮುಂದೆ ಕಾಂತಾಬಾರೆ ಬೂದಾ ಬಾರೆಯರೆಂಬ ಪ್ರಸಿದ್ಧ ವೀರರಾಗುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಹೆಣ್ಣೊಬ್ಬಳ ಜಾಣ್ಮೆಯನ್ನು ಕುರಿತು ಕಟ್ಟಲ್ಪಟ್ಟ ಪಾಡ್ದನವಿದು. ಹೆಣ್ಣನ್ನು ಹೇಗಾದರೂ ಸೋಲಿಸಬೇಕೆಂಬ ಗಂಡಿನ ಪ್ರವೃತ್ತಿ ಈ ಪಾಡ್ದನದಲ್ಲಿ ಕಾಣಿಸಿಕೊಂಡಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್
8. ಬಾಲೆ ರಂಗಮೆ
ಮೇದಾರನ ತಂಗಿ ರಂಗಮೆ. ಕದ್ರಿ ಕೋಳ್ಯೂರು ದೇವಾಲಯಗಳಿಗೆ ಹರಿಕೆ ಸಲ್ಲಿಸಲು ರಂಗಮೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೈರರ ಕೇರಿಯ ಭೈರವರಸ ಆಕೆಯನ್ನು ಮೋಹಿಸಿ ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಹರಿಕೆ ಕೊಟ್ಟು ಹಿಂದೆ ಬರುವಾಗ ನಾನು ಇದೇ ದಾರಿಯಲ್ಲಿ ಬರುತ್ತೇನೆ, ಮದುವೆಯಾಗುವುದಾದರೆ ನನ್ನ ಅಣ್ಣನಲ್ಲಿ ಬಂದು ಕೇಳು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಭೇಟಿಯಾಗುವ ಕದ್ರಿಯ ಅರಸ ಹೇಳಿದಂತೆ ಹಿಂದೆ ಬರುವಾಗ ಬೇರೆ ದಾರಿಯಲ್ಲಿ ಬರುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಅವಳು ಬರುವುದನ್ನು ಕಾದು ಕುಳಿತ ಭೈರವರಸ ಅವಳು ಬಾರದಿದ್ದಾಗ, ಅವಳ ಅಣ್ಣನನ್ನು ಬರ ಹೇಳಿ ‘ರಂಗಮೆಯನ್ನು ಮದುವೆ ಮಾಡಿಕೊಡು’ ಎಂದು ಹೇಳುತ್ತಾನೆ. ಮೇದಾರ ಅದಕ್ಕೆ “ಕೆಳಜಾತಿಯ ಭೈರವ ಕೇರಿಯ ಭೈರವರಸನಿಗೆ ಹೆಣ್ಣು ಕೊಡಲಾರೆ” ಎಂದುತ್ತರಿಸುತ್ತಾನೆ. ಆಗ ಮುಳ್ಳಿನ ಮಂಚಕ್ಕೆ ಕಟ್ಟಿ, ಉರಿ ಮೂಡೆ ಹಾಕಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ಹಿಂಸೆ ತಾಳಲಾರದೆ ತಂಗಿಯನ್ನು ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ.
ರಂಗಮೆ ಭೈರವರಸನ ಕೈಯಿಂದ ಪಾರಾಗಲು ಉಪಾಯವೊಂದನ್ನು ಹೂಡುತ್ತಾಳೆ. ಭೈರವರಸನ ದಿಬ್ಬಣ ಬಂದಾಗ ‘ತನಗೆ ತೀವ್ರ ಹೊಟ್ಟೆನೋವು ಮಾಳಿಗೆಯಿಂದ ಕೆಳಗೆ ಇಳಿದು ಬರಲಾರೆ ಆದ್ದರಿಂದ ದಂಡಿಗೆಯ ಕೊಂಬಿಗೆ ಧಾರೆ ಎರೆಯಿರಿ’ ಎಂದು ಹೇಳುತ್ತಾಳೆ. ಅಂತೆಯೇ ದಂಡಿಗೆಯ ಕೊಂಬಿಗೆ ಧಾರೆ ಎರೆದು ಮದುವೆಯ ಶಾಸ್ತ್ರ ಮುಗಿಸುತ್ತಾರೆ. ದಿಬ್ಬಣದೊಂದಿಗೆ ಹಿಂದಿರುಗುತ್ತಾರೆ. ಮರುದಿನವೇ ತಂಗಿಯನ್ನು ಕರೆದೊಯ್ಯುವಂತೆ ಮೇದಾರ ಭೈರವರಸನಿಗೆ ಓಲೆ ಕಳುಹಿಸುತ್ತಾನೆ. ಮಡದಿಯನ್ನು ಕರೆದೊಯ್ಯಲೆಂದು ಬಂದಾಗ ಅಲ್ಲೊಂದು ಕಾಷ್ಠ ಉರಿಯುತ್ತಾ ಇರುತ್ತದೆ. ‘ರಂಗಮೆ ಹೊಟ್ಟೆ ನೋವಿನಿಂದ ಸತ್ತಿದ್ದಾಳೆ’ ಎಂದು ಅಲ್ಲಿದ್ದ ಜನರು ಹೇಳುತ್ತಾರೆ. ಆಗ ರಂಗಮೆಯ ಮೇಲಿನ ವ್ಯಾಮೋಹದಿಂದ ಬುದ್ಧಿಶೂನ್ಯನಾದ ಭೈರವರಸ ಅದೇ ಚಿತೆಗೆ ಹಾರಿ ಸಾಯುತ್ತಾನೆ. ರಂಗಮೆ ಸತ್ತಿರುವುದಿಲ್ಲ. ಹೆಣ್ಣುನಾಯಿಯ ಶವವನ್ನಿಟ್ಟು ಕಾಷ್ಠ ಉರಿಸಿರುತ್ತಾರೆ. ಭೈರವರಸ ಸತ್ತ ನಂತರ ರಂಗಮೆ ಕದ್ರಿಯ ಅರಸನನ್ನು ಮದುವೆಯಾಗುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಹೆಣ್ಣು ಮಕ್ಕಳಿಗೆ, ಅವರ ಮನೆವರಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲಿಷ್ಟರು, ಅರಸರುಗಳು ಬಲಾತ್ಕಾರವಾಗಿ ಕೊಂಡೊಯ್ದು ಮದುವೆಯಾಗುತ್ತಿದ್ದುದರ ಕುರಿತು ಈ ಪಾಡ್ದನವು ತಿಳಿಸುತ್ತದೆ. ಇಲ್ಲಿ ರಂಗಮೆಯ ಜಾಣ್ಮೆಯಿಂದಾಗಿ ಭೈರವರಸ ಸತ್ತು ಹೋಗುತ್ತಾನೆ. ರಂಗಮೆ ತಾನಿಷ್ಟ ಪಟ್ಟ ಕದ್ರಿಯ ಅರಸನನ್ನು ವಿವಾಹವಾಗುತ್ತಾಳೆ. ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಡಾ. ಕಮಲಾಕ್ಷ ಅವರು ಸಂಗ್ರಹಿಸಿದ್ದು, ಅದರಲ್ಲಿ ಕಥಾನಯಕಿಯನ್ನು ದೈಯಕ್ಕು ಎಂದು ಹೇಳಿದ್ದು, ಈಕೆ ಎಣ್ಮೂರು ಗುತ್ತಿನ ದಾರಾಮು ಪೊಣ್ಣೋವಿನ ಮಗಳೆಂದು ಹೇಳಲಾಗಿದೆ. ಬಂಟ್ವಾಳ ಪೇಟೆಗೆ ಹೋಗಿಬರುವಾಗ ಬೈಲೂರ ಬಂಗ ತೊಂದರೆ ಕೊಡುತ್ತಾನೆ. ದೈಯಕ್ಕುವನ್ನು ಮದುವೆ ಮಾಡಿ ಕೊಡು ಎಂದು ದಾರಾಮುವಿನಲ್ಲಿ ಕೇಳುತ್ತಾನೆ. ಆಗ ದಾರಾಮು “ಆಸ್ತಿಯಲ್ಲಿ ನೀನು ಮೇಲಿದ್ದರೂ ಜಾತಿಯಲ್ಲಿ ನೀನು ಕೀಳು ನೀನು ಭೈರ, ಆದ್ದರಿಂದ ಹೆಣ್ಣು ಕೊಡಲಾರೆ” ಎನ್ನುತ್ತಾಳೆ. ಆಗ ಆಕೆಯನ್ನು ನಾನಾ ವಿಧವಾಗಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ದೈಯಕ್ಕು ಅವನಿಗೆ ಯುದ್ಧಾಹ್ವಾನ ನೀಡುತ್ತಾಳೆ. ಸ್ವತಃ ಕತ್ತಿ ಹಿಡಿದು ಯುದ್ಧ ಮಾಡಿ ಆತನನ್ನು ಕೊಲ್ಲುತ್ತಾಳೆ ದೈಯಕ್ಕು.
ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಶ್ರೀ ರಾಮನಾಯ್ಕ ಸಂಗ್ರಹಿಸಿದ್ದಾರೆ. ಈ ಪಾಡ್ದನದಲ್ಲಿ ದೈಯಕ್ಕು ಮಗಳಿಗೆ ಮದುವೆಯಾಗೆಂದು ಕಾಡುವವನು ಚಿಪ್ಪೋಲಿ ಬಂಗ. ಅವಳ ಸೋದರ ಮಾವನನ್ನು ಕಟ್ಟಿ ಹಾಕಿ ಕೊಡಬಾರದ ಕಷ್ಟ ಕೊಡುತ್ತಾನೆ. ಮಾವನ ಕಷ್ಟ ನೋಡಲಾರದೆ ಮದುವೆಗೆ ಒಪ್ಪಿಗೆಕೊಡುತ್ತಾಲೆ ದೈಯಕ್ಕು ಮಗಳು. ಮದುವೆಯ ಸಂದರ್ಭದಲ್ಲಿ ಧಾರೆ ಆಗುವ ಹೊತ್ತಿಗೆ ತಾನು ತಂದಿದ್ದ ಕತ್ತಿಯಿಂದ ಚಿಪ್ಪೋಲಿ ಬಂಗನ ಕೈಯನ್ನು ದೈಯಕ್ಕು ಮಗಳು ಕತ್ತರಿಸುತ್ತಾಳೆ.
ಈ ಮೂರು ಕೂಡ ಒಂದೇ ಆಶಯವನ್ನು ಹೊಂದಿದ್ದು ಒಂದೇ ಪಾಡ್ದನದ ಭಿನ್ನ ಭಿನ್ನ ಪಾಠಗಳಂತೆ ಕಾಣಿಸುತ್ತವೆ. ಮದುವೆಯಾಗೆಂದು ಕಾಡಿ ಬಲಾತ್ಕರಿಸಿದ ರಾಜನೊಬ್ಬನನ್ನು ಹೆಣ್ಣು ಮಗಳೊಬ್ಬಳು ಎದುರಿಸಿ ಉಪಾಯವಾಗಿ ಆತನನ್ನು ಕೊಂದ ಘಟನೆ ಎಲ್ಲೋ ನಡೆದಿದ್ದು, ಅದನ್ನು ಕೇಂದ್ರವಾಗಿಸಿ ಈ ಪಾಡ್ದನಗಳು ಕಟ್ಟಲ್ಪಟ್ಟಿವೆ. ಬೀರುಕಲ್ಕುಡನ ಕೈಕಾಲುಗಳನ್ನು ಕಡಿಸಿದ ಭೈರವರಸನ ಕ್ರೌರ್ಯ ತುಳುನಾಡಿನಲ್ಲಿ ಜನರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದಲೇ ಏನೋ ಕಾಟ ಕೊಟ್ಟು ಸಾವಿಗೀಡಾದ ವ್ಯಕ್ತಿಯನ್ನು ಈ ಪಾಡ್ದಗಳಲ್ಲಿ ಭೈರವರಸ ಎಂದೇ ಹೇಳಲಾಗಿದೆ. ಬೀರು ಕಲ್ಕುಡನಿಗೆ ಕಾರ್ಕಳದ ಭೈರವರಸ ಮಾಡಿದ ಅನ್ಯಾಯವನ್ನು ತುಳುವ ಜನಪದರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದಲೇ ಪಾಡ್ದನಗಾರರು ಪಾಡ್ದನಗಳಲ್ಲಿ ಕೆಟ್ಟ ವ್ಯಕ್ತಿಯೊಂದಿಗೆ ಭೈರವರಸವನ್ನು ಸಮೀಕರಿಸಿದ್ದಾರೆ ಎಂದು ಡಾ|| ಅಮೃತ ಸೋಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಪಾಡ್ದನದಲ್ಲಿ ಭೈರವರಸ ಸ್ತ್ರೀ ಲೋಲುಪನಂತೆ, ಕ್ರೂರಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಅವನನ್ನು ಉಪಾಯದಿಂದ ಸಾಯುವಂತೆ ಮಾಡುವ ರಂಗಮೆ ಮೆಚ್ಚುಗೆಗೆ ಪಾತ್ರವಾಗುತ್ತಾಳೆ.
9 ಬಾಲೆ ಪದ್ಮಕ್ಕೆ
ಕನರಾಯ ಬೀಡಿನ ಬಂಗೇರರ ಮಡದಿ ಬಾಲೆ ಪದ್ಮಕ್ಕೆ ಚೊಚ್ಚಲ ಬಸುರಿಯಾಗಿದ್ದಾಗ ಬಂಗೇರರಿಗೆ ಕಾಳಗವೊಮದು ಒದಗಿ ಬರುತ್ತದೆ. ಅವನು ದಂಡಿಗೆ ಹೋಗಲು ಹೊರಟು ನಿಂತಾಗ ತಾನು ಕೂಡ ಬರುತ್ತೇನೆ ಎಂದು ಹಠಮಾಡಿ ಅವನ ಜೊತೆಗೆ ದಂಡಿಗೆ ಮಡದಿ ಬಾಲೆ ಪದ್ಮಕ್ಕೆ ಬರುತ್ತಾಳೆ. ಅವರು ಹೊರಡುವಾಗ ಕನರಾಯ ಬಂಗೇರರ ತಾಯಿ ದೈವಗಳಲ್ಲಿ “ಇಬ್ಬರು ಹೋಗಿ ಮೂವರಾಗಿ ಬರುವಂತೆ ಅನುಗ್ರಹಿಸುವಂತೆ” ಬೇಡುತ್ತಾರೆ.
ಮುಂದೆ ದಾರಿ ಮಧ್ಯದಲ್ಲಿ ಬಾಲೆ ಪದ್ಮಕ್ಕೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ. ಕಾಡಿನ ನಡುವೆ ಇರುವ ಅರಮನೆಯ ಒಡತಿ ಅವಳನ್ನು ಆರೈಕೆ ಮಾಡುತ್ತಾಳೆ. ಬಾಲೆ ಪದ್ಮಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಕನರಾಯ ಬಂಗೇರ ಹೆಂಡತಿ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕಾಳಗಕ್ಕೆ ಹೋಗುತ್ತಾನೆ. ಏಳೆಂಟು ವರ್ಷ ಕಳದು ಯುದ್ಧವನ್ನು ಗೆದ್ದು ಹಿಂದೆ ಬರುವಾಗ ಮಡದಿ ಮಕ್ಕಳನ್ನು ಕರೆತರಲು ಹೋಗುತ್ತಾರೆ. ಅವರ ಮಡದಿ ಮಕ್ಕಳಿಗೆ ಏಳು ವರ್ಷವಾದಾಗ ತೆಂಗಿನ ಗರಿ ತಲೆಗೆ ಬಿದ್ದು ಮರಣವನ್ನಪ್ಪಿರುತ್ತಾರೆ. ಇಬ್ಬರು ಮಕ್ಕಳೊಂದಿಗೆ ಕನರಾಯ ಬಂಗೇರರು ಬೀಡಿಗೆ ಬರುತ್ತಾರೆ.
ಅವರ ತಾಯಿ ದೈವದಲ್ಲಿ ಅರಿಕೆ ಮಾಡಿದ್ದಂತೆ ಇಬ್ಬರು ಹೋಗಿ ಮೂವರಾಗಿ ಬಂದಿರುತ್ತಾರೆ. ಮಡದಿ ಬಾಲೆ ಪದ್ಮಕ್ಕೆ ಅವಳಿ ಮಕ್ಕಳನ್ನು ಹೆತ್ತ ಕಾರಣ ಕನರಾಯ ಬಂಗೇರ ಸೇರಿ ಅವರು ನಾಲ್ವರಾಗುತ್ತಾರೆ. ಆದರೆ ದೈವದ ಎದುರು ಅರಿಕೆ ಮಾಡಿದ್ದು ‘ಇಬ್ಬರು ಹೋಗಿ ಮೂವರು ಬರಲೆಂದು’, ಆದ್ದರಿಂದ ಬಾಲೆ ಪದ್ಮಕ್ಕೆ ಸಾಯುತ್ತಾಳೆ ಎಂಬ ಆಶಯ ಇಲ್ಲಿದೆ.
10 ಬಾಲೆ ಜೇವು ಮಾಣಿಗ
ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಗಂಡಿನ ಅಹಮಿಕೆಯ ಕಾರಣದಿಂದ ದುರಂತವನ್ನಪ್ಪಿದ ಹೆಣ್ಣು ಮಗಳೊಬ್ಬಳ ಕುರಿತಾದ ಕಥಾನಕವಿದು. ಬಾಲೆಜೇವು ಮಾಣಿಗ ತುಸು ಮೇಲರಿಮೆ ಇರುವ ಹೆಣ್ಣು ಮಗಳು. ಅವಳ ಗಂಡ ಪರಿಮಾಳೆ ಬಲ್ಲಾಳ ದಬ್ಬಾಳಿಕೆ ಸ್ವಭಾವದವನು. ಪರಿಮಾಳೆ ಬಲ್ಲಾಳ ಮತ್ತು ಬಾಲೆಜೇವು ಮಾಣಿಗ ಚೆನ್ನಮಣೆ ಆಡುತ್ತಾರೆ. ಬಾಲೆ ಜೇವು ಮಾಣಿಗ ಸತತವಾಗಿ ಮೂರು ಆಟಗಳನ್ನು ಗೆಲ್ಲುತ್ತಾಳೆ. ಆಗ ಬಲ್ಲಾಳ ‘ಬಾಯಾರಿಕೆಯಾಗುತ್ತದೆ ನೀರು ತಾ’ ಎನ್ನುತ್ತಾನೆ. ಆಗ ಅವಳು ‘ನಾನು ಒಳಗೆ ಹೋದರೆ ಮಣೆ ತಿರುಗಿಸಿ ಆಟ ಕೆಡಿಸುತ್ತೀರಿ ನೀವು’ ಎಂದು ಹೇಳುತ್ತಾಳೆ. ಆಗ ಬಲ್ಲಾಳ ಇಲ್ಲ ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದರೂ ಅವಳು ಒಳಗೆ ಹೋದಾಗ ಚೆನ್ನಮಣೆಯನ್ನು ತಿರುಗಿಸಿ ಇಟ್ಟು ಮೋಸ ಮಾಡುತ್ತಾನೆ.
ಆಟದಲ್ಲಿ ಕೂಡ ಪ್ರಾಮಾಣಿಕಕತೆಯಿಲ್ಲದೆ ಮೋಸ ಮಾಡಿದ ಗಂಡನ ಕುರಿತು ಅವಳಿಗೆ ಅಸಾಧ್ಯ ಸಿಟ್ಟು ಬರುತ್ತದೆ. ಅವಳು ಚಿನ್ನೆ ಮಣೆಗೆ ತುಳಿದು ಅದನ್ನು ಕವುಚಿ ಹಾಕುತ್ತಾಳೆ. ಆಗ ಪರಿಮಾಳೆ ಬಲ್ಲಾಳ ಚೆನ್ನೆ ಮಣೆಯನ್ನೆತ್ತಿ ಬಾಲೆಜೇವು ಮಾಣಿಗಳ ತಲೆಗೆ ಹೊಡೆದು ಅವಳನ್ನು ಸಾಯಿಸುತ್ತಾನೆ.
ಈ ಪಾಡ್ದನದ ಅನೇಕ ಪಾಠಾಂತರಗಳು ಪ್ರಚಲಿತವಿವೆ. ಅವುಗಳಲ್ಲಿ ಬಲ್ಲಾಳ ಮಾಣಿಗಳಿಗೆ ಹೊಡೆದು ಬಡಿದು ಮಾಡುತ್ತನಾದರೂ ಅವಳ ಸಾವು ಜುಮಾದಿಯ ಆಗ್ರದಿಂದಾಗುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಸಂಪುಟದಲ್ಲಿರುವ ಬಾಲೆಜೇವು ಪಾಡ್ದನದಲ್ಲಿ ಬಾಲೆಜೇವು ಮಾಣಿಗಳ ಸಾವಿಗೆ ಬಲ್ಲಾಲನ ದುಡುಕು ಪ್ರವೃತ್ತಿ ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಅಹಮಿಕೆ, ಹೆಂಡತಿಯ ಮೇಲೆ ಕೈ ಮಾಡುವ ಕ್ರೌರ್ಯವೇ ಕಾರಣವಾಗಿದೆ. ಯಾವುದೇ ಅಲೌಕಿಕ ಶಕ್ತಿಯ ಉಲ್ಲೇಖ ಈ ಪಾಡ್ದನದಲ್ಲಿ ಇಲ್ಲ. ಆದ್ದರಿಂದ ಇದು ವಾಸ್ತವಕ್ಕೆ ಸಮೀಪವಾಗೆದೆ ಎಂದು ಹೇಳಬಹುದು.
ಶ್ರೀಮತಿ ಶಾರದಾ ಜಿ. ಬಂಗೇರರÀ ಕವಿತೆಗಳು
ಇವರ ಕವಿತೆಗಳು ಸರಳವಾದುದು ,ಸುಶ್ರಾವ್ಯವಾಗಿ ಹಾಡಲು ಸೂಕ್ತವಾದವುಗಳು.ತುಳು ಜನಪದ ಕವಯಿತ್ರಿಯರು ಕಂಡ ಪ್ರಕೃತಿ ಗಿಡ ಮರ ಹೂ ಹಣ್ಣು, ಆಭರಣಗಳು ,ಮನೆಗೆ ಬೇಕಾದ ಅಡುಗೆ ವಸ್ತುಗಳು ಮೊದಲಾದವುಗಳ ಸುತ್ತ ಹೆಣೆದ ಕವಿತೆಗಳು ಇವು .ನವುರು ಪ್ರೇಮವನ್ನು ನಿವೇದಿಸುವ ಕವಿತೆಯೂ ಇದೆ ಸಂವಾದ ರೂಪದ ಹಾಡುಗಳೂ ಅನೇಕ ಇವೆ .ಇವು ಭಾಷೆ ಬೇರೆ ಬೇರೆಯಾದರೂ ಭಾವ ಒಂದೇ ಎಂಬದನ್ನು ಸಾರುತ್ತವೆ.
1 ಪುಕ್ಕೇದಿ
ಪುಕ್ಕೇದಿ ಮತ್ತು ಕೋಡಂಗರು ಬಲ್ಲಾಳನ ಮನೆ ಕೆಲಸದ ಆಳುಗಳು. ಪುಕ್ಕೇದಿಯ ಮೇಲೆಮೋಹಗೊಳ್ಳುವ ಬಲ್ಲಾಳ ಪುಕ್ಕೇದಿಗೆ ವಿಷಮಿಶ್ರಿತ ಹುಳಿಯನ್ನು ನೀಡಿ, ಕೆಸುವಿನ ಸೊಪ್ಪು ಕ್ಯೊದುಕೊಂಡು ಹೋಗಿ ಕೋಡಂಗನಿಗೆ ಅಡಿಗೆ ಮಾಡಿ ಬಡಿಸಲು ಹೇಳುತ್ತಾನೆ. ಬಲ್ಲಾಳನ ಹುನ್ನಾರ ತಿಳಿಯದ ಮುಗ್ಧೆ ಪುಕ್ಕೇದಿ ಆ ಹುಳಿಯನ್ನು ಉಪಯೋಗಿಸಿ ಅಡುಗೆ ಮಾಡಿ ಕೋಡಂಗನಿಗೆ ಬಡಿಸುತ್ತಾಳೆ. ಕೋಡಂಗ ಸಾಯುತ್ತಾನೆ. ಇದನ್ನು ಬಲ್ಲಾಳನಿಗೆ ಪುಕ್ಕೇದಿ ತಿಳಿಸಿದಾಗ ಅವಳನ್ನು ಮನೆ ಒಳಗೆ ಬರಲು ಹೇಳುತ್ತಾನೆ ಬಲ್ಲಾಳ. ಆಗ ಅದು ಬಲ್ಲಾಳ ಮಾಡಿದಕೃತ್ಯ ಎಂದುತಿಳಿಯುವ ಪುಕ್ಕೇದಿ ಪರತಿ ಮಂಗಣೆಯಂತೆಯೇ ಸಮಯ ಪ್ರಜ್ಞೆ ಮರೆದು ಬಲ್ಲಾಳನ ಸಮಸ್ತ ಸಂಪತ್ತನ್ನು ಕೋಡಂಗನ ಚಿತೆಗೆ ಹಾಕಿಸಿ, ಕೊನೆಗೆ ತಾನು ಕೂಡ ಕಾಷ್ಯಕ್ಕೆ ಸಾಯುವುದರ ಮೂಲಕ ಬಲ್ಲಾಳನ ಮೇಲೆ ಪ್ರತಿಕಾರ ಮಾಡುತ್ತಾಳೆ.
2 ರಾಮಚಂದಿರ ಮರಲ ನಿಮ್ರ್ಯಾರೇ
ದಾಸವರೇಣ್ಯರು ಬಾಲಕೃಷ್ಣನ ಬಾಲಲೀಲೆಗಳನ್ನು ನಾನಾ ವಿಧವಾಗಿ ವರ್ಣಿಸಿ ಸ್ತುತಿಸಿ ಧನ್ಯತೆಯನ್ನು ಪಡೆದಿದ್ದಾರೆ. ಕೃಷ್ಣನ ತುಂಟಾಟಗಳನ್ನು ವರ್ಣಿಸುತ್ತಾ ಆ ಕುರಿತು ಗೋಪಮ್ಮನಿಗೆ ದೂರು ಹೇಳಿದ ಗೊಲ್ಲರ ಹುಡುಗಿಯರಿಗೆ ಒಡೆದ ಬಳೆಯ ಬದಲಿಗೆ ಹೊಸ ಬಳೆಯನ್ನು,ಹರಿದ ಸೀರೆಯ ಬದಲಿಗೆ ಹೊಸ ಸೀರೆ ಕೊಡುವೆನು ಎಂದು ಗೋಪಮ್ಮ ಹೇಳುವ ವಿಚಾರ ಇಲ್ಲಿ ವಿಶಿಷ್ಟವಾಗಿ ಮೂಡಿ ಬಂದಿದೆ. ಅಂತೆಯೇ ಎಲ್ಲ ತುಂಟಾಟಗಳನ್ನು ಮಾಡಿದ ಕೃಷ್ಣನ ಮೇಲೆ ದೂರು ಹೇಳಲು ಬಂದ ಗೋಪಿಕಾ ಸ್ತ್ರೀಯರು ತೊಟ್ಟಿಲಲ್ಲಿ ಬಗ್ಗಿ ನೋಡುವಾಗ ಬಾಲಕೃಷ್ಣ ನಗುತ್ತಿರುತ್ತಾನೆ ಎಂದಿಲ್ಲಿ ಕವಿತೆಯ ಮೂಲಕ ಬಾಲಕೃಷ್ಣನ ಲೀಲೆಗಳನ್ನು ಜನಪದ ಕವಿಗಳು ವರ್ಣಿಸಿದ್ದಾರೆ.
2 ಬಂಗರಾಳ್ವಾಗ
ನೀರಿಗೆಂದು ಹೋಗುವ ಹೆಣ್ಣು ಮಗಳಿಗೆ ದಾರಿಯಲ್ಲಿ ಕಾಮುಕನೊಬ್ಬ ಸಿಕ್ಕಿತೊಂದರೆ ಕೊಟ್ಟಾಗ, ಆತನಿಗೆರಡೇಟು ಕೊಟ್ಟು ಓಡಿಸುವ ಧೈರ್ಯ ಸಾಹಸವನ್ನು ತೋರುವ ಕಥಾನಕ ಬಂಗರಾಳ್ವಾಗ ಎಂಬ ಸಣ್ಣ ತುಳು ಕವಿತೆಯಲ್ಲಿದೆ.
``ಬಂಗರಾಳ್ವಾಗ’’ ಎಂಬ ಧೈರ್ಯಸ್ಥ ಹುಡುಗಿ ನೀರು ತರಲೆಂದು ಹೋಗುತ್ತಾಳೆ. ದಾರಿಯಲ್ಲಿ ಒಂದು ಬೇಲಿಯ ದ್ವಾರದಲ್ಲಿ ದೇರೆ ಮುಂಡೋರಿ ಎಂಬಾತ ಅಡ್ಡಗಟ್ಟುತ್ತಾನೆ. ಆಗ ಅವಳು `ದಾರಿ ಬಿಡು ತಡಮೆಯನ್ನು ತೊಲಗಿಸು ದೇರೆ ಮುಂಡೋರಿ’ ಎಂದು ಹೇಳುತ್ತಾಳೆ. `ದಾರಿ ಬಿಡಲು ತಡಮೆ ತೆಗೆಯಲು ನಿನ್ನ ಹತ್ತಿರ ಒಂದು ಮಾತನಾಡಬೇಕು’ ಎಂದು ದೇರೆ ಮುಂಡೋರಿ ಹೇಳುತ್ತಾನೆ. ಅವನಿಂದ ಹೇಗೋ ತಪ್ಪಿಸಿಕೊಂಡು ಹೋಗಿ ನೀರು ತರುತ್ತಾಳೆ. ಬಂಗರಾಳ್ವಾಗ ನೀರು ತೆಗೆದುಕೊಂಡು ಹಿಂದೆ ಬರುವಾಗ ಅವನು ಪುನಃ ದಾರಿಗಡ್ಡ ನಿಂತು ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳುತ್ತಾನೆ. ಆಗಲೂ ಹೇಗೋ ತಪ್ಪಿಸಿಕೊಂಡು ಹೋಗುತ್ತಾಳೆ ಬಂಗರಾಳ್ವಾಗ. ಮರುದಿನ ಅವಳು ನೀರಿಗೆ ಹೋದಾಗ ಪುನಃ ಅದೇ ದೇರೆ ಮುಂಡೋರಿ ದಾರಿಗಡ್ಡ ನಿಂತು `ನಿನ್ನೆ ಹೇಳಿದ ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ’ ಎಂದು ಹೇಳುತ್ತಾನೆ. ಆಗ ಬಂಗರಾಳ್ವಾಗ `ನಾನೀಗ ಬೊಬ್ಬೆ ಹಾಕುತ್ತೇನೆ’ ಎಂದು ಹೆದರಿಸುತ್ತಾಳೆ. ಆಗಲೂ ದೇರೆ ಮುಂಡೋರಿ ದಾರಿ ಬಿಡುವುದಿಲ್ಲ. ಆಗ ಅವನು ಅವಳ ಕೈ ಹಿಡಿದು ಬಳೆ ಒಡೆದು ಹಾಕುತ್ತಾನೆ. `ನಿನ್ನನ್ನು ಬಿಟ್ಟರೆ ನನಗೆ ಬೇರೆ ಹೆಣ್ಣು ಸಿಗುವುದಿಲ್ಲ’ ಎಂದುಹೇಳುತ್ತಾನೆ. ಆಗ ಬಂಗರಾಳ್ವಾಗ ಬೊಬ್ಬೆ ಹಾಕುತ್ತಾಳೆ. ಅವಳ ಬೊಬ್ಬೆ ಕೇಳಿ ಊರಿನ ಜನರೆಲ್ಲ ಓಡಿ ಬಂದು ದೇರೆ ಮುಂಡೋರಿಗೆ ಏಟು ಹಾಕಿ ಅವನನ್ನು ಓಡಿಸುತ್ತಾರೆ. ಆದರೆ ಮರುದಿವಸ ಪುನಃ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ತೊಂದರೆ ಮಾಡುತ್ತಾನೆ. ದೇರೆ ಮುಂಡೋರಿ, ಇನ್ನು ರಕ್ಷಣೆಗಾಗಿ ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ಬಂಗರಾಳ್ವಾಗ `ದಾರಿ ಬಿಡು ತಡಮೆ ತೊಲಗಿಸು’ ಎಂದವಳೇ ತಾನು ಹಿಡಿದ ಕೊಡವನ್ನು ಎತ್ತಿ ಅವನ ಮೇಲೆ ಹೊಡೆಯುತ್ತಾಳೆ. ಆಗ ಓಡಿಹೋಗುತ್ತಾನೆ ದೇರೆ ಮುಂಡೋರಿ, `ಊರಿಗೆ ಬಂದ ಮಾರಿ ಅತ್ತ ಹೋಯಿತು’ ಎಂದು ಹೇಳಿ ಬಂಗರಾಳ್ವಾಗ ಮನೆಗೆ ಬರುತ್ತಾಳೆ. ಮುಂದೆಂದೂ ಬೇರೆ ಮುಂಡೋರಿ ಅವಳ ಸುದ್ದಿಗೆ ಬರುವುದಿಲ್ಲ.
ತೊಂದರೆ ಕೊಟ್ಟವನಿಗೆ ಎರಡೇಟು ಕೊಟ್ಟು ಓಡಿಸುವ ಧೈರ್ಯವನ್ನು ತೋರುವ ತುಳು ನಾಡಿನ ಹೆಣ್ಣು ಮಗಳು ಬಂಗರಾಳ್ವಾನ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
4ರಾದು
ತುಳುನಾಡು ಹೆಣ್ಣು ಮಕ್ಕಳ ದಿಟ್ಟತನಕ್ಕೆಸಾಕ್ಷಿಯಾಗಿ ನಿಲ್ಲುವ ಪಾತ್ರ ರಾದುವಿನದು. ಶಾರದಾ ಜಿ. ಬಂಗೇರ ನಿರೂಪಿಸಿದ ಚಿಕ್ಕದೊಂದು ತುಳು ಕವಿತೆ ರಾದು.
ಹಾಡಿನಲ್ಲಿ ಹೇಳಿರುವಂತೆ ರಾದು ಬಹಳ ಒಳ್ಳೆಯ ಹೆಣ್ಣು ರಾದು ಅತ್ತೆಗೆ ಮೆಚ್ಚಿನ ಸೊಸೆ ಕೂಡ ನಾವು ಹೋಗುತ್ತೇವೆ’ ಎಂದು ರಾದು ಕೇಳಿದಾಗ ಹಾಗೆ ಯಾಕೆ ಹೇಳುತ್ತಿ ಮಗ ಎಂದುಅತ್ತೇ ಕೇಳುತ್ತಾರೆ. ಆಗ ಅವಳು ``ನಿಮ್ಮ ಮೊಮ್ಮಗ ಅಚ್ಯುತನಿಗೆ ಆಟವಾಡಲೆಂದು ಬುಗುರಿ ತರಲು ಹೋಗುವಾಗ ವಾಸ ಇಲ್ಲದ ಮನೆಯಲ್ಲಿ ನಿಮ್ಮ ಮಗ ಬಂಗೇರ ಮತ್ತು ನಡೆತೆಗೆಟ್ಟ ಹೆಣ್ಣು ಒಟ್ಟಿಗೆ ಇದ್ದರು. ನಾನು ಅಲ್ಲಿಗೆ ಹೋದದಕ್ಕೆ ನಿಮ್ಮ ಮಗ ಕೈಸೋಲುವಷ್ಟು ಹೊಡೆದರು. ಕಾಲು ಸೋಲುವಷ್ಟು ತುಳಿದರು. ಆದ್ದರಿಂದ ನಾನು ಮತ್ತು ಮಗ ಅಚ್ಯುತ ನನ್ನ ತವರಿಗೆ ಹೋಗುತ್ತೇನೆ’ ಎಂದು ಹೇಳುತ್ತಾಳೆ.
ಇಲ್ಲಿ ರಾದುವಿನ ದೃಢನಿರ್ಧಾರ ಪ್ರಕಟವಾಗುತ್ತದೆ. ತವರಿಗೆ ಹೊರಟ ಸೊಸೆಯಲ್ಲಿ ಅತ್ತೆ `ಹಾಗೆ ಹೋದರೆ ರಾದು ನೀನು ಮತ್ತೆ ಯಾವಾಗ ಬರುವೆ?’ ಎಂದು ಕೇಳುತ್ತಾರೆ. ಆಗ `ನಿಮ್ಮ ಮಗ ಸತ್ತಾಗ ಬಾರದಿದ್ದರೆ ಬೊಜ್ಜುಕ್ಕಾದರೂ ಬರುತ್ತೇನೆ’ ಎಂದು ಹೇಳುತ್ತಾರೆ ರಾದು. ಆದರೆ ಆ ಕ್ಷಣಕ್ಕೆ ಅವಳ ಕಣ್ಣಿನಲ್ಲಿ ನೀರು ಬರುತ್ತದೆ.
ತನ್ನ ಸಂಸಾರ ಹಾಳಾದ ಬಗ್ಗೆ ರಾದುವಿಗೆ ದುಃಖವಾಗುತ್ತದೆ. ಆದರೂ ಬೇರೆ ಹೆಣ್ಣಿನ ಸಹವಾಸ ಮಾಡಿದ್ದಲ್ಲದೆ ಅದನ್ನು ನೋಡಿದ್ದಕ್ಕಾಗಿ ಹೊಡೆದ ತುಳಿದ ಗಂಡನ ಜೊತೆ ಸಂಸಾರ ಮಾಡಲು ಅವಳ ಸ್ವಾಭಿಮಾನ ಒಪ್ಪುವುದಿಲ್ಲ. ಮಗನ ಕೈ ಹಿಡಿದು ಇಳಿದು ಹೋಗಿಯೇ ಬಿಡುತ್ತಾಳೆ ರಾದು. ಗಂಡನಾದವನು ಮಾಡುವ ಶೋಷಣೆಯ ಚಿತ್ರಣ ಇಲ್ಲಿದೆ. ತಪ್ಪುದಾರಿ ಹಿಡಿದು ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನನ್ನು ತಿರಸ್ಕರಿಸಿ ಹೊರ ನಡೆಯುವ ಧೈರ್ಯವನ್ನು ತೋರುತ್ತಾಳೆ ರಾದು.
5 ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ
ಆಧುನಿಕ ಹಾಡಿನ ಗತಿಯನ್ನು ಹೊಂದಿರುವ ಈ ಕವಿತೆ ಕಲಿಯುಗದ ಎಂದರೆ ಆಧುನಿಕತೆಯ ಈ ಸಮಯದ ಜೀವನವನ್ನರು ನಿರೂಪಿಸುತ್ತದೆ. ಕಳ್ಳು ಗಂಗಸರ ದೂರವಾಯಿತು. ಶ್ರೀಮಂತರ ದೊಡ್ಡಸ್ತಿಕೆ ಹೊರಟು ಹೋಯ್ತು. ಜೊತೆಗೆ ಗಾಂಧೀಜಿಯ ಪಟಹಾರಿಹೋಯಿತು. ಎಂಬಲ್ಲಿ ಸತ್ಯ. ಪ್ರಾಮಾಣಿಕತೆ ಕೂಡ ಮರೆಯಾಗುತ್ತಿದೆ ಎಂಬುದು ಸೂಚನೆ ಈ ಕವಿತೆಯಲ್ಲಿದೆ.
No comments:
Post a Comment