Tuesday, 28 November 2023

ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?ಹೌದು ಇದ್ದಾರೆ .ಯಾರದು ? - ಡಾ.ಲಕ್ಷ್ಮೀ ಜಿ‌ ಪ್ರಸಾದ್

 ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?ಹೌದು ಇದ್ದಾರೆ .ಯಾರದು ? - ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ಯಮನೆಲ್ಲಿ ಕಾಣನೆಂದು ಹೇಳಬೇಡ..ದುರುಳ ರಾವಣನಿಗೆ ಶ್ರೀರಾಮನೇ ಯಮನು

ದುಷ್ಟ ಕಂಸನಿಗೆ ಶ್ರೀಕೃಷ್ಣ ನೇ ಯಮನು ಎಂಬ ಹಾಡನ್ನು ಎಲ್ಲರೂ ಕೇಳಿರ್ತಾರೆ 

ಆದರೆ ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?.

ಈ ಪ್ರಶ್ನೆಗೆ ನನ್ನ ಉತ್ತರ ದೃಡವಾದ  ಹೌದು‌‌ ನೋಡಿದವರಿದ್ದಾರೆ ಎಂದು..

ಯಾರು ? ಎಲ್ಲಿ ?
ಇದು ನಡೆದದ್ದು ನಮ್ಮ ಮನೆಯಲ್ಲಿ

ನಂಬಿದರೂ ನಂಬದಿದ್ದರೂ ಇದು ನಿಜಕ್ಕೂ ಸತ್ಯವಾದ ವಿಚಾರ
ಸುಮಾರು ನಲುವತ್ತ ಮೂರು ವರ್ಷಗಳ ಹಿಂದೆ ನಡೆದ ಘಟನೆ ಇದು.ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಲ್ಲಿದೆ.ನಮ್ಮ ಮನೆ ಅಂಗಳಕ್ಕೆ ಸೇರಿಕೊಂಡು ಕಲ್ಲೂರಾಯರ ಮನೆ ಮತ್ತು ಎಂಟು ಹತ್ತು ಸೆನ್ಸ್ ಜಾಗ ಇತ್ತು.ಕಲ್ಲೂರಾಯರು ಆ ಮನೆ ಜಾಗ ಬಿಟ್ಟು ಬೇರೆ ಕಡೆ ನೆಲೆಸಿದ್ದರು.ಮನೆ ಬಿದ್ದು ಹೋಗಿ ಅಡಿಪಾಯ ಸೇರಿದಂತೆ ಸಣ್ಣ ಪುಟ್ಟ ಅವಶೇಷಗಳಿದ್ದವು.ನನ್ನ ತಂದೆ ತಾಯಿ ಹೊಸ ಮನೆ ಕಟ್ಟಿದಾಗ ಹಸು ಕಟ್ಟಲು ಜಾಗ ಇರಲಿಲ್ಲ ಆಗ ನಮ್ಮ ಮನೆ ಅಂಗಳಕ್ಕೆ ಹೊಂದಿಕೊಂಡಿದ್ದ ಕಲ್ಲೂರಾಯರ ಮನೆಯ ಅಂಗಳದಲ್ಲಿ ನಮ್ಮ ಹಸು ಮತ್ತು ಕೋಣಗಳನ್ನು ಕಟ್ಟುತ್ತಿದ್ದರು.ನಂತರ ಆ ಜಾಗವನ್ನು ನನ್ನ ತಂದೆಯವರೇ ಖರೀದಿಸಿದ್ದರು.

ಆ ಮನೆಯ ಎದುರು ಭಾಗದಲ್ಲಿ ಕಲ್ಲೂರಾಯರು ಉಪಯೋಗಿಸುತ್ತಿದ್ದ ಬಾವಿ ಇತ್ತು.ಅದು ತುಂಬಾ ಆಳದ ಬಾವಿಯಲ್ಲ.‌ಬೇಸಿಗೆಯಲ್ಲಿ ನೀರೂ ಇರುತ್ತಿರಲಿಲ್ಲ. ನಾವದನ್ನು ಪೊಟ್ಟು ಬಾವಿ ಎನ್ನುತ್ತಿದ್ದೆವು.ಅದರ ಉಪಯೋಗವನ್ನು ನಾವು ಮಾಡುತ್ತಿರಲಿಲ್ಲ.ಅದರ ನಿರ್ವಹಣೆಯೂ ಮಾಡಿರದ ಕಾರಣವೋ ಇನ್ನೇನು ಕಾರಣವೋ ಗೊತ್ತಿಲ್ಲ ಅದರ ಕಟ್ಟೆ ಎಲ್ಲ ಜರಿದು ಬಿದ್ದು ಹೋಗಿತ್ತು

ಸುಮಾರು 1981 ರ ಮಳೆಗಾಲ ಇರಬೇಕು.ನನ್ನ ಸಣ್ಣ ತಮ್ಮ  ಎರಡು ಎರಡೂವರೆ  ವರ್ಷದ ಸಣ್ಣ ಮಗು ಗಣೇಶ ಬೇಗನೆ ಮಾತನಾಡಲು ಕಲಿತಿದ್ದ.ಸಣ್ಣಾಗಿದ್ದಲೇ ಆಶುಕವಿಯಾಗಿದ್ದ .ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ  ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಹಾಡನ್ನು ಅನುಸರಿಸಿ ಬಾನ ದಾರಿಯಲ್ಲಿ ಮೀನು ಜಾರಿ ಹೋದ ಕಪ್ಪೆ ಮೇಲೆ ಬಂದ ಎಂದು ಹಾಡುತ್ತಿದ್ದ.
ಒಂದು ದಿನ ಜೋರಾಗಿ ಮಳೆ ಬಂದು ನಿಂತಿತ್ತು.

ಸಣ್ಣ ಮಗು ಗಣೇಶ ಮನೆಯಲ್ಲಿ ಕಾಣಿಸಲಿಲ್ಲ ಎಲ್ಲಿ ಹೋದ ಎಂದು ನೋಡುವಾಗ ಕಲ್ಲೂರಾಯರ ಜಾಗದಲ್ಲಿದ್ದ ಪೊಟ್ಟು ಬಾವಿಯ ಕರೆಯಲ್ಲಿ ತುರ್ಕಾಲಿನಲ್ಲಿ ಕುಳಿತು ಗಣೇಶ  ಒಂದೊಂದೇ ಕಲ್ಲನ್ನು ಆ ನೀರು ತುಂಬಿದ ಆ  ಪೊಟ್ಟು ಬಾವಿಗೆ ಎಸೆಯುತ್ತಾ 'ಬಾನದಾರಿಯಲ್ಲಿ ಮೀನು ಜಾರಿ ಹೋದ ಕಪ್ಪೆ ಮೇಲೆ ಬಂದ 'ಎಂದು ಹಾಡುತ್ತಿದ್ದ


.ಅವನು ಕುಳಿತಿದ್ದ ಜಾಗದ ಅಡಿಭಾಗದ ಮಣ್ಣು ಕುಸಿದು ಬೀಳ್ತಾ ಇರುವುದು ಅಮ್ಮನಿಗೆ ಕಾಣಿಸ್ತಾ ಇತ್ತು ಕರೆದರೆ ಇವನು ಎದ್ದು ತಿರುಗಿದರೆ ಇವನೂ ಬಾವಿಗೆ ಬೀಳುವ ಅಪಾಯವಿತ್ತು‌.ಹಾಗಾಗಿ ಅಮ್ಮ ಓಡಿ ಬಂದು ಇವನನ್ನು ಎತ್ತಿ ಕೊಂಡರು.ಅಮ್ಮ ಇವನನ್ನು ಎತ್ತಿಕೊಳ್ಳುದೂ ಇವನು ಕೂತಿದ್ದ ಜಾಗದ ಮಣ್ಣು ಬಾವಿಗೆ ಕುಸಿದು ಬೀಳುದೂ ಒಟ್ಟೊಟ್ಟಿಗೆ ನಡೆದಿತ್ತು.

ಅಮ್ಮ ಎತ್ತಿಕೊಳ್ಳುದು ಒಂದು ಕ್ಷಣ ತಡವಾಗಿದ್ದರೂ ತಮ್ಮ ನೀರಿಗೆ ಬಿದ್ದಾಗಿರುತ್ತಿತ್ತು.ತಕ್ಷಣವೇ ಎತ್ತಲು ಅಲ್ಲಿ ಸಾಧ್ಯವೂ ಇರಲಿಲ್ಲ..ಏನೋ ದೇವರು ಕಾದ ಎಂದು ಅಮ್ಮ ದೇವರಿಗೆ ಮನದಲ್ಲಿಯೇ ನಮಿಸಿದರು.

ಅಷ್ಟರಲ್ಲಿ ನನ್ನ  ತಮ್ಮ  ಪುಟ್ಟ ಮಗು ಗಣೇಶ ಅಮ್ಮ‌‌.ನೋಡಿಲ್ಲಿ..ನಮ್ಮ ಮೋಡೆ ( ನಮ್ಮ‌ ಸಾಕಿದ ಉಳುಮೆ ಕೋಣದ ಹೆಸರು ಮೋಡೆ) ಮೇಲೆ ಕೂದುಕೊಂಡು ಆರೋ ಬಂದದು.ನೋಡು ( ನಮ್ಮ‌ಕೋಣ ಮೋಡೆಯ ಮೇಲೆ ಯಾರೋ ಕುಳಿತು ಕೊಂಡು ಬಂದದ್ದು ನೋಡು) .ಎಂದ.

ಆಗ ಎಲ್ಲಿ ಎಲ್ಲಿ‌ಮಗ ? ಎಂದು ಅಮ್ಮ‌ಕೇಳಿದಾಗ ಇಲ್ಲಿಯೇ ಈಗ ಹೋದರು ಎಂದ..ಆಗ ಅಮ್ಮ ಎಲ್ಲಿ ಹೋದರು ಎಂದು ಕೇಳಿದಾಗ ಅಲ್ಲಿಯೇ ಎದುರಿನ ನಮ್ಮ‌ಗದ್ದೆಯ ಕಟ್ಟಪ್ಪುಣಿ ಕಡೆ ಕೈ  ತೋರಿಸಿ ಇಲ್ಲಿಯೇ ಗೋವಿಂದಣ್ಣನ ಮನೆಗೆ ಹೀಗೆ  ಹೋದರು ಎಂದು ಹೇಳಿದ..

ಮೆಟ್ಟುಕುಂಡೆ ಗೋವಿಂದ ಭಟ್  ನಮಗೆಲ್ಲ ಬಹಳ ಆತ್ಮೀಯರಾಗಿದ್ದವರು‌.ಅವರ ಮನೆಗೆ  ನಮ್ಮ ಗದ್ದೆಯ ಕಟ್ಟಪ್ಪುಣಿಯ ಮೂಲಕ ಹೋಗುವ ದಾರಿ ಇತ್ತು.ಗೋವಿಂದಣ್ಣ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು‌.ಹಾಗಾಗಿ ಅವರ ಮನೆಗೆ ಕಟ್ಟಪ್ಪುಣಿ ಮೂಲಕ ಹೋಗುವ ದಾರಿ ಇರುವದ್ದು ತಮ್ಮನಿಗೆ ಗೊತ್ತಿದ್ದಿರಬಹುದು.


ಆದರೆ ಕೋಣನ ಮೇಲೆ ಬಂದವರು  ಗೋವಿಂದಣ್ಣನ‌ ಮನೆಗೆ ಹೋದರು ಎಂಬ ಸಣ್ಣ ಹುಡುಗನ ಮಾತು ಅಮ್ಮನಿಗೆ ಅಚ್ಚರಿ ತಂದಿತ್ತು

ವಾಚಾಳಿಯಾಗಿರುವ ಇವನು ಏನೋ  ಹೇಳಿದ್ದಾನೆ ಎಂದು ಕೊಂಡು ಇವನನ್ನು ಎತ್ತಿಕೊಂಡು ಅಮ್ಮ ಮನೆಗೆ ಬಂದರು
ಅಮ್ಮ ಮನೆಗೆ ಬಂದು ಹತ್ತು ನಿಮಿಷ ಆಗುವಷ್ಟರಲ್ಲಿ ಗೋವಿಂದಣ್ಣನ ಮನೆಯಿಂದ ನಮ್ಮ‌ ಮನೆಗೆ ಯಾರೋ ಬಂದರು.ಗೋವಿಂದಣ್ಣನ ತಾಯಿಯವರು ತೀರಿ ಹೋಗಿದ್ದಾರೆ ಎಂಬ ಸುದ್ದಿಯನ್ನು ಹೇಳಿ ಪುರೋಹಿತರಾಗಿದ್ದ ನಮ್ಮ ತಂದೆಯವರನ್ನು ಕರೆದುಕೊಂಡು ಹೋದರು
ಆಗ ಗಣೇಶ ಹೇಳಿದ್ದು ಅಮ್ಮನಿಗೆ ನೆನಪಾಗಿ ಅಬ್ಬಾ! ಎನಿಸಿತು

ನಮ್ಮ ನಂಬಿಕೆಯಂತೆ ಯಮರಾಜನ ವಾಹನ‌ ಕೋಣ,ಕೋಣನ‌ಮೇಲೆ ಅವನು‌ ಕುಳಿತುಕೊಂಡು ಬಂದು ತನ್ನ‌ ಪಾಶವನ್ನು ಹಾಕಿ ಜೀವವನ್ನು ಎಳೆದುಕೊಂಡು ಹೋಗುತ್ತಾನೆ.

ನನ್ನ ಸಣ್ಣ ತಮ್ಮ ಗಣೇಶನಿಗೆ ಎರಡು ಎರಡುವರೆ ವರ್ಷ ಪ್ರಾಯ.ಆ ಸಣ್ಣ ವಯಸ್ಸಿಗೆ ಅವನಿಗೆ ಯಮನ ಬಗ್ಗೆಯಾಗಲೀ ಯಮ ಕೋಣನ ಮೇಲೆ ಬರುತ್ತಾನೆ ಎಂಬ ಐತಿಹ್ಯವಾಗಲೀ ಗೊತ್ತಿರಲು ಸಾಧ್ಯವೇ ಇಲ್ಲ.

ಹಾಗಾದರೆ ಅವನಿಗೆ ಕೋಣನ‌ಮೇಲೆ ಕುಳಿತುಕೊಂಡು ಕಾಣಿಸಿದ್ದು ಯಾರು ? ಪೊಟ್ಟು ಬಾವಿಯ ಬಳಿಯಿಂದ ಗದ್ದೆಯ ಕಟ್ಟಪ್ಪುಣಿಯಲ್ಲಿ ಹೋದಂತೆ ಕಂಡದ್ದು ಏನು ? ಹೆಚ್ಚು‌ಕಡಿಮೆ ಅದೇ ಸಮಯದಲ್ಲಿ ಗೋವಿಂದಣ್ಣನ ವೃದ್ಧ ತಾಯಯಿವರ ಜೀವ ಹೋದದ್ದು ಕಾಕತಾಳೀಯವೇ ?


ನಿಜಕ್ಕೂ ಯಮರಾಜ ಸಮೀಪ ಬಂದು 'ಇವನಿನ್ನೂ ಬಾಳಿ ಬದುಕುವ ಎಳೆಯ ಇವ ಬೇಡ' ಎಂದು ಇವನನ್ನು ಬಿಟ್ಟು ಗೋವಿಂದಣ್ಣನ ಮನೆಗೆ ನಡೆದನೇ? ಅಲ್ಲಿದ್ದ ಹಿರಿಯ ಜೀವವನ್ನು ಸೆಳೆದುಕೊಂಡು ಹೋದನೇ ?


ಎರಡು ವರ್ಷದ ಸಣ್ಣ ಮಗುವಂತೂ ಕಥೆ ಕಟ್ಟಿ ಹೇಳಿರಲು ಸಾಧ್ಯವೇ ಇಲ್ಲ..ಅಮ್ಮ ಓಡಿ ಹೋಗಿ ಅವನನ್ನು ಎತ್ತಿಕೊಳ್ಳುವುದು ಒಂದು ಅರೆ ಕ್ಷಣ ತಡವಾಗಿದ್ದರೂ ಇವನು ಬದುಕಿ ಉಳಿಯುತ್ತಿರಲಿಲ್ಲ.ಯಮರಾಜ ಇವನ ಬಳಿಗೆ ಬಂದೂ ಕನಿಕರಿಸಿ ಬಿಟ್ಡು ಹೋದದ್ದಿರಬೇಕು..


"ಯಮರಾಜ ಹೇಗೂ ಬಿಟ್ಟು ಹೋಗಿರುವೆ..ಇವನು ತನ್ನ‌ಮಗಳಂದಿರನ್ನು‌ಮದುವೆ ಮಾಡಿ ಕೊಟ್ಟು ಜವಾಬ್ದಾರಿ ಕಳೆಯುವ ತನಕ ಇನ್ನು ಅವನ ಕಡೆ ಬರಬೇಡ‌‌‌.ಇವನಿಗೆ ದೀರ್ಘಾಯುಸ್ಸು ಕರುಣಿಸು .ನಿನಗೆ ನಮಸ್ಕಾರ 'ಎನ್ನುತ್ತಾ ಈ ಹಿಂದೆ ನಡೆದ ನಿಜ ಘಟನೆಯನ್ನು ಅಮ್ಮ ಹೇಳಿರುವಂತೆ ನಿಮ್ಮ ಎದುರು ಬಿತ್ತರಿಸಿರುವೆ.ಇದರಲ್ಲಿ ಒಂದು ಪದ ಕೂಡ ಕಾಲ್ಪನಿಕವಲ್ಲ..ನಿಜಕ್ಕೂ ನಡೆದ ಘಟನೆ ಇದು..

ಈ ವಿಚಾರದ ಬಗ್ಗೆ ಅಮ್ಮ ಮತ್ತು ನಾನು ಅನೇಕ ಬಾರಿ ಮಾತಾಡಿದ್ದೇವೆ..ಈಗ್ಗೆ ಎರಡು ದಿನಗಳ ಹಿಂದೆಯೂ ಈ ಬಗ್ಗೆ ಮಾತನಾಡಿದ್ದೇನೆ..

ಆ ದಿನ ಸಣ್ಣ ಮಗು ಗಣೇಶನಿಗೆ ಕಾಣಿಸಿದ್ದು ಕೋಣನ‌ಮೇಲೆ ಬಂದ ಯಮರಾಜನೇ ? ಇವನನ್ನು ಬಿಟ್ಟು ಕಟ್ಟಪುಣಿಯ ದಾರಿಯಲ್ಲಿ ಸಾಗಿ  ಮೆಟ್ಟುಕುಂಡೆ ಗೋವಿಂದಣ್ಣನ ವೃದ್ದ ತಾಯಿಯವರ ಜೀವವನ್ನು ತೆಗೆದುಕೊಂಡು ಹೋದನೇ ? ಇಂದಿಗೂ ನಮಗೆ ಇದಮಿತ್ಥಂ ಎಂಬ ಉತ್ತರ ಸಿಗದ ಪ್ರಶ್ನೆಯೂ ಆಗಿದೆ.ಮರೆಯಲಾಗದ ಅಚ್ಚರಿಯೂ ಆಗಿದೆ.


ಇತ್ತೀಚೆಗೆ ಅನಂತಪುರ ದೇವಾಲಯದ ಕೆರೆಯಲ್ಲಿ ಹೊಸ ಮೊಸಳೆ ಬಬಿಯ ಕಾಣಿಸಿಕೊಂಡಾಗ ಇದು ಸಾಧ್ಯವೇ? ಯಾರೋ ತಂದು ಹಾಕದೆ ಮೊಸಳೆ ಮರಿ ಬರಲು ಹೇಗೆ ಸಾಧ್ಯ ? ಎಂದು ನನ್ನಲ್ಲಿ ಕೇಳಿದವರಿಗೆ ' ಈ ಜಗತ್ತಿನಲ್ಲಿ ನಮಗೆ ತಿಳಿಯದೇ ಇರುವ ವಿಚಾರ ತುಂಬಾ ಇದೆ.ನಮಗೆ ಗೊತ್ತಿಲ್ಲದೇ ಇದ್ದರೆ ಅದು ಇಲ್ಲವೆಂದು ಅರ್ಥವಲ್ಲ‌.ನಮಗೆ ಗೊತ್ತಿಲ್ಲ ಎಂದು ಮಾತ್ರ ಅರ್ಥ.ಎಂದಿದ್ದೆ.
ನಮ್ಮ‌ಮನೆಯಲ್ಲೊ  ನಡೆದ ಈ ವಿಚಾರದ ಬಗ್ಗೆ ಕೂಡ ನನ್ನ ನಿಲುವು ಇದೇ ಆಗಿದೆ
.ತೇನ ವಿನಾ ತೃಣಮಪಿ ನ ಚಲತಿ..ಭಗವಂತನ ಲೀಲೆಯನ್ನು ಪೂರ್ಣವಾಗಿ  ಅರಿತವರಿಲ್ಲ.🙏
- ಡಾ.ಲಕ್ಷ್ಮೀ ಜಿ ಪ್ರಸಾದ್, ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಬೆಂಗಳೂರು 

2 comments:

  1. ಅಬ್ಬಾ ಉಸಿರು ಬಿಗಿ ಹಿಡಿದು ಓದಿದೆ.... ಊಹೆಗೆ ನಿಲುಕದ ಎಷ್ಟೋ ನಮ್ಮ ಸುತ್ತ್ತ ಆಗುತ್ತಾ ಇರುತ್ತೆ. ಮಾನವನ ಮೀರಿದ ಶಕ್ತಿ ಇದೆ. 🙏

    ReplyDelete
    Replies
    1. ತೇನ ವಿನ ತೃಣಮಪಿ ನ ಚಲತಿ‌🙏

      Delete