Thursday, 5 October 2023

ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ © ಡಾ‌ಲಕ್ಷ್ಮೀ ಜಿ ಪ್ರಸಾದ್



                    copy rights reserved                   ಕಂಬಳ ಕೇವಲ ಕೋಣಗಳ ಓಟವಲ್ಲ    



ಕಂಬಳ ಕೋರಿಯಂದು ಆರಾಧನೆ ಪಡೆವ ನಾಗ ಬ್ರಹ್ಮ ಮತ್ತು ಕೊರಗ ತನಿಯ ದೈವಗಳು: ಚಿತ್ರ  ಡಾ.ಲಕ್ಷ್ಮೀ ಜಿ ಪ್ರಸಾದ್







ಉರವ ದೈವ



ಎರು ಬಂಟ ದೈವ 

ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳ  . ಸಾಮಾನ್ಯವಾಗಿ  ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು© ಡಾ.ಲಕ್ಷ್ಮೀ ಜಿ ಪ್ರಸಾದ್  .© ಡಾ.ಲಕ್ಷ್ಮೀ ಜಿ ಪ್ರಸಾದ್ ಲೇ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಲ- ಒಂದು ವಿಶ್ಕೇಷಣಾತ್ಮಕ ಅಧ್ಯಯನ( ಪಿಎಚ್ ಡಿ ಮಹಾ ಪ್ರಬಂಧ)
ಆಕರ್ಷಕ ಕೋಣಗಳ ಓಟ
.ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ .© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕಂಬಳದ ಪ್ರಾಚೀನತೆ
 ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಕ್ರಿ.ಶ.1200 (ಶಕ ವರ್ಷ 1281)ರ ಶಾಸನದಲ್ಲಿ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಇದರಲ್ಲಿ ಉಲ್ಲೇಖವಿದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಉಲ್ಲೇಖವಿದೆ. ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ. ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ. ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ. ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಉಲ್ಲೇಖವಿದೆ. ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿ” ಎಂದು ಉಲ್ಲೇಖಿಸಿದೆ. ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದು” ಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ. ಹೀಗೆ ಕಂಬಳಕ್ಕೆ 800 -9೦೦ ವರ್ಷಗಳ ಇತಿಹಾಸವಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆ’ ಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ದಾಸ್ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕಂಬಳದ ಮಹತ್ವ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ಲೇ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಲ- ಒಂದು ವಿಶ್ಕೇಷಣಾತ್ಮಕ ಅಧ್ಯಯನ( ಪಿಎಚ್ ಡಿ ಮಹಾ ಪ್ರಬಂಧ)



ಸಾಮಾನ್ಯವಾಗಿ ಕಂಬಳ’ ಎಂದರೆ ಕೋಣಗಳ ಓಟದ ಸ್ಪರ್ಧೆ’ ಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಇದೆ .


ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕಆರ್ಥಿಕರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆ” ಎಂದು ಹೇಳಿದ್ದಾರೆ. ಪೂಕರೆ ಕಂಬದ ವಿಚಾರದಲ್ಲಿ ಯುದ್ಧ ಕೂಡ ಆಗುತ್ತಿತ್ತು.© ಡಾ.ಲಕ್ಷ್ಮೀ ಜಿ ಪ್ರಸಾದ್ 


ಉಳುವ ಕೋಣಗಳಿಗಿಂತ ಭಿನ್ನವಾಗಿ ಸಾಕುವ ಗಿರ್ದೆರ್ಲು ಎಂದು ಕರೆಯುವ ಕಂಬಳ ಓಟದ ಕೋಣಗಳನ್ನು ಉಳಲು ಉಪಯೋಗಿಸುವುದಿಲ್ಲಇವುಗಳಿಗೆ ಹುರುಳಿಯಂಥ ಉತ್ತಮ ಆಹಾರ ನೀಡಿ ಸಾಕುತ್ತಾರೆಪ್ರತಿದಿನ ಕೋಣಗಳನ್ನು ಸ್ವಲ್ಪ ದೂರ ಓಡಿಸಿನೀರಿಗಿಳಿಸಿಈಜಾಡಿಸಿ ಇವುಗಳಿಗೆ ವ್ಯಾಯಾಮ ಮಾಡಿಸಿಸ್ಪರ್ಧೆಯಲ್ಲಿ ಓಡುವಂತೆ ಬಲಿಷ್ಠವಾಗಿ ತರಬೇತುಗೊಳಿಸುತ್ತಾರೆ.ಕೊಂಬುಗಳಿಗೆಮುಖಕ್ಕೆವಿವಿಧ ಆಭರಣಕನ್ನಡಿ ಇತ್ಯಾದಿ ತೊಡಿಸಿ ಬೆನ್ನಿಗೆ ನಯವಾದ ಆಕರ್ಷಕವಾದ ಬಟ್ಟೆಯನ್ನು ಹೊದಿಸಿ ಕೊರಳಿಗೆ ನೊಗ ಮತ್ತು ಅಡ್ಡಹಲಗೆಯನ್ನು ಹುರಿಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಮೂಗುದಾರ ಹಾಕಿ ತಲೆಪಟ್ಟ ಕಟ್ಟಿ ಸಿಂಗರಿಸಿದಓಟದ ಕೋಣಗಳನ್ನು ಕಂಬಳಕ್ಕೆ ಕೊಂಬುಕಹಳೆಸುಡುಮದ್ದಿನ ವೈಭವದೊಂದಿಗೆ ಮೆರವಣಿಗೆ ಮಾಡಿ ತರುತ್ತಾರೆ.ಕಂಬಳದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ.ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕೋಣಗಳನ್ನು ಒಂದೊಂದಾಗಿ ಓಡಿಸುವ ಕ್ರಮ ಇಲ್ಲ.ಎರಡು ಕೋಣಗಳನ್ನು ಒಟ್ಟಿಗೆ ನಿಲ್ಲಿಸಿ ಕೊರಳಿಗೆ ನೊಗ ಕಟ್ಟಿಯೇ ಓಡಿಸುವ ಕ್ರಮ ಬೆಳೆದು ಬಂದಿದೆಕೋಣಗಳು ಬಲಿಷ್ಟವಾಗಿರುವಂತೆ ಓಡಿಸುವಾತ ನಿರ್ದೇಶಿಸಿದಂತೆ ಗುರಿಯೆಡೆಗೆ ಸಾಗುವ ವಿಧೇಯತೆಯೂ ಕೋಣಗಳಿಗೆ ಇರ ಬೇಕಾಗುತ್ತದೆಕಣೆ ಹಲಗೆ ಮತ್ತು ಅಡ್ಡ ಹಲಗೆಯ ಓಟದಲ್ಲಿ ಓಡಿಸುವಾತ ಮತ್ತು ಕೋಣಗಳ ಕೌಶಲ್ಯ ಬಹಳ ಮುಖ್ಯವಾದುದು .
ಕೋಣಗಳನ್ನು ಓಡಿಸುವುದು ಸುಲಭದ ವಿಚಾರವಲ್ಲಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು.ಇದಕ್ಕಾಗಿ ವಿಶೇಷ ಪರಿಣತಿ ಪಡೆದಿರಬೇಕಾಗುತ್ತದೆಕೋಣಗಳನ್ನು ಓಡಿಸುವವರನ್ನು ‘ಗಿಡೆಪುನಾಯೆ’ ಎನ್ನುತ್ತಾರೆಇವರು ಕೋಣಗಳನ್ನು ಓಡಿಸುವ ತಾಂತ್ರಿಕ ಕೌಶಲ್ಯಗಳನ್ನು ತಿಳಿದಿರುವುದು ಮಾತ್ರವಲ್ಲದೆ ಕೋಣಗಳೊಂದಿಗೆ ಆತ್ಮೀಯತೆಯನ್ನು ಬೆಳಸಿಕೊಂಡಿರಬೇಕಾಗುತ್ತದೆಕೋಣಗಳನ್ನು ಓಡಿಸುವಾತ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ
ಕೋಣಗಳನ್ನು ಓಡಿಸಲು ಸಿದ್ಧಪಡಿಸಿದ ಜಾಗವನ್ನು ಕಂಬಳಕರೆ ಎನ್ನುತ್ತಾರೆಕೆಲವೆಡೆ ಜೋಡುಕರೆ ಇರುತ್ತವೆಅದನ್ನು ಜೋಡುಕರೆ ಕಂಬಳ ಎನ್ನುತ್ತಾರೆಇದರಲ್ಲಿ ಕಳದ ಮಧ್ಯಭಾಗದಲ್ಲಿ ಉದ್ದಕ್ಕೆ ದಿಣ್ಣೆಯನ್ನು ನಿರ್ಮಿಸಿ ಏಕಕಾಲದಲ್ಲಿ ಎರಡು ಜೊತೆ ಕೋಣಗಳನ್ನು ಓಡಿಸುವ ವ್ಯವಸ್ಥೆ ಇರುತ್ತದೆಸ್ಪರ್ಧೆಯಲ್ಲಿ ನಿರ್ಣಾಯಕರು ಕೋಣಗಳ ಓಟದ ನಿಯಮಗಳಿಗನುಗುಣವಾಗಿ ತೀರ್ಪು ನೀಡುತ್ತಾರೆಕೋಣಗಳ ಯಜಮಾನರ ಹೆಸರುಗಳನ್ನು ಧ್ವನಿವರ್ಧಕದ ಮೂಲಕ ಹೇಳಿದಂತೆ ಕೋಣಗಳು ಸರದಿ ಪ್ರಕಾರ ಓಡುತ್ತವೆಓಡಿ ಬಂದು ಮಂಜೊಟ್ಟಿಯನ್ನು ಏರಿ ನಿಲ್ಲುತ್ತವೆ.ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ರೋಮಾಂಚಕ ಅನುಭವನ್ನು ಕೊಡುತ್ತದೆ..© ಡಾ.ಲಕ್ಷ್ಮೀ ಜಿ ಪ್ರಸಾದ್ 

ಕಂಬಳ ಕೋಣದ ಅಂಚೆ ಚೀಟಿ
ತನ್ನ ನಾಲ್ಕನೇ ವಯಸ್ಸಿನಿಂದ ಕಂಬಳ ಓಟದಲ್ಲಿ ಓಡುತ್ತಾ 500 ಕ್ಕೂ ಹೆಚ್ಚು ಬಾರಿ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿರುವ  ಕಂಬಳ ಓಟದ ಅನಭಿಷಿಕ್ತ ದೊರೆ ನಾಗರಾಜ ಎಂಬ ಹೆಸರಿನ ಕೋಣ 115 ಬಾರಿ ಬಂಗಾರದ ಪದಕಗಳನ್ನು ಗೆದ್ದು , ತನ್ನನ್ನು ಮಗನಂತೆ ಪೊರೆದ ಒಡೆಯ ಒಡೆಯ ಪಲ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ-2013 ಅನ್ನು ತಂದು ಕೊಟ್ಟಿದೆ.ಕೇಂದ್ರ ಸರಕಾರದ ಅಂಚೆ ಇಲಾಖೆ ಹೊರ ತಂದ ಅಂಚೆ ಚೀಟಿಯಯಲ್ಲಿ ತನ್ನ ಚಿತ್ರದ ಸ್ಥಾನ ಪಡೆದ ಶರವೇಗದ ಸರದಾರ ನಾಗರಾಜನ ಕಂಬಳ ಓಟದ ರೆಕಾರ್ಡ್ ವೇಗ 100 ಮೀಟರ್ ಗೆ 12 ಸೆಕೆಂಡ್ಸ್. ಇದೊಂದು ದಾಖಲೆಯ ಓಟವಾಗಿದೆ .
ಗದ್ದೆಯ ಮದುವೆ
ತುಳುವರಿಗೆ ಗದ್ದೆ ಎಂದರೆ ಬರಿಯ ಬೆಳೆ ಬೆಳೆಯುವ ತಾಣವಲ್ಲ .ಅದನ್ನು ತಮ್ಮಂತೆ ಎಂದು ಭಾವಿಸುವ ಅನನ್ಯ ಆತ್ಮೀಯತೆ ಅವರಿಗೆ ಆದ್ದರಿಂದಲೇ ಇಲ್ಲಿ ಗದ್ದೆಗೂ ಮದುವೆ ಇದೆ.. ಗದ್ದೆಯನ್ನು ಉತ್ತು ಬಿತ್ತನೆಗೆ ತಯಾರು ಮಾಡುವುದನ್ನು ಕಂಬಳ ಕೋರಿ ಎನ್ನುತ್ತಾರೆ .ಕಂಬಳ ಕೋರಿಯಂದು ಗದ್ದೆಯಲ್ಲಿ ಪೂಕರೆ ಕಂಬವನ್ನು ನೆಡುವ ಸಂಪ್ರದಾಯ ಪೂಕರೆ ಕಂಬಳಗಳಲ್ಲಿದೆ ಪೂಕರೆ ಕಂಬಳ ನೇಮಕ್ಕೆ ಬಹಳ ಧಾರ್ಮಿಕ ಮಹತ್ವವಿದೆ. ಸುಮಾರು ಮೂವತ್ತಡಿ ಎತ್ತರದ ಅಡಿಕೆಯ ಮರಕ್ಕೆ ರಂಧ್ರಗಳನ್ನು ಕೊರೆದು ಸಲಿಕೆಗಳನ್ನು ಸಿಕ್ಕಿಸಿಹನ್ನೆರಡು ತ್ರಿಕೋನಾಕಾರದ ನೆಲೆಗಳನ್ನು ಮಾಡಿ ಕಲಶವನ್ನು ಇಟ್ಟುಹಳದಿ ಹೂಗಳಿಂದಕೇಪುಳ ಹೂ ಹಾಗೂ ಪಾದೆಯ ಹೂಗಳ ಮಾಲೆಯಿಂದ ಅಲಂಕರಿಸಿದ ಕಂಬವನ್ನು “ಪೂಕರೆ ಕಂಬ” ಎನ್ನುತ್ತಾರೆಪೂಕರೆ ಹಾಕುವುದನ್ನು ‘ಕಂಡೊದ ಮದಿಮೆ’ ಅಂದರೆ ಗದ್ದೆಯ ಮದುವೆ ಎನ್ನುತ್ತಾರೆಇಲ್ಲಿ ಸೇಡಿಯಿಂದ ಸಿಂಗರಿಸಿದ ಗದ್ದೆ ಮದುಮಗಳಾದರೆಪೂಕರೆ ಕಂಬವನ್ನು ಮದುಮಗ ಎಂದು ಪರಿಗಣಿಸುತ್ತಾರೆಪೂಕರೆಯ ಕೆಳಗಿನ ಅಂತಸ್ತನ್ನು ‘ತೊಟ್ಟಿಲಗೆಣೆ’ ಎಂದು ಕರೆಯುತ್ತಾರೆ.ಪೂಕರೆ ಕಂಬವನ್ನು ನಾಗಧ್ವಜ ಎನ್ನುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ( ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಲ ( ಪಿಎಚ್ ಡಿ ಮಹಾ ಪ್ರಬಂಧ)
ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
 ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆಕಂಬಳಕ್ಕೆ ಸಂಬಂಧಿಸಿದಂತೆ ‘ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ.
ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ‘ಅಗೋಳಿ ಮಂಜಣ್ಣ’ ಎಂಬ ಹೆಸರಿನಲ್ಲಿ ಪ್ರಚಲಿತವಿದೆ.
ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ( ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ ( ಪಿಎಚ್ ಡಿ ಪ್ರಬಂಧ)
ವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಭೂತಾರಾಧನೆ
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ
ಕಂಬಳ ಕೋರಿಯಂದು ಗದ್ದೆಯ ಅಧಿದೈವ ನಾಗ ಬೆರ್ಮೆರ್ ಹಾಗೂ ಕುಟುಂಬದ ದೈವಗಳಿಗೆ ಆರಾಧನೆ ಇರುತ್ತದೆ.ಕಂಬಳದಲ್ಲಿ ಪೂಕರೆ ಹಾಕುವಾಗ ನಾಗ ಬೆರ್ಮೆರ್ ಒಂದಿಗೆ ಎರು ಬಂಟ ಮತ್ತು ಉರವ ಎಂಬ ದೈವಗಳಿಗೆ ಎಲ್ಲೆಡೆ ಆರಾಧನೆ ಇದೆ.
 ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ಲೇ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಲ- ಒಂದು ವಿಶ್ಕೇಷಣಾತ್ಮಕ ಅಧ್ಯಯನ( ಪಿಎಚ್ ಡಿ ಮಹಾ ಪ್ರಬಂಧ)

 ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿ’ ಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾಣಿ ಬಬ್ಬು ಹಾಗೂ ಕೋಣಗಳು ಮಾಯವಾದ ಕಥೆಯನ್ನು ಹೇಳುತ್ತವೆ.. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಇಲ್ಲಿ ಮಾಯವಾದ ಮೂಲದ ಮಾಣಿ ಮತ್ತು ಕೋಣಗಳು ಉರವ ಮತ್ತು ಎರು ಬಂಟ ಎಂಬ ದೈವಗಳಾಗಿ ಕಂಬಳ ಗದ್ದೆಯ ಕೋರಿಯಂದು ಆರಾಧಿಸಲ್ಪಡುತ್ತಾರೆ.(ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಲ( ಪಿಎಚ್ ಡಿ ಪಮಹಾ ಪ್ರಬಂಧ)
ಕಂಬಳ ಕೋರಿಯಂದು ರಾತ್ರಿ ಒಂಜಿ ಕುಂದು ನಲ್ಪ ದೈವಗಳಿಗೆ ಆರಾಧನೆ ಇರುತ್ತದೆ .ಇಲ್ಲಿ ಕುಟುಂಬದ ,ಗ್ರಾಮದ ಮಾಗಣೆಯ ,ಸೀಮೆಯ ಮೂವತ್ತೊಂಬತ್ತು ದೈವಗಳಿಗೆ ಆರಾಧನೆ ಇರುತ್ತದೆ .© ಡಾ.ಲಕ್ಷ್ಮೀ ಜಿ ಪ್ರಸಾದ್ 
. ಕಂಬಳದ ಪ್ರಕಾರಗಳು
ತುಳುನಾಡಿನಲ್ಲಿ ನಾಲ್ಕು ವಿಧದ ಕಂಬಳಗಳು ಪ್ರಚಲಿತವಿದೆ (1) ಪೂಕರೆ ಕಂಬಳ. (2) ಬಾರೆ ಕಂಬಳ (3) ಅರಸು ಮತ್ತು ದೇವರ ಕಂಬಳ (4) ಆಧುನಿಕ ಕಂಬಳ .ಇವುಗಳಲ್ಲಿ ಆಧುನಿಕ ಕಂಬಳ ಹಾಗೂ ಅರಸು ಮತ್ತು ದೇವರ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುತ್ತದೆಬಾರೆ ಕಂಬಳಅರಸು ಮತ್ತು ದೇವರ ಕಂಬಳ ಹಾಗೂ ಪೂಕರೆ ಕಂಬಳಗಳಲ್ಲಿ ಫಲವಂತಿಕೆಯ ಆಚರಣೆಗಳು ಹಾಗೂ ನಾಗ-ಭೂತಾರಾಧನೆಗಳು ಇವೆ.
ಬಾಳೆ ಕಂಬಳದಲ್ಲಿ ಪೂಕರೆಗೆ ಬದಲಾಗಿ ಕಂಬಳ ಗದ್ದೆಯ ನಡುವೆ ಒಂದು ಬಾಳೆಗಿಡವನ್ನು ನೆಡುತ್ತಾರೆಪೂಕರೆ ಕಂಬಳ ಅಥವಾ ದೇವರ ಮತ್ತು ಅರಸು ಕಂಬಳದಂತೆ ಇದರಲ್ಲಿ ವೈಭವದ ಆಚರಣೆಗಳಿಲ್ಲಬಹಳ ಸರಳವಾದ ಆಚರಣೆ ಇದುನಿಶ್ಚಿತ ದಿನದಂದು ಮುಗೇರ ಅಥವಾ ನಲಿಕೆಯವರು ಬಂದು ಹೊಂಡ ತೋಡಿ ಹೊಂಡಕ್ಕೆ ಹಾಲು ಹಾಕಿ ಬಾಳೆ ಗಿಡ ನೆಡುತ್ತಾರೆಒಂದು ನಿಶ್ಚಿತ ಸಮಯದ ನಂತರ ಬಾಳೆಗಿಡವನ್ನು ತೆಗೆಯುತ್ತಾರೆ. “ಹಿಂದೆ ಕಂಬಳ ವೈಭವದಿಂದ ನಡೆಯುತ್ತಿತ್ತುಈಗ ಸಾಂಕೇತಿಕವಾಗಿ ಬಾಳೆಗಿಡ ಹಾಕುತ್ತಾರೆ” ಎಂದು ಡಾಗಣನಾಥ ಎಕ್ಕಾರು ಅವರು ಅಭಿಪ್ರಾಯಪಟ್ಟಿದ್ದಾರೆ.
ಅತಿ ವೈಭವದಿಂದ ಆಚರಿಸಲ್ಪಡುವ ಅರಸು ಮತ್ತು ದೇವರ ಕಂಬಳಗಳಲ್ಲಿ ಪೂಕರೆ ಕಂಬಳಗಳ ಎಲ್ಲ ಆಚರಣೆಗಳು ಇದರಲ್ಲಿ ಇರುತ್ತವೆಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲಅರಸು ಮತ್ತು ದೇವರ ಕಂಬಳಗಳಲ್ಲಿ ವೈಭವದ ಧಾರ್ಮಿಕ ಆಚರಣೆಗಳೊಂದಿಗೆ ಅದ್ದೂರಿಯ ಕೋಣಗಳ ಓಟದ ಸ್ಪರ್ಧೆ ಕೂಡ ಇರುತ್ತದೆಅರಸು ಮನೆತನದವರು  ರೀತಿಯ ಕಂಬಳಗಳನ್ನು ನಡೆಸುತ್ತಾರೆಇದು ಅತ್ಯಂತ ಜನಪ್ರಿಯ ಆಚರಣೆಯಾಗಿದೆ.
ಆಧುನಿಕ ಕಂಬಳ ಕೋಣಗಳ ಸ್ಪರ್ಧೆಗಾಗಿಯೇ ಮೀಸಲಾದ ಕಂಬಳಇದರಲ್ಲಿ ಇತರ ಕಂಬಳಗಳಂತೆ ಯಾವುದೇ ಆರಾಧನೆ ಅಥವಾ ಆಚರಣೆಗಳು ಇರುವುದಿಲ್ಲಆಧುನಿಕ ಕಂಬಳಗಳು ಇಂಥದ್ದೇ ದಿನ ನಡೆಯಬೇಕು ಇತ್ಯಾದಿಯಾದ ಕಾಲದ ನಿರ್ಬಂಧ ಇರುವುದಿಲ್ಲ ಕಂಬಳಗಳು ನಿಜವಾಗಿ ಗದ್ದೆಯಲ್ಲಿ ಇರುವುದಿಲ್ಲಕೋಣಗಳ ಓಟದ ಸ್ಪರ್ಧೆಗಾಗಿಯೇ ಕೃತಕವಾಗಿ ತಯಾರಿಸಿದ ಕಳದಲ್ಲಿ ಇದು ನಡೆಯುತ್ತದೆಮನೋರಂಜನೆ ಇದರ ಮುಖ್ಯ ಉದ್ದೇಶವಾಗಿರುತ್ತದೆಕಾಂತಾವರದ ಸೂರ್ಯಚಂದ್ರ ಕಂಬಳಬಜಗೋಳಿಯ ಲವ-ಕುಶ ಕಂಬಳಮಂಜೇಶ್ವರದ ಜಯ-ವಿಜಯ ಕಂಬಳ ಮೊದಲಾದುವು ಆಧುನಿಕ ಕಂಬಳಗಳಾಗಿವೆಎಪ್ಪತ್ತರ ದಶಕದ ನಂತರ ಇವು ಪ್ರಸಿದ್ಧಿಗೆ ಬಂದವುಗಳಾಗಿವೆಇದರಲ್ಲಿ ಗೆದ್ದ ಕೋಣಗಳಿಗೆ ಬಂಗಾರದ ಪದಕಪ್ರಶಸ್ತಿಗಳನ್ನು ಕೊಡುತ್ತಾರೆಅರಸು ಮತ್ತು ದೇವರಕಂಬಳಗಳಲ್ಲಿ ಕೂಡ ಕೋಣಗಳ ಓಟದ ಸ್ಪರ್ಧೆ ಇರುತ್ತದೆ.  © ಡಾ.ಲಕ್ಷ್ಮೀ ಜಿ ಪ್ರಸಾದ್ ಲೇ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಲ- ಒಂದು ವಿಶ್ಕೇಷಣಾತ್ಮಕ ಅಧ್ಯಯನ( ಪಿಎಚ್ ಡಿ ಮಹಾ ಪ್ರಬಂಧ)

ಆಧುನಿಕ ಕಂಬಳದ ಓಟದ ಸ್ಪರ್ಧೆಗಳು
ಆಧುನಿಕ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆಯು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿರುತ್ತವೆಕೋಣಗಳ ಓಟದ ಸ್ಪರ್ಧೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಎಂದು ವಯಸ್ಸನ್ನು ಆಧರಿಸಿ ಎರಡು ವಿಭಾಗಗಳಿರುತ್ತವೆಕೋಣಗಳ ವಯಸ್ಸನ್ನು ಹಲ್ಲುಗಳ ಆಧಾರದಲ್ಲಿ ನಿರ್ಧಾರ ಮಾಡುತ್ತಾರೆ.
ಆಧುನಿಕ ಕಂಬಳದ ಸ್ಪರ್ಧೆಯ ನಾಲ್ಕು ವಿಭಾಗಗಳು (1) ಅಡ್ಡಹಲಗೆ (2) ನೇಗಿಲ ಓಟ (3) ಹಗ್ಗದ ಓಟ (4) ಕಣೆ ಹಲಗೆ

ಅಡ್ಡ ಹಲಗೆ:
ಇದನ್ನು ತುಳುವಿನಲ್ಲಿ ಅಡ್ಡಪಲಾಯಿ ಎಂದು ಕರೆಯುತ್ತಾರೆಹೆಸರಿನಲ್ಲಿಯೇ ಸೂಚಿಸಿರುವಂತೆ ಕೋಣಗಳ ಹಿಂಭಾಗದಿಂದ ಎಳೆದುಕೊಂಡು ಹೋಗುವಂತೆ ಒಂದು ಮರದ ಹಲಗೆಯನ್ನು ಕಟ್ಟುತ್ತಾರೆಕೋಣಗಳ ಹೆಗಲಿಗೆ ಕಟ್ಟಿದ ನೊಗಕ್ಕೆ ಉದ್ದವಾದ ಗೋರುಹಲಗೆಯನ್ನು ಕಟ್ಟುತ್ತಾರೆಓಡಿಸುವಾತನು ತನ್ನೆರಡು ಕಾಲುಗಳನ್ನು ಹಲಗೆಯಲ್ಲಿಟ್ಟುಕೊಳ್ಳುತ್ತಾನೆಆಧಾರಕ್ಕಾಗಿ ಕೈಯಲ್ಲಿ ಕೋಣಗಳ ಬಾಲವನ್ನು ಹಿಡಿದಿರುತ್ತಾನೆಇದರಲ್ಲಿ ಓಡಿಸುವಾತನಿಗೆ ಸಾಕಷ್ಟು ಕೌಶಲ್ಯ ಬೇಕುಇಲ್ಲವಾದಲ್ಲಿ ಸಮತೋಲನ ತಪ್ಪಿ ಕೆಳಗೆ ಬಿದ್ದುಹೋಗುತ್ತಾರೆಆಗ ಕೋಣಗಳು ದಿಕ್ಕುತಪ್ಪಿ ಚಲ್ಲಾಪಿಲ್ಲಿಯಾಗಿ ಓಡಿನೆರೆದ ಪ್ರೇಕ್ಷಕರನ್ನು ಕೆಡವಿ ಓಡುವ ಪ್ರಸಂಗಗಳೂ ನಡೆಯುತ್ತವೆಆದ್ದರಿಂದ  ವಿಭಾಗದಲ್ಲಿ ಸ್ಪರ್ಧಿಸುವ ಕೋಣಗಳು ಹೆಚ್ಚಿರುವುದಿಲ್ಲಇದರಲ್ಲಿ ಓಟದ ವೇಗದ ಆಧಾರದಲ್ಲಿ ತೀರ್ಪು ನೀಡುತ್ತಾರೆ.
ನೇಗಿಲ ಓಟ:
ತುಳುವಿನಲ್ಲಿ ಇದಕ್ಕೆ ನಾಯೆರ್ದವು (ನಾಯೆರ್=ನೇಗಿಲುಎನ್ನುತ್ತಾರೆಇದರಲ್ಲಿ ಕೋಣಗಳ ಹೆಗಲಿನ ನೊಗಕ್ಕೆ ಉಳುವಾಗ ಕಟ್ಟುವಂತೆ ನೇಗಿಲನ್ನು ಕಟ್ಟುತ್ತಾರೆಉಳುಮೆಯ ನೇಗಿಲಿಗಿಂತ ಸರಳವಾದ ಹಗುರವಾದ ನೇಗಿಲನ್ನು ಓಟದಲ್ಲಿ ಬಳಸುತ್ತಾರೆಓಡಿಸುವವನು ನೇಗಿಲನ್ನು ನೆಲದಿಂದ ಮೇಲೆತ್ತದೆಯೇ ಕೋಣಗಳನ್ನು ಓಡಿಸಬೇಕುಇದರಲ್ಲಿಯೂ ವೇಗದ ಆಧಾರದಲ್ಲಿ ಬಹುಮಾನ ನೀಡುತ್ತಾರೆ.
ಹಗ್ಗದ ಓಟ:
ತುಳುವಿನ “ಬಲ್ಲುದ ಗಿಡಪುನ” ಹಗ್ಗದ ಓಟವಾಗಿದೆ (ಬಳ್ಳು=ಹಗ್ಗ). ಇದರಲ್ಲಿ ಕೋಣಗಳಿಗೆ ಕಟ್ಟಿದ ನೊಗದ ಮಧ್ಯೆ ಒಂದು ಹಗ್ಗವನ್ನು ಬಿಗಿಯುತ್ತಾರೆಕೋಣ ಓಡಿಸುವಾತ  ಹಗ್ಗವನ್ನು ಹಿಡಿದುಕೊಂಡು ಕೋಣಗಳನ್ನು ಓಡಿಸಬೇಕು ಸ್ಪರ್ಧೆಯಲ್ಲಿ ಕೋಣಗಳಷ್ಟೇ ವೇಗದಲ್ಲಿ ಓಡಿಸುವಾತನೂ ಓಡಬೇಕಾಗುತ್ತದೆ ಸ್ಪರ್ಧೆಯಲ್ಲಿ ಹಲಗೆನೇಗಿಲಿನಂತಹ ಭಾರದ ನಿರ್ಬಂಧಕಗಳು ಇಲ್ಲದ ಕಾರಣ ಕೋಣಗಳು ಅತ್ಯಂತ ವೇಗವಾಗಿ ಓಡುತ್ತವೆಅನೇಕ ಕೋಣಗಳ ಜೊತೆಯನ್ನು ಒಟ್ಟಿಗೆ ಓಡಿಸುತ್ತಾರೆಯಾವ ಕೋಣಗಳು ಮೊದಲು ಮಂಜೊಟ್ಟಿಯನ್ನು ತಲುಪುತ್ತವೆಯೋ  ಕೋಣಗಳನ್ನು ಗೆದ್ದ ಕೋಣಗಳೆಂದು ಘೋಷಿಸಿ ಬಹುಮಾನ ನೀಡುತ್ತಾರೆಮಂಜೊಟ್ಟಿ ಎಂದರೆ ಓಟದ ಕೋಣಗಳು ಓಡಿ ಬಂದು ಗುರಿ ತಲುಪುವ ಜಾಗಕೋಣಗಳು ಗದ್ದೆಗೆ ಇಳಿಯುವ ಇಳಿಜಾರಾದ ಭಾಗವನ್ನು ಕೂಡ “ಮಂಜೊಟ್ಟಿ” ಎನ್ನುತ್ತಾರೆ.
            ಕಣೆ ಹಲಗೆಯ ಓಟ:
ಇದು ಅತ್ಯಂತ ಪ್ರಸಿದ್ಧವಾದ ಕೋಣಗಳ ಓಟದ ಸ್ಪರ್ಧೆಮನಮೋಹಕವಾದುದು ಕೂಡ ಸ್ಪರ್ಧೆಯು ವಿಶಿಷ್ಟವಾದುದಾಗಿದೆಇತರ ಕಂಬಳ ಓಟದ ಸ್ಪರ್ಧೆಗಳಲ್ಲಿ ಕೋಣಗಳ ಓಟದ ವೇಗ ಆಧಾರವಾಗಿದೆಆದರೆ ಕಣೆಹಲಗೆ ಓಟದ ಸ್ಪರ್ಧೆಯಲ್ಲಿ ಮೇಲೆ ಕಟ್ಟಿದ ನಿಶಾನೆಗೆ ನೀರು ಹಾರಿಸುವ ಮೂಲಕ ಸ್ಪರ್ಧೆ ನಡೆಯುತ್ತದೆಇದರಲ್ಲಿ ಕಂಬಳ ಗದ್ದೆಯ ಓಟದ ಕಳದ ಎರಡೂ ಬದಿಗಳಲ್ಲಿ ಆರೂವರೆ ಕೋಲು ಹಾಗೂ ಏಳೂವರೆ ಕೋಲು ಎತ್ತರದಲ್ಲಿ ಎರಡು ಮೂರು ಮೀಟರ್ ಅಗಲದ ಬಿಳಿ ಬಟ್ಟೆಯನ್ನು ಕಟ್ಟುತ್ತಾರೆಇದನ್ನು ನಿಶಾನೆ ಎನ್ನುತ್ತಾರೆಯಾವ ಕೋಣಗಳು ನಿಶಾನೆಗೆ ನೀರು ಹಾಯಿಸುತ್ತವೆಯೋ ಅವುಗಳಿಗೆ ಬಹುಮಾನ ನೀಡುತ್ತಾರೆನಿಶಾನೆಯ ಜಾಗಕ್ಕೆ ನೀರು ಹಾಯಿಸಲು ಕೋಣ ಓಡಿಸುವವನಿಗೆ ತುಂಬ ಪರಿಣತಿ ಬೇಕುನಿಶಾನೆಯ ಸಮೀಪಕ್ಕೆ ಬಂದಾಗ ಆತ ಹಲಗೆಯ ಮೇಲೆ ಹಾರಿ ನೀರು ಹಾಯುವಂತೆ ಮಾಡುತ್ತಾನೆಒಂದು ಜೊತೆ ಕೋಣಗಳು ಕೂಡ ನಿಶಾನೆಯ ಜಾಗಕ್ಕೆ ನೀರು ಹಾಯಿಸದಿದ್ದರೆ ಯಾರಿಗೂ ಬಹುಮಾನವಿಲ್ಲನಿಶಾನೆಗೆ ನೀರು ಹಾಯಿಸಿದ ಎಲ್ಲ ಕೋಣಗಳಿಗೂ ಬಹುಮಾನ ನೀಡುತ್ತಾರೆಇದು ಮನಮೋಹಕ ಓಟವಾದುದರಿಂದ ಇದಕ್ಕೆ ಮಹತ್ವ ಹೆಚ್ಚು.
© ಡಾ .ಲಕ್ಷ್ಮೀ  ಜಿ ಪ್ರಸಾದ ,ಕನ್ನಡ ಉಪನ್ಯಾಸಕಿ ,ಬೆಂಗಳೂರು   ಲೇಖಕರು
© ಡಾ.ಲಕ್ಷ್ಮೀ ಜಿ ಪ್ರಸಾದ್ ಲೇ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಲ- ಒಂದು ವಿಶ್ಕೇಷಣಾತ್ಮಕ ಅಧ್ಯಯನ( ಪಿಎಚ್ ಡಿ ಮಹಾ ಪ್ರಬಂಧ)

 ಕರಾವಳಿಯ ಸಾವಿರದೊಂದು  ದೈವಗಳು 

ವರ್ಣಚಿತ್ರಗಳ ವಿವರ
Photo 01 :  ಮಗನಂತೆ ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ ನಾಗರಾಜ ( ಚಿತ್ರ ಕೃಪೆ : ರೋನ್ಸ್ ಬಂಟ್ವಾಳ್ )
Photo 02 :  ಅಲಂಕರಿಸಿ ಕೊಂಬುವಾಲಗದೊಂದಿಗೆ ಮೆರವಣಿಗೆಯಲ್ಲಿ ಹೋಗಲು ಸಿದ್ದವಾಗಿರುವ ಕಂಬಳ ಕೋಣಗಳು ( ಚಿತ್ರ ಕೃಪೆ : ರೋನ್ಸ್ ಬಂಟ್ವಾಳ್ )
Photo 03 :  ಕಂಬಳ ಮದುಮಗನ ಪ್ರತೀಕವಾಗಿರುವ 13 ಅಂಕಣದ ಪೂಕರೆ ಕಂಬ ( ಚಿತ್ರ : ಡಾ.ಲಕ್ಷ್ಮೀ ಜಿ ಪ್ರಸಾದ )
Photo 04 : ಕಂಬಳ ಗದ್ದೆಯಲ್ಲಿ ಆರಾಧಿಸಲ್ಪಡುವ ಕೊರಗ ತನಿಯ ಮತ್ತು ಕಂಬಳದ ಅಧಿ ದೈವ ನಾಗ ಬೆರ್ಮೆರ್ ಭೂತ  ( ಚಿತ್ರ : ಡಾ.ಲಕ್ಷ್ಮೀ ಜಿ ಪ್ರಸಾದ )
Photo 05 :  ಅಡ್ಡ ಹಲಗೆ ಓಟದ ಮನಮೋಹಕ ನೋಟ  ( ಚಿತ್ರ ಕೃಪೆ : ಜಯಪ್ರಕಾಶ್ ಪ್ರಭು ಶಿರ್ವ )
Photo 06 :  ಆಧುನಿಕ ಕಂಬಳದ ಅತ್ಯಂತ ವೇಗದ ಹಗ್ಗದ ಓಟ  ( ಚಿತ್ರ ಕೃಪೆ : ಸತೀಶ್ ಕಾಪಿಕಾಡ್)
Photo 07 :  ನೀರು ಚಿಮ್ಮಿಸುತ್ತಿರುವ ಕಣೆ ಹಲಗೆ ಓಟ  ( ಚಿತ್ರ ಕೃಪೆ : ದಯಾ ಕುಕ್ಕಾಜೆ )
Photo 08 :  ಕಣೆ ಹಲಗೆ ಓಟದಲ್ಲಿ ನಿಶಾನೆಗೆ ನೀರು ಹಾಯಿಸಿ ಗೆಲುವು ಪಡೆದ ಕ್ಷಣ  ( ಚಿತ್ರ ಕೃಪೆ : ಸತೀಶ್ ಕಾಪಿಕಾಡ್)
photo  9 ಉರವ( ಕಂಬಳತ್ತಾಯ) ದೈವ  ಚಿತ್ರ - ಡಾ.ಲಕ್ಷ್ಮೀ ಜಿ ಪ್ರಸಾದ್
photo. 10   ಎರು ಬಂಟ ದೈವ: ಚಿತ್ರ  ಡಾ.ಲಕ್ಷ್ಮೀ ಜಿ ಪ್ರಸಾದ್
ಆಧಾರ ಗ್ರಂಥಸೂಚಿ :
1. ಈಜೋ ಮಂಜೊಟ್ಟಿಗೋಣ , ಲೇಖಕರು: ಡಾಶಿವರಾಮ ಕಾರಂತ, (ಪ್ರಕಟಣೆ :1976)
2. ಕಂಬಳ ಆಟವೋಆಚರಣೆಯೋಲೇಖಕರು: ಆಟಗಳು , ಲೇಖಕರು: ಡಾ| ಗಣನಾಥ ಎಕ್ಕಾರು (ಪ್ರಕಟಣೆ :2000)
4. ದೈವಿಕ ಕಂಬಳ ಕೋಣ ಲೇಖಕರು: ಡಾಲಕ್ಷ್ಮೀ ಜಿ ಪ್ರಸಾದ  (ಪ್ರಕಟಣೆ :2006)
5. 'Nagaraj ' -  Undisputed Kambala King of DK Moves into Oblivion , (ಪ್ರಕಟಣೆ : Daijiworld 2009)
6. ಕಂಬಳ ಕೋರಿ ನೇಮ ಲೇಖಕರು: ಡಾಲಕ್ಷ್ಮೀ ಜಿ ಪ್ರಸಾದ  (ಪ್ರಕಟಣೆ :2011)
7. ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ( ಪಿ ಎಚ್  ಡಿ  ಮಹಾ ಪ್ರಬಂಧ) - ಡಾ.ಲಕ್ಷ್ಮೀ ಜಿ ಪ್ರಸಾದ್ ( ಪ್ರಕಟಣೆ 2013)

ಕರಾವಳಿಯ ಸಾವಿರದೊಂದು ದೈವಗಳು‌: ಸುಬ್ಬಿಯಮ್ಮ ಗುಳಿಗ © ಡಾ.ಲಕ್ಷ್ಮೀ ಜಿ‌ಪ್ರಸಾದ್

       


            ಡಾ.ಲಕ್ಷ್ಮೀ ಜಿ ಪ್ರಸಾದ್ ರಚಿಸಿರುವ ಕರಾವಳಿಯ  ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ  ,ಹೆಚ್ಚುನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು                   
  ಚಿತ್ರ ಕೃಪೆ :ದೈವ ರಾಜ ಗುಳಿಗ   
copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ  ಸುಬ್ಬಿಯಮ್ಮ ಗುಳಿಗ ಗುಳಿಗನ ಸೇರಿಗೆಗೆ ಸಂದಿರುವ ದೈವ .ಗುಳಿಗ ಪಂಜುರ್ಲಿ ಚಾಮುಂಡಿ ಮಲರಾಯ ಮೊದಲಾದ ಪ್ರಧಾನ ದೈವಗಳ ಆಗ್ರಹ ಅಥವಾ ಅನುಗ್ರಹಕ್ಕೆ ಪಾತ್ರರಾಗಿ ಅನೇಕರು ದೈವತ್ವ ಪಡೆದಿರುವ ವಿಚಾರ ತುಳುನಾಡಿನಾದ್ಯಂತ ಅಲ್ಲಲ್ಲಿ ಕಂಡು ಬರುತ್ತದೆ .ಆದರೆ ಏನೊಂದೂ ತಪ್ಪು ಮಾಡದೆ ಇರುವ ಚಂದ ಹುಡುಗಿಯರ ಮೇಲೆ ದೈವಗಳು ದೃಷ್ಟಿ ಬೀರಿ ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡುವ ಅಪರೂಪದ ವಿದ್ಯಮಾನಗಳ ಬಗ್ಗೆ ಒಂದೆರಡು ಉದಾಹರಣೆಗಳು ಸಿಗುತ್ತವೆ .ಸುಬ್ಬಿಯಮ್ಮ ಈ ರೀತಿ ಮಾಯವಾಗಿ ದೈವತ್ವ ಪಡೆದವಳು .ಇದೇ ರೀತಿ ದಾರು  ಬಿರ್ಮಕ್ಕ ಕೂಡಾ ಪಂಜುರ್ಲಿಯ ದೃಷ್ಟಿ ಬಿದ್ದು ಮಾಯ ಆಗಿ ದೈವತ್ವ ಪಡೆದ ಬಗ್ಗೆ ದಾರು ಕುಂದಯ ದೈವಗಳ ವೃತ್ತಾಂತದಲ್ಲಿ ಮಾಹಿತಿ ಲಭ್ಯವಾಗುತ್ತದೆ .
ಸುಬ್ಬಿಯಮ್ಮ ಗುಳಿಗನ ಪಾದ್ದನವನ್ನು ಡಾ.ಅಮೃತ ಸೋಮೇಶ್ವರ ಅವರು ಸಂಗ್ರಹಿಸಿದ್ದಾರೆ .
ಘಟ್ಟದ ಮೇಲೆ ರಾಮು ಗುಳಿಗಂದಾರ ಮತ್ತು ಅವನ ಮಗಳು ಸುಬ್ಬಿಯಮ್ಮ ಇದ್ದರು ಸುಬ್ಬಿಯಮ್ಮ ತುಂಬಾ ಚಂದ ಹುಡುಗಿ ..ರಾಮು ಗುಳಿಗಂದಾರ ವೃತ್ತಿಯಲ್ಲಿ ಬಳೆಗಾರ .ಆವರು ಬಳೆ ಮಾರಿಕೊಂಡು ಘಟ್ಟದ ಕೆಳಗೆ ಇಳಿದು ಮಂಗಳೂರಿಗೆ ಬರುತ್ತಾರೆ .ಅಲ್ಲಿಂದ ಮಂಜೆಶ್ವರಕ್ಕೆ ಬರುತ್ತಾರೆ .ಮಾಲಾಡಿ ಗುತ್ತಿನಲ್ಲಿಅವರಿಗೆ ರಾತ್ರಿ ತಂಗಲು ತಡೆ ಬಿಡಾರ ಸಿಗುತ್ತದೆ .ಅಲ್ಲಿ ಅವರು ಅಡುಗೆ ಮಾಡಿ ಮಲಗುತ್ತಾರೆ .
ಮರುದಿನ ಬೆಳಗ್ಗೆ ಎದ್ದು ರಾಮು ಗುಳಿಗಂದಾರ್ ಬಳೆ ಮಾರಲು ಹೋಗುತ್ತಾನೆ .ಇತ್ತ ಬೆಳಗ್ಗೆ ಎದ್ದ ಸುಬ್ಬಿಯಮ್ಮ ತಲೆ ಬಾಚಿ ಕಟ್ಟಿ ಹೂ ಮುಡಿದು ಕುಂಕುಮದ ಬೊಟ್ಟು ಇಟ್ಟು ಅಲಂಕಾರ ಮಾಡಿಕೊಳ್ಳುತ್ತಾಳೆ .ಮೊದಲೇ ಸುಂದರಿ ಈಗ ಅಲಂಕಾರದಿಂದ ಅವಳ ಸೊಬಗು ಇನ್ನಷ್ಟು ಹೆಚ್ಚಾಗುತ್ತದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಮನೆಯಲ್ಲಿ ನೀರು ಇಲ್ಲ್ಲವೆಂದು ನೀರು ತರಲು ಕೊಡ ತೆಗೆದುಕೊಂಡು ಬಾವಿಗೆ ಹೋಗುತ್ತಾಳೆ .ಚೆಲುವೆಯಾದ ಸುಬ್ಬಿಯಮ್ಮನನ್ನು ನೋಡಿದ ಗುಳಿಗ ದೈವ ಹದ್ದಿನ ರೂಪದಲ್ಲಿ ಬಂದು ಬಾವಿಯ ಪಣೆ ಮರದಲ್ಲಿ ಕುಳಿತುಕೊಳ್ಳುತ್ತಾನೆ .ಅವಳು ಬಗ್ಗಿ ನೀರು ಎತ್ತುವಾಗ ಅವಳನ್ನು ಎಳೆದು ಬಾವಿಗೆ ಹಾಕುತ್ತಾನೆ ,ನೀರಿಗೆ ಬಿದ್ದು ಉಸಿರು ಕಟ್ಟಿ ಅವಳು ಸಾಯುತ್ತಾಳೆ .
ಬಳೆ ಮಾರಿ ಕತ್ತಲಾಗುವಾಗ ಮನೆಗೆ ಬಂದ ರಾಮು ಗುಳಿಗಂದಾರ್ ಮಗಳನ್ನು ಕಾಣದೆ ಹುಡುಕುತ್ತಾನೆ .ಕೊನೆಗೆ ಬಾವಿಯಲ್ಲಿ ಅವಳ ಮೃತ ದೇಹ ತೇಲುತ್ತಿರುವುದು ಕಾಣಿಸುತ್ತದೆ .
ಹೆಣವನ್ನು ಎತ್ತಿ ಸಂಸ್ಕಾರ ಮಾಡುವಾಗ ಚಿತೆ ಉರಿಯುತ್ತದೆ ,ಪೂರ್ತಿ ಉರಿಯುವ ಮೊದಲು ಸುಬ್ಬಿಯಮ್ಮನ ಕೂಗು ಕೇಳಿಸುತ್ತದೆ .ಆಗ ತಂದೆ ಯಾರ ಜೊತೆ ಇದ್ದೀಯ ಮಗಳೇ ಎಂದು ಕೇಳಲು "ನಾನು ಗುಲಿಗನ ಜೊತೆ ಹೋಗುತ್ತಿದ್ದೇನೆ ಎಂದು ಹೇಳುತ್ತಾಳೆ
"ಸುಬ್ಬಿ ಬಾರಿ ಪೊರ್ಲುದ ಪೊನ್ನು ಆದಿತ್ನೆದ್ದಾವರ ಆಲೆಗ್ ಗುಲಿಗನ್ ದಿಟ್ಟಿ ಅಂಡ್ ಪನ್ವೇರ್ ,ಗುಲಿಗನ ಸೇರಿಗೆಡ್ ಇತ್ತಿನ ಈ ಸುಬ್ಬಿಗ್ ತಲಪ್ಪಾಡಿಡು ಸಾನ ಉಂಡು (ಸುಬ್ಬಿ ಬಹಳ ಸುಂದರಿ ಹೆಣ್ಣು ಆಗಿದ್ದರಿಂದ ಅವಳಿಗೆ ಗುಳಿಗನ ದೃಷ್ಟಿ ಆಯಿತು ,ಗುಳಿಗನ ವಶದಲ್ಲಿ ಇದ್ದ ಸುಬ್ಬಿಗೆ ತಲಪ್ಪಾಡಿಯಲ್ಲಿ ಸ್ಥಾನ ಇದೆ )ಎಂಬ ಪಾಡ್ದನದ ಮಾತುಗಳು ಬಹಳ ಮುಖ್ಯವಾಗಿವೆ "ಎಂದು ಡಾ.ಬಿ.

ಎ ವಿವೇಕ ರೈ ಅಭಿಪ್ರಾಯ ಪಟ್ಟಿದ್ದಾರೆ .
ಯಾವುದೇ ತಪ್ಪು ಮಾಡದ ಸುಬ್ಬಿ ಮೇಲೆ ಗುಲಿಗನ ದೃಷ್ಟಿ ಯಾಕೆ ಬಿತ್ತು?ಅವಳು ಸುಂದರಿ ಎಂಬ ಕಾರಣಕ್ಕೆ ಗುಲಿಗನ ದೃಷ್ಟಿ ಬಿತ್ತು ಎಂಬುದಕ್ಕೆ ಏನರ್ಥ ?ಎಂಬುದು ಇಲ್ಲಿ ಸ್ಪಷ್ಟವಾಗುವುದಿಲ್ಲcopy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಸುಂದರಿಯಾದ ಸುಬ್ಬಿ ಮೇಲೆ ಯಾರಾದರೂ ಕಣ್ಣು ಹಾಕಿದ್ದು ಅವನ ಉಪದ್ರ ಸಹಿಸಲಾರದೆ ಅವಳು ಬಾವಿಗೆ ತಾನಾಗಿಯೇ ಹಾರಿರುವ ಸಾಧ್ಯತೆ ಇದೆ .ಅವಳಿಗೆ ಉಪದ್ರ ಕೊಟ್ಟಾತ ಅರಸನೋ ಪಾಳೆಗಾರನೋ ಆಗಿದ್ದು ಬಲಿಷ್ಟನಾಗಿದ್ದು ಅವನ ತಪ್ಪನ್ನು ಮರೆ ಮಾಚುವ ಸಲುವಾಗಿ ಗುಲಿಗನ ದೃಷ್ಟಿ ಬಿದ್ದು ಬಾವಿಗೆ ಬಿದ್ದು ಸತ್ತಳು ಎಂದು ಹೇಳಿರುವ ಸಾಧ್ಯತೆ ಇದೆ /ಅಥವಾ ಆಕಸ್ಮಿಕವಾಗಿ ಬಾವಿಗೆ ಬಿದ್ದು ದುರಂತವನ್ನಪ್ಪಿದ ಘಟನೆಗೆ ಗುಳಿಗನ ದೃಷ್ಟಿಯ ಕಥಾನಕ ಸೇರಿರುವ ಸಾಧ್ಯತೆ ಕೂಡ ಇದೆ .
ಏನೇ ಆಗಿದ್ದರೂ ಸುಬ್ಬಿಯಮ್ಮ ಮುಂದೆ ಗುಲಿಗನ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .
ಸುಬ್ಬಿಯಮ್ಮ ಸುಂದರ ಹುದುಗಿಯಾದ್ದರಿಂದ ಸುಬ್ಬಿಯಮ್ಮ ದೈವದ ಅಲಂಕಾರ ಕೂಡ ಸುಂದರ ಹುಡುಗಿಯಂತೆ ಇರುತ್ತದೆ .
ಆಧಾರ ಗ್ರಂಥ
ಸುಬ್ಬಿಯಮ್ಮ ಪಾಡ್ದನ :(ಸಂ) ಡಾ.ಅಮೃತ ಸೋಮೇಶ್ವರ
ತುಳು ಜನಪದ ಸಾಹಿತ್ಯ -ಡಾ.ಬಿ ಎ ವಿವೇಕ ರೈ

Wednesday, 4 October 2023

ಕರಾವಳಿಯ ಸಾವಿರದೊಂದು ದೈವಗಳು : ಗುಳಿಗ (c)ಡಾ.ಲಕ್ಷ್ಮೀ ಜಿ ಪ್ರಸಾದ

 




ಚಿತ್ರ ಕೃಪೆ :kudreppady guttu 
.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ  ತುಳುನಾಡ ಭೂತಗಳಲ್ಲಿ ಗುಳಿಗನ ಆರಾಧನೆ ಅತ್ಯಂತ ಪ್ರಾಚೀನವಾದುದು ಎಂದು ಡಾ,ವೆಂಕಟ ರಾಜ ಪುಣಿಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ.ನೂರ ಎಂಟು ಗುಳಿಗರಿದ್ದಾರೆಂದು ನಂಬಿಕೆ ಇದ್ದು  ಜಾಗಸನ್ನಿವೇಶಸಂದರ್ಭಗಳಿಗನುಸಾರವಾಗಿ ಗುಳಿಗ ದೈವ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ.
ಗುಳಿಗ ದೈವವು ಶಿವಗಣವೆಂದು ಪರಿಗಣಿಸಲ್ಪಟ್ಟಿದೆ. ಗುಳಿಗನ ಆಯುಧ ತ್ರಿಶೂಲ ಎಂದಿದ್ದರೂ ಸೂ ಟೆ ಆತನ ಪ್ರಧಾನ ಆಯುಧ .
. ಕೈಲಾಸದಲ್ಲಿ ಒಂದು ದಿನ ಪಾರ್ವತಿ ಶಿವನಿಗೆ ತಂದುಕೊಟ್ಟ ಭಸ್ಮದಲ್ಲಿ ಒಂದು ಕಲ್ಲು ಸಿಗುತ್ತದೆ. ಈಶ್ವರದೇವರು ಅದನ್ನು ಭೂಮಿಗೆ ಎಸೆಯುತ್ತಾನೆ. ಅದರಲ್ಲಿ ಹುಟ್ಟಿದ ಈಶ್ವರನ ಮಗನೇ ಗುಳಿಗ. ಗುಳಿಗ ಹಸಿವೆ ಆಗುತ್ತಿದೆ ಎನ್ನುವಾಗ ಈಶ್ವರ ನಾರಾಯಣ ದೇವರಲ್ಲಿ ಕಳುಹಿಸುತ್ತಾನೆ. ನಾರಾಯಣ ಭೂಮಿಯಲ್ಲಿ ನೆಲವುಲ್ಲ ಸಂಖ್ಯೆ ಎಂಬುವಳ ಹೊಟ್ಟೆಯಲ್ಲಿ ಹುಟ್ಟಿ ಬರಲು ಹೇಳುತ್ತಾನೆ. ತಾಯಿಯನ್ನು ಕೊಂದು ಹೊರಗೆ ಬರುವ ಗುಳಿಗ ಹಸಿವು ತಡೆಯದೆ ನಾರಾಯಣ ಬ್ರಹ್ಮದೇವರ ಕೆರೆಯ ನೀರನ್ನು ಬತ್ತಿಸಿ ಮೀನುಗಳನ್ನು ಕೊಲ್ಲುತ್ತಾನೆ. ಅವನಿಗೆ ಆನೆಕುದುರೆಗಳನ್ನು ನೀಡಿದರೂ ಅವನ ಹಸಿವೆ ಇಂಗುವುದಿಲ್ಲ. ಅದಕ್ಕೆ ನಾರಾಯಣದೇವರು ತನ್ನ ಕಿರುಬೆರಳನ್ನು ನೀಡುತ್ತಾನೆ. 
ಆಗ ನಾರಾಯಣ ದೇವರಿಗೆ ಪ್ರಜ್ಞೆ ತಪ್ಪುತ್ತದೆ. ಕೊನೆಗೆ ತ್ರಿಮೂರ್ತಿಗಳು ಅವನನ್ನು ಭೂಮಿಗೆ ಕಳುಹಿಸುತ್ತಾರೆ. ಅಲ್ಲಿ ಏಳು ಜನ ಜಲದುರ್ಗೆಯರು ದೋಣಿಯಲ್ಲಿ ಕುಳಿತು ಸಮುದ್ರದಲ್ಲಿ ಹೋಗುತ್ತಿದ್ದರು. ಅವರು ಗುಳಿಗನಿಗೆ ಆಶ್ರಯ ಕೊಡುತ್ತಾರೆ. ಬರುವಾಗ ದಾರಿಯಲ್ಲಿ ಬಿಳಿಹಂದಿ ಹಾಗೂ ಗುಳಿಗನಿಗೆ ಯುದ್ಧವಾಗುತ್ತದೆ. ಜಲದುರ್ಗೆಯರು ಅವರನ್ನು ಸಮಾಧಾನ ಮಾಡಿ ಅಣ್ಣ ತಮ್ಮಂದಿರಂತೆ ಬಾಳಲು ಹೇಳುತ್ತಾರೆ. ಪಂಜುರ್ಲಿಯ ಕ್ಷೇತ್ರದಲ್ಲಿ ನೀನು ಕ್ಷೇತ್ರಪಾಲ ಎಂದು ಹೇಳುತ್ತಾರೆ 
 .copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಇನ್ನೊಂದು ಪಾಡ್ದನ ಪಾಠದ ಪ್ರಕಾರ ಗುಳಿಗನ ತಂದೆ ಗಾಳಿ ದೇವರು ,ತಾಯಿ ಭದ್ರ ಕಾಳಿ .ಭದ್ರ ಕಾಲಿಗೆ ನವ ಮಾಸ ತುಂಬಿದಾಗ ಹೊಟ್ಟೆಯಲ್ಲಿರುವ ಮಗು ನಾನು ಯಾವ ದಾರಿಯಲ್ಲಿ ಬರಬೇಕು ?ಎಂದು ಕೇಳುತ್ತದೆ.ಆಗ ಅವಳು ದೇವರು ಕೊಟ್ಟ ದಾರಿಯಲ್ಲಿ ಬಾ ಮಗ ಎಂದು ಹೇಳುತ್ತಾಳೆ .ಅಲ್ಲಿ ಬರುವುದಿಲ್ಲ ನಾನು ಎಂದು ಮಗ ಹೇಳುತ್ತಾನೆ .ಆಗ ತಲೆ ಒಡೆದು ಬಾ ಎಂದು ತಾಯಿ ಹೇಳುತ್ತಾಳೆ .ತಲೆ ಒಡೆದು ಬಂದರೆ ತಾಯಿಯನ್ನು ಕೊಂದ ಮಗ ಎಂದಾರು ಹಾಗಾಗಿ ಅಲ್ಲಿ ಬರಲಾರೆ ಎನ್ನುತ್ತಾನೆ .ಆಗ ಅವಳು ಬೆನ್ನಿನಲ್ಲಿ ಬಾ ಎನ್ನುತ್ತಾಳೆ ಬೆನ್ನಿನಲ್ಲಿ ಬಂದರೆ ತಮ್ಮ ಎಂದಾರು ಎನ್ನುತ್ತಾನೆ.ಕೊನೆಗೆ ತಾಯಿನ ಬಲದ ಸಿರಿ ಮೊಲೆಯ ಒಡೆದು ಹುಟ್ಟುತ್ತಾನೆ .ತಾಯಿ ಹಾಲು ಕುಡಿದು ಕೈ ತಟ್ಟಿ ನಗುತ್ತಾನೆ .
ಹುಟ್ಟಿ ಹದಿನಾರು ದಿನ ಆಗುವಾಗ ಸೂರ್ಯ ನಾರಾಯಣ ದೇವರನ್ನು ಹಣ್ಣು ಎಂದು ಭಾವಿಸಿ ತಿನ್ನಲು ಹೋಗುತ್ತಾನೆ .ಆಗ ನಾರಾಯಣ ದೇವರು ನಿನಗೆ ಬೇರೆ ಆಹಾರ ಕೊಡುತ್ತೇನೆ ಎನ್ನುತ್ತಾರೆ .ಆನೆ ಕುದುರೆ ರಕ್ತ ಸಾಲದಾದಾಗ ತನ್ನ ಕಿರಿಬೆರಳನ್ನು ನೀಡುತ್ತಾರೆ .ಆಗಲೂ ಹೊಟ್ಟೆ ತುಂಬದಾಗ ಅವನನ್ನು ಬಾಲ ಸೇತುವೆ  ನೂಲು ಕೈ ಹಗ್ಗದಲ್ಲಿ ಭೂಲೋಕಕ್ಕೆ ಕಳುಹಿಸುತ್ತಾರೆ .ಭೂಲೋಕಕ್ಕೆ ಇಳಿದ ಗುಳಿಗ ಪೆರ್ಕಳ ಮೋಂಟು ಬೈದ್ಯನ ಕಳ್ಳನ್ನು ಆಹಾರವಾಗಿ ಪಡೆದು ಗೋಳಿ ಮರದಲ್ಲಿ ನೆಲೆಯಾಗುತ್ತಾನೆ ಅಲ್ಲಿಂದ ಮರದಲ ಬತ್ತಿಗೆ ಬಂದು ಮಂಜು ಬೈದ್ಯನ ಕಳ್ಳಿನ ಮಡಕೆಯನ್ನು ಪಡೆಯುತ್ತಾನೆ .ಅಲ್ಲಿಂದ ಜಾರ ಸೀಮೆಗೆ ಬಂದು ನೆಲೆಯಾಗುತ್ತಾನೆ ಅಲ್ಲಿನ ಬಾರಗರಿಂದ ವರ್ಷಂಪ್ರತಿ ಬಲಿ ನೇಮ ಪಡೆಯುತ್ತಾನೆ 
ಇಲ್ಲೆಲ್ಲಾ ಗುಳಿಗನ ಉಗ್ರತೆಯ ಚಿತ್ರಣ ಇದೆ ,ಅವನಿಗೆ ಒಂದು ಅಲೌಕಿಕ ಹುಟ್ಟನ್ನೂ ಕಟ್ಟಿ ಕೊಟ್ಟಿದ್ದಾರೆ .ಹುಟ್ಟಿನೊಡನೆ ಉಂಟಾದ ಉಗ್ರತೆ ಮತ್ತು ಪ್ರಾಣಿ ಬಲಿಗೆತಣಿಯದ ಹಸಿವು ,ಅದಕ್ಕಾಗಿ ನರ ಬಲಿಗಾಗಿ ಭೂಲೋಕಕ್ಕೆ ಬರುವುದು ಇವೆಲ್ಲ ಆತನ ಭಯಾನಕ ಉಗ್ರ ಸ್ವರೂಪಕ್ಕೆ ಅನುಗುಣವಾಗಿ ಮೂಡಿಡ ಪರಿಕಲ್ಪನೆಗಳು ಆಗಿರಬಹುದು .ಗುಲಿಗನ ಪೆಟ್ಟಿಗೆ ಸಿಕ್ಕವರು ಸಾಯುತಾರೆ ಎಂಬ ನಂಬಿಕೆ ಇದರಿಂದಲೇ ಹುಟ್ಟಿರಬಹುದು ಎಂದು ಡಾ.ಬಿ ಎ ವಿವೇಕ ರೈಗಳು ಅಭಿಪ್ರಾಯ ಪಟ್ಟಿದ್ದಾರೆ .

.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
  ಈತನನ್ನು ದೇವಿಯ ದೂತನೆಂದು ಹೇಳುತ್ತಾರೆ. ಗುಳಿಗ ಬೆಟ್ಟುಸ್ಥಾನಗುಡ್ಡಕಲ್ಲುಹಾಕಿಸಿಕೊಂಡು ಶಿಷ್ಟರಕ್ಷಣೆದುಷ್ಟಶಿಕ್ಷೆಯನ್ನು ವಿಧಿಸುವ ದೈವ ಎಂದು ಪ್ರಸಿದ್ಧವಾಗಿದೆ. ಗುಳಿಗ ಕೋಲ ಅತ್ಯಂತ ಪ್ರಾಚೀನ ಆರಾಧನೆ. ಸೂಟೆ ಈತನ ಪ್ರಧಾನ ಆಯುಧ.
ಗುಳಿಗನ ವೇಷ ಬಹಳ ಸರಳವಾದದ್ದು.  ತೆಂಗಿನಗರಿ ಹಾಗು ಅಡಿಕೆ ಹಾಳೆಯಿಂದ ಮಾಡಿದ ಮುಖವಾಡ ಗುಳಿಗನ ವಿಶೇಷತೆ. ಪೊಟ್ಟ ಗುಳಿಗರಾವು ಗುಳಿಗಮಂತ್ರಗುಳಿಗನೆತ್ತರ್ ಗುಳಿಗಚೌಕಾರು ಗುಳಿಗಸಂಚಾರಿ ಗುಳಿಗಉಮ್ಮಟ್ಟಿ ಗುಳಿಗಮಂತ್ರವಾದಿ ಗುಳಿಗರಕ್ತೇಶ್ವರಿ ಗುಳಿಗ, ಸುಬ್ಬಿಯಮ್ಮ ಗುಳಿಗ ,ಸನ್ಯಾಸಿ ಗುಳಿಗ ,ಕಳಾಳ್ತ ಗುಳಿಗ ,ಒರಿ ಮಾಣಿ ಗುಳಿಗ ಮೂಕಾಂಬಿ ಗುಳಿಗಮಾರಣ ಗುಳಿಗಉನ್ನಟ್ಟಿ ಗುಳಿಗಅಗ್ನ ಗುಳಿಗಭಂಡಾರಿ ಗುಳಿಗಇತ್ಯಾದಿ 108 ಗುಳಿಗ ಇದ್ದಾರೆಂದು ಜನಪದರು ಹೇಳುತ್ತಾರೆ.ಇವರಲ್ಲಿ ಮೂಕಾಂಬಿ ಗುಳಿಗ ,ಸುಬ್ಬಿಯಮ್ಮ ಗುಳಿಗ ,ಸನ್ಯಾಸಿ ಗುಳಿಗ ,ಒರಿ ಮಾಣಿ ಗುಳಿಗ ರು ಗುಳಿಗನ ಸೇರಿಗೆ ಸಂದಿರುವ ಮಾನವ ಮೂಲದ ದೈವಗಳಾಗಿವೆ .ಉಳಿದ ಪ್ರಬೇಧಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ವಿವೇಚಿಸಿದಾಗ :ಸಹಜ ಪ್ರಸವವಾಗದೆ ಆಗಿನ ಕಾಲಕ್ಕೆ ತಾಯಿಯ ಹೊಟ್ಟೆಯನ್ನು ಕೊಯ್ದು ಪ್ರಸವ ಮಾಡಿಸಿದಾಗ ಹುಟ್ಟಿದ  ಅಪರೂಪದಮಗು ಗುಳಿಗ ನಿರಬಹುದು ,ಭಾರತದಲ್ಲಿ ಬಹು ಹಿಂದಿನ ಕಾಲದಲ್ಲಿಯೇ ಶುಶ್ರುತನಿಂದ ಆರಂಭವಾದ ಶಸ್ತ್ರ ಚಿಕಿತ್ಸಾ ಪದ್ಧತಿ ಬಳಕೆಯಲ್ಲಿತ್ತು ,ಆದರೂ ಹೊಟ್ಟೆಯನ್ನು ಕೊಯ್ದಾಗ ತಾಯಿ ಬದುಕಿರುವ ಸಾಧ್ಯತೆ ಕಡಿಮೆಯೇ ಇದೆ  .ಹೀಗೆ ವಿಶೇಷವಾಗು ಹುಟ್ಟಿದ ಮಗು ಹದಿನಾರು ದಿನಗಳಲ್ಲಿಯೇ ನಾರಾಯಣ ದೇವರನ್ನು ತಿನ್ನಲು ಹೊರಟಂತ ಸಾಹಸವನ್ನು ಮಾಡುತ್ತದೆ .ಹಾಗಾಗಿಯೇ ಈತ ಮುಂದೆ ದೈವತ್ವ ಪಡೆದು ಉಗ್ರ ದೈವವಾಗಿ  ಜನಮಾನಸದಿಂದ ಆರಾಧನೆ ಹೊಂದಿರುವ ಸಾಧ್ಯತೆ ಇದೆ .
ಆಧಾರ  ಕರಾವಳಿಯ ಸಾವಿರದೊಂದು ದೈವಗಳು ಲೇ ;ಡಾ.ಲಕ್ಷ್ಮೀ ಜಿ ಪ್ರಸಾದ್ 


Monday, 2 October 2023

ಅಲಿಖಿತ ಇತಿಹಾಸ ಸಾರುವ ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್

 




ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ‌‌..ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 




ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ್ copy rights reserved ಅನುಮತಿ‌ಇಲ್ಲದೆ ಕಾಪಿ ಮಾಡುವಂತಿಲ್ಲ.







ಕಲ್ಕುಡ ಕಲ್ಲುರ್ಟಿ 
ಭೂತಗಳನ್ನುರೆಕಾರ್ಡ್ ಮಾಡುವುದಕ್ಕೆ ಮೊದಲೇ ನಾನು ಮಲರಾಯಿ ಉಲ್ಲಾಕುಳು ಅಜ್ಜಿಭೂತ ಉಳ್ಳಾಲ್ತಿ ಮೊದಲಾದ ಅನೇಕ ಭೂತಗಳ ಕೋಲವನ್ನು ರೆಕಾರ್ಡ್ ಮಾಡಿದ್ದೆ .ಅನೇಕ ವಿಧಿ ನಿಷೇಧಗಳಿರುವ ಭೂತಾರಾಧನೆಯನ್ನು ರೆಕಾರ್ಡ್ ಮಾಡುವುದು ಸುಲಭದ ವಿಚಾರವಲ್ಲ. ವಿಧಿ ನಿಷೇಧಗಳ ಜೊತೆಗೆ ಸ್ಥಳೀಯರ ಭೂತ ಮಾಧ್ಯಮರ ಅಸಹಕಾರಗಳನ್ನು ನಿಭಾಯಿಸುವುದು ಸಾಹಸದ ವಿಚಾರ .ನಾವು ರೆಕಾರ್ಡ್ ಮಾಡುವುದರಿಂದ ತಮ್ಮ ಘನತೆಗೆ ಗಾಂಭೀರ್ಯಕ್ಕೆ ಏನೋ ಕುಂದು ಕೊರತೆ ಬರುತ್ತದೆ ಎಂಬ ಆತಂಕ ಅವರದು .ಇದರಿಂದಾಗಿ ನಾವು ಫೋಟೋ ಹಿಡಿಯಲು ಕ್ಯಾಮೆರಾ ಫೋಕಸ್ ಮಾಡುತ್ತಿದ್ದಂತೆ ಅವರಲ್ಲಿ ಅತಿಯಾದ ಆವೇಶ ಉಂಟಾಗಿ ಉಗ್ರತೆಯನ್ನು ಪ್ರದರ್ಶಿಸುತ್ತಾರೆ 

.ಕಲ್ಕುಡ ಕಲ್ಲುರ್ಟಿ ದೈವಗಳ ಕೋಲವನ್ನು ರೆಕಾರ್ಡ್ ಮಾಡಲು ನಾನು ಮನೆಯೊಡೆಯನಿಂದ ಮೊದಲೇ ಅನುಮತಿಯನ್ನು ಪಡೆದಿದ್ದೆ . ಬಹುಶ ಭೂತ ಕಟ್ಟುವ ಕಲಾವಿದರಿಗೆ ಇಷ್ಟವಿರಲಿಲ್ಲವೋ ಏನೋ ತಿಳಿಯದು !ಅಂದಿನ ಕಲ್ಲುರ್ಟಿ ಭೂತದ ಆವೇಶವನ್ನು ಉಗ್ರ ನರ್ತನ ಅಟ್ಟಹಾಸವನ್ನು  ನೋಡಿ ನನಗೆ ನಿಜವಾಗಿಯೂ ಕೈಕಾಲು ನಡುಕ ಬಂದಿತ್ತು .ಭೂತ ಕಟ್ಟಿದ ಕಲಾವಿದ ಒಂದು ಕ್ಷಣ ಕೂಡ ನಿಂತಲ್ಲಿ ನಿಲ್ಲದ ಕಾರಣ ಫೋಟೋ ತೆಗೆಯುವುದು ಬಹಳ ಕಷ್ಟ ಆಗಿತ್ತು .ಆದರೂ ೩-೪ ಗಂಟೆಗಳ ಕಾಲ ಭೂತ ಹಿಂದೆ ಮುಂದೆ ಹೋದಂತೆ ನಾನು ಕೂಡ ಬೇತಾಳನಂತೆ ಭೂತ ಹಿಂದೆಯೇ ಸುತ್ತಿ ಕೆಲವು ಭಾವಚಿತ್ರಗಳನ್ನು ಸೆರೆಹಿಡಿದಿದ್ದನ್ನು ನೆನೆಯುವಾಗ ಈಗ ಕೂಡ ನನ್ನ ಮೈ ಜುಮ್ಮೆನ್ನುತ್ತದೆ !

ಭೂತ ಬಿರಿದ ನಂತರ ಭೂತ ಕಟ್ಟಿದ ಆ ಕಲಾವಿದರು ತುಂಬಾ ಆತ್ಮೀಯತೆಯಿಂದ ಭೂತಗಳ ಕುರಿತಾದ ಪಾಡ್ದನ ಹಾಗು ಇತರ ಮಾಹಿತಿಗಳನ್ನು ನೀಡಿದರು .ಅವರ ಸೌಮ್ಯ  ಗುಣವನ್ನು ನೋಡಿ ನನಗೆ ತುಸು ಹಿಂದೆ ಅಷ್ಟು ಉಗ್ರತೆಯನ್ನು ಪ್ರದರ್ಶಿಸಿದ ಭೂತ ಕಲಾವಿದ ಇವರೇ ಏನು ?!ಎಂಬ ಸಂಶಯ ಉಂಟಾಯಿತು .ಭೂತ ಕಲಾವಿದರು ಹೆಚ್ಚಿನವರು ಬಹಳ ಸೌಮ್ಯ ಗುಣದವರೇ ಆಗಿರುತ್ತಾರೆ . ಆಯಾಯ ಭೂತಗಳ ಸಹಜ ಪ್ರವೃತ್ತಿಗಳಿಗೆ ಅನುಗುಣವಾಗಿ ಅವರು ಅಭಿವ್ಯಕ್ತಿಯನ್ನು ತೋರುತ್ತಾರೆ ಎಂಬುದನ್ನು ನಾನು  ಸ್ವ ಅನುಭವದ ಮೂಲಕ ಕಂಡು ಕೊಂಡ  ವಿಚಾರ.
ತುಳುನಾಡಿನ ಭೂತಗಳಲ್ಲಿ ಕಲ್ಕುಡ ಕಲ್ಲುರ್ಟಿಗಳಿಗೆ ವಿಶೇಷವಾದ ಸ್ಥಾನವಿದೆ .ಅರಸು ದೌರ್ಜನ್ಯಕ್ಕೊಳಗಾಗಿ ದೈವತ್ವವನ್ನು ಪಡೆದ ಅವಳಿಗಳು ಇವರು .ತಮಗಾದ ಅನ್ಯಾಯಕ್ಕೆ ಪ್ರತಿರೋಧವೋ ಎಂಬಂತೆ  ಈ ಭೂತಗಳ ಅಭಿವ್ಯಕ್ತಿ ಕೂಡ ತುಸು ಉಗ್ರವಾಗಿ ತೋರುತ್ತದೆ . ಮೂಲತಃ ಶಿಲ್ಪಿಗಳಾದ ಇವರ ಕಪ್ಪು ಬಣ್ಣದಲ್ಲಿ ಇಟ್ಟ  ಬಿಳಿ ವರ್ಣದ  ಚುಕ್ಕಿಗಳ ಮುಖವರ್ಣಿಕೆ ಅವರ ಮೂಲ ವೃತ್ತಿಯನ್ನು ಸಂಕೇತಿಸುತ್ತದೆ .ಈ ಭೂತಗಳ  ಕೋಲದಲ್ಲಿನ ಉಗ್ರ ಅಟ್ಟಹಾಸವು ಇವರಿಗಾದ ಅನ್ಯಾಯದ ವಿರುದ್ಧ ತೋರುವ ಅಭಿವ್ಯಕ್ತಿ ಯಾಗಿದೆ .copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ
ಕಲ್ಲುರ್ಟಿ ಭೂತವನ್ನು ಇಷ್ಟ ಜಾವದೆ ,ಒರ್ತೆ ,ಪಾಷಾಣ ಮೂರ್ತಿ ಮೊದಲಾದ ಅನೇಕ ಹೆಸರು ರೂಪಗಳಲ್ಲಿ ಆರಾಧಿಸುತ್ತಾರೆ .ಈ ಭೂತ ಅಪ್ಪೆ ಕಲ್ಲುರ್ಟಿ (ತಾಯಿ ಕಲ್ಲುರ್ಟಿ)ಎಂದೇ ತುಳುನಾಡಿನಾದ್ಯಂತ ಬಹಳ  ಭಕ್ತಿಯಿಂದ ಆರಾಧಿಸಲ್ಪಡುತ್ತದೆ. 
ಕಾರ್ಕಳ ತಾಲೂಕಿನಲ್ಲಿರುವ ಕೆಲ್ಲಪುತ್ತಿಗೆ ಮಾರ್ನಾಡುವಿನಲ್ಲಿ ಪ್ರಸಿದ್ಧ ಶಿಲ್ಪಿಗಳು ವಾಸಿಸುತ್ತಿದ್ದರು. ‘ಶಂಭು ಕಲ್ಕುಡ’ ಮತ್ತು  ‘ಈರವದಿ ಅಚ್ಚವದಿ ದಂಪತಿಗಳಿಗೆ ಐದು ಜನ ಮಕ್ಕಳು. ಇವರಲ್ಲಿ ಬೀರುಕಲ್ಕುಡ ಮತ್ತು ಕಾಳಮ್ಮ ಅವಳಿ ಮಕ್ಕಳು. ಈ ಮಕ್ಕಳು ತಾಯ ಗರ್ಭದಲ್ಲಿರುವಾಗಲೇ ಶಂಭು ಕಲ್ಕುಡನಿಗೆ ಬೈಕೂರು ಬೆಳ್ಗೊಳಗಳಿಂದ ಅಂತರಂಗದ ಆಹ್ವಾನ ಬಂತು. ಆಗ ಶಂಭು ಕಲ್ಕುಡ ಮನೆಗೆ ಬೇಕಾದಷ್ಟು ಸಾಮಾನುಗಳನ್ನು ತಂದಿಟ್ಟು, ಉಳಿ, ಸುತ್ತಿಗೆ, ಮೊದಲಾದ ಪರಿಕರಗಳನ್ನು ಹಿಡಿದು ಬೆಳ್ಗೊಳದ ಅರಸನಲ್ಲಿಗೆ ಹೋಗುತ್ತಾನೆ. ಒಡ್ಡೋಲಗದಲ್ಲಿದ್ದ ಅರಸನನ್ನು ವಂದಿಸಿ ಕರೆ ಕಳುಹಿಸಿದ ಕಾರಣವನ್ನು ಕೇಳುತ್ತಾನೆ. ಆಗ ಅರಸರು ‘ಕಲ್ಕುಡ ಅರಮನೆ ಅಳಿಸಿಹೋಗಿದೆ, ಬಸದಿ ನಾಶವಾಗಿದೆ. ದೇವರಿಗೆ ದೇಗುಲವಿಲ್ಲ. ಗುಮ್ಮಟಸ್ವಾಮಿಯ ಕೆಲಸವಾಗಬೇಕು. ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಬೇಕು’ ಎಂದು ಆಣತಿ ಇಡುತ್ತಾರೆ. ಅರಸರ ಆಣತಿಯನ್ನು ಶಿರಸಾವಹಿಸಿದ ಶಂಭುಕಲ್ಕುಡ ಪಡಿಯಕ್ಕಿ ಸ್ವೀಕರಿಸಿ ಬಿಡಾರ ಸೇರುತ್ತಾನೆ. ಮರುದಿನ ಮುಂಜಾನೆ ಎದ್ದು ತನ್ನ ಮನೆದೈವ ಗುರುಕಾಳಮ್ಮ ಹಾಗೂ ಇತರ ದೈವಗಳನ್ನು ಸ್ಮರಿಸಿ, ಧಾರೆ ನೋಡಿ ಕಲ್ಲಿನ ಸೆರೆಗೆ ಉಳಿ ಇಕ್ಕುತ್ತಾನೆ. ಅತ್ಯಂತ ಕಠಿಣವಾದ ಕಲ್ಲು ತೆಂಗಿನಗರಿ ಸೀಳಿದಂತೆ ಸೀಳಿತು. ಬಾಳೆಯ ದಿಂಡಿನ ಹೊದಿಕೆಯಂತೆ ತುಂಡಾಯಿತು. ಬೇರೆಯವರಿಂದ ಅಸಾಧ್ಯವಾದ ಕೆಲಸವನ್ನು ಸಾಧಿಸಿದ ಶಂಭು ಕಲ್ಕುಡ ದೇವರಿಗೆ ದೇಗುಲ ಮಾಡಿದ. ಸಾವಿರ ಕಂಬದ ಬಸದಿ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆಲಸ ಮಾಡಿದ, ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಿದ. ಅಂಗಳದಲ್ಲಿ ಆನೆಕಲ್ಲಿನ ಕೆಲಸವನ್ನು ಮಾಡಿದ. ಗುಮ್ಮಟಸ್ವಾಮಿಯನ್ನು ಕೆತ್ತಿದ. ಈ ಎಲ್ಲ ಕೆಲಸ ಪೂರ್ಣವಾದ ನಂತರ, ಅರಸರಿಂದ ಉಂಬಳಿ, ಹಸು, ಬಂಗಾರದ ಬಳೆ, ಮುಂಗೈ ಸರಪಳಿ ಸೇರಿದಂತೆ ಅನೇಕ ಕೊಡುಗೆಗಳನ್ನು ಪಡೆದು ಊರಿಗೆ ಹೊರಡುತ್ತಾನೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಇತ್ತ ಕೆಲತ್ತ ಮಾರ್ನಾಡಿನಲ್ಲಿ ಈತನ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಕೊನೆಯ ಅವಳಿ ಮಕ್ಕಳು ಬೀರುಕಲ್ಕುಡ ಮತ್ತು ಕಾಳಮ್ಮ ತಮ್ಮ ವಯಸ್ಸಿಗೆ ಮೀರಿದ ಸಾಹಸವನ್ನು ಮೆರೆಯುತ್ತಾರೆ. ತನ್ನ ಸಮವಯಸ್ಕ ಗೆಳೆಯರೊಂದಿಗೆ ಆಟಕ್ಕೆ ಹೋದಾಗ, ಆಟದಲ್ಲಿ ಸೋತ ಬೀರುವಿನ ಗೆಳೆಯರು ಬೀರು ಕಲ್ಕುಡನನ್ನು “ತಂದೆಯಿಲ್ಲದ ಮಗ”ನೆಂದು ದೋಷ ಹೇಳಿ ಕುಲದೂಷಣೆ ಮಾಡುತ್ತಾರೆ. ಆಗ ಮನೆಗೆ ಬಂದ ಬೀರುಕಲ್ಕುಡ ತಾಯಿಯಲ್ಲಿ ‘ತನಗೆ ತಂದೆಯಿಲ್ಲವೆ?’ ಎಂದು ಪ್ರಶ್ನಿಸುತ್ತಾನೆ. ಆಗ ತಾಯಿ ಈರವೆದಿಯು ‘ನಿನ್ನ ತಂದೆ ಬೆಳ್ಗೊಳಕ್ಕೆ ಕೆಲಸಕ್ಕೆ ಹೋದವರು ಇನ್ನೂ ಬಂದಿಲ್ಲ’ ಎಂದು ಹೇಳುತ್ತಾಳೆ. ಆಗ ‘ನಾನು ತಂದೆಯನ್ನು ಹುಡುಕಲು ಹೋಗುತ್ತೇನೆ. ನನಗೆ ತಂದೆಯ ಕೆಲಸವನ್ನು ನೋಡಬೇಕು. ನಾನೂ ಕೆಲಸ ಮಾಡಬೇಕು” ಎಂದು ಹೇಳುತ್ತಾನೆ. ಆಗ ತಾಯಿ ಈರವೆದಿ ‘ಅಯ್ಯೋ, ಮಗು ಬೀರು, ನೀನಿನ್ನೂ ಸಣ್ಣವ, ದೊಡ್ಡವನಾಗಿಲ್ಲ. ನಿನ್ನ ನೆತ್ತಿಯ ಎಣ್ಣೆಯ ಜಿಡ್ಡು ಮಾಸಿಲ್ಲ. ಕಾಲಿನ ಅರಸಿನ ಮಾಸಿಲ್ಲ’ ಎಂದು ಹೇಳುತ್ತಾಳೆ. ಆದರೆ ‘ತಾನು ಹೋಗುತ್ತೇನೆ’ ಎಂದು ಹಠ ಮಾಡುತ್ತಾನೆ ಬೀರುಕಲ್ಕುಡ. ಮರುದಿನ ಮುಂಜಾವು ಬೇಗನೆ ಎದ್ದು, ತಾಯಿ ನೀಡಿದ ತಂಗಳನ್ನ ಉಂಡು, ಮೊಸರನ್ನು ಬುತ್ತಿ ತೆಗೆದುಕೊಂಡು, ಪ್ರಯಾಣ ಆರಂಭಿಸಿದ. 

ಅಡ್ಡ ತೋಡನ್ನು ದಾಟಿ, ನೀರಗುಡ್ಡವನ್ನು ಹತ್ತಿ ಇಳಿದ. ಆನೆ ಕಟ್ಟಿದ ಅಶ್ವತ್ಥ, ಕುದುರೆ ಕಟ್ಟಿದ ಕಿನ್ನಿಗೋಳಿ, ಅಕ್ಕಿ ಇಳಿಸುವ ಅಟ್ಟೆ ಕಲ್ಲು, ಉಪ್ಪು ಹೊರೆ ಇಳಿಸುವ ಉಗುಂಟಕಲ್ಲು ಮುಂತಾದ ಪ್ರದೇಶಗಳನ್ನು ದಾಟಿ ಮುಂದೆ ಹೋದ.
ಅರಸರ ಕೊಡುಗೆಯೊಂದಿಗೆ ಬಂದ ಶಂಭು ಕಲ್ಕುಡ ಕಟ್ಟೆಯಲ್ಲಿ ಕುಳಿತಿರುವಾಗ, ಆ ಸಮಯಕ್ಕೆ ಸರಿಯಾಗಿ ಬೀರುಕಲ್ಕುಡ ಅಲ್ಲಿಗೆ ಬರುತ್ತಾನೆ. ತಂದೆಯ ಗುರುತು ಮಗನಿಗಿಲ್ಲ. ಮಗನ ಗುರುತು ತಂದೆಗಿಲ್ಲ. ಆದರೂ ತಂದೆ ಶಂಭುಕಲ್ಕುಡ ಬೀರುಕಲ್ಕುಡನ ಹತ್ತಿರ ‘ನೀನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆಯಪ್ಪಾ?’ ಎಂದು ಸಹಜ ಕುತೂಹಲದಿಂದ ವಿಚಾರಿಸುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
 “ನನ್ನ ತಂದೆಯನ್ನು ಹುಡುಕಲು ಹೋಗುತ್ತೇನೆ. ನನ್ನ ಊರು ಕೆಲತ್ತ ಮಾರ್ನಾಡು. ನನ್ನ ತಂದೆ ಶಂಭುಕಲ್ಕುಡ, ತಾಯಿ ಈರವೆದಿ’ ಎಂದು ಬೀರುಕಲ್ಕುಡ ಉತ್ತರಿಸುತ್ತಾನೆ. ಆಗ “ಅಯ್ಯೊಯ್ಯೋ, ಮಗನೇ ನಾನು ನಿನ್ನ ತಂದೆ, ನೀನು ನನ್ನ ಮಗ’ ಎಂದ ಶಂಭುಕಲ್ಕುಡ ಮಗನನ್ನು ಅಪ್ಪಿಕೊಳ್ಳುತ್ತಾನೆ. ‘ನಿನ್ನ ಕೆಲಸವನ್ನು ನನಗೆ ನೋಡಬೇಕು’ ಎಂದು ಹಠ ಹಿಡಿಯುತ್ತಾನೆ ಬೀರುಕಲ್ಕುಡ. ಮಗನ ಹಠಕ್ಕೆ ಮಣಿದ ತಂದೆ ಶಂಭು ಕಲ್ಕುಡ, ಮಗ ಬೀರುವಿನ ಜೊತೆಯಲ್ಲಿ ಬೆಳ್ಗೊಳಕ್ಕೆ ಹಿಂದಿರುಗುತ್ತಾನೆ. ಅಲ್ಲಿಯ ಗುಮ್ಮಟಸ್ವಾಮಿಯ ಕೆಲಸದಲ್ಲಿ ದೋಷ ಉಂಟೆಂದು ಬೀರುಕಲ್ಕುಡ ಹೇಳುತ್ತಾನೆ. “ಅಯ್ಯೊಯ್ಯೋ, ಮಗನೇ ನೀನು ನಿನ್ನೆ ಮೊನ್ನೆ ಹುಟ್ಟಿದವನು ಬೇಗನೇ ಬೆಳೆದುಬಿಟ್ಟೆ. ನನ್ನ ಕೆಲಸಕ್ಕೆ ಕುಂದುಕೊರತೆ ಹೇಳಿದೆಯಾ? ಅರಸರು ನೋಡಿದರೆ ಆನೆಯ ಕಾಲಡಿಗೆ ಹಾಕಿಸಿಯಾರು? ಕುದುರೆಯ ಚಾಟಿಯಲ್ಲಿ ಹೊಡೆಸಿಯಾರು” ಎಂದು ಹೇಳಿದ ಶಂಭುಕಲ್ಕುಡ ಅರಸನ ಶಿಕ್ಷೆಯ ಭಯದಿಂದ ಬೆಳ್ಳಿ ಕಟ್ಟಿದ ಚೂರಿಯಿಂದ ತನ್ನ ಹೊಟ್ಟೆಗೆ ಇರಿದುಕೊಂಡು ಸಾವನ್ನಪ್ಪುತ್ತಾನೆ. ಈ ವಿಷಯ ಎಲ್ಲೆಡೆ ಸುದ್ದಿಯಾಯಿತು. ಮಗ ಕೆಲಸದಲ್ಲಿ ಶೂರನೆಂದು ಪ್ರಚಾರವಾಯಿತು. ತಂದೆಯ ಸಾಧನಗಳನ್ನು ಹಿಡಿದುಕೊಂಡ ಬೀರುಕಲ್ಕುಡ ಘಟ್ಟ ಇಳಿದು ತುಳುರಾಜ್ಯಕ್ಕೆ ಬರುತ್ತಾನೆ. ಕಾರ್ಕಳದ ಅರಸ ಬೈರನಸೂಡರು ಬೀರು ಕಲ್ಕುಡನಿಗೆ ಓಲೆ ಕಳುಹಿಸುತ್ತಾರೆ. ಅರಸರ ಸನ್ನಿಧಿಗೆ ಬಂದ ಬೀರುಕಲ್ಕುಡ ಕರೆಕಳುಹಿಸಿದ ಕಾರಣವನ್ನು ಕೇಳುತ್ತಾನೆ. “ಏನಯ್ಯ ಕಲ್ಕುಡ, ಬಸದಿಯ ಕೆಲಸವಾಗಬೇಕು. ನೂರಿಪ್ಪತ್ತು ಬೊಂಬೆಗಳ ಕೆತ್ತನೆಯಾಗಬೇಕು. ಒಂಬತ್ತು ದೇವರುಗಳ ಕೆಲಸವಾಗಬೇಕು. ಗುಮ್ಮಟಸ್ವಾಮಿಯ ಕೆಲಸವಾಗಬೇಕು’ ಎಂದು ಅಪ್ಪಣೆ ಕೊಡುತ್ತಾರೆ ಬೈರನ ಸೂಡರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
ಇದಕ್ಕೆ ಒಪ್ಪಿದ ಬೀರುಕಲ್ಕುಡ ಪಡಿಯಕ್ಕಿ ಪಡೆದು ಬಿಡಾರ ಸೇರುತ್ತಾನೆ. ಮರುದಿನ ಮುಂಜಾವದಿಂದಲೇ ಕೆಲಸ ಆರಂಭಿಸುತ್ತಾನೆ. ಬಸದಿಯ ಕೆಲಸ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆತ್ತನೆ ಮಾಡಿನ ಒಂಬತ್ತು ದೇವರುಗಳ ಕೆಲಸ ಮಾಡಿದ. ಗುಮ್ಮಟಸ್ವಾಮಿಯ ಕೆತ್ತನೆ ಮುಗಿಸಿದ ಬೀರು ಕಲ್ಕುಡ ಅರಸರಲ್ಲಿ ಬಹುಮಾನವನ್ನು ಕೇಳುತ್ತಾನೆ. ‘ಇಂದು ಮುಸ್ಸಂಜೆಯ ಹೊತ್ತಾಯಿತು. ನಾಳೆ ಬಾ’ ಎಂದು ಕಳುಹಿಸುತ್ತಾರೆ ಬೈರನ ಸೂಡ ಅರಸರು. ಮರುದಿನ ಕಲ್ಕುಡ ಹೋದಾಗ ‘ನನ್ನ ರಾಜ್ಯದಲ್ಲಿ ಕೆಲಸ ಮಾಡಿದವರು ಬೇರೆಡೆ ಇಂಥಹ ಅಪೂರ್ವ ಕೆಲಸವನ್ನು ಮಾಡಬಾರದು’ ಎಂದು ಮತ್ಸರದಿಂದ, ಬೈರನ ಸೂಡ ಅರಸ, ಬೀರುಕಲ್ಕುಡನ ಬಲಗೈಗೆ ಬಂಗಾರದ ಬಳೆ, ಎಡಕಾಲಿಗೆ ಕಡಗವಿಕ್ಕುತ್ತಾರೆ. ಜೊತೆಗೆ ಆತನ ಎಡಗೈ ಹಾಗೂ ಬಲಕಾಲನ್ನು ಕತ್ತರಿಸುತ್ತಾನೆ. ‘ಇಂಥ ಅನ್ಯಾಯದ ಊರಿನಲ್ಲಿ ನೀರು ಮುಟ್ಟಲಾರೆ’ ಎಂದು ಬೀರುಕಲ್ಕುಡ ವೇಣೂರ ಸೀಮೆಗೆ ಹೋಗುತ್ತಾನೆ. ಆತನನ್ನು ಆದರದಿಂದ ಕರೆಸಿ, ಸತ್ಕರಿಸಿದ ವೇಣೂರ ಒಡೆಯ ತಿಮ್ಮಣ್ಣಾಜಿಲರು ‘ನಮಗೆ ಗೊಮ್ಮಟಸ್ವಾಮಿಯ ಕೆತ್ತನೆಯ ಕೆಲಸವಾಗಬೇಕು’ ಎನ್ನುತ್ತಾರೆ. ಆಗ ಒಂದು ಕೈ ಕಾಲುಗಳನ್ನು ಕಳೆದುಕೊಂಡ ತಾನು ಹೇಗೆ ಕೆಲಸ ಮಾಡಲಿ? ಎಂದು ಕೇಳುತ್ತಾನೆ ಬೀರುಕಲ್ಕುಡ. ಆಗ ‘ನಿನ್ನ ಜಾತಿಸರೀಕರಿಗೆ ಈ ಕೆತ್ತನೆಯ ಒಳಗುಟ್ಟನ್ನು ತಿಳಿಸು’ವಂತೆ ಹೇಳುತ್ತಾರೆ ತಿಮ್ಮಣ್ಣಾಜಿಲರು © ಡಾ.ಲಕ್ಷ್ಮೀ ಜಿ ಪ್ರಸಾದ್ ಇದಕ್ಕೆ ಒಪ್ಪದ ಕಲ್ಕುಡ ತಾನೇ ಗೊಮ್ಮಟಸ್ವಾಮಿಯ ಕೆತ್ತನೆಯ ಕಾರ್ಯ ಮಾಡಿ ಮುಗಿಸುತ್ತಾನೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ
 


ಇತ್ತ ಬೀರುವಿನ ತಂಗಿ ಕಾಳಮ್ಮ ಅಣ್ಣನನ್ನು ಹುಡುಕಲು ಹೋಗಬೇಕೆನ್ನುತ್ತಾಳೆ. ಅಟ್ಟಕ್ಕೆ ಏಣಿ ಇಟ್ಟು ಮುಡಿಯಿಂದ ಮೂರು ಬಳ್ಳ ಅಕ್ಕಿ ತೆಗೆದು ಭತ್ತ ಕುಟ್ಟುವ ನೆಲಗುಳಿಯಲ್ಲಿ ಹಾಕುತ್ತಾಳೆ. ತಾಳೆ ಮರದ ಸುತ್ತಿನ ಒನಕೆಯನ್ನೆತ್ತಿ ಕುಟ್ಟುತ್ತಾಳೆ. ಒಪ್ಪವಾಗಿ ಸೇರಿಸಿ ಒಂದು ಬಳ್ಳ ಅಕ್ಕಿ ಮಾಡಿದಳು. ಅಕ್ಕಿಯನ್ನು ಹಾಲಿನಲ್ಲಿ ಬೇಯಿಸಿ, ಎಣ್ಣೆ ಚಕ್ಕುಲಿ, ಅಕ್ಕಿ ಕಡುಬು ಮಾಡುತ್ತಾಳೆ. ಮೂಡೆಯಲ್ಲಿ, ಅರಳು ಪಾತ್ರದಲ್ಲಿ ಮೂರು ಕುಡ್ತೆ, ಮೂರಚ್ಚು ಬೆಲ್ಲ ಹಾಕಿ ಬುತ್ತಿ ಗಂಟು ತೆಗೆದುಕೊಂಡು ಹೋಗುತ್ತಾಳೆ. ಚೆನ್ನಾಗಿ ಅಲಂಕರಿಸಿಕೊಂಡು ಪ್ರಯಾಣಕ್ಕೆ ಸಿದ್ಧವಾಗುತ್ತಾಳೆ. ಅಡ್ಡ ಸಿಕ್ಕಿದ ತೊರೆ-ಹಳ್ಳ, ಬೆಟ್ಟ-ಗುಡ್ಡ-ಕಣಿವೆಗಳನ್ನು ದಾಟಿ ಬೆಳ್ಗೊಳಕ್ಕೆ ಹೋಗುತ್ತಾಳೆ. ಅಲ್ಲಿ ಆತ ನಗರಕ್ಕೆ ಹೋಗಿದ್ದಾನೆ ಎನ್ನುತ್ತಾರೆ. ನಗರಕ್ಕೆ ಹೋದಾಗ ಕೊಲ್ಲೂರಿಗೆ ಹೋಗಿದ್ದಾನೆ ಎಂದವಳಿಗೆ ತಿಳಿಯುತ್ತದೆ. ಕೊಲ್ಲೂರಿಗೆ ಹೋದಾಗ ಆತ ಕಾರ್ಕಳಕ್ಕೆ ಹೋಗಿರುವ ವಿಷಯ ತಿಳಿಯುತ್ತದೆ. ಕಾರ್ಕಳದ ಬೈರನಸೂಡರು ಬೀರುಕಲ್ಕುಡನ ಒಂದು ಕೈ, ಒಂದು ಕಾಲು ಕಡಿಸಿದ ಸುದ್ದಿ ಕೇಳಿ ಮಮ್ಮಲ ಮರುಗುತ್ತಾಳೆ. 

ಅಣ್ಣ ವೇಣೂರಿನಲ್ಲಿರುವ ಸುದ್ಧಿ ಕೇಳಿ ಅಲ್ಲಿಗೆ ಧಾವಿಸುತ್ತಾಳೆ. ಅಣ್ಣನ ಮಡಿಲಿಗೆ ಹೋಗಿ ಬಿದ್ದು ‘ನಿನ್ನ ಕೈ ಏನಾಯಿತಣ್ಣಾ? ಕಾಲೇನಾಯಿತಣ್ಣಾ?’ ಎಂದು ದುಃಖಿಸುತ್ತಾಳೆ. “ಏನಮ್ಮ ತಂಗಿ ಕೇಳಿದೆಯಾ? ಕದ್ದು ಅಲ್ಲ, ಸುಳ್ಳಾಡಿ ಅಲ್ಲ. ಅಸಾಧ್ಯವಾದ ಕೆಲಸ ಮಾಡಿದ್ದಕ್ಕೆ ಕೊಡಬಾರದ ಬಹುಮಾನ ಕೊಟ್ಟರು” ಎಂದು ಬೀರುಕಲ್ಕುಡ ಖೇದದಿಂದ ಉತ್ತರಿಸುತ್ತಾನೆ.
 

ಸೇಡಿನ ಜ್ವಾಲೆಯಿಂದ ಬೆಂದ ಕಾಳಮ್ಮ ಅಣ್ಣನ ಮಡಿಲಿನಿಂದ ಎದ್ದು ನಿಂತಳು. ‘ಕಾಣುವಂತೆ ಗಾಯ ಮಾಡಿದ ಅರಸನನ್ನು ಮಾಯದಲ್ಲಿ ನೋಡಬೇಕು. ಲೋಕ ಬಿಟ್ಟು ಮಾಯಕಕ್ಕೆ ಸೇರುವ’ ಎಂದಳು. ಮಾದೇವ ಅಂಗಣದಲ್ಲಿ ಮೂರು ಸುತ್ತು ಬಂದು ಅದರಲ್ಲಿ ಮಾಯವಾದರು. ಮಾಯಕವಾದ ನಂತರ ಕಾರ್ಕಳಕ್ಕೆ ಬಂದ ಅಣ್ಣತಂಗಿ ಬೈರನ ಸೂಡನ ಅರಮನೆಯನ್ನು ಸುಟ್ಟು ಕರಕಲಾಗಿಸಿ, ದ್ವೇಷವನ್ನು ಸಾಧಿಸುವ ಮತ್ತು ದೈವತ್ವಕ್ಕೇರಿ ಆರಾಧಿಸಲ್ಪಡುವ ಕಥಾನಕ ಈ ಪಾಡ್ದನ ಕೊನೆಯ ಭಾಗದಲ್ಲಿ ಬರುತ್ತದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಈ ಪಾಡ್ದನದ ಮೊದಲ ಭಾಗದಲ್ಲಿ ಎರಡು ದುರಂತಗಳನ್ನು ಕಾಣುತ್ತೇವೆ. ಬೆಳ್ಗೊಳದ ಕೆಲಸ ಮಾಡಿದ ಶಂಭುಕಲ್ಕುಡನ ಕಾರ್ಯದಲ್ಲಿ ಇರುವ ದೋಷವನ್ನು ಮಗ ಬೀರುಕಲ್ಕುಡ ಪತ್ತೆ ಹಚ್ಚಿ ಹೇಳುತ್ತಾನೆ. ಒಂದೆಡೆ ಮಗನೆದುರು ಪರಾಭವ, ಇನ್ನೊಂದೆಡೆ ಅರಸರ ಭಯದಿಂದ ತತ್ತರಿಸಿದ ಶಂಭುಕಲ್ಕುಡ ತನ್ನ ಹೊಟ್ಟೆಯನ್ನು ಇರಿದುಕೊಳ್ಳುವ ಮೂಲಕ ದುರಂತವನ್ನಪ್ಪುತ್ತಾನೆ. ಬಹುಶಃ ತಂದೆಯ ಮರಣಕ್ಕೆ ಕಾರಣವಾದ್ದರಿಂದಲೋ ಏನೋ ಬೀರುಕಲ್ಕುಡ ಅಲ್ಲಿಂದ ತನ್ನ ಊರಿಗೆ ಹಿಂತಿರುಗದೆ ತುಳುನಾಡಿಗೆ ಹೋಗುತ್ತಾನೆ. ಇವನ ಕೆಲಸದ ಖ್ಯಾತಿಯನ್ನು ಕೇಳಿದ ಕಾರ್ಕಳದ ಬೈರನಸೂಡ ಅರಸರು ಇವನಿಂದ ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿಸುತ್ತಾರೆ. ಅನಂತರ ಈತ ಬೇರೆಲ್ಲೂ ಇಂತಹ ಮೂರ್ತಿಯ ನಿರ್ಮಾಣ ಮಾಡಬಾರದೆಂಬ ಮತ್ಸರದಿಂದ ಅವನ ಮೇಲೆ ದೌರ್ಜನ್ಯವೆಸಗುತ್ತಾನೆ. ಆತನ ಕೈಕಾಲುಗಳನ್ನು ಕತ್ತರಿಸುತ್ತಾರೆ. ತನಗಾದ ಅನ್ಯಾಯದಿಂದ ನೊಂದ ಬೀರುಕಲ್ಕುಡ ವೇಣೂರಿಗೆ ತೆರಳಿ ಅಲ್ಲಿಯ ಅರಸ ತಿಮ್ಮಣ್ಣಾಜಿಲರ ಆಣತಿಯಂತೆ, ಕೇವಲ ಒಂದು ಕೈ, ಒಂದು ಕಾಲಿನಲ್ಲಿಯೇ, ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತುವ ಅಸಾಧಾರಣ ಸಾಹಸವನ್ನು ಮೆರೆಯುತ್ತಾನೆ. ಅಣ್ಣನನ್ನು ಹುಡುಕಿಕೊಂಡು ಬಂದ ಕಾಳಮ್ಮ ಅಣ್ಣನಿಗಾದ ಅನ್ಯಾಯ ಕಂಡು ಸಿಡಿದೇಳುತ್ತಾಳೆ. ಲೌಕಿಕದಲ್ಲಿ ಸಾಧ್ಯವಾಗದ ಕಾರ್ಯವನ್ನು ಮಾಯಕದಲ್ಲಿ ಮಾಡುವುದಕ್ಕಾಗಿ ಮಾಯವಾಗುತ್ತಾರೆ.

 ಪಾಡ್ದನದಲ್ಲಿ ಅವರು ಮಾಯವಾದರೆಂದು ಹೇಳಿದ್ದರೂ ಕೂಡ, ಅರಸನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಅವರನ್ನು ಕೊಲ್ಲಿಸಿರುವ ಸಾಧ್ಯತೆ ಇಲ್ಲದಿಲ್ಲ ಅಥವಾ ಕೈಕಾಲು ಕಡಿಸಿದ್ದರಿಂದ ನಂಜೇರಿ ಬೀರುಕಲ್ಕುಡ ಮರಣವನ್ನಪ್ಪಿರಬಹುದು. ಬಹುದೂರದಿಂದ ಬಹಳ ಕಠಿಣಪ್ರಯಾಣವನ್ನು ಮಾಡಿ ಬಂದ ತಂಗಿ ಕಾಳಮ್ಮ ಅಣ್ಣನ ದುರ್ಮರಣ ವಾರ್ತೆಯನ್ನು ಕೇಳಿ ಅಥವಾ ಆತನ ದುಃಸ್ಥಿತಿಯನ್ನು ನೋಡಿದಾಗ, ಮೊದಲೇ ಬಳಲಿದ್ದ ಅವಳ ದೇಹ, ಈ ಆಘಾತವನ್ನು ಸಹಿಸಿಕೊಳ್ಳದೆ ಮರಣವನ್ನಪ್ಪಿರುವ ಸಾಧ್ಯತೆ ಇದೆ. ಏನೇ ಆದರೂ ಅವರಿಬ್ಬರೂ ಅಸಾಧಾರಣ, ಅತಿಮಾನುಷ ಸಾಹಸಿಗಳು. ಆಳುವ ವರ್ಗದವರ ಶೋಷಣೆಗೆ ಒಳಗಾಗಿ ದುರ್ಮರಣವನ್ನಪ್ಪಿರಬಹುದು ಎಂದು ಹೇಳಬಹುದು.
ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಮರಣವನ್ನಪ್ಪಿದ ಇವರು ಮುಂದೆ ದೈವತ್ವಕ್ಕೇರಿ ಆರಾಧನೆಗೊಳ್ಳುವುದು ತುಳುನಾಡಿನಲ್ಲಿ ಅಸಹಜವಾದ ವಿಚಾರವೇನೂ ಅಲ್ಲ. ಈ ವೀರರ ಮೇಲಿನ ಅನುಕಂಪ ಅಥವಾ ಸತ್ತ ನಂತರ ಇವರು ಸೇಡು ತೀರಿಸಿಯಾರು ಎಂಬ ಭಯದಿಂದ ಇವರನ್ನು ಪ್ರಸನ್ನಗೊಳಿಸುವ ಪ್ರಯತ್ನವಾಗಿ ಇವರ ಆರಾಧನೆ ಪ್ರಾರಂಭವಾಗಿರಬೇಕು. ಏನೇ ಆದರೂ ದುರಂತ ನಾಯಕರಾಗಿರುವ ಈ ಇಬ್ಬರು ಅಣ್ಣ-ತಂಗಿಯರು ಇಂದು ತುಳುನಾಡಿನಾದ್ಯಂತ ಅನುಗ್ರಹವೀಯುವ ಕಲ್ಕುಡ-ಕಲ್ಲುರ್ಟಿ ದೈವಗಳಾಗಿ ಆರಾಧನೆಯನ್ನು ಪಡೆಯುತ್ತಿದ್ದಾರೆ.
 

ಈ ದುರಂತ ಕಥಾನಕದಲ್ಲಿ ಉಕ್ತವಾಗಿರುವ ದುರ್ಘಟನೆಗಳ ಬಗ್ಗೆ ಶಾಸನಗಳಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಹಾಗಿದ್ದರೂ ಕೂಡ ಮೌಖಿಕ ಪರಂಪರೆಯಲ್ಲಿರುವ ಘಟನೆಗಳನ್ನು ಕಾಲ್ಪನಿಕ ಎಂದು ತಳ್ಳಿ ಹಾಕುವುದಕ್ಕೂ ಸಾಧ್ಯವಿಲ್ಲ. ಆದ್ದರಿಂದ ಮೌಖಿಕ ಪರಂಪರೆಯ ಹಿನ್ನೆಲೆಯಲ್ಲಿ ಐತಿಹಾಸಿಕ ವಿಚಾರಗಳನ್ನು ಕೂಲಂಕಷವಾಗಿ ವಿವೇಚಿಸಿದಾಗ ಮಾತ್ರ ಪೂರ್ಣ ಸತ್ಯದ ಗೋಚರವಾಗಬಹುದು.copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ
ಯಾಕೆಂದರೆ ಮೌಖಿಕ ಪರಂಪರೆಯಲ್ಲಿ ಬರುವ ಎಲ್ಲವೂ ಕಪೋಲಕಲ್ಪಿತವಲ್ಲ. ಎಷ್ಟೋ ವೇಳೆ ಶಾಸನ ಸೇರಿದಂತೆ ಲಿಖಿತ ದಾಖಲೆಗಳಿಗೆ ಸಮೀಪಸ್ಥವಾದ ಅನೇಕ ನೈಜ ಅಂಶಗಳು ಕಂಠಸ್ಥ ಸಂಸ್ಕೃತಿಯಲ್ಲಿ ದಾಖಲಾಗಿರುತ್ತವೆ.
ಚಂದ್ರಮ ಕವಿಯ (ಕ್ರಿ.ಶ.೧೬೪೬) ಕಾರ್ಕಳದ ಗೋಮಟೇಶ್ವರ ಚರಿತೆ’ಯಲ್ಲಿ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಭೈರವರಸನು ಶಿಲ್ಪಿಗಳನ್ನು ಸಮ್ಮಾನಿಸಿದ ವಿಚಾರವಿದೆ. ಆದರೆ ಮುಖ್ಯ ಶಿಲ್ಪಿಯ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಐತಿಹ್ಯ ಪ್ರಧಾನವಾದ ‘ಕಾರ್ಕಳ ಅರಸರ ಕೈಫಿಯತ್ತು’ ಕಾರ್ಕಳ ಗೋಮಟೇಶ್ವರ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಈ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಚಿಕ್ಕಣಾಚಾರಿಯ ಬಲದ ಕೈಯನ್ನು ಕತ್ತರಿಸಿದ ಸಂಗತಿಯನ್ನು ಉಲ್ಲೇಖಿಸಿದೆ. ಈ ಸಂಗತಿಯನ್ನು ವೇಣೂರಿನ ತಿಮ್ಮಣ್ಣಾಜಿಲರ ಕೈಫಿಯತ್ತಿನಲ್ಲೂ ಹೇಳಲಾಗಿದೆ.
 

ವೇಣೂರಿನ ತಿಮ್ಮಣ್ಣಾಜಿಲನು ಕೆತ್ತಿಸಿದ ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಬಾರದೆಂದು ಮತ್ಸರದಿಂದ ವೇಣೂರಿನ ಮೇಲೆ ದಾಳಿ ಮಾಡಿದ ಕಾರ್ಕಳದ ಭೈರವರಸ ಸೋತ ವಿಚಾರವು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಆಳುವ ವರ್ಗದವರ ಕ್ರೂರತೆ, ಅವರು ಎಸಗುವ ದೌರ್ಜನ್ಯಗಳು, ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಆದ್ದರಿಂದ ಮೌಖಿಕ ಪರಂಪರೆಯಲ್ಲಿ ಉಕ್ತವಾದ ವಿಚಾರಗಳನ್ನು ನಗಣ್ಯ ಮಾಡುವಂತಿಲ್ಲ. ಕಂಠಸ್ಥ ಪರಂಪರೆ ಹಾಗೂ ಶಾಸನವೇ ಮೊದಲಾದ ಲಿಖತ ಪರಂಪರೆ ಎರಡನ್ನೂ ಜೊತೆ ಜೊತೆಯಲ್ಲಿಟ್ಟು ವಿವೇಚಿಸಿದಾಗ ಪೂರ್ಣ ಸತ್ಯದ ಅರಿವಾಗುತ್ತದೆ. 


ಈ ಹಿನ್ನೆಲೆಯಲ್ಲಿ ನೋಡಿದಾಗ ಬೀರುಕಲ್ಕುಡ ಪಾಡ್ದನದಲ್ಲಿ ಬರುವ ಕೈಕಾಲು ಕತ್ತರಿಸಿದ ಘಟನೆ ನಿಜವಾಗಿ ನಡೆದಿರಬಹುದು. ಅಣ್ಣನ ಮೇಲಾದ ಅನ್ಯಾಯವನ್ನು ಪ್ರಶ್ನಿಸಿದ ತಂಗಿ ಕಾಳಮ್ಮನನ್ನು ಸಾಯಿಸಿರುವ ಸಾಧ್ಯತೆ ಇಲ್ಲದಿಲ್ಲ. ಈ ಇಬ್ಬರು ಅಸಹಾಯ ಶೂರರ ಮೇಲೆ ಅನುಕಂಪ ಹಾಗೂ ಅಭಿಮಾನ ಹೊಂದಿದ ತುಳುನಾಡ ಜನರು ಅವರನ್ನು ದೈವತ್ವಕ್ಕೇರಿಸಿ ಆರಾಧಿಸಿರಬಹುದು. ಕಾಕತಾಳೀಯವಾಗಿ ಸಂಭವಿಸಿದ ಕಾರ್ಕಳದ ಬೈರವರಸರ ಅವನತಿಯು ಇವರ ದೈವತ್ವದ ನಂಬಿಕೆಗೆ ಇಂಬುಕೊಟ್ಟಿರಬಹುದು.ಏನೇ ಆದರೂ ಅರಸೊತ್ತಿಗೆಯ ಆ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಅವರ ಧೈರ್ಯ ಸ್ವಾಭಿಮಾನವನ್ನು  ನೆನೆದಾಗ ತಲೆ ಬಾಗುತ್ತದೆ ಇಡಿಯ ತುಳುನಾಡು
ಕ್ರಿ ಶಕ 1432 ರಲ್ಲಿ ಬೈರವರಸ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ.ಹಾಗಾಗಿ ಕಲ್ಲುಡ ಕಲ್ಲುರ್ಟಿಯರ ಕಾಲ ಕೂಡ ಇದೇ ಆಗಿದ್ದು ಕೋಟಿ ಚೆನ್ನಯ್ಯರಿಗಿಂತ ಪ್ರಾಚೀನಕಾಲದವರು ಇವರಾಗಿದ್ದಾರೆ  

Copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು  
ಲೇ : ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದೈವ/ಭೂತವಾದ ಬ್ರಾಹ್ಮಣ ಕನ್ಯೆ ಡಾ.ಲಕ್ಷ್ಮೀ ಜಿ ಪ್ರಸಾದ್

 

ತುಳುನಾಡಿನ ದೈವ/ಭೂತವಾದ ಬ್ರಾಹ್ಮಣ ಕನ್ಯೆ -ಅಗ್ನಿ ಚಾಮುಂಡಿ ಗುಳಿಗ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 







(ಫೋಟೋಗಳು ಲೇಖಕಿಯವು)
ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ.ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ . ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ ಕಾರಣದಿಂದ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರಿಸುವ ಸಲುವಾಗಿಯೇ ಬೆಳ್ಳಾರೆಗೆ ಬಂದ ನನಗೆ ಬೆಳ್ಳಾರೆಯ ಸ್ಥಳ ದೈವ ಮಹಾಲಿಂಗೇಶ್ವರ ದೇವಾಲಯದ ಉತ್ಸವ ಸಂದರ್ಭದಲ್ಲಿ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತಕ್ಕೆ ಆರಾಧನೆ ಇರುವುದು ತಿಳಿಯಿತು.ಈ ಭೂತ ಬೆಂಕಿಯನ್ನು ತಿನ್ನುತ್ತದೆ ಇದಕ್ಕೆ ಬೆಂಕಿಯೇ ಆಹಾರ ಎಂಬ ನಂಬಿಕೆ ಅಲ್ಲಿ ಪ್ರಚಲಿತವಿತ್ತು .ಆ ತನಕ ನಾನು ಅಗ್ನಿ ಚಾಮುಂಡಿ ಗುಳಿಗನ ಹೆಸರನ್ನು ಕೂಡಾ ಕೇಳಿರಲಿಲ್ಲ. ಅದರ ಕುರಿತಾದ ಪ್ರತೀತಿ ಇನ್ನಷ್ಟು ಕುತೂಹಲ ಉಂಟು ಮಾಡಿತು .ಈ ಬಗ್ಗೆ ದೇವಳದ ಅರ್ಚಕರಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದೆ .ಆಗ "ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿದೆ" ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು .ಭೂತ ಕುರಿತು ಮಾಹಿತಿ ಭೂತ ಕಟ್ಟುವ ಕಲಾವಿದರಿಗೆ ತಿಳಿದಿರುತ್ತದೆ. ಅವರು ಹೇಳುವ ಪಾಡ್ದನದಲ್ಲಿ ಭೂತದ ಕಥೆ ಇರುತ್ತದೆ. ಆ ತನಕ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತದ ಹೆಸರನ್ನು ನಾನು ಕೇಳಿರಲಿಲ್ಲ.ಹಾಗಾಗಿ ಡಾ || ಚಿನ್ನಪ್ಪ ಗೌಡರ ,ಡಾ. ವಿವೇಕ ರೈಗಳ ಪುಸ್ತಕದಲ್ಲಿನ ಭೂತಗಳ ಪಟ್ಟಿಯನ್ನು ನೋಡಿದೆ, ಅಲ್ಲೂ ಈ ಭೂತದ ಹೆಸರು ಇರಲಿಲ್ಲ.copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನ ಭೂತಗಳು ಮಖ್ಯವಾಗಿ ಮೂರು ವಿಧ. ಒಂದು ಮಾನವ ಮೂಲದ ದೈವಗಳು. ಕೊರಗ ತನಿಯ, ಕೋಟೆದ ಬಬ್ಬು, ಮುಕಾಂಬಿ ಗುಳಿಗ, ಬಬ್ಬರ್ಯ ,ಕೋಟಿ ಚೆನ್ನಯ, ಮುದ್ದ ಕಳಲ ಮೊದಲಾದ ಭೂತಗಳು ಈ ವರ್ಗದಲ್ಲಿ ಬರುತ್ತವೆ. ಎರಡನೆಯ ವರ್ಗ ಪ್ರಾಣಿ ಮೂಲ ದೈವಗಳು ಪಂಜುರ್ಲಿ, ಪಿಲಿ ಭೂತ , ಮೊದಲಾದವು ಈ ವರ್ಗದಡಿಯಲ್ಲಿ ಸೇರುತ್ತವೆ. ಮೂರನೆಯ ವರ್ಗ ಪುರಾಣ ಮೂಲ ದೈವಗಳು ರಕ್ತೇಶ್ವರಿ ,ಗುಳಿಗ, 
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಧೂಮಾವತಿ(ಜುಮಾದಿ ), ಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ .ಅಗ್ನಿ ಚಾಮುಂಡಿ ಗುಳಿಗ ಕೂಡಾ ಒಂದು ಪುರಾಣ ಮೂಲ ದೈವ ಇರಬಹುದು ಎಂದು ನಾನು ಭಾವಿಸಿದೆ. ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ ‘ಚಾಮುಂಡಿ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿ.ಆದ್ದರಿಂದ ಅಗ್ನಿಚಾಮುಂಡಿ ಭೂತದ ಬಗ್ಗೆ ಅಧ್ಯಯನಮಾಡುವುದಕ್ಕಾಗಿ ಈ ಭೂತದ ನೇಮದಂದು ಕ್ಯಾಮೆರಾ ಮತ್ತು ರೆಕಾರ್ಡರ್ ಹಿಡಿದುಕೊಂಡು ಹೋದೆ .ರಾತ್ರಿ ಊಟದ ನಂತರ ಅಗ್ನಿ ಚಾಮುಂಡಿ ಭೂತದ ನೇಮ ಇತ್ತು .ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಂದ ಭೂತ ಕಟ್ಟುವ ಕಲಾವಿದ ಬಾಬು ಅರಂಬೂರು ಅವರು ಭೂತ ಕಟ್ಟಲು ಬೇಕಾದ ಪರಿಕರಗಳನ್ನು ಸಿದ್ಧಮಾದುತ್ತಿದ್ದರು .ಮೊದಲೇ ನನಗೆ ಅವರ ಪರಿಚಯ ಇತ್ತು.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ನಾನು ಹೋದಾಗ ನನಗೆ ಬೇಕಾದ ಮಾಹಿತಿಗಳನ್ನು ನೀಡಿದರು .ಭೂತ ಕಟ್ಟುವ ಕಲಾವಿದರು ಭೂತ ಕಟ್ಟಲು (ವೇಷ ಹಾಕಲು )ಸುರು ಮಾಡಿದ ಮೇಲೆ ಬೇರೆ ಯಾವುದೇ ವಿಚಾರಗಳನ್ನು ಮಾತಾಡುವುದಿಲ್ಲ .ಅವರಿಗೆ ಸಮಯವೂ ಇರುವುದಿಲ್ಲ. ಭೂತ ಕಟ್ಟಿ ಸಿದ್ಧವಾಗಲು ಸುಮಾರು ೩-೪ ಗಂಟೆ ಸಮಯ ಬೇಕಾಗುತ್ತದೆ .ಮೊದಲು ಒಡೆಯನಿಂದ ಭೂತ ಕಟ್ಟಲು ಆಣತಿ ಪಡೆದು ಎಣ್ಣೆ ಬೂಲ್ಯ ಪಡೆದು ಸ್ನಾನಮಾಡಿ ಬರುತ್ತಾರೆ .ಎಣ್ಣೆ ಬೂಲ್ಯ ಪಡೆಯುವಾಗ ದೈವಸ್ಥಾನದ ಎದುರು ನಿಂತು ದೈವದ ಎದುರು ನೇಮವನ್ನು ಯಾವುದೇ ಅಡ್ಡಿ ಆತಂಕ ಬಾರದಂತೆ ನೆರೆವೇರಿಸಿಕೊಡು ಎಂದು ಅರಿಕೆ ಮಾಡುತ್ತಾರೆ. ಆಗ ದೈವದ ಕಥಾನಕವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅಗ್ನಿ ಚಾಮುಂಡಿ ಗುಳಿಗ ಉಗ್ರ ಸ್ವಭಾವದ ದೈವ .ಈ ದೈವದ ಆವೇಶ ಪುರಿಥ ಅಟ್ಟಹಾಸ ಉಗ್ರ ನರ್ತನ ನೋಡುಗರ ಎದೆ ಕಂಪಿಸುವಂತೆ ಮಾಡುತ್ತದೆ .copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
 ಮಾನವ ಮೂಲದ ಈ ದೈವದ ಉಗ್ರ ಅಭಿನಯ ,ಆಕ್ರೋಶ ,ಅಟ್ಟಹಾಸಗಳು ದೈವತ್ವ ಪ್ರಾಪ್ತಿಗೆ ಮೊದಲು ನಡೆದ ಅನ್ಯಾಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ ಮುಖಕ್ಕೆ ಅರದಲ ಹಚ್ಚಿ ಮೇಲೆ ಇಟ್ಟ ಬಿಳಿಬಣ್ಣದ ಚುಕ್ಕಿ, ಹಳದಿ ಬಣ್ಣದ ಗೆರೆಗಳು. ತುಟಿಯ ಮೇಲಿನ ಗುಲಾಬಿವರ್ಣದ ಗೆರೆಗಳು ಈ ಭೂತದ ಮುಖವರ್ಣಿಕೆಯಲ್ಲಿದ್ದು ಭೂತಕ್ಕೆ ಒಂದು ವಿಶಿಷ್ಟ ಕಳೆಯಯನ್ನು ತಂದು ಚಾಮುಡಿ ಗುಳಿಗ ಬೆಂಕಿಯನ್ನು ಪ್ರವೇಶ ಮಾಡುವಾಗ ಮೈ ರೋಮಾಂಚನಗೊಳ್ಳುತ್ತದೆ .ಇತರ ಭೂತಗಳಂತೆ ಆಳೆತ್ತರದ ಅಣಿ ಇರುವುದಿಲ್ಲ ,ಅದರ ಬದಲಿಗೆ ಕಲಾತ್ಮಕವಾಗಿ ತಯಾರಿಸಿದ ತೆಂಗಿನ ತಿರಿಯ ತಲೆ ಪತ್ತವಿರುತ್ತದೆ. ಅಲ್ಲಿ ರೆಕಾರ್ಡಿಂಗ್ ಗೆ ಏನೂ ತೊಂದರೆ ಆಗಲಿಲ್ಲ. ಸ್ಥಳೀಯರು ಹಾಗೂ ಭೂತ ಕಟ್ಟಿದ ಕಲಾವಿದ ಬಾಬು ,ಕಾಂತು ಹಾಗೂ ಅವರ ಕುಟುಂಬದ ಸದಸ್ಯರು ಎಲ್ಲರು ಪೂರ್ಣ ಸಹಕಾರ ನೀಡಿದರು . ಇದರಿಂದಾಗಿ ಅವರು ಹೇಳುವ ಆ ಭೂತದ ಪಾಡ್ದನವನ್ನು ರೆಕಾರ್ಡ್ ಮಾಡಿದೆ .ಇದರಿಂದಾಗಿ ಮೂಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಗುಳಿಗ ಎಂದು ಕರೆದು ಅಲ್ಲಿ ಆರಾಧಿಸುತ್ತಿದ್ದಾರೆ. ಎಂದು ನನಗೆ ಅಲ್ಲಿ ತಿಳಿದು ಬಂತು ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು, ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ಗೊತ್ತಾಯಿತು ನನಗೆ.
ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ. ಕಷ್ಟ ಬಂದಾಗ ಗಂಡನ ಕೈ ಬಿಡಬಾರದೆಂದು, ನಾನು ಜೊತೆಗೆ ಬರುತ್ತೇನೆ ಎಂದು ಮೂಕಾಂಬಿ ಜೇವು ಹಠ ಹಿಡಿಯುತ್ತಾಳೆ.
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
ಓಹೋಯೆ ಮುಕಾಂಬಿ ಜೇವೆ ಈ ಕೇಂಡಾನ
ಯಾನಾಂಡ ಪೋಪೆ ತೆನ್ಕಾಯಿ ಸಾಂತಿ ಪೂಜೆಗ್
ಈಯಾಂಡ ನಿನ್ನಪ್ಪೆನಡೆ ಪೊವೊಡಿಯಾ
ಯಾನಾಂಡ ಪೋವಾಯೆ ಕೇಂಡಾರ
ಈರೆ ಕೈಪತ್ತಿ ದೋಸೊಗು ಬೆರಿ ಬುಡಯೆಂದಳ್
ಕನ್ನಡ ಅನುವಾದ:

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ನಾನಾದರೂ ಹೋಗುವೆ ತೆಂಕು ಶಾಂತಿ ಪೂಜೆಗೆ
ನೀನಾದರು ನಿನ್ನ ತಾಯಿ ಮನೆಗೆ ಹೋಗಬೇಕು
ನಾನಾದರು ಹೋಗಲಾರೆ ಕೇಳಿದಿರಾ
ನಿಮ್ಮ ಕೈ ಹಿಡಿದ ದೋಷಕ್ಕೆ ಬೆನ್ನು ಬಿಡಲಾರೆ, ಎಂದಳು.
ಅದು ಹೆಂಗಸು ಹೋಗಬಾರದ ರಾಜ್ಯ. ಒಂದು ಬಳ್ಳ ಬತ್ತಕ್ಕೆ ತಲೆ ಕಡಿಯುವ ಜನರು ಅವರು. ನೀನು ಬರಬೇಡ, ನಿನ್ನ ತಂದೆ ಮನೆಯಲ್ಲಿ ಬಿಟ್ಟು ಹೋಗುತ್ತೇನೆ ಎಂದು ಗಂಡ ವಾಸುಭಟ್ಟರು ಹೇಳುತ್ತಾರೆ. ಆಗ ಮುಕಾಂಬಿ ಜೇವು ಮದುವೆಯ ನಂತರ ಬಡತನವಿದ್ದರೂ, ಸಿರಿತನವಿದ್ದರೂ ಹೆಣ್ಣಿಗೆ ಗಂಡನ ಮನೆಯೇ ಸರಿ ಎಂದು ವಾದಿಸುತ್ತಾಳೆ.
ಮದಿಮೆ ಆಪುನೆಕ್ ದುಂಬು ಮದಿಮಯ

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಅಪ್ಪೆ-ಅಮ್ಮೆ ಇಲ್ಲುದ ಪೇರುನುಪ್ಪು ಆವುಯೆ
ಮದಿಮೆ ಆಯಿಬೊಕ್ಕ ಕಂಡನಿ ಇಲ್ಲ್‌ದ
ಕಣನೀರ್‌ನುಪ್ಪು ಆವುಯೆ
ಈರೆನ ಒಟ್ಟುಗು ಬರ್ಪೆಂದಲ್ ಮುಕಾಂಬಿ
ಕನ್ನಡ ಅನುವಾದ :
ಮದುವೆ ಆಗುವುದಕ್ಕೆ ಮೊದಲು ಮದುಮಗ
ತಾಯ್ತಂದೆಗಳ ಮನೆಯ ಹಾಲನ್ನವಾದೀತು
ಮದುವೆಯಾದ ಮೇಲೆ ಗಂಡನ ಮನೆಯ
ಕಣ್ಣೀರು ಅನ್ನವೂ ಆದೀತು
ನಿಮ್ಮೊಂದಿಗೆ ಬರುವೆನೆಂದಳು ಮುಕಾಂಬಿ
ಆಗ ಗಂಡ ವಾಸುಭಟ್ಟರು
ಈಲ ಬರಡ ಮುಕಾಂಬಿಯೆ ನಿನನ್ ಬುಡಯೆ ಜೇವೆ
ಇತ್ತ್ಂಡ ನಿಕ್ಕ್‌ಲ ಎಂಕ್‌ಲ ಒಂದು ಬೂಡು ಕೇಂಡಾನ
ಸೈತ್ಂಡ ನಿಕ್ಕ್‌ಲ ಎಂಕ್‌ಲ ಒಂಜಿ ಕಾಟಂದೆರ್
ಕನ್ನಡ ಅನುವಾದ:
ನೀನು ಬರಬೇಡ ಮುಕಾಂಬಿ ನಿನ್ನನ್ನು ಕೈ ಬಿಡುವುದಿಲ್ಲ ನಾನು
ಇದ್ದರೆ ನಿನಗೆ ನನಗೆ ಒಂದು ಬೀಡು
ಸತ್ತರೆ ನಿನಗೆ ನನಗೆ ಒಂದು ಚಿತೆ
ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ ಬೀಡಿಗೆ ಕರೆದೊಯ್ಯುತ್ತಾರೆ. ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ "ಕೇರಳ ಹೆಣ್ಣು ಮಕ್ಕಳು ಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ? ಕಲ್ಲಿನ ಗುಂಡಗಳಿವೆ. ? ಗುಂಡದಲ್ಲಿ ಮುಕಾಂಬಿ ಜೇವು ? ನೀವು ಹೋಗಿ ಬರುವ ತನಕ ಬಾರಿ ಜೋಕೆಯಿಂದ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಕಡಂಬಾರು ಮಯ್ಯರನ್ನು ನಂಬಿದ ವಾಸುಭಟ್ಟರು ಮುಕಾಂಬಿಗೆ ಸಮ್ಮತವಿಲ್ಲದಿದ್ದರೂ ಕಡಂಬಾರು ಮಯ್ಯರ ಬೀಡಿನಲ್ಲಿ ಬಿಟ್ಟು ಮುಂದೆ ಸಾಗುತ್ತಾರೆ.

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
  ವಾಸು ಭಟ್ಟರು (ತಂತ್ರಿ ಪಡ್ವನರು) ಹೋದ ನಂತರ, ಮುಕಾಂಬಿಜೇವು ಇರುವ ಕೋಣೆಯ ಸಮೀಪ ಬಂದು ನಾನು ನಿನ್ನ ಗಂಡ, ಬಾಗಿಲು ತೆಗೆ ಎಂದು ಹೇಳುತ್ತಾರೆ. ಆಗ ಮುಕಾಂಬಿ ನೀನು ನನ್ನ ಗಂಡನ್ನಲ್ಲ ಎಂದು ಹೇಳುತ್ತಾಳೆ. ಆಗ ರಾತ್ರಿ ಇಬ್ಬನಿ ಬಿದ್ದು, ಹಗಲಿನ ಬಿಸಿಲು ಬಡಿದು ಸ್ವರ ಬದಲಿದೆ ಎಂದು ಮಯ್ಯರು ಸುಳ್ಳು ಹೇಳುತ್ತಾರೆ. ಆಗ ಮುಕಾಂಬಿ ಸುಳ್ಳು ಹೇಳಬೇಡಿ, ನನ್ನ ಗಂಡ ಬರುವಾಗ ಆರಿದ ನಂದಾದೀಪ ಉರಿದೀತು, ಮಲಗಿದ ಹಸುಳೆಗಳು ಎಚ್ಚೆತ್ತು ಕೂಗಿಯಾವು. ಕೊಟ್ಟಿಗೆ ಕರುಗಳು ಅರಚಿಯಾವು, ಬಂಗಾರದ ಬಾಚಣಿಗೆ, ಬೆಳ್ಳಿ ಸೀರಣಿಗೆ ತರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವ ಮಾತಿಗೂ ಬಾಗಿಲು ತೆಗೆಯುವುದಿಲ್ಲ, ಅಂದು ಸೊಸೆ ಎಂದು ಹೇಳಿದಿರಿ ಈಗ ಮೋಸ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಮಯ್ಯರು ಬಾಗಿಲನ್ನು ತುಳಿದು ಒಡೆದು ಒಳ ಬರುತ್ತಾರೆ. ಕಡಂಬಾರ ಮಯ್ಯರು ನಂಬಿಕೆಗೆ ದ್ರೋಹ ಮಾಡಿ ಬಲಾತ್ಕಾರದಿಂದ ಮುಕಾಂಬಿ ಜೇವಿನ ಸಂಗ ಮಾಡುತ್ತಾರೆ.ಅಸಹಾಯಕ ಹುಡುಗಿ ಮೂಕಾಂಬಿ ಜೇವು ಕಡಮ್ಬಾರ ಮಯ್ಯನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .ಅವಳನ್ನು ಬಲಾತ್ಕರಿಸಲು ಬಂದಾಗ ನನ್ನ ಮೈ ಮುಟ್ಟಿದರೆ ನಿಮ್ಮ ತಾಯಿಯನ್ನು ಮುಟ್ಟಿದ ದೋಷ ಇದೆ ಎಂದು ಹೇಳುತ್ತಾಳೆ ಆಗ ಅವನು ತಾಯಿ ಮುಟ್ಟಿದ ದೋಷ ತಾಯ ಎದೆ ಹಾಲು ಕುಡಿದಾಗ ಹೋಗುತ್ತದೆ ಎನ್ನುತ್ತಾನೆ .ನನ್ನ ಮೈ ಮುಟ್ಟಿದರೆ ಕಾಶಿಯಲ್ಲಿ ಕಪಿಲೆ ಹಸುವನ್ನು ಕೊಂದ ದೋಷ ಬರುವುದು ಎಂದು ಹೇಳಿದಾಗ ಆತ ಕಪಿಲೆ ಕೊಂದ ದೋಷವನ್ನು ಕಾಶಿಗೆ ಹೋಗಿ ಕಳೆದು ಕೊಳ್ಳುತ್ತೇನೆ ಎಂದು ಹೇಳಿ ಅವಳನ್ನು ಬಲಾತ್ಕಾರದಿಂದ ಭೋಗಿಸುತ್ತಾನೆ. ಅವಳ ಪ್ರತಿರೋಧವನ್ನು ಲೆಕ್ಕಿಸದೆ ಅವಳ ದೇಹ ಸಂಗವನ್ನು ಮಾಡುತ್ತಾರೆ.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ಸ್ವಲ್ಪ ಸಮಯ ಕಳೆದಾಗ ಅವಳು ಗರ್ಭಿಣಿಯಾಗುತ್ತಾಳೆ .ಒಂದು ದಿನ ಅವಳು ಕಟ್ಟಡ ನೀರಿಗೆ ನೀರು ತರಲೆಂದು ಹೋಗುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರು ಅವಳನ್ನು ನೋಡಿ ಕಡಮ್ಬಾರ ಮಯ್ಯನಿಂದಾಗಿ ಇವಳು ಹೊಟ್ಟೆ ಹೊತ್ತು ಕೊಂಡಿದ್ದಾಳೆ ಎಂದು ಅಪಹಾಸ್ಯ ಮಾಡಿ ನಗಾಡುತ್ತಾರೆ .ಲೋಕ ನಿಂದೆಯನ್ನು ತಾಳಲಾರದೆ ಮೂಕಾಂಬಿ ಜೇವು ಪ್ರಾಣ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
ಮುಕಾಂಬಿ ಜೇವು ತನ್ನ ಗಂಡನ ಮನೆಯ ನಂಬಿಕೆಯ ದೈವ ಗುಳಿಗನನ್ನು ನೆನೆದು ಕಡಂಬಾರ ನೀರಿನ ಕಟ್ಟಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಕಾಂಬಿಜೇವು ಕಡಂಬಾರ ಅಣೆಕಟ್ಟಿಗೆ ಹೋಗಿ ಮೂರು ಮುಳುಗು ಹಾಕಿ, ಮುಕಾಂಬಿ ಗುಳಿಗ ಇದ್ದಲ್ಲಿ ಗಿಳಿ ಚಾಮೆ ಬತ್ತದ ತೆನೆಯನ್ನು ತೆಗೆದುಕೊಂಡು ಹೋಗುವಂತೆ (ಗಿಣಿ ಚಾಮೆದ ಕುರಲುನು ಕೊಂಡೋಪಿ ಲೆಕ್ಕೋ ಎನ್ನನು ಕೊಂಡೋವೊಡು) ನನ್ನ ಪ್ರಾಣ ತೆಗೆಯಲಿ. ನನ್ನ ಗಂಡ ಬಂದ ಬಳಿಕ ಸತ್ಯವನ್ನು ಗಿಳಿ ನುಡಿದಂತೆ ನುಡಿಯಬೇಕು ಎಂದು ಹೇಳಿ ನೀರಿನಲ್ಲಿ ಮುಳುಗುತ್ತಾಳೆ.. ಮೂಕಾಂಬಿ ನೀರಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ ಕಡಂಬಾ ಮಯ್ಯ ಏನು ಅರಿಯದವನಂತೆ ಮುಕಾಂಬಿಜೇವಿನ ತಂದೆ ಮುದ್ದುಲ್ಲ ಭಟ್ಟರಿಗೆ ಹಾಗೂ ತಾಯಿ ಅರ ಕ್ಕೆ ಮದಿಮಾಳರಲ್ಲಿಗೆ ಆಳುಗಳನ್ನು ಕಳುಹಿಸಿ, "ಪಡ್ವನರು ಮುಕಾಂಬಿಯನ್ನು ಕಡಂಬಾರ ಬೀಡಿನಲ್ಲಿ ನಿಲ್ಲಿಸಿದ್ದು, ಅವಳು ಹುಡುಗಿ ಹೋಗಿ ಹೆಂಗಸಾಗಿದ್ದಾಳೆ. ನೀವು ಕರೆದುಕೊಂಡು ಹೋಗಿ "ಎಂದು ಹೇಳಿ, ಕಳುಹಿಸುತ್ತಾರೆ. ತಂದೆ-ತಾಯಿ ಸಂತೋಷದಿಂದ ಅವಲಕ್ಕಿಯ ಮುಡಿ, ತೆಂಗಿನಕಾಯಿ ತೆಗೆದುಕೊಂಡು ಹೊರಡುತ್ತಾರೆ.

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಇತ್ತ ತಂತ್ರಿ ಪಡ್ವನರಿಗೆ(? ) ಕನಸಿನಲ್ಲಿ ಗಳಿಗೆಯೊಳಗೆ ಬರಬೇಕೆಂದು ಗುಳಿಗ ದೈವ ತಿಳಿಸುತ್ತದೆ. ಪಡ್ವನರು ಕಡಂ ರ ಬೀಡಿಗೆ ಬಂದು ನೋಡುವಾಗ ಮುಕಾಂಬಿಜೇವಿನ ಜೀವ ಹೋಗಿದೆ. ತಲೆ ತಲೆ ಬಡಿದುಕೊಂಡು ಅಳುತ್ತಾರೆ. ಪಡ್ವನರು ಕಾಷ್ಠ ಸಿದ್ಧಪಡಿಸಿ, ಮೂರು ಸುತ್ತು ಬಂದು ಮುಕಾಂಬಿಯ ದೇಹವನ್ನು ಚಿತೆಯಲ್ಲಿ ಇರಿಸುತ್ತಾರೆ. ಯಾರು ಮುಕಾಂಬಿಯೇ ಕೇಳಿದೆಯಾ? ಇದ್ದರೆ ನನಗೂ ನಿನಗೂ ಒಂದೇ ಬೀಡು, ಸತ್ತರೆ ನನಗೂ ನಿನಗೂ ಒಂದೇ ಕಾಷ್ಠ. ಮೋಸ ಮಾಡಿ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ, ತಗಟೆ ಮೊಳೆಯಲಿ ಎಂದು ಶಾಪ ಕೊಟ್ಟ ಪಡ್ವನರು ಚಿತೆಗೆ ಹಾರುತ್ತಾರೆ.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ಏರ್‌ಯ ಮುಕಾಂಬಿಯೆ ಕೇನಿದನ
ಇತ್ತ್ಂಡ ನಿಕ್ಕೆಂಕ್ ಒಂಜಿ ಬೂಡು
ಸೈತ್ಂಡ್ ನಿಕ್ಕೆಂಕ್ ಒಂಜಿ ಕಾಟ
ಮೋಸಗಾತರ ಮಲ್ತಿ ಮಯ್ಯೆರೆ ಬೂಡುಗು ಕೊಟ್ಟು ಗುದ್ದೋಲಿ ಬೂರಡು
ತಜಂಕ್ ಕೊಡಿಪಡ್ ಪಂಡ್‌ದ್
ಕೊರನ ಪಾಪ ಕೊರಿಯೆರ್ ಜಂತಿರಿ ಪಡ್ವನಾರ್
ಕಾಟೊಗು ಮೂಜಿ ಸುತ್ತು ಬತ್ತೆರ್
ಕಾಟೊಗು ದಿಡ್‌ಕಪ್ಪಲಾಗಿಯೆರ್
ಕಾಟೊಡು ಪಡ್ವನಾಯೆರ್‌ಲ ಮುಕಾಂಬಿಲ ಪೊತ್ತೊವೆರ್
ಕನ್ನಡ ಅನುವಾದ:
ಓ ಮುಕಾಂಬಿಯೇ ಕೇಳಿದೆಯ
ಇದ್ದರೆ ನನಗೂ ನಿನಗೂ ಒಂದೇ ಬೀಡು
ಸತ್ತರೆ ನನಗೂ ನಿನಗೂ ಒಂದೇ ಕಾಷ್ಟ
ವಿಶ್ವಾಸಘಾತ ಮಾಡಿದ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ
ತಗತೆ ಬೆಳೆಯಲಿ ಎಂದು
ಕೊಡಬಾರದ ಶಾಪ ಕೊಟ್ಟರು ತಂತ್ರಿ ಪಡ್ವನಾರ್
ಕಾಷ್ಠಕ್ಕೆ ಮೂರು ಸುತ್ತು ಬರುವರು

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಕಾಷ್ಠಕ್ಕೆ ದಡಕ್ಕನೆ ಹಾರುವರು
ಕಾಷ್ಠದಲ್ಲಿ ವಾಸುಭಟ್ಟರು ಮುಕಾಂಬಿಯು ಉರಿಯುವರು
ಹೆಂಡತಿಯ ಮೇಲಿನ ಪ್ರೀತಿಯಿಂದ ಗಂಡ ವಾಸುಭಟ್ಟರು ಹಾರಿ ಸಾಯುತ್ತಾರೆ. ದುಃಖ ತಡೆಯದ ಮುಕಾಂಬಿಯ ತಾಯಿ-ತಂದೆಯ ಚಿತೆಗೆ ಹಾರಿ ಸಾಯುತ್ತಾರೆ. ಮುಕಾಂಬಿ ತೀರಿಕೊಂಡ ಕ್ರಿಯೆ ಕಳೆದ ಮೂರನೆಯ ದಿನ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳುತ್ತದೆ. ತಗಟೆ ಬೆಳೆಯುತ್ತದೆ. ಸತ್ತ ಮುಕಾಂಬಿಜೇವು ದೈವವಾಗಿ ದ್ವೇಷ ತೀರಿಸಿದರೆ ಎಂಬ ಭಯದಿಂದ ಅವಳ ಆರಾಧನೆ ಆರಂಭವಾಗಿರಬೇಕು. ಕಡಂಬಾರ ಮಯ್ಯರ ಬೀಡನ್ನು ಮುಕಾಂಬಿಯ ಬಂಧುಗಳು ಹಾಳು ಮಾಡಿರಬಹುದು ಅಥವಾ ಕಾಲಾಂತರದಲ್ಲಿ ಹಾಳು ಬಿದ್ದಿರಬಹುದು. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.
ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಪಡೆಯುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ . ಇಲ್ಲಿ ಅಂತು ಮೂಕಾಂಬಿ ಕಡಮ್ಬಾರು ಮಯ್ಯನಿಂದ ದೌರ್ಜನ್ಯಕ್ಕೆ ಒಳಗಾದದ್ದು ಮಾತ್ರವಲ್ಲ ತನ್ನ ಗಂಡನ ಮನೆಯ ಗುಳಿಗನನ್ನು ನಂಬಿ ಕಟ್ಟದ ನೀರಿಗೆ ಹಾರಿದ್ದಾಳೆ ಆದ್ದರಿಂದ ಅವಳು ಗುಳಿಗ ದೈವದ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದದ್ದು ಅಸಹಜ ವಿಚಾರವೇನು ಅಲ್ಲ. ಅವಳು ಕಟ್ಟದ ನೀರಿಗೆ ಹಾರುವುದು ಪುರುಷ ದೌರ್ಜನ್ಯಕ್ಕೆ ತೋರಿದ ಪ್ರತಿಭಟನೆಯಾಗಿದೆ. ಅದರೊಂದಿಗೆ ಗುಳಿಗ ದೈವದ ನಂಬಿಕೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಅವಳು ಗುಳಿಗನ ಸೇರಿಗೆಯ ದೈವವಾಗಿ ಮೂಕಾಂಬಿ ಗುಳಿಗನಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
 
ವೈದಿಕ ಪರಂಪರೆಯ ದೇವರುಗಳ ಪ್ರಭಾವದಿಂದಾಗಿ ಮೂಕಾಂಬಿ ಗುಳಿಗ ಅಗ್ನಿ ಚಾಮುಂಡಿ ಗುಳಿಗನಾಗಿ ಪರಿವರ್ತನೆ ಹೊಂದಿದೆ. ಮೂಕಾಂಬಿ ಎಂಬ ಹೆಸರನ್ನು ಅನುಲಕ್ಷಿಸಿ ಈ ದೈವದ ಆರಾಧನೆಯ ಸಂದರ್ಭದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಿಯ ಪುರಾಣದ ಕಥೆಯನ್ನು ಸೇರಿಸಿ ಹೇಳುತ್ತಾರೆ .ಆದರೆ ಮಾರಿ ಸೂಟೆಯ ಮೇಲೆ ನಡೆಯುವಾಗ ಮುಕಾಂಬಿ ಗುಳಿಗನ ಮೂಲ ಪಾಡ್ದನವನ್ನು ಹಾಡುತ್ತಾರೆ. ಚಾಮುಂಡಿಯೊಂದಿಗೆ ಸಮನ್ವಯಗೊಂಡಿರುವುದರಿಂದ ಮೂಕಾಂಬಿ ಗುಳಿಗನ ಸೇರಿಗೆಯ ದೈವವಾಗಿದ್ದರೂ ಕೂಡ ಕಾಲಾಂತರದಲ್ಲಿ ಗುಳಿಗನನ್ನು ಮೀರಿ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ . ವೈದಿಕ ಪ್ರಭಾವದಿಂದ ಮುಂದೊಂದು ದಿನ ಅಗ್ನಿ ಚಾಮುಂಡಿ ದೈವದ ಮೂಲವಾಗಿರುವ ಮೂಕಾಂಬಿ ಜೇವಿನ ಕಥಾನಕ ಜನ ಮಾನಸದಿಂದ ದೂರವಾಗಿ ಬಿಡುವ ಸಾಧ್ಯತೆ ಇದೆ. ಅಗ್ನಿ ಚಾಮುಂಡಿ ಶುದ್ಧ ವೈದಿಕ ದೇವತೆಯಾಗಿ ಪರಿಗಣಿಸಲ್ಪಡುವ ದಿನಗಳು ಹೆಚ್ಚು ದೂರವಿಲ್ಲ.
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್