ಐತಿಹಾಸಿಕ ಮಹತ್ವದ
ಜಾನಪದ ಅಧ್ಯಯನ ಗ್ರಂಥ
ಡಾ. ಬಿ. ಜನಾರ್ದನ ಭಟ್
ತುಳು ಜಾನಪದ ಸಂಶೋಧಕಿ, ಮುಖ್ಯವಾಗಿ ದೈವಾರಾಧನೆಯ ಬಗ್ಗೆ ಅಭೂತಪೂರ್ವ ಕ್ಷೇತ್ರಕಾರ್ಯ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿರುವ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಮಹತ್ವದ ಕೃತಿ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಗೆ ಒಂದು ನುಡಿಸೇಸೆ ಇದು.
ಈ ಕೃತಿಯ ಹಿಂದಿರುವ ಸಂಶೋಧನೆ, ದಾಖಲಾತಿ, ಅಧ್ಯಯನ, ವಿಶ್ಲೇಷಣೆ, ಬರವಣಿಗೆ ಮತ್ತು ಗ್ರಂಥರಚನೆ – ಈ ಪ್ರಕ್ರಿಯೆಯೇ ಒಂದು ಐತಿಹಾಸಿಕ ಮಹತ್ವದ ಘಟನೆÀ. ತುಳುನಾಡಿನಲ್ಲಿ ಸಾವಿರದಷ್ಟು ದೈವ ಭೂತಗಳಿಗೆ ಆರಾಧನೆ ಇದೆ ಎನ್ನುವುದು ಒಂದು ಅಂದಾಜಿನÀ ಹೇಳಿಕೆಯಾಗಿ ಚಾಲ್ತಿಯಲ್ಲಿತ್ತು. ಮತ್ತು ಅದು ಸರಿಯೂ ಆಗಿತ್ತು. ಆದರೆ ಅದನ್ನು ಅಧ್ಯಯನದ ಮೂಲಕ ಖಚಿತಪಡಿಸಲಾಗಿರಲಿಲ್ಲ. ಅದನ್ನು ಸಂಶೋಧನೆಯ ಮೂಲಕ ಖಚಿತ ಪಡಿಸಿ, ದಾಖಲಿಸಿರುವ ಕಾರಣಕ್ಕಾಗಿ ಇದು ಈ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮಹತ್ವದ ಪ್ರಕಟಣೆಯಾಗಿದೆ. ಎರಡನೆಯದಾಗಿ ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಾಧಾರಿತ ಕೃತಿಗಳ ಪ್ರಕಟಣೆಯ ಆಯಾಮವನ್ನು ನೋಡಿದಾಗಲೂ ಇದೊಂದು ಮಹತ್ವದ ಹೆಜ್ಜೆಯಾಗಿದೆ. ವಿಶ್ವಕೋಶದ ಮಾದರಿಯಲ್ಲಿ ದೈವ, ಭೂತಗಳ ಹಿನ್ನೆಲೆ, ಕಥೆ, ಮಹತ್ವ ಇತ್ಯಾದಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ನೀಡಿರುವುದು ಮುಂದಿನ ಅಧ್ಯಯನಕ್ಕೆ ಸಹಾಯಕವಾಗಿದೆ.
ಖ್ಯಾತ ತುಳು-ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರು ಡಾ. ಲಕ್ಷ್ಮೀ ಪ್ರಸಾದ್ ಅವರ ಗ್ರಂಥವೊಂದಕ್ಕೆ (‘ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಮುನ್ನುಡಿ ಬರೆಯುತ್ತಾ ತುಳುನಾಡಿನ ದೈವ ಭೂತಗಳ ‘ಸಾವಿರದ ಲೆಕ್ಕಾಚಾರದ’ ದಾರಿಯನ್ನು ಹೀಗೆ ಗುರುತಿಸಿದ್ದರು: “ಎ.ಸಿ ಬರ್ನೆಲ್ (1894-1897) ನಡೆಸಿದ ಅಧ್ಯಯನದ ಫಲವಾಗಿ, ‘ಖಿhe ಆeviಟ ತಿoಡಿshiಠಿ oಜಿ ಣhe ಖಿuಟuvಚಿs’ ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ (1985) ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ 274 (ಪು.35-38) ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ (1990) ಅವರ, ‘ಭೂತಾರಾಧನೆ ಜಾನಪದೀಯ ಅಧ್ಯಯನ’ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ (ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ (2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
“ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ‘ಕಂಡಿಗೆತ್ತಾಯ’ (ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’ (ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ. ತುಳುವರು ಸಾವಿರದೊಂದು (ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ. ಲಕ್ಷ್ಮೀ ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು. ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.”
ಡಾ. ಲಕ್ಷ್ಮೀ ಪ್ರಸಾದ್ ಅವರು ಬರ್ನೆಲ್, ಮೇನರ್ ಅವರ ದಾರಿಯಲ್ಲಿ ನಡೆದಿದ್ದಾರೆ ಎಂದು ಡಾ. ವಾಮನ ನಂದಾವರ ಹೇಳಿದ್ದರು (‘ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ’). ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಗ್ರಂಥ ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ ಪ್ರತಿμÁ್ಠನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಡಾ. ಲಕ್ಷ್ಮೀ ಪ್ರಸಾದ್ ಅವರು ಸಲ್ಲಿಸಿದ ಪಿಎಚ್.ಡಿ. ಸಂಪ್ರಬಂಧ. ಆ ಗ್ರಂಥಕ್ಕೆ ಮುನ್ನುಡಿ ಬರೆಯುತ್ತಾ, ಸಾವಿರ ದೈವಗಳ ಹೆಸರುಗಳ ಪಟ್ಟಿಗೆ ಇರುವ ಮಹತ್ವವನ್ನು ಡಾ. ವಾಮನ ನಂದಾವರ ಅಂದು ಸೂಚಿಸಿದ್ದರು. ಮುಂದೆ ನಡೆಯಬೇಕಾದ ದಾರಿಯನ್ನು ಸೂಚಿಸಿದ್ದರು. ಡಾ. ಲಕ್ಷ್ಮೀ ಪ್ರಸಾದ್ ಅದನ್ನು ತಮಗೆ ಮುಂದಿನ ಅಧ್ಯಯನಕ್ಕೆ ತೋರಿದ ದಾರಿ ಎಂದು ಪರಿಗಣಿಸಿ ಆ ನಿಟ್ಟಿನಲ್ಲಿ ಸಂಶೋಧನೆ, ಮಾಹಿತಿ ಸಂಗ್ರಹವನ್ನು ಮುಂದುವರಿಸಿ ಈ ಗುರಿಯನ್ನು ತಲುಪಿದ್ದಾರೆ, ಮತ್ತು ಇನ್ನೂ ಸ್ವಲ್ಪ ಮುಂದೆಯೇ ಹೋಗಿದ್ದಾರೆ. ಈ
ಕೃತಿಯಲ್ಲಿ ಸಾವಿರದ ಇನ್ನೂರರಷ್ಟು ದೈವಗಳ ಮಾಹಿತಿ ನೀಡಿ, ಕಾರವಾರದಿಂದ ಆರಂಭಿಸಿ ಕಣ್ಣನ್ನೂರು ತನಕದ ಕರಾವಳಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂಬುದನ್ನು ದಾಖಲಿಸಿದ್ದಾರೆ.
“..... ‘ತುಳುನಾಡಿನ ಅಪೂರ್ವ ಭೂತಗಳು’, ‘ಬೆಳಕಿನೆಡೆಗೆ’ ಸಂಶೋಧನಾ ಲೇಖನಗಳು. ‘ತುಳು ಜನಪದ ಕವಿತೆಗಳು’, ‘ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು’, ‘ಕಂಬಳ ಕೋರಿ ನೇಮ’ .... ಹೀಗೆ ಒಟ್ಟು ಹದಿನಾಲ್ಕು ಕೃತಿಗಳು ಇವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನ’ಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ....... ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ. ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ.” - ಎಂದು ಡಾ. ವಾಮನ ನಂದಾವರ ಅವರು ಇವರ ಸಾಧನೆಯ ಮಹತ್ವವನ್ನು, ಆ ದಾರಿಯಲ್ಲಿರುವ ಸವಾಲು, ಸಾಧ್ಯತೆಗಳನ್ನು ಗುರುತಿಸಿದ್ದಾರೆ. ಈ ಸಂಪುಟಕ್ಕೂ ಇವೇ ಮಾತುಗಳು ಸಲ್ಲುವುದರಿಂದ ಡಾ. ನಂದಾವರ ಅವರ ಮಾತುಗಳನ್ನೇ ನೆನಪಿಸಿದ್ದೇನೆ.
ತುಳು ನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಖಚಿತವಾದ ಉತ್ತರ ಸಿಗುತ್ತಿರಲಿಲ್ಲ. ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರು ಸತತ ಅಧ್ಯಯನ ಮಾಡಿ 2016 ರಲ್ಲಿ 1435 ದೈವಗಳ ಪಟ್ಟಿ ಮಾಡಿ ‘ಅಣಿ ಅರದಳ ಸಿರಿ ಸಿಂಗಾರ’ ಪುಸ್ತಕದಲ್ಲಿ ಪ್ರಕಟಿಸಿದರು. (ನಾನೂ ಆ ಗ್ರಂಥದ ಸಂಪಾದಕ ಮಂಡಳಿಯಲ್ಲಿದ್ದೆ). ಇತರ ಕೆಲವು ಅಪರೂಪದ ದೈವಗಳ ಕುರಿತ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಕೆಲವು ಲೇಖನಗಳೂ ಅದರಲ್ಲಿದ್ದವು. ಅವರು ಅಂತರ್ಜಾಲದಲ್ಲಿರುವ ತಮ್ಮ ಜಾಲತಾಣದಲ್ಲಿಯೂ ದೈವ ಭೂತಗಳ ಮತ್ತು ವಿಶಿಷ್ಟ ಆರಾಧನೆಗಳ ಕುರಿತ ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ.
ಪ್ರಸ್ತುತ ಪುಸ್ತಕ ಇವೆಲ್ಲವುಗಳಿಗಿಂತ ಮುಖ್ಯವಾದದ್ದು ಮತ್ತು ಶಾಶ್ವತವಾದದ್ದು.
ಕಾರವಾರದಿಂದ ಕಣ್ಣಾನೂರು ತನಕ, ಕೊಡಗು ಸೇರಿದಂತೆ ಕರ್ನಾಟಕದ ಪಶ್ಚಿಮ ಕರಾವಳಿಯ ಕನ್ನಡ, ತುಳು, ಮಲೆಯಾಳ, ಕೊಡವ ಪರಿಸರದ ದೈವಗಳ ಅಧ್ಯಯನವನ್ನು ಮಾಡಿ ಮಾಹಿತಿ ಸಂಗ್ರಹಿಸಿರುವುದರಿಂದ ಇದಕ್ಕೆ ‘ಕರಾವಳಿಯ ಸಾವಿರದೊಂದು ದೈವಗಳು’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ‘ಸಾವಿರ’, ‘ಸಾವಿರದೊಂದು’, ‘ಸಾವಿರಾರು’ ಮುಂತಾದ ಪ್ರಯೋಗಗಳಲ್ಲಿ ‘ಸಾವಿರ’ ಅನ್ನುವುದು ಸಂಖ್ಯಾವಾಚಕ ಶಬ್ದವಲ್ಲ – ಅಥವಾ ಅದು ಮಾತ್ರವಲ್ಲ - ಗುಣವಾಚಕವೂ, ಆಲಂಕಾರಿಕವೂ ಆದ ಶಬ್ದ. ತುಳುವಿನಲ್ಲಿಯೂ ಅದೇ ರೀತಿಯ ಆಲಂಕಾರಿಕ ಶಬ್ದ ಅದು. ‘ಸಾರತ್ತೊಂಜಿ ದೈವೊಲು’ ಎಂಬುದು ವಾಡಿಕೆಯ ಮಾತು. ಇದರರ್ಥ ಸಾವಿರದ ಒಂದು ದೈವಗಳು ಮಾತ್ರ ಇವೆ ಎಂದರ್ಥವಲ್ಲ. ಹೆಚ್ಚೂ ಇರಬಹುದು ಕಡಿಮೆಯೂ ಇರಬಹುದು.
ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರು ಯಾವ ಅನುದಾನವನ್ನೂ ಪಡೆಯದೆ ತಮ್ಮ ಸ್ವಂತ ಹಣ, ಸಮಯ ಮತ್ತು ಶ್ರಮಗಳನ್ನು ಈ ಕೆಲಸಕ್ಕೆ ನಿರಂತರ ಇಪ್ಪತ್ತು ವರ್ಷಗಳ ಕಾಲ ಧಾರೆಯೆರೆದುದರ ಪರಿಣಾಮವಾಗಿ ದೊಡ್ಡ ಕಾರ್ಯ ಅವರಿಂದ ಸಾಧ್ಯವಾಗಿದೆ. ಇದರಲ್ಲಿ ಅವರು ಕರಾವಳಿಯಲ್ಲಿ ಆರಾಧನೆ ಇರುವ 1250 ರಷ್ಟು ದೈವಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿನ ಮಾಹಿತಿಯನ್ನು ದೈವನರ್ತಕ ಕಲಾವಿದರು ಹೇಳುವ ಪಾಡ್ದನಗಳನ್ನು, ಐತಿಹ್ಯಗಳನ್ನು ಮತ್ತು ಇತಿಹಾಸದ ಆಕರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಿ ಬರೆದಿದ್ದಾರೆ. ಕಾಡ್ಯನಾಟ, ಪಾಣರಾಟ, ಸಪರ್ಂಕಳಿ, ಸಪರ್ಂತುಳ್ಳಲ್, ನಾಗಮಂಡಲಗಳಲ್ಲಿ ಆರಾಧನೆ ಪಡೆವ ದೈವಗಳ ಬಗ್ಗೆ ಕೂಡ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ. ಜೊತೆಗೆ ಭೂತ ಕೋಲವನ್ನು ಹೋಲುವ ಶ್ರೀಲಂಕಾದ ಕೋಲದ ಬಗ್ಗೆ ಮಾಹಿತಿ ನೀಡಿದ್ದಾರೆ. ದೈವಗಳ ಅಪರೂಪದ ಪೋಟೋಗಳು ಇವೆ.
ಹಿಂದೆ ಪ್ರಕಟಿತ ಕೃತಿಗಳಲ್ಲಿ ಅಧ್ಯಯನಕಾರರು ದಾಖಲಿಸಿರುವ ಮಾಹಿತಿಗಳನ್ನು ಬಳಸಿಕೊಂಡು ಡಾ. ಲಕ್ಷ್ಮೀ ಪ್ರಸಾದ್ ತಮ್ಮ ಬರಹಗಳ ಸೌಧವನ್ನು ಕಟ್ಟಿದ್ದಾರೆ. ಸುಮಾರು ಮುನ್ನೂರು ಮುನ್ನೂರೈವತ್ತು ದೈವಗಳ ಮಾಹಿತಿ ಮೊದಲೇ ದಾಖಲಾಗಿತ್ತೆಂದು ಗುರುತಿಸಬಹುದು. ಅಂದರೆ ಇವರು ತಮ್ಮ ಸ್ವಂತ ಅಧ್ಯಯನದಿಂದ ಸಂಗ್ರಹಿಸಿದ ಏಳುನೂರ ಐವತ್ತು ,ಎಂಟು ನೂರು ದೈವಗಳ ಮಾಹಿತಿಯನ್ನು ಸೇರಿಸಿ ಈ ಕಾರ್ಯಕ್ಕೆ ಒಂದು ಸಮಗ್ರತೆಯನ್ನು ತಂದುಕೊಟ್ಟಿದ್ದಾರೆ. ಇದರಲ್ಲಿ ಈ ತನಕ ಹೆಸರು ಕೂಡ ಎಲ್ಲೂ ದಾಖಲಾಗದ, ಅಧ್ಯಯನವಾಗದ ಅನೇಕ ದೈವಗಳ ಹುಟ್ಟು ಮತ್ತು ಪ್ರಸಾರವೂ ದಾಖಲಾಗಿದೆ.
ಇಲ್ಲಿ ಡಾ. ಲಕ್ಷ್ಮೀ ಪ್ರಸಾದ್ ಅವರು ಇಲ್ಲಿ ದೈವಗಳ ಪರಿಚಯ ಲೇಖನಗಳ ಜೋಡಣೆಗೆ ಎರಡು ಮಾರ್ಗಗಳನ್ನು ಅನುಸರಿಸಿದ್ದಾರೆ. ಒಂದು - ಅಕಾರಾದಿ ವರ್ಗೀಕರಣ ಮಾಡದೆ ಈ ದೈವಗಳನ್ನು ಚಾಮುಂಡಿ ಮತ್ತು ಸೇರಿಗೆ ದೈವಗಳು, ಗುಳಿಗ ಮತ್ತು ಸೇರಿಗೆ ದೈವಗಳು, ಭಗವತಿ ಮತ್ತು ಸೇರಿಗೆ ದೈವಗಳು, ಧೂಮಾವತಿ ದೈವಗಳು, ಪಂಜುರ್ಲಿ ಮತ್ತು ಸೇರಿಗೆ ದೈವಗಳು, ಹಾಯ್ಗುಳಿ ಮತ್ತು ಸೇರಿಗೆ ದೈವಗಳು, ಬ್ರಾಹ್ಮಣ ಮೂಲದ ದೈವಗಳು, ಮುಸ್ಲಿಂ ಮೂಲದ ದೈವಗಳು, ಹಿರಿಯಾಯ ದೈವಗಳು, ಮೂಲ ಪುರುಷ / ಕಾರಣವರ್ ದೈವಗಳು ಇತ್ಯಾದಿಯಾಗಿ ಬೇರೆ ಬೇರೆ ಅಧ್ಯಾಯಗಳ ಮೂಲಕ ವರ್ಗೀಕರಿಸಿರುವುದು. ಇದು ಒಂದು ಹೊಸ ಉಪಕ್ರಮ; ಈ ವಿಷಯದ ಅಧ್ಯಯನಕ್ಕೆ ಅನುಕೂಲವಾಗಿದೆ. ಎರಡು – ಮೇಲಿನಂತೆ ಯಾವುದೇ ಗುಂಪಿಗೆ ಸೇರದ ದೈವಗಳ ಬಗ್ಗೆ ಅಕಾರಾದಿಯಾಗಿ ಬರೆದು ಜೋಡಿಸಿದ್ದಾರೆ. ಒಟ್ಟು ಸುಮಾರು ಮುನ್ನೂರು ಅಧ್ಯಾಯಗಳು ಈ ಕೃತಿಯಲ್ಲಿದೆ.
ಅಕ್ಕ ಅರಸು ಎಂಬ ಜೈನ ಮಹಿಳೆ ದೈವವಾಗಿ ಅಕ್ಕಚ್ಚು ಎಂಬ ಹೆಸರಿನಲ್ಲಿ ದೈವವಾಗಿ ಆರಾಧನೆ ಪಡೆಯುವ ಬಗ್ಗೆ ಮೊದಲ ಅಧ್ಯಾಯದಲ್ಲಿ ಮಾಹಿತಿ ಇದ್ದರೆ ಕೊನೆಯ ಅಧ್ಯಾಯದಲ್ಲಿ ಹೌಟಲ ಗುತ್ತಿನ ಹೌಟಲ್ದಾಯ ಮತ್ತು ಮಾಳದ ಕೊರಗ ದೈವದ ಬಗ್ಗೆ ಕೊನೆಯ ಅಧ್ಯಾಯದಲ್ಲಿ ಮಾಹಿತಿ ಇದೆ.ಈ ನಡುವೆ ಸಾವಿರದ ಇನ್ನೂರು ದೈವಗಳ ಮಾಹಿತಿ ಇದೆ.
ಈ ಕೃತಿಯ ಬಗ್ಗೆ ಡಾ.ಲಕ್ಷ್ಮೀ ಜಿ ಪ್ರಸಾದ್ ಅವರು ಹೇಳುವುದು ಹೀಗೆ: "ದಿನೇ ದಿನೇ ಹಿರಿಯ ತಲೆಗಳು ಪ್ರಕೃತಿಯಲ್ಲಿ ಲೀನವಾದಂತೆಲ್ಲ ಬಾಯ್ದೆರೆಯಾಗಿ ಪಾಡ್ದನ ಐತಿಹ್ಯ ರೂಪಗಳಲ್ಲಿ ನೂರಾರು ವರ್ಷಗಳಿಂದ ಹರಿದು ಬಂದ ಮಾಹಿತಿಗಳು ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿವೆ. ಮೂಲ ಕಥಾನಕಗಳು ಕಳೆದು ಹೋಗಿ ಪುರಾಣದ ಕಥೆಗಳು ಸೇರ್ಪಡೆಯಾಗುತ್ತದೆ. ಹಾಗಾಗಿ ಈ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮೂಲ ಕಥಾನಕಗಳು, ಐತಿಹ್ಯಗಳನ್ನು ಮುಂದಿನ ಜನಾಂಗಕ್ಕೆ ಕಾಪಿಡುವ ಸಲುವಾಗಿ ನಾನು ಈ ಕೆಲಸವನ್ನು ಮಾಡಿದ್ದೇನೆ.”
ಇಂತಹ ದಾಖಲೀಕರÀಣದ ಮಹತ್ವ ದೊಡ್ಡದು. ವಿಶ್ಲೇಷಣೆಯ ಹಂತಕ್ಕೆ ಬಂದರೆ ಮುಂದೆ ಬೇರೆ ಬೇರೆ ಅಧ್ಯಯನ ಮಾರ್ಗಗಳು, ತಿಳಿವಳಿಕೆಗಳನ್ನು ಬಳಸಿಕೊಂಡು ಹೊಸ ಬಗೆಯಲ್ಲಿ ವಿಶ್ಲೇಷಣೆಗಳನ್ನು ಮಾಡುವ ಅವಕಾಶವಿದೆ. ಆದರೆ ಆಚರಣೆಯನ್ನು (ಪರ್ಫಾರೆನ್ಸ್) ನಮಗೆ ಬೇಕಾದಾಗ ಗಮನಿಸಲು, ದಾಖಲಿಸಲು ಸಾಧ್ಯವಿಲ್ಲ. ಕೆಲವು ಆಚರಣೆಗಳು ಮುಂದೆ ನಿಂತೇ ಹೋಗಬಹುದು. ಇದರಿಂದ ಈ ಕೃತಿಯ ಮಹತ್ವವನ್ನು ಊಹಿಸಬಹುದು.
ವಿಶ್ಲೇಷಣೆಯ ಹಂತದಲ್ಲಿ ವಿದ್ವಾಂಸರ ನಡುವಿನ ಸಂವಾದಕ್ಕೆ ವೇದಿಕೆ ನಿರ್ಮಾಣವಾಗುತ್ತದೆ. ತುಳು ಜಾನಪದ ಕ್ಷೇತ್ರದಲ್ಲಿ, ಅದರಲ್ಲೂ ಭೂತಾರಾಧನೆಯ ಕ್ಷೇತ್ರದಲ್ಲಿ ಪ್ರಾಥಮಿಕ ದಾಖಲೀಕರಣಕ್ಕೆ ಸುಮಾರು ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಆ ಕಾರ್ಯವೂ ಪೂರ್ತಿಯಾಗಿಲ್ಲ ಎನ್ನುವುದನ್ನು ಈ ಕೃತಿ ತೋರಿಸಿಕೊಟ್ಟಿದೆ. ಈ ಗ್ರಂಥದಲ್ಲಿ ಆನುಷಂಗಿಕವಾಗಿ ಬರುವ ವಿಶ್ಲೇಷಣೆಗಳಲ್ಲಿ ವಿದ್ವಾಂಸರಿಗೆ ಭಿನ್ನಮತಗಳಿರಬಹುದು. ಅದೊಂದು ನಿರಂತರ ಪ್ರಕ್ರಿಯೆ. ಮುಖ್ಯವಾದುದು ಈ ಮಟ್ಟಿನ ದಾಖಲೀಕರಣ ಸಾಹಸ. ಇದು ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮಾಡುವಂತಹ ಕೆಲಸ. ಅದನ್ನು ಏಕಾಂಗಿಯಾಗಿ ಮಾಡಿ, ಇಂತಹದೊಂದು ಗ್ರಂಥವನ್ನು ನಮ್ಮ ಕೈಗಿತ್ತಿರುವ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರಿಗೆ ಅಭಿನಂದನೆಗಳು.
ಗುರುಪೂರ್ಣಿಮೆ
ಡಾ. ಬಿ. ಜನಾರ್ದನ ಭಟ್