Sunday, 2 June 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 438 ಪೊನ್ನು ಕುಂದಾಡ್ದಿ - ಡಾ.ಲಕ್ಷ್ಮೀ ಜಿ ಪ್ರಸಾದ

ಪೊಣ್ಣು ಕುಂದಾಡ್ದಿ ದೈವ
ಪುತ್ತೂರು ಸಮೀಪದ ಪುಳಿತ್ತೂರು ಕುತ್ತೆತ್ತೂರಿನಲ್ಲಿ ಆರಾಧನೆ ಪಡೆವ ದೈವ ಪೊಣ್ಣು ಕುಂದಾಡ್ದಿ.
ಸಾಮಾನ್ಯವಾಗಿ ಪ್ರಧಾನ ದೈವಗಳ ಅತೀವ ಭಕ್ತರು, ಪ್ರಧಾನ ದೈವಗಳ ಆರಾಧನೆಯನ್ನು ಪ್ರಾರಂಭ ಮಾಡಿದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ರಕ್ತೇಶ್ವರಿ ದೈವದ ಭಕ್ತೆಯಾಗಿದ್ದು ದಿನಾಲು ದೈವಕ್ಕೆ ನೀರು ಬೆಳಕು ಇಟ್ಟು ಆರಾಧನೆ ಮಾಡುತ್ತಿದ್ದ ಅಕ್ಕಚ್ಚು ( ಅಕ್ಕ ಅರಸು) ಎಂಬ ಜೈನ ಮಹಿಳೆ ರಕ್ತೇಶ್ವರಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅದೇ ರೀತಿಯಲ್ಲಿ ಹಿರಿಯಡ್ಕದಲ್ಲಿ ವೀರಭದ್ರೇಶ್ವರ ನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಾಯ ಎಂಬ ಬ್ರಾಹ್ಮಣ  ಅರ್ಚಕರೊಬ್ಬರು ಅಡ್ಕತ್ತಾಯ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ.
ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ.ಹಾಗೆಯೇ ಜುಮಾದಿ ದೈವದ ಅನನ್ಯ ಭಕ್ತೆಯಾದ ಪೊನ್ನು ಕುಂದಾಡ್ದಿ ಎಂಬ ಹೆಣ್ಣು ಮಗಳು ಪಾದೆ ಎಂಬಲ್ಲಿ ಬುನಾದಿಯನ್ನು ಭೇಟಿ ಆಗುತ್ತಾಳೆ.ಅಲ್ಲಿ ಜುಮಾದಿ ದೈವ ತನಗೆ ಸ್ಥಾನ ಕಟ್ಟಿಸಿಕೊಡಲು ಹೇಳುತ್ತದೆ. ಹಾಗೆಯೇ ಪೊನ್ನು ಕುಂದಾಡ್ದಿ ಜುಮಾದಿ ದೈವಕ್ಕೆ ಸ್ಥಾನ ಕಟ್ಟಿಸಿ ಆರಾಧನೆ ಮಾಡುತ್ತಾಳೆ.ಆ ಪಾದೆಯಲ್ಲಿ ಅವಳು ಮಾಯಕಹೊಂದಿ ಜುಮಾದಿಯ ಸಾನ್ನಿಧ್ಯವನ್ನು ಸೇರಿ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ.ಅಲ್ಲಿ ಪಾದೆಯಲ್ಲಿ ನೆಲೆ ನಿಂತ ಜುಮಾದಿ ದೈವವನ್ನು ಪಾದೆ ಜುಮಾದಿ ಎಂದು ಕರೆಯುತ್ತಾರೆ.
ಹಿರಿಯರ ಪ್ರಕಾರ ಆ ಪಾದೆಯಲ್ಲಿ ಒಂದು ಹೆಣ್ಣು ಮತ್ತು ಒಂದು ಬುಟ್ಟಿಯ ಚಿತ್ರ ಇತ್ತು.ಅದು ಪೊನ್ನು ಕುಂದಾಡ್ದಿ ಯ ಸಮಾಧಿ ಎಂದು ಹೇಳುತ್ತಾರೆ.
ಮಾಹಿತಿ ಮೂಲ Beauty of Tulunadu ಸಾವಿರದೊಂದು ಗುರಿಯೆಡೆಗೆ : ಗುರಿಯೆಡೆಗೆ : ತುಳುನಾಡ ದೈವಗಳು 438 ಪೊನ್ನು ಕುಂದಾಡ್ದಿ 

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 436-437 ಸತ್ಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ

ಸತ್ಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು
ತುಳುವರ  ಭೂತಾರಾಧನೆ ಬಹಳ ವಿಶಿಷ್ಠವಾದ ಆರಾಧನಾ ಪದ್ಧತಿ. ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಇತಮಿತ್ಥಂ ಎಂದು ಹೇಳುವ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಅಸಾಧಾರಣ ಕಾರ್ಯ ಮಾಡಿದ ಅಸಹಜ ಮರಣವನ್ನಪ್ಪಿದವರು ದೈವಗಳಾಗಿ ನೆಲೆ ನಿಲ್ಲುತ್ತಾರೆ.ಅದೇ ರೀತಿಯಲ್ಲಿ ಪ್ರಧಾನ ದೈವದ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ.ಇವೆಲ್ಲಕ್ಕೂ ಮೀರಿ ಕೆಲವರು ದೈವ ಗಳಾಗಿ ಆರಾಧನೆ ಪಡೆಯುವುದು ಕಂಡು ಬರುತ್ತದೆ. ಇಂತಹ ಎರಡು ದೈವಗಳು ಸತಗಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು.
ಪ್ರಚಲಿತ ಐತಿಹ್ಯದ ಪ್ರಕಾರ ಕುಂಬಳೆ ಪರಿಸರದಲ್ಲಿ ಒಂದು ಬ್ರಾಹ್ಮಣ ದಂಪತಿಗಳು ಇರುತ್ತಾರೆ.ಮಡತಿ ತುಂಬಾ ಸತ್ಯವತಿ, ಮಹಾನ್ ಪತವ್ರತೆಯಾಗಿದ್ದಳು.ಅವಳು ಗರ್ಭಿಣಿ ಆಗುತ್ತಾಳೆ
ಒಂದು ಶುಭ ಮುಹೂರ್ತದಲ್ಲಿ ಅವಳಿಗೆ ಸೀಮಂತ ಮಾಡಿ ಅವಳನ್ನು ಪ್ರಸವಕ್ಕಾಗಿ ತಂದೆ‌ಮನೆಗೆ ಬಿಡ್ಟು ಬರಲು ಗಂಡ ಹೊರಡುತ್ತಾನೆ.ಗಂಡ ಹೆಂಡತಿ ಇಬ್ಬರೂ ಕಾಲು ದಾರಿಯಲ್ಲಿ ತಂದೆ‌ಮನೆಗೆ ಹೋಗುತ್ತಾರೆ.ದಾರಿ ನಡುವೆ‌ ಮಡದಿಯನ್ನು ಒಂದು ಮರದ ಅಡಿಯಲ್ಲಿ ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೇಳಿ ಗಂಡ ಎಲ್ಲಿಗೋ ಹೋಗುತ್ತಾನೆ
ಸುಮಾರು ಹೊತ್ತು ಕಳೆದರೂ ಗಂಡ ಬರುವುದಿಲ್ಲ. ಆತಂಕಕ್ಕೆ ಒಳಗಾದ ತುಂಬು ಗರ್ಭಿಣಿ ಅಳತೊಡಗುತ್ತಾಳೆ.ಆಗ ಅಲ್ಲಿ ಸಮೀಪದ ಗುಡಿಸಲಿನಲ್ಲಿದ್ದ ಓರ್ವ  ವೃದ್ಧ ದಲಿತಹಿಳೆ ಮಹಿಳೆ ಅವಳಿಗೆ ಅವಳ ಗಂಡನನ್ನು ತೋರಿಸಿತ್ತಾಳೆ.ಅವಳ ಗಂಡ ಓರ್ವ ಜೈವ ಹೆಂಗಸಿನೊಂದಿಗೆ ಸರಸವಾಡುತ್ರ ಇರುತ್ತಾನೆ.ಇದನ್ನು ನೋಡಿದ ಮುಗ್ಧೆ ಪತವ್ರತಾ ಹೆಣ್ಣಿಗೆ ಆಘಾತವಾಗುತ್ತದೆ
ಅವಳು ತನ್ನ ಹೊಟ್ಟೆಯಲ್ಲಿ ಇರುವ ಮಗುವಿನೊಂದಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ
ನಂತರ ದೈವತ್ವ ಪಡೆದು ಒಂಜಿ‌ ಕುಂದು ನಲ್ಪ ದೈವಗಳೊಡನೆ ಸೇರಿಕೊಂಡು ಸತ್ಯ ಮಾಗಣ್ತಿ ( ಸತ್ಯ ಮಹಾಸತಿ?) ದೈವವಾಗಿ ಆರಾಧನೆ ಪಡೆಯುತ್ತಾಳೆ.ಇವರೊಂದಿಗೆ ಇವಳಿಗೆ ಸಹಾಯ ಮಾಡಿದ ಆ ದಲಿತ ಮಹಿಳೆ‌ ಕೂಡ ಕರಿಕಲ್ಲು ದೈವವಾಗಿ ಆರಾಧನೆ ಪಡೆಯುತ್ತಾಳೆ.ಸತ್ಯ ಮಾಗಣ್ತಿ ದೈವಕ್ಕಳನ್ನು ಬಾಣಂತಿಯರನ್ನು ರಕ್ಷಿಸುವ ದೈವ ಹಾಗಾಗಿ ಬಾಣಂತಿ ದೈವ ಎಂದು ಕೂಡ ಕರೆಯುತ್ತಾರೆ
ಮಾಹಿತಿ ನೀಡಿದ ಶ್ರೀವತ್ಸ ಪ್ರದೀಪರಿಗೆ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ 

Sunday, 5 May 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 435 ಮನಕ್ಕಡನ್ ಗುರುಕ್ಕಳ್

ಕೆಲ ದಿನಗಳ ಹಿಂದೆ ಹರ್ಷ ಅಡ್ಕ ಅವರ ಜೊತೆಗೆ ಮಾತಾನಾಡುವಾಗ ಮನಕ್ಕಡನ್ ಗುರುಕ್ಕಳ್ ದೈವದ ಪ್ರಸ್ತಾಪ ಬಂತು.ಈ ದೈವದ ಬಗ್ಗೆ ಮಾಹಿತಿ ಇದೆಯಾ ಎಂದು ಕೇಳಿದರು.ಹಾಗೆಯೇ ಅವರಿಗೆ ತಿಳಿದಿರುವ ಮಾಹಿತಿ ನೀಡಿದರು.ಜೊತೆಯಲ್ಲಿ ಮಲೆಯಾಳದ ಅಂತರ್ಜಾಲದಲ್ಲಿ ಸ್ವಲ್ಪ ಮಾಹಿತಿ ಸಿಕ್ತು.
ಈ ದೈವದ ಮೂಲ ಹೆಸರು ರಾಮನ್ ಮನಕ್ಕಡನ್,ಈತ ವಣ್ಣಲ ಸಮುದಾಯಕ್ಕೆ ಸೇರಿದವರು.ಮೌಖಿಕ ಪರಂಪರೆಯ ಆಧಾರದ ಮೇಲೆ ಇವರ ಕಾಲ ಸುಮಾರು ಹದಿನೈದನೆಯ ಶತಮಾನ.ಇವರ ವಂಶಸ್ಥರು ಈಗಲೂ ಇದ್ದಾರೆ.
ಇವರಿಗೆ ಚಿಕ್ಕಂದಿನಲ್ಲೇ ಅತಿಮಾನುಷ ಶಕ್ತಿ ಇದ್ದು.ಹಾಗಾಗಿ ರಾಮನ್ ಕೋಲತ್ತಿರಿ ರಾಜಬ ಬಳಿಗೆ ಹೋಗುತ್ತಾರೆ.ಆರಂಭದಲ್ಲಿ ಇವರ ಶಕ್ತಿಯನ್ನು ಕೋಲತ್ತಿರಿ ರಾಜ ಒಪ್ಪಿಕೊಳ್ಳಲಿಲ್ಲ.ನದಿಯ ನೀರಿನ ಮೇಲೆ ನಡೆಯುವುದು ಸೇರಿದಂತೆ ಅನೇಕ ಅತಿಮಾನುಷ ಶಕ್ತಿಗಳನ್ನು ತೋರಿದ ಮೇಲೆ ಅರಸ ಆತನನ್ನು ಸ್ವೀಕರಿಸಿ ಸತ್ಕರಿಸುತ್ತಾರೆ.
ಈತ ಒಂದೇ ದಿನದಲ್ಲಿ ಒಂದು ಕುಂದ ನಲ್ವತ್ತು ( 39) ದೈವಗಳ ಕೋಲ ಕಟ್ಟುವ ಸಾಮರ್ಥ್ಯವನ್ನು ಪಡೆದಿದ್ದರು.ಕಾಲಾಂತರದಲ್ಲಿ ದೈವಗಳ ಅನುಗ್ರಹದಿಂದ ರಾಮನ್ ಮನಕ್ಕಡನ್ ಕೂಡ ದೈವತ್ವ ಪಡೆದು ಮನಕ್ಕಡನ್ ಗುರುಕ್ಕಳ್ ಹೆಸರಿನಿಂದ ಆರಾಧನೆ ಪಡೆಯುತ್ತಾರೆ.ಪೆರ್ನೆ ಭಗವತಿ ಕ್ಷೇತ್ರದಲ್ಲೂ ಇವರಿಗೆ ಆರಾಧನೆ ಇದೆ.

Tuesday, 12 March 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 414 ಆಟಕಾರ್ತಿ ©ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಮಾನವ ಮೂಲದವರು.ಸಾಮಾನ್ಯರಂತೆ ಹುಟ್ಟಿ ಅಸಾಧಾರಣ ಸಾಹಸ ಮೆರೆದವರು ಇಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿದ್ದರೆ. ಅಂತೆಯೇ ಸಾಮನ್ಯರಾಗಿ ಹುಟ್ಟಿ ಯಾರದೋ ವಂಚನೆಗೆ ಬಲಿಯಾಗಿ ದುರಂತವನ್ನಪ್ಪಿದವರು ಕೂಡ ದೈವತ್ವ ಪಡೆದು ಆರಾಧನೆ ಹೊಂದಿದ್ದಾರೆ. ಇಲ್ಲಿ ಯಾರು ಯಾಕೆ ಯಾವಾಗ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ ಆದರೂ ದುರಂತ ಮತ್ತು ದೈವತ್ವ ತುಳು ಸಂಸ್ಕೃತಿ ಯಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.ಆಟಕಾರ್ತಿ ದೈವ ಕೂಡಾ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಪಡೆಯುವ ದೈವತ.
ಆಟಕಾರ್ತಿ ಮುಲತಃ ಕಾಂಞಂಗಾಡ್ ಪರಿಸರದ ಮುಲ್ಲಕ್ಕೆಲ್ ತರವಾಡಿಗೆ ಸೇರಿದ ಹೆಣ್ಣು ಮಗಳು.ಆಟಕಾರ ಸಮುದಾಯದ ಹುಡುಗಿ.ಆಟಕಾರ ಸ್ತ್ರೀ ಯರು ಮನೆ ಮನೆಗೆ ಹೋಗಿ ಕೈ ನೋಡಿ ಭವಿಷ್ಯ ಹೇಳುವ ವೃತ್ತಿ ಯನ್ನು ಮಾಡುತ್ತಾರೆ.
ಅಂತಹ ಒಂದು ಕುಟುಂಬಕ್ಕೆ ಸೇರಿದ ಹುಡುಗಿ ಒಬ್ಬಳು ಮನೆ ಮನೆಗೆ ಹೋಗಿ ಕೊರವಂಜಿಯಂತೆ ಲಕ್ಷಣ ಹೇಳುತ್ತಾ ,ಮನೆ ಮಂದಿ ಕೊಟ್ಟ ಅಕ್ಕಿ ತೆಂಗಿನಕಾಯಿ ಹೊತ್ತುಕೊಂಡು ಹೋಗುತ್ತಾ ಇರುತ್ತಾಳೆ.ದಾರಿ ನಡುವೆ ಸುಸ್ತಾಗಿ ಒಂದು ತೆಂಗಿನ ಮರದ ಕೆಳಗೆ ಕುಳಿತುಕೊಳ್ಳುತ್ತಾಳೆ.ಅದೇ ತೆಂಗಿನ ಮರದ‌ಮೆಲೆ ಒಬ್ಬ ಮೂರ್ತೆ ತೆಗರಯುವಾತ ಕಳ್ಳು ತೆಗೆಯುತ್ತಾ ಇದ್ದ.
ಆತ ಈ ಸುಂದರ ಯುವತಿಯನ್ನು ನೋಡಿ ಮೋಹಿಸುತ್ತಾನೆ.ಅವಳು ಬಾಯಾರಿಕೆಯಿಂದ ನೀರು ಕೇಳಿದಾಗ ಈತ ಕಳ್ಳನ್ನು ಕೊಡುತ್ತಾನೆ.
ಅದನ್ನು ಕುಡಿದ ಅವಳು ಅಮಲೇರಿ ಎಚ್ಚರ ತಪ್ಪಿ ಮಲಗುತ್ತಾಳೆ.ಆ ಸಮಯದಲ್ಲಿ ಆತ ಅವಳನ್ನು ಆಕ್ರಮಿಸಿ ಅತ್ಯಾಚಾರವೆಸಗುತ್ತಾನೆ.ಅದೂ ಅವಳಿಗೆ ತಿಳಿಯಿವುದಿಲ್ಲ
ಆದರೆ ದಿನ ಕಳೆದಂತೆ ತಾನು ಗರ್ಭಿಣಿಯಾಗಿರುವುದು ಅವಳಿಗೆ ತಿಳಿಯುತ್ತದೆ. ಆಗ ಅವಳು ಇದು ಹೊರ ಜಗತ್ತಿಗೆ ತಿಳಿದರೆ ಅವಮಾನ ವಾಗುತ್ತದೆ ಎಂದು ಮಾಯವಾಗುತ್ತಾಳೆ.
ಮಾಯವಾದವರು ದೈವವಾಗಿ ಆರಾಧನೆ ಹೊಂದುವುದು ಸಾಮಾನ್ಯವಾಗಿ ಕಂಡು ಬರುವ ವಿಚಾರ.ಅಂತೆಯೇ ಮಾಯವಾದ ಆಟಕಾರ್ತಿ ಹುಡುಗಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾಳೆ.ಈ ದೈವ ಮನೆ ಮನೆಗೆ ಹೋಗಿ ಕೈ ನೋಡಿ ಲಕ್ಷಣ ಹೇಳುವ ಕೆಲಸವನ್ನು ಮಾಡುತ್ತದೆ
ಇದು ಆಟಕಾರ್ತಿ ಯ ಕೆಲಸದ ದ್ಯೋತಕವಾಗಿದೆ.
ಆಟಕಾರ್ತಿ ದೈವಕ್ಕೆ ಯುವ ತರುಣಿಯ ರೀತಿಯಲ್ಲಿ ಸೀರೆ ಉಟ್ಟು ತುರುಬು ಹಾಕಿ ಹೂವು ಮುಡಿದ ಅಲಂಕಾರವಿರುತ್ತದೆ.ಮುಖಕ್ಕೆ ನಸು ಕೆಂಪು ಬಣ್ಣದ ಅರದಳ ಹಾಕಿ ಅಲಂಕರಿಸುತ್ತಾರೆ. ಕೊರವಂಜಿ ರೀತಿಯಲ್ಲಿ ಕೈಯಲ್ಲಿ ಒಂದು ಕೋಲು ತಲೆಯಲ್ಲಿ ಒಂದು ಬುಟ್ಟಿ ಇರುತ್ತದೆ.
ಈ ದೈವಕ್ಕೆ ಅಗೆಲು ಬಡಿಸುತ್ತಾರೆ.ಮೂರು ಕುಡಿ ಬಾಳೆ ಎಲೆಯಲ್ಲಿ ಐದು ಕುಡ್ತೆ ಕುಚಿಲಕ್ಕಿಯನ್ನು ಹುರಿದು ತೆಂಗಿನ ಕಾಯಿ   ಹೋಳನ್ನು ಇಟ್ಟು ಬಡಿಸುತ್ತಾರೆ.ಏಳು ಸಣ್ಣ ಬಾಳೆಕೀತುಗಳಿಗೆ ಅಕ್ಕಿಹುರಿದ ಹುಡಿಯನ್ನು ಬಡಿಸುತ್ತಾರೆ.
ಈ ಪ್ರಸಾದವನ್ನು ಯುವತಿಯರಿಗೆ ಕೊಡುವುದಿಲ್ಲ. ಮಕ್ಕಳಾಗದ ಮದುವೆಯಾಗದ ಹುಡುಗಿಯರಿಗೆ ಮಾತ್ರ ಇದನ್ನು ನೀಡುತ್ತಾರೆ.ಉಳಿದ ಯುವತಿಯರು ಇದನ್ನು ತಿಂದರೆ ಅವರಿಗೆ ಮಕ್ಕಳಾಗುವುದಿಲ್ಲ ಎಂಬ ನಂಬಿಕೆ ಇದೆ.
ಈ ದೈವಕ್ಕೆ ಬಳೆ,ಕಾಲುಂಗುರು ಗೆಜ್ಝೆಗಳ ಹರಕೆಯನ್ನು ನೀಡುತ್ತಾರೆ.
ಈ ದೈವ ಹೆಣ್ಣು ಮಕ್ಕಳಿಗೆ ಒಬ್ಬೊಬ್ಬರಾಗಿ ಓಡಾಡದಂತೆ ಎಚ್ಚರಿಕೆ ನೀಡುತ್ತದೆ.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಆಲೋಚಿಸುವುದಾದರೆ  ಆಟಕಾರ್ತಿ ಯುವತಿ ನೀರಿನ  ಬದಲು ಕಳ್ಳು/ ಹೆಂಡ  ಕೊಟ್ಟು ಮೋಸದಿಂದ ಅವಳನ್ನು ಅತ್ಯಾಚಾರ ಮಾಡಿದ್ದು,ಗರ್ಭಿಣಿಯಾದಾಗ ಲೋಕನಿಂದೆಗೆ ಹೆದರಿ ಅವಳು ಪ್ರಾಣತ್ಯಾಗ ಮಾಡಿರಬಹುದು.ದುರಂತ ವನ್ನಪ್ಪಿದವರು ದೈವತ್ವ ಪಡೆದು ಆರಾಧನೆ ಪಡೆವಂತೆ ಅವಳು ಕೂಡ ದೈವತ್ವ ಪಡೆದು ಆರಾಧನೆ ಹೊಂದಿರಬಹುದು.
ಕಾಸರಗೋಡಿನ ಸೂರ್ಲು , ನೀಲೇಶ್ವರ ಮೊದಲಾದೆಡೆ ಈ ದೈವಕ್ಕೆ ಆರಾಧನೆ ಇದೆ.
ಮಾಹಿತಿ ಸಂಗ್ರಹಿಸಿ ನೀಡಿದ ಹರಿಕಾಂತ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 434 ಪಾಂಡಿ ಅಜ್ಜೆರ್

ತುಳುನಾಡಿನಲ್ಲಿ ಯಾರಿಗೆ ಯಾಕೆ ಯಾವಾಗ ದೈವತ್ವ ಸಿಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ ,ಅನೇಕರು ಪ್ರಧಾನ ದೈವಗಳ ಅನುಗ್ರಹಕ್ಕೆ  ಪಾತ್ರರಾಗಿ ಅದೇ ದೈವದ ಸೇರಿಗೆಗೆ ಸಂದು ದೈವವಾಗಿ ಆರಾಧನೆ ಪಡೆದಿದ್ದಾರೆ.ಅಕ್ಕಚ್ಚು,ಜಾನು ನಾಯ್ಕ ,ಅಡ್ಕತ್ತಾಯ ಮೊದಲಾದವರು ಈ ರೀತಿಯಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿದವರು.
ಪಾಂಡಿ ಬೈದ್ಯ ಕೂಡ ಇದೇ ರೀತಿಯಲ್ಲಿ ಪ್ರಧಾನ ದೈವ ನಾಲ್ಕೈತ್ತಾಯನ ಅನುಗ್ರಹದಿಂದ ದೈವತ್ವ ಪಡೆದವರು.
ಪಾಣೆ ಮಂಗಳೂರಿನ ಕೆದ್ದೇಲ್ ಗುತ್ತಿನ ಮೂಲ‌ಪುರುಷ ಪಾಂಡಿ ಬೈದ್ಯ/ ಪೂಜಾರಿ .ಇಲ್ಲಿನ ಗ್ರಾಮ ದೈವ ನಾಲ್ಕೈತ್ತಾಯ.ನಾಲ್ಕೈತ್ತಾಯ ದೈವದ ಆರಾಧನೆಯನ್ನು ಮಾಡಿದ ಪಾಂಡಿ ಪೂಜಾರಿ ಪಾಂಡಿ ಅಜ್ಜೆರ್ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ‌.
ಆಧಾರ : ತುಳುನಾಡ ಬಿಲ್ಲವರು - ರಮಾನಾಥ್ ಕೋಟೆಕಾರ್
ತುಳುಪಾಡ್ದನಗಳಲ್ಲಿ ಬಿಲ್ಲವರು - ಸಂಕೇತ್ ಪೂಜಾರಿ 

Sunday, 27 January 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 433 ನಾಯಿಲ ಗುತ್ತಿನ ಕುಜುಂಬ ಬೈದ್ಯ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 433  ನಾಯಿಲ ಗುತ್ತಿನ  ಕುಜುಂಬ ಬೈದ್ಯ
ಉಪ್ಪಿನಂಗಡಿ ಕಾಂಚನ ಮಾರ್ಗದಲ್ಲಿ ಬಜತ್ತೂರು ಎಂದು ಗ್ರಾಮವಿದೆ.ಇಲ್ಲಿನ ಬಿಲ್ಲವರ ಒಂದು ಗುತ್ತಿನ ಮನೆ ನಾಯಿಲ ಗುತ್ತು.
ಈ ಗುತ್ತಿನ ಮನೆ ಸುಮಾರು ಇನ್ನೂರು ವರ್ಷ ಪ್ರಾಚೀನ ವಾದುದು.ಹಿಂದೆ ಈ ಪ್ರದೇಶದಲ್ಲಿ ಜೈನ ಅರಸರು ಆಳ್ವಿಕೆ ಮಾಡುತ್ತಾ ಇದ್ದರು.ಬಿಲ್ಲವರು ವೈದ್ಯವನ್ನು ಬಲ್ಲವರಾಗಿದ್ದರು.ಒಮ್ಮೆ ಓರ್ವ ಜೈನರಸನಿಗೆ ತೀರ್ವವಾದ ಅನಾರೋಗ್ಯ ಕಾಡಿದ್ದಾಗ ಈ ನಾಯಿಲ ಗುತ್ತಿನ ಒರ್ವ ಹಿರಿಯರು ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ‌.ಆಗ ಅರಸು ಆತನಿಗೆ ಇನ್ನೂರು ಎಕರೆಗಳಷ್ಟು ಜಾಗವನ್ನು ಉಂಬಳಿಯಾಗಿ ಕೊಡುತ್ತಾನೆ.ಈ ನಾಯಿಲ ಗುತ್ತಿನ ‌ಮನೆಯಲ್ಲಿ ಕುಜುಂಬ ಬೈದ್ಯ ಎಂಬ  ಹಿರಿಯಾಯ ದೈವಕ್ಕೆ ಆರಾಧನೆ ಇದೆ.ಹೆಚ್ಚಿನ ಬಿಲ್ಲವರ ಗುತ್ತಿನ ಮನೆಗಳಲ್ಲಿ ಆ ಮನೆಗಳ ಹಿರಿಯನಿಗೆ ದೈವದ ನೆಲೆಯಲ್ಲಿ ಹಿರಿಯಾಯ ಎಂಬ ಹೆಸರಿನಲ್ಲಿ ಆರಾಧನೆ ಇರುತ್ತದೆ.ಹಾಗಾಗಿ ಇಲ್ಲಿ ಆರಾಧನೆ  ಪಡೆಯುವ ಹಿರಿಯಾಯ ಆ ಮನೆಯ ಹಿರಿಯನೇ ಇರಬಹುದು. ಈ ಬಗ್ಗೆ ಸಂಕೇತ್ ಪೂಜಾರಿಯವರು ಜೈನರಸನ ಕಾಯಿಲೆಯನ್ನು ಗುಣಪಡಿಸಿದ ನಾಯಿಲ. ಗುತ್ತಿನ ಹಿರಿಯನೇ ಇಲ್ಲಿ ಆರಾಧನೆ ಪಡೆಯುವ ಕುಜುಂಬ ಬೈದ್ಯ ಇರಬಹುದು " ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆಧಾರ: ಬಿಲ್ಲವರ ಗುತ್ತಿನ ಮನೆಗಳು - ಸಂಕೇತ್ ಪೂಜಾರಿ