Saturday 9 November 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 445 ಮೂವಾಲಂಕುಳಿ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ


ಮೂವಲಾಂಕುಳಿ ಚಾಮುಂಡಿ ದೈವದ ಕೋಲ ಎಂದರೆ ತೆಯ್ಯಂ ಆಗುವಾಗ ಜನರನ್ನು ಓಡಿಸಿ ಹೊಡೆಯುವ ಸಂಪ್ರದಾಯವಿದೆ.. ಈ ದೈವದ ಹೊಡೆತ ತಿನ್ನುವ ಹರಿಕೆ ಕೂಡ ಇದೆ.ಈ ದೈವದಿಂದ ಬಂಧಿಸಲ್ಪಟ್ಟರೆ,ಹೊಡೆತ ತಿಂದರೆ ತಾವು ನೆನೆದ ಕೆಲಸ ಈಡೇರುತ್ತದೆ ಎಂಬ ನಂಬಿಕೆ ಇದೆ.
ಈ ದೈವ ಓಡಿಸಿಕೊಂಡು ಹೋಗಿ ಹೊಡೆಯುವುದು ಬಂಧಿಸುವುದೇ ಮೊದಲಾದವುಗಳು ಆ ದೈವದ ಕಥೆಗೆ ಪೂರಕವಾದ ವಿಚಾರಗಳಾಗಿವೆ.
ಮೂವಾಲಾಂಕುಳಿ ಎಂದರೆ ಮೂರು ಜನರಷ್ಟು ದೊಡ್ಡದಾದ ಕುಳಿ ಎಂದರೆ ಹೊಂಡ, ಗುಂಡಿ ಎಂದರ್ಥ.ಅದರಲ್ಲಿ ಉದ್ಭವವಾದ ತ್ರಿಕನ್ಯಾವು ದೈವವನ್ನು ಮೂವಾಲಾಂಕುಳಿ ಚಾಮುಂಡಿ ಎಂದು ಕರೆದಿದ್ದಾರೆ‌.
ಉತ್ತರ ಕೇರಳದಲ್ಲಿ ತ್ರಿಕನ್ಯಾತ್ ದೇವಾಲಯವಿದೆ. ಎಡಮನ ಮತ್ತು  ಎಲ್ಯಾಪುರತ್ ಎಂಬ ಇಬ್ಬರು ಪ್ರಸಿದ್ಧ ತಂತ್ರಿಗಳು ಇರುತ್ತಾರೆ.ಒಬ್ಬರಾಗಿ ಒಬ್ಬರು ಅಲ್ಲಿ ಪ್ರತಿತಿಂಗಳು ಪೂಜಾ ಕೈಂಕರ್ಯವನ್ನು ಮಾಡುತ್ತಾ ಅನ್ಯೋನ್ಯವಾಗಿ ಬದುಕುತ್ತಿದ್ದರು.
ಅವರ ನಡುವೆ ಯಾವುದೋ ಒಂದು ಕಾರಣಕ್ಕೆ ಮನಸ್ತಾಪ ಉಂಟಾಗುತ್ತದೆ. ಆಗ ಅವರುಗಳು ತಮ್ಮ ತಾಂತ್ರಕ ಶಕ್ತಿಯಿಂದ ದುಷ್ಟ ಶಕ್ತಿಗಳನ್ನು  ಸೃಜಿಸಿ ಇನ್ನೊಬ್ಬರಿಗೆ ತೊಂದರೆ ಕೊಡಲು ಕಳುಹಿಸುತ್ತಾ ಇದ್ದರು. ಒಬ್ಬರು ಕಳುಹಿಸಿದ್ದನ್ನು ಇನ್ನೊಬ್ಬರು ವಶೀಕರಣ ಮಾಡಿ ತಾಮ್ರದ ತಂಬಿಗೆಯಲ್ಲಿ ಬಂಧಿಸಿ ಹೂಳುತ್ತಿದ್ದರು. ಇಲ್ಕವೇ ಉರಿಸಿ ಭಸ್ಮ ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ ಎಡಮನ ತಂತ್ರಿ ತ್ರಿಕನ್ಯಾವು ದೇವಿಯನ್ನು ಎಲ್ಯಾಪ್ಪುರತ್ ತಂತ್ರಿ ತನಗೆ ತೊಂದರೆ ಕೊಡಲು ಕಳುಹಿಸಿದ ದುಷ್ಟ ಶಕ್ತಿ ಎಂದು ಭಾವಿಸಿ ಅದನ್ನು ಒಂದು ತಾಮ್ರದ ಕೊಡಪಾನದಲ್ಲಿ ಬಂಧಿಸಿ ತನ್ನ ಸೇವಕರಲ್ಲಿ ತೆಗೆದುಕೊಂಡು ಹೋಗಿ ಮಣ್ಣಿನಡಿಯಲ್ಲಿ ಹುಗಿಯಲು ಹೇಳುತ್ತಾರೆ. ಆದರೆ ಅವನ ಸೇವಕರು ಅದನ್ನು ತೆಗೆದುಕೊಂಡು ಹೋಗುವಾಗ ಭಯಾನಕವಾದ ಸಿಡಿಲು ಎರಗುತ್ತದೆ.ಆ ಸಿಡಿಲಿಗೆ ಬೂಮಿ ಬಿರಿದು ಮೂರು ಜನರಷ್ಟು ದೊಡ್ಡದಾದ ಒಂದು ಹೊಂಡ ಉಂಟಾಗುತ್ತದೆ.ಅದರಿಂದ ಮೂರು ದಿವ್ಯವಾದ ಖಡ್ಗಗಳು ಉದಿಸುತ್ತವೆ‌.ಜೊತೆಗೆ ತ್ರಿಕನ್ಯಾವು ದೇವಿ ಎದ್ದು ಬರುತ್ತಾಳೆ.ತನ್ನನ್ನು ಬಂಧಿಸ ಹೊರಟ ಎಡಮನ ತಂತ್ರಿಯನ್ನು ಓಡಿಸಿ ಹೊಡೆದು ಬಡಿದು ನಾನಾರೀತಿಯ ಉಪಟಳವನ್ನು ಕೊಡುತ್ತಾಳೆ.ಆಗ ಆತ ಅಯ್ಯಪ್ಪ ದೇವರ ಮೊರೆ ಹೋಗುತ್ತಾರೆ.ನಂತರ ತನ್ನ ತ್ರಿಕನ್ಯಾವು ದೈವದ ಶಕ್ತಿಯ ಅರಿವಾಗುತ್ತದೆ. ತನ್ನ   ತಪ್ಪನ್ನು  ಒಪ್ಪಿಕೊಂಡು ಶರಣಾಗುತ್ತಾನೆ‌.ಇಬ್ಬರು ತಂತ್ರಿಗಳು ಕೂಡ ಭಕ್ತಿಯಿಂದ ಆರಾಧನೆ ಮಾಡುತ್ತಾರೆ‌.ತ್ರಿಕನ್ಯಾವು ದೇವತೆಗೆ ಕೋಲ ನೀಡಿ ಆರಾಧನೆ ಮಾಡಿ ಒಲಿಸಿಕೊಳ್ಳುತ್ತಾರೆ‌.ಉತ್ತರ ಮಲಬಾರ್ ಪ್ರದೇಶದಲ್ಲಿ ಈ ದೈವವನ್ನು ಆರಾಧನೆ ಮಾಡುತ್ತಾರೆ‌..ಈ ದೈವವನ್ನು ಕಟ್ಟುವವರು ಬಣ್ಣ ಬಣ್ಣದ ವೇಷ ಧರಿಸಿ ಉಗ್ರವಾಗಿ ನರ್ತಿಸುತ್ತಾರೆ
ಮೂರು ಜನರಷ್ಟು ದೊಡ್ಡದಾದ ಕುಳಿಯಲ್ಲಿ ಉದಿಸಿಬಂದ ಕಾರಣ ಈ ದೈವವನ್ನು ಮೂವಾಲಂ ಕುಳಿ ತೆಯ್ಯಂ ಎಂದು ಕರೆಯುತ್ತಾರೆ.
ಈ ದೈವ ಎಡಮನ್ ತಂತ್ರಿಯನ್ನು ಓಡಿಸಿ ಹೊಡೆದು ಬಡಿದು ಪೀಡಿಸಿದುದರ ಪ್ರತಿಕವಾಗಿ ಈಗ ಕೂಡ ದೈವ ಕಟ್ಟಿದಾಗ ಜನರನ್ನು ಓಡಿಸಿ ಹೊಡೆಯುವ ಅಭಿವ್ಯಕ್ತಿ ಇರುತ್ತದೆ‌.ಇದೇನೂ ಜನರು ಸಾಯುವಂತಹ ಹೊಡೆತವಲ್ಲ..ಸಣ್ಣ ಪುಣ್ಣ ಏಟು ಗಳು ಅಷ್ಟೇ, ಅದರಿಂದ ದೊಡ್ಡ ಅನಾಹುತವಾಗದಂತೆ ಎಚ್ಚರ ವಹಿಸುತ್ತಾರೆ‌.ಈ ದೈವದಿಂದ ಹೊಡೆತ ತಿನ್ನುವುದು ಒಂದು ಹರಿಕೆಯಾಗಿದೆ.ಆದ್ದರಿಂದ ಈ ಹರಿಕೆ ಹೇಳಿಕೊಂಡ ಭಕ್ತರು ಬೊಬ್ಬೆ ಹಾಕಿ ದೈವವನ್ನು ಕೆರಳಿಸಿ ಅದರಿಂದ ಹೊಡೆತ ತಿನ್ನುತ್ತಾರೆ‌.ನಂತರ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಾರೆ‌. © ಡಾ.ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ಬ್ಯಾಟರಾಯನ ಪುರ,ಬೆಂಗಳೂರು
ಆಧಾರ : ತೆಯ್ಯಂ ಕ್ಯಾಲೆಂಡರ್: ಚಂದ್ ಕಡೆಮ್ 

No comments:

Post a Comment