Friday 1 December 2023

ದೀಪ ಹಿಡಿದು ಬಂದವರು ಯಾರು ? ರಕ್ತೇಶ್ವರಿ ದೈವವೇ ? . ಡಾ.ಲಕ್ಷ್ಮೀ ಜಿ ಪ್ರಸಾದ್


ರಕ್ತೇಶ್ವರಿ ದೈವ ಚಿತ್ರ ಕೃಪೆ ನಾಗರಾಜ ಭಟ್ 

ದೀಪ ಹಿಡಿದು ಬಂದವರು ಯಾರು ? - ಡಾ.ಲಕ್ಷ್ಮೀ ಜಿ ಪ್ರಸಾದ್

ಕೆಲವು ವಿಚಾರಗಳು ಅನುಭವ ವೇದ್ಯವಾದವುಗಳು

ಇತರರಿಗೆ ಇದನ್ನು ನಂಬುವುದು ಕಷ್ಟವಾಗಬಹುದು.ನಂಬಿದರೂ ನಂಬದಿದ್ದರೂ ನಡೆದಂಥಹ ನಿಜ ವಿಚಾರವನ್ನು ನಾನಿಲ್ಲಿ ತಿಳಿಸುವೆ

ಇದು ಸುಮಾರು ನಲುವತ್ತು ವರ್ಷಗಳ ಹಿಂದೆ ನಡೆದ ಘಟನೆ.‌

ನನ್ನ ತಂದೆ ಮನೆ ಕೋಳ್ಯೂರು ವಾರಣಾಸಿಯಿಂದ ನನ್ನ ಅಜ್ಜನ ಮನೆ ಹೊಸಮನೆಗೆ ಹೋಗಲು‌ ಪಳ್ಳದ ಪದವಿನ ಕಾಲು ದಾರಿ ಇತ್ತು .ಈಗ ವಾಹನ ಹೋಗುವ ಮಣ್ಣಿನ  ರಸ್ತೆ ನಿರ್ಮಾಣ ಆಗಿದೆ

ಮೊದಲು ಈ ದಾರಿಯಲ್ಲಿ ನಾವು ನಡೆದುಕೊಂಡು ಹೋಗಿ ಬರುತ್ತಿದ್ದೆವು.ಇಲ್ಲಿ ರಾತ್ರಿ ಹೋಗುವಾಗ ಸೂಟೆ ಹಿಡಿದ ದೈವ ರಕ್ತೇಶ್ವರಿ ಕಾಣಿಸುತ್ತದೆ ಎಂಬ ನಂಬಿಕೆ ಇತ್ತು

ಒಮ್ಮೆ ರಾತ್ರಿ ಹೊತ್ತು  ನಮ್ಮ‌ಪರಿಚಯದ ಗಣೇಶಣ್ಣ ಎಂಬವರು ಸೈಕಲಿನಲ್ಲಿ  ಈ ದಾರಿಯಲ್ಲಿ ಬರುವಾಗ ಸೈಕಲ್ ಗಕ್ಕೆಂದು ನಿಂತಿತಂತೆ.ಸೈಲಿನ ಲೈಟ್ ಆಫ್ ಆಯಿತಂತೆ.ಎಷ್ಟು ಯತ್ನ ಮಾಡಿದರೂ ಸೈಕಲ್ ಚಲಿಸಲಿಲ್ಲವಂತೆ‌.ಆಗ ಅವರು ಅಲ್ಲಿಯೇ ಸೈಕಲಿನಿಂದ ಇಳಿದು ಸುತ್ತ ಮುತ್ತ ನೋಡಿದಾಗ ಸೂಟೆ ಉರಿಯುವುದು ಕಾಣಿಸಿತಂತೆ.ಅವರು ಅಮ್ಮಾ ರಕ್ತೇಶ್ವರಿ ಕಾಪಾಡು ಎಂದು ಕೈ ಮುಗಿದರಂತೆ.ಅಗ ಸೈಕಲ್ ಲೈಟ್ ಆನ್ ಆಯಿತು ನಂತರ ಅವರು ಸೇಫ್ ಆಗಿ ಮನೆ ತಲುಪಿದರು ಎಂದು ಅವರೇ ಹೇಳಿದ ಘಟನೆ ನನ್ನ ಕಿವಿಗೂ ಬಿದ್ದಿತ್ತು

ನಾನು ಸುಮಾರು  ಆರು ಏಳನೆಯ ತರಗತಿ ಓದುತ್ತಿರುವ ಸಮಯದಲ್ಲಿ ಇದೇ ಪಳ್ಳದ ಪದವಿನಲ್ಲಿ ಮೈ ನವಿರೇಳುವ ಘಟನೆ ನಡೆದಿತ್ತು

ಅ ಕಾಲದಲ್ಲಿ ನಾವು ನಮ್ಮ ಸಮಯ ವಯಸ್ಕರೆಲ್ಲ ರಜೆಯಲ್ಲಿ ಬಜಂಟ್ ( ಒಣ ಸೆಗಣಿಯ ಮುದ್ದೆ) ಹೆಕ್ಕಲು ಗುಡ್ಡೆ ಗೆ ಹೋಗುವುದು ಸಾಮಾನ್ಯ ವಿಚಾರ ಆಗಿತ್ತು. ನಮಗೆ ಇದೇನೂ ಬೇಸರದ ವಿಚಾರವಲ್ಲ.ಆಟ ಆಡಿಕೊಂಡುದಾರಿಯಲ್ಲಿ ಸಿಕ್ಕ  ಕೇಪುಳದ ಹಣ್ಣು ಮುಳ್ಳು ಹಣ್ಣು ಚೂರಿ ಹಣ್ಣು ತಿಂದುಕೊಂಡು ಬಜಂಟ್ ಹುಡುಕಿ ಹೆಕ್ಕಿ ಗೋಣಿ ಅಥವಾ ಕುರುವೆಗೆ ಹಾಕಿ ತರ್ತಿದ್ದೆವು

ದಾರಿಯಲ್ಲಿ ಐರೋಳು ಸೊಪ್ಪು ಸಿಕ್ಕರೆ ಅದನ್ನು ಕಿತ್ತು ತರುತ್ತಿದ್ದೆವು.ಇದಕ್ಕೆ ಹಲಸಿನ ಬೀಜ ಹಾಕಿ‌ ಮಾಡುವ ಪಲ್ಯದ ರುಚಿ ನೆನೆದರೆ ಈಗಲೂ ನನ್ನ ಬಾಯಿಯಲ್ಲಿ ನೀರು ಒಸರುತ್ತದೆ

ಅಂತೆಯೇ ಕಾನ‌ಕಲ್ಲಟೆಕಾಯಿ ಸಿಕ್ಕರೂ ಕೊಯ್ದು ತರುತ್ತಿದ್ದೆವು.ಇದರ ಮಜ್ಜಿಗೆ ಹುಳಿ ಬಹಳ ರುಚಿಯಾದದ್ದು

ಜೊತೆಗೆ ಯಾರಿಗೆ ಹೆಚ್ಚು ಬಜಂಟ್ ಸಿಕ್ತದೆ ಎಂಬುದರಲ್ಲೂ ಸ್ಪರ್ಧೆ ಇತ್ತು

ನಾವು ಕೆಲವೊಮ್ಮೆ ಪಳ್ಳದ ಪದವಿಗೆ ಬಜಂಟು ಹೆಕ್ಕಲು ಬಂದದ್ದಿದೆ.ಇಲ್ಲಿ ಸ್ವಲ್ಪ ಒಳಭಾಗದಲ್ಲಿ ಒಂದು ಪಳ್ಳ( ಹಳ್ಳ) ಇದೆ.ಇಲ್ಲಿ ಬಂದು ನೀರಾಟ ಆಡಿದ್ದೂ ಇದೆ.ಇದರ ಬದಿಯಲ್ಲಿ ಒಂದು ದೊಡ್ಡ ಗೋಳಿ‌ಮರ ಇತ್ತು.ಅದನ್ನು ಹತ್ತಿ ಆಟವಾಡಿದ್ದೂ ಇದೆ

ಬಜಂಟ್ ಒಲೆ ಉರಿಸಲು ಬಹಳ ಉಪಕಾರಿಯಾಗಿತ್ತು.ಹಾಗಾಗಿ ಹೆಚ್ಚು ಕಡಿಮೆ ಎಲ್ಲರ ಮನೆಯ ಮಕ್ಕಳೂ ಬಜಂಟ್ ಹೆಕ್ಕುತ್ತಿದ್ದರು


ಸುಮಾರು ನಲುವತ್ತು ವರ್ಷದ ಹಿಂದೆ  ಡಿಸೆಂಬರ್ ತಿಂಗಳಿನಲ್ಲಿ . ಈ ಪಳ್ಳದ ಪದವಿಗೆ ಒಂದು ಹತ್ತು ಹನ್ನೊಂದು ವರ್ಷದ ಹುಡುಗಿ ಹುಡುಗಿಯರ ಗುಂಪು ಬಂದಿತ್ತು.ಒಬ್ಬೊಬ್ಬರು ಒಂದೊಂದು ಕಡೆಗೆ ಹೋಗಿ ಹೆಕ್ಕಿ ಒಂದು ಕಡೆ ಸೇರಿ ಮನೆ ಕಡೆ ನಡೆಯುವುದು ಕ್ರಮ.ಹಾಗೆಯೇ ಇವರೆಲ್ಲ ಚದುರಿ ಬೇರೆ ಬೇರೆ ಕಡೆ ಹೋದರು.ಇವರಲ್ಲಿ ಒಂದು ಪರ ಊರಿನ ಹತ್ತು ಹನ್ನೊಂದು ವರ್ಷದ ಹುಡುಗಿ ಇದ್ದಳು.ಇವಳ ಅಕ್ಕನ‌ಮನೆ ಕಳಿಯೂರು.ಅಕ್ಕನ ಬಾಣಂತನ ಮುಗಿಸಿ ಬಾವನ ಮನೆಗೆ ಬಂದಾಗ ಅಕ್ಕನಿಗೆ  ಸಹಾಯ ಮಾಡಲು ಇವಳು ಜೊತೆಗೆ ಬಂದಿದ್ದಳು.

ಇವಳು ಬಜಂಟ್ ಹೆಕ್ಕಿ ಸುಸ್ತಾಗಿ ನೀರು ಕುಡಿಯಲೋ ಕೈ ಕಾಲು ತೊಳೆಯಲೋ ಏನೋ..ಈ ನೀರಿನ ಪಳ್ಳಕ್ಕೆ ಬಂದಳು

ಈ ಪಳ್ಳದಲ್ಲಿ ನಡುವಿಗೆ ಹೋದರೆ ಕೆಸರು ಇದೆ.ಅದೇ ಪರಿಸರದ ನಮಗೆ ಹಿರಿಯರು ನಮಗೆ ಹೇಳಿದ್ದರು.ನಾವು ಯಾರೂ ನೀರಿಗೆ ಇಳಿದರೂ ನಡುವಿಗೆ ಹೋಗುತ್ತಿರಲಿಲ್ಲ © ಡಾ‌.ಲಕ್ಷ್ಮೀ ಜಿ‌ ಪ್ರಸಾದ್

ಈ ಹುಡುಗಿ ಈ ಪರಿಸರಕ್ಕೆ ಹೊಸಬಳಾದ ಕಾರಣವೋ ಏನೋ ನೀರಿಗಿಳಿದು ಮುಂದೆ ನಡುವಿಗೆ ಬಂದಿದ್ದಳು.ಅವಳದೇಹ  ಕೆಸರಿನಲ್ಲಿ ಮುಳುಗಿ ಕೊರಳಿನ ಮೇಲ್ಭಾಗ ಮಾತ್ರ ನೀರಿನಿಂದ ಮೇಲೆ ಉಳಿಯಿತು.ಅವಳು‌ಅತ್ತು ಕೂಗಾಡಿದರೂ ದೂರ ಚದುರಿದ್ದ ಇತರ ಹುಡುಗರಿಗೆ ಕೇಳಿಸಲಿಲ್ಲ.ಸಂಜೆಯಾದಾಗ ಎಲ್ಲರೂ ಒಟ್ಡು ಸೇರಿದರೂ ಈ ಹುಡುಗಿಯ ಪತ್ತೆ ಇಲ್ಲ.ಅಲ್ಲೇ ಅವರು ಹುಡುಕಾಡಿದರೂ ಕಾಣಿಸಲಿಲ್ಲ.ಮನೆಗೆ ಹೋಗಿರಬಹುದೆಂದು ಭಾವಿಸಿ ಎಲ್ಲರೂ ಅವರವರ ಮನೆ ಸೇರಿದರು.

ರಾತ್ರಿಯಾದರೂ ಬಾರದ ಹುಡುಗಿಯನ್ನು ಮನೆ ಮಂದಿ ಹುಡುಕಿದರೂ ಎಲ್ಲೂ ಸಿಗಲಿಲ್ಲ

ಹೀಗೆ ಮೂರು ರಾತ್ರಿ ಅವಳು ಕೆಸರಿನಲ್ಲಿ ಮುಳುಗಿಯೇ ಇದ್ದಳು.

ನಾಲ್ಕನೆಯ ದಿನ ಅವಳ ಬಾವನ ಪರಿಚಿತರೊಬ್ಬರು ಪಳ್ಳದ ಪದವಿನ ದಾರಿಯಾಗಿ ಕಟ್ಟದ ಕೋಳಿಯೊಂದನ್ನು ಹಿಡಿದುಕೊಂಡು ಕೋಳಿ ಕಟ್ಟಕ್ಕೆ ಹೋಗುವಾಗ ಕೋಳಿ ಕೈ ತಪ್ಪಿಸಿ ಓಡಿತು.ಇವರೂ ಅದನ್ನು ಹಿಡಿಯಲು ಓಡಿದರು.ಆ ಕೋಳಿ ಓಡುತ್ತಾ ಅಲ್ಲಿನ ಪಳ್ಳದ ಸಮೀಪ ಬಂತು.ಇವರು ಅಲ್ಲಿಗೆ ತಲುಪುವಷ್ಟರಲ್ಲಿ ಅದು ಅಲ್ಲಿದ್ದ ಮರ ಹತ್ತಿ ಕುಳಿತಿತು.ಅದು ಮರದ ಕೊಂಬೆಯಿಂದ ಕೊಕ್ಕು ಉದ್ದಕ್ಕೆ ಚಾಚಿ ಬಗ್ಗೆ ಕೆಳಗೆ ನೋಡುತ್ತಾ ಇತ್ತು.ಯಜಮಾನ ಕರೆದರೂ ಬರಲಿಲ್ಲ. ಇದೇನು ಬಗ್ಗಿ ನೋಡುತ್ತಿದೆ ಎಂದು ಇವರೂ ಪಳ್ಳದ ಕಡೆ ಬಗ್ಗಿ ನೋಡಿದರು.ಆಗ ಹಕ್ಕಿಯ ಸಣ್ಣ ದ್ವನಿಯಂತೆ ಈ ಹುಡುಗಿಯ ಧ್ವನಿ ಕೇಳಿಸಿತು.ಕೊರಳಿನ ಮೇಲ್ಭಾಗ ಮಾತ್ರ ಕಾಣುವ ಮನುಷ್ಯಾಕೃತಿ ಕಂಡು ಮೊದಲಿಗೆ ಇವರಿಗೂ ಭಯವಾಯಿತು.ನಂತರ ಇವರ ಪರಿಚಯದವರ ಹುಡುಗಿ ಕಾಣೆಯಾದದ್ದು ನೆನಪಿಗೆ ಬಂದು ಅವಳು ಇವಳೇ ಇರಬೇಕೆಂದು ಕಷ್ಟ ಪಟ್ಟು ಸಮೀಪ ಹೋಗಿ ಅವಳನ್ನು ಕೆಸರಿನಿಂದ ಎತ್ತಿ ಹೊರ ತಂದರು.ಅವಳ ಕಾಲುಗಳೆಲ್ಲ‌ ಬಿಳಿಯಾಗಿ‌ ಮರಗಟ್ಟಿ ಹೋಗಿತ್ತು. ಇವರು ಅವಳನ್ನು ಹರಗಲ ಮೇಲೆ ಹೊತ್ತು ತಂದು ಅವಳ ಅಕ್ಕನ‌ಮನೆಗೆ ತಂದರು‌.ನಂತರ ಅವಳಿಗೆ ಚಿಕಿತ್ಸೆ ಕೊಡಿಸಿ ಮನೆಯವರು ಬದುಕಿಸಿದರು.

ಈ ಸಮಯದಲ್ಲಿ ಅವಳ ಸಂಬಂಧಿಕರು ನಮಗೆ ಪರಿಚಯದವರೂ ಆಗಿದ್ದವರೊಬ್ಬರು " ನಿಕ್ಕ್ ರಾತ್ರೆ ಪೋಡಿಗೆ ಆತುಜ್ಜಿಯಾ ? ಚಳಿ ಆತುಜ್ಜಿಯಾ ? ( ನಿನಗೆರಾತ್ರಿ ಭಯವಾಗಲಿಲ್ವ? ಚಳಿಯಾಗಲಿಲ್ವ ?ಎಂದು ಕೇಳಿದ್ದರು © ಡಾ‌ ಲಕ್ಷ್ಮೀ ಜಿ ಪ್ರಸಾದ್ 

ಆಗ ಅವಳು " ರಾತ್ರೆ ಆನಗ ಒರ್ತಿ ಅಜ್ಜಿ ದೀಪ ಪತ್ತೊಂಡು ಬತ್ತು ಎನ್ನ ಕೈತಲ್ ಕುಳ್ಳೊಂದಿತ್ತೆರ್.‌ಎಂಕ್ ದಾಲ ಪೋಡಿಗೆ ಆತುಜ್ಜಿ .‌ಚಳಿಲ ಆತುಜ್ಜಿ( ರಾತ್ರಿಯಾಗುವಾಗ ಒರ್ವ ಅಜ್ಜಿ ದೀಪ ಉರಿಸಿಕೊಂಡು ಬಂದು ನನ್ನ ಸಮೀಪ ಕುಳಿತುಕೊಳ್ಳುತ್ತಿದ್ದರು.ನನಗೆ ಭಯವು ಆಗಲಿಲ್ಲ ಚಳಿಯೂ ಆಗಲಿಲ್ಲ ) ಎಂದು ಆ ಹುಡುಗಿ ಹೇಳಿದ್ದಳು

ಅ ಹುಡುಗಿ ದೊಡ್ಡವಳಾಗಿ ನಂತರ ಅವಳಿಗೆ ಮದುವೆಯಾಗಿ‌ತ್ತು ಈಗ  ಮಕ್ಕಳು ಮೊಮ್ಮಕ್ಕಳೂ ಆಗಿರಬಹುದು  

ಆದರೆ ಇಂದಿಗೂ ನಮಗೆ ಕಾಡುವ ಪ್ರಶ್ನೆ..ಅವಳ ಜೊತೆಗೆ ರಾತ್ರಿ ದೀಪ ಹಿಡಿದು ಕುಳಿತ ಅಜ್ಜಿ ಯಾರು ? ಹಗಲು ಆಕೆ ಎಲ್ಲಿಗೆ ಹೋದರು‌? 

ಆಕೆ ರಕ್ತೇಶ್ವರಿ ದೈವ .ಕೋಳಿಯನ್ನು ಅಲ್ಕಿಗೆ ಬರುವಂತೆ ಮಾಡಿ ರಕ್ಷಣೆ ಮಾಡಿದ್ದೂ ರಕ್ತೇಶ್ವರಿ ದೈವ ಎಂದು ನಮ್ಮ‌ಹಿರಿಯರು ಊರವರು ಹೇಳುತ್ತಿದ್ದರು.

ನಮಗೆ ಗೊತ್ತಿಲ್ಲದೇ ಇರುವ ಇಂತಹ ಅನೇಕ ವಿಚಾರಗಳಿವೆ

ದೈವ ದೇವರುಗಳ ಮಹಿಮೆಯನ್ನು ನಾವು ಪೂರ್ಣವಾಗಿ ಅರಿಯಲಾರೆವು..

ತೇನ ವಿನಾ ತೃಣಮಪಿ ನ ಚಲತಿ 

( ದೇವರ ಆಣತಿಯ ಹೊರತಾಗಿ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ) - ಡಾ.ಲಕ್ಷ್ಮೀ ಜಿ ಪ್ರಸಾದ್ 

2 comments:

  1. ಅಬ್ಬಾ.. ಆ ಹುಡುಗಿಯ ಅದೃಷ್ಟವೇ ಸರಿ... ಪ್ರಪಂಚದಲ್ಲಿ ಏನೆಲ್ಲ ವಿಸ್ಮಯಗಳು ಇವೆ.🙏🙏

    ReplyDelete