ಶ್ರೀಮತೀ ಡಾ.ಲಕ್ಷ್ಮೀ ಜಿ. ಪ್ರಸಾದ್ ರವರ ಸಂಶೋಧನಾ ಪರಿಶ್ರಮದ ಫಲವಾಗಿ, ಸಾರಸ್ವತ ಕುಸುಮಾಂಜಲಿಯಾಗಿ ಮೂಡಿಬಂದ *ಕರಾವಳಿಯ ಸಾವಿರದೊಂದು ದೈವಗಳು* ಅನ್ನುವ ಉದ್ಗ್ರಂಥವು ಸರಸ್ವತೀ ಸಮಾರಾಧಕರಿಗೊಂದು ಅತ್ಯಮೂಲ್ಯ ಪ್ರಸಾದ. ನನ್ನ ಅನಿಸಿಕೆಯ ಪ್ರಕಾರ ದೇವರು, ದೈವಗಳು ಇತ್ಯಾದಿಯಾಗಿ ಎಲ್ಲವೂ ನಮ್ಮ ಜೊತೆಯಾಗಿದ್ದು ನಮ್ಮನ್ನು ಪೊರೆಯುವ ಒಂದು ಅಲೌಕಿಕ ಶಕ್ತಿ. ಈ ಕೆಲವೊಂದಷ್ಟು ವಿಚಾರಗಳಲ್ಲಿ ಯಾಕೆ? ಏನು? ಹೇಗೆ ಇತ್ಯಾದಿ ತರ್ಕ ವಿತರ್ಕಗಳು ಅನುಚಿತ. ಭಾರತೀಯರ ಭಾವತಂತುವೇ ಈ ಶಕ್ತಿಯ ವಿರಾಟ್ ಸ್ವರೂಪದ ಮೂಲಾಧಾರ. ಈ ಶಕ್ತಿಯ ಆರಾಧನೆಯಲ್ಲಿ ಸಗುಣಾರಾಧನೆ ಹಾಗೂ ನಿರ್ಗುಣಾರಾಧನೆ ಎಂಬೆರಡು ಪ್ರಧಾನ ಮಾರ್ಗಗಳು. ಇವೆರಡರಲ್ಲಿ ಹೆಚ್ಚಿನವರು ಆಶ್ರಯಿಸುವುದು ಸಗುಣಾರಾಧನೆಯನ್ನು. ವೇದಮೂಲವಾಗಿ ಹೊರಹೊಮ್ಮಿದ ಪುರಾಣಾದಿ ಅನೇಕ ವಾಙ್ಮಯಗಳ ಮೂಲಕ ಶ್ರೀರಾಮ, ಕೃಷ್ಣರೇ ಮೊದಲಾದ ದೇವತೆಗಳನ್ನು ವಿಗ್ರಹರೂಪವಾಗಿಯೋ ಚಿತ್ರರೂಪವಾಗಿಯೋ ತಮ್ಮದೇ ನೆಲೆಯಲ್ಲಿ ಕಂಡುಕೊಳ್ಳುವ ಕಲೆ ಭಾರತೀಯರಾದ ನಮಗೆ ಸಹಜಸಿದ್ಧ. ಆದರೆ ಪ್ರಾಂತೀಯವಾಗಿ ಅಸ್ತಿತ್ವದಲ್ಲಿರುವ, ನಿತ್ಯಸತ್ಯವಾದ ದೈವಗಳ ಪ್ರಪಂಚವು ನೆಲೆಯಾಗಿರುವುದು ಸತ್ಯ, ಧರ್ಮ, ನ್ಯಾಯ, ನೀತಿಗಳ ಮೂಲಕವಾಗಿ. ಪೂರ್ಣಪ್ರಮಾಣದ ಸಗುಣಾರಾಧನೆಯೂ ಇಲ್ಲದೆ ನಿರ್ಗುಣಾರಾಧನೆಯೂ ಆಗಿರದೆ ದೈವಗಳು ಆರಾಧ್ಯವಾಗಿರುವುದು ಅನುಭವವೇದ್ಯ. ಹಾಗಾಗಿ ಕಾಲ ಬದಲಾದಂತೆ ದೈವಗಳ ಕುರಿತಾಗಿ ಪ್ರಶ್ನೆ ಎತ್ತುವುದು ದೂರದ ಮಾತಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಜೀವನೋಪಾಯಗಳನ್ನು ಕಂಡುಕೊಳ್ಳುತ್ತಾ ದೂರದೂರುಗಳನ್ನು ಸೇರಿಕೊಂಡಾಗ ದೈವಾರಾಧನೆಯು ತಮ್ಮ ಮೂಲಸ್ಥಾನದಲ್ಲಿ ಮಾತ್ರವೇ ಆರಾಧನೆಯಾಗಿ ಉಳಿದಾಗ ಸಹಜವಾಗಿಯೇ ಮುಂದಿನ ತಲೆಮಾರಿಗೆ ದೈವಗಳ ಸತ್ತ್ವ, ಚೌಕಟ್ಟುಗಳು ಅಜ್ಞಾತವಾಗಿಯೇ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ. ಆ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ಈ ಉದ್ಗ್ರಂಥವು ದಾರಿದೀಪ! ಸತ್ಯ, ಧರ್ಮಗಳಲ್ಲಿ ನಡೆದು ದೈವಗಳ ಸ್ವರೂಪ ಸಾಕ್ಷಾತ್ಕಾರಗೊಳಿಸುವಲ್ಲಿ ಅತ್ಯಮೂಲ್ಯ ಕಾಣಿಕೆ!
✍🏻 *ಡಾ.ಎಂ.ಸುದರ್ಶನ ಚಿಪಳೂಣಕರ್, ಮಾವಿನಮಲೆ, ದುರ್ಗ, ಕಾರ್ಕಳ*
*ಅಸೋಸಿಯೇಟ್ ಪ್ರೊಫೆಸರ್, ಚಿನ್ಮಯ ವಿಶ್ವವಿದ್ಯಾಪೀಠ, ಕೇರಳ*

No comments:
Post a Comment