ದೈವದ ನುಡಿಯಂತೆ ರಿಷಬ್ ಶೆಟ್ಟಿ ಯವರಿಗೆ ಅಪಾಯ ಕಾದಿದೆಯಾ ?
ಮತ್ತೆ ಅವರು ದೈವದಲ್ಲಿ ಅರಿಕೆ ಮಾಡಬೇಕಾ ?
- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684:
ಈ ದೈವದ ನುಡಿ ಸತ್ಯವಾಗುತ್ತದಾ ?.
ಕಳೆದೊಂದು ವಾರದಲ್ಲಿ ನನ್ನಲ್ಲಿ ಅನೇಕರು ಈ ಬಗ್ಗೆ ಕೇಳಿದ್ದಾರೆ .
ಇದಕ್ಕೆ ನನ್ನ ಸ್ಪಷ್ಟ ಉತ್ತರ ಇಲ್ಲಿದೆ© ಡಾ.ಲಕ್ಷ್ಮೀ ಜಿ ಪ್ರಸಾದ್
.ದೈವಾರಾಧನೆಗೆ ಅಪಚಾರ ಆಗುತ್ತಿರುವ ಬಗ್ಗೆ ಕೆಲವರು ಹೋಗಿ ಅರಿಕೆ ಮಾಡಿದ್ದರೇ ಹೊರತು ಕಾಂತಾರ ಸಿನಿಮಾ ಅಥವಾ ರಿಷಬ್ ಶೆಟ್ಟಿಯವರ ಬಗ್ಗೆ ಅಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದ್ದು ಓದಿದೆ
ದೈವಕ್ಕೆ ಅಪಚಾರ ಮಾಡಿ ದುಡ್ಡು ಮಾಡಿದವರನ್ನು ಅಸ್ಪತ್ರೆಗೆ ಸೇರಿಸುತ್ತೇನೆ,ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಬೇಕು ,ಹುಚ್ಚಾಟ ಮಾಡಿದವರಿಗೆ ಹುಚ್ಚು ಹಿಡಿಸ್ತೇನೆ ಎಂದು ದೈವದ ನುಡಿಯಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇಲ್ಲಿ ಕಾಂತಾರ ಸಿನಿಮಾ ದಲ್ಲಿ ದೈವಕ್ಕೆ ಅಪಚಾರ ಆಗಿದೆ ಎಂದು ದೈವ ನುಡಿಯಲ್ಲಿ ಬಂದಿಲ್ಲ.ಆದರೆ ಸಹನಾ ಕುಂದರ್ ಸೇರಿದಂತೆ ಒಂದಷ್ಟು ಜನರು ಮಾಧ್ಯಮಗಳ ಚರ್ಚೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಂತಾರ ಸಿನಿಮಾ ದಲ್ಲಿ ದೈವಾರಾಧನೆಗೆ ಅಪಚಾರ ಆಗಿದೆ ಎಂದಿರುವುದನ್ನು ಗಮನಿಸಿದ್ದೇನೆ
ಇಲ್ಲಿ ಎರಡು ವಿಚಾರಗಳನ್ನು ವಿಷದೀಕರಿಸುವೆ.
ಮೊದಲಿಗೆ ಕಾಂತಾರ ,ಮತ್ತು ಕಾಂತಾರ ಅಧ್ಯಾಯ ಒಂದರಲ್ಲಿ ದೈವಗಳನ್ನು ದೈವಾರಾಧನೆಯನ್ನು ಪ್ರಸ್ತುತ ಪಡಿಸಿದ ರೀತಿಯಲ್ಲಿ ಅಪಚಾರ ಆಗಿದೆ ಎಂದಿದ್ದು
ಹೇಗೆ ಅಪಚಾರ ಆಗಿದೆ ಎಂಬುದಕ್ಕೆ ದೃಷ್ಟಾಂತವಾಗಿ ಈ ಕೆಳಗಿನ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ
1ಲಕ್ಷ್ಮೀ ಯವರು ರಿಷಬ್ ಶೆಟ್ಟಿಯವರ ಫೋಟೋ ಪುಸ್ತಕಕ್ಕೆ ಹಾಕಿ ಕಾಂತಾರ ಪಂಜುರ್ಲಿ ಯಾರು ಗೊತ್ತುಂಟಾ ಎಂದು ಕೇಳಿದ್ದಾರೆ ಅವರು ತುಳು ಮಾತನಾಡುದಿಲ್ಲ ನಮಗೆ ಬಹಳ ಬೆಸರವಾಗಿದೆ ಎಂಬುದು ಸುವರ್ಣ ಚಾನೆಲ್ ಚರ್ಚೆಯಲ್ಲಿ ಸಹನಾ ಕುಂದರ್ ಹೇಳಿದ ಮಾತಿದು.
2 ಕಾಂತಾರ ಸಿನಿಮಾದಲ್ಲಿ ಚಾಮುಂಡಿ ಮತ್ತು ಗುಳಿಗರನ್ನು ಅಕ್ಕ ತಮ್ಮ ಎಂದು ತೋರಿಸಿದ್ದು ಚಾಮುಂಡಿ ದೈವದ ತಂದೆ ಗಾಳಿ ಭದ್ರ ದೇವರು ತಾಯಿ ನೆಲವುಲ್ಲ ಸಂಖ್ಯೆ ಎಂದು ಹೇಳಿದ್ದು ಅಪಚಾರ
3 ಕಾಂತಾರ ದಲ್ಲಿ ತೋರಿಸಿದಂತೆ ದೈವಗಳು ಯಾರನ್ನೂ ಸಂಹರಿಸುವುದಿಲ್ಲ.ಇದು ಅಪಚಾರ
4 ಗುಳಿಗ ದೈವಕ್ಕೆ ಗಡ್ಡ ಇಲ್ಲ ಇದು ಅಪಚಾರ
5 ಒಮ್ಮೆಗೆ ಒಂದು ವ್ಯಕ್ತಿಯಲ್ಲಿ ಸಿನಿಮಾ ದಲ್ಲಿ ತೋರಿಸಿರುವಂತೆ ಮಂತ್ರ ಗುಳಿಗೆ ರಕ್ತ ಗುಳಿಗ ಕತ್ತಕೆ ಕಾನದ ಗುಳಿಗ ಇತ್ಯಾದಿಬ ಅನೇಕ ದೈವಗಳ ಅವೇಶ ಬರುದಿಲ್ಲ ಇದು ಅಪಚಾರ
6 ದೈವಗಳ ಮೇಲೆ ಮಾಟ ಮಂತ್ರ ಮಾಡುದಿಲ್ಲ.ಹಾಗೆ ತೋರಿಸಿದ್ದು ಅಪಚಾರ
7 ಸಿನಿಮಾ ದಿಂದ ತುಳು ಸಂಸ್ಕೃತಿ ದೈವಾರಾಧನೆಗೆ ಏನೂ ಪ್ರಯೋಜನ ಆಗುದಿಲ್ಲ
8 ಸಿನಿಮಾ ನೋಡಿದ ಜನರಲ್ಲಿ ಕೆಲವರು ಭಾವಾವೇಶಕ್ಕೆ ಒಳಗಾಗುತ್ತಿದ್ದಾರೆ ಕೆಲವರು ಬೇಕೆಂದೇ ದೈವಾವೇಶ ಆದಂತೆ ಅಭಿನಯಿಸುತ್ತಿದ್ದಾರೆ ಇನ್ನೂ ಕೆಲವರು ವೇಷ ಹಾಕಿ ಥಿಯೇಟರ್ ಬಂದಿದ್ದಾರೆ ರೀಲ್ಸ್ ಮಾಡ್ತಿದ್ದಾರೆ ಇದು ಅಪಚಾರ
ಭೂತಾರಾಧನೆ/ದೈವಾರಾಧನೆ ಬಗ್ಗೆ ಎರಡು ದಶಕಕ್ಕಿಂತ ಹೆಚ್ಚು ಕಾಲ ಕ್ಷೇತ್ರ ಕಾರ್ಯ ಆಧರಿತವಾಗಿ ಮಾಡಿದ ನನ್ನ ಅಧ್ಯಯನದ ತಳಹದಿಯಲ್ಲಿ ಈ ಆಕ್ಷೇಪಗಳಿಗೆ ನಾನು ನಿಷ್ಪಾಕ್ಷಿಕವಾಗಿ ಉತ್ತರಿಸುವೆ
ನಾನೂ ದೈವಾರಾಧಕಳೇ.ನಮ್ಮ ತಂದೆ ಮನೆಯಲ್ಲಿ ಪೂಕರೆ ಕಂಬಳ ನೇಮ ಇದೆ .
ನನ್ನ ಮಾತೃಭಾಷೆ ಕನ್ನಡ ,ತುಳು ಅಲ್ಲ ಆದರೂ.ಕಾಸರಗೋಡಿನ ಕೊಳ್ಯೂರಿನಲ್ಲಿ ಹುಟ್ಟಿ ಬೆಳೆದು ಬಂಟ್ವಾಳದ ಕೋಡಪದವಿಗೆ ಸೊಸೆಯಾಗಿ ಬಂದು ಮಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ನೆಲೆಸಿದ ನನಗೆ ಪರಿಸರ ಭಾಷೆಯಾದ ತುಳುವಿನ ಪರಿಚಯ ಇದೆ ,ತುಳು ಮಾತನಾಡಲು ಓದಿ ಬರೆಯಲೂ ಬರುತ್ತದೆ,
ಯಾವುದೇ ಸಂಘ ಸಂಸ್ಥೆ ಯೂನಿವರ್ಸಿಟಿ ಅಕಾಡೆಮಿಗಳ ಒಂದು ಪೈಸೆ ಅನುದಾನ ಪಡೆಯದೇ ನನ್ನ ಸ್ವಂತ ಖರ್ಚಿನಲ್ಲಿ ಕಳೆದ ಎರಡೂವರೆ ದಶಕಗಳಿಂದ ಕರಾವಳಿಯಾದ್ಯಂತ ಕ್ಷೇತ್ರ ಕಾರ್ಯ ಆಧರಿತ ಅಧ್ಯಯನ ಮಾಡಿ ಈ ತನಕ ಎಲ್ಲೂ ದಾಖಲಾಗದ ಪ್ರಕಟವಾಗದ ರೆಕಾರ್ಡ್ ಕೂಡ ಆಗದ ಅನೇಕ ಪಾಡ್ದನಗಳನ್ನು ತುಳು ಜನಪದ ಹಾಡುಗಳನ್ನು ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ಅಸ್ಪಷ್ಟತೆ ಇರುವಲ್ಲಿ ಊಹಾ ಪಾಠ ಸೇರಿಸಿ ಸಾಂಸ್ಕೃತಿಕ ಪದ ಕೋಶ ರಚಿಸಿ ವಿಶ್ಲೇಷಿಸಿ ಪ್ರಕಟಿಸಿದ್ದೇನೆ ,ಒಂದು ಸಾವಿರದ ಇನ್ನೂರ ಐವತ್ತಮೂರು ದೈವಗಳ ಮಾಹಿತಿಯನ್ನು ಅಧ್ಯಯನಾತ್ಮಕವಾಗಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿ 1036 ಪುಟಗಳ ಕಲರ್ ಫೋಟೋ ಗಳಿರುವ ಗ್ರಂಥ ಗಾತ್ರದ ಬೃಹತ್ ಪುಸ್ತಕವನ್ನು ರಚಿಸಿದ್ದು ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ ಇದೂ ಸೇರಿದಂತೆ 25 ಪುಸ್ತಕಗಳು ಆರು ನೂರಕ್ಕಿಂತ ಹೆಚ್ಚು ಬರಹಗಳು ಪ್ರಕಟವಾಗಿವೆ ಹೆಚ್ಚಿನ ಬರಹಗಳು ಪುಸ್ತಕಗಳು ತುಳು ಸಂಸ್ಕೃತಿ ಗೆ ಸಂಬಂಧಿಸಿದವುಗಳಾಗಿವೆ
© ಡಾ ಲಕ್ಷ್ಮೀ ಜಿ ಪ್ರಸಾದ್
ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಇದು ಕಾಂತಾರ ಮೊದಲ ಸಿನೆಮಾ ಬರುದಕ್ಕಿಂತ ಒಂದು ವರ್ಷ ಮೊದಲೇ ಪ್ರಕಟವಾಗಿತ್ತು.ಆಗ ಈ ಪುಸ್ತಕದ ಮುಖ ಪುಟದಲ್ಲಿ ಕೊಡಮಂದಾಯ ದೈವದ ಚಿತ್ರ ಬಳಸಿದ್ದೆವು.
ಕಾಂತಾರ ಬಂದಾಗ ತುಂಬಾ ಜನರು ಮಾಯವಾಗುದರ ಬಗ್ಗೆ ಮಾಹಿತಿ ಕೇಳಿದ್ದು ಮಾಯ ಮತ್ತು ಜೋಗದ ಪರಿಕಲ್ಪನೆಯ ಜೊತೆಗೆ ಕಾಂತಾರ ಪಂಜುರ್ಲಿ ಮತ್ತು ಇನ್ನಿತರ ಹೆಚ್ಚಿನ ದೈವಗಳ ಮಾಹಿತಿ ಸೇರಿಸಿ ಮಾಯ ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎಂಬ ಗ್ರಂಥ ರಚಿಸಿದ್ದು ಇದರ ಮುಖ ಪುಟಕ್ಕೆ ರಿಷಬ್ ಶೆಟ್ಡಿಯವರ ಕಾಂತಾರ ಸಿನಿಮಾ ದ ಪಂಜುರ್ಲಿ ದೈವದ ಅಕ್ರಿಲಿಕ್ ಪೈಂಟಿಂಗ್ ನ ಸುಂದರ ಚಿತ್ರವನ್ನು ಮನಮೋಹನ್ ಅವರಿಂದ ಪಡೆದು ರಿಷಬ್ ಶೆಟ್ಟಿಯವರ ಅಪ್ತ ಸಹಸಯಕ ಸುಹಾಸ್ ಶೆಟ್ಟಿಯವರಿಗೆ ತಿಳಿಸಿ ಇದನ್ನುಮುಖ ಪುಟ ಬಳಸುದಕ್ಕೆ ಅಡ್ಡಿ ಇಲ್ಲ ಎಂದು ತಿಳಿದ ನಂತರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಮುಖ ಪುಟಕ್ಕೆ ಬಳಸಿದ್ದೇವೆ.ಇದರಿಂದಾಗಿ ದೈವಾರಾಧನೆಗೆ ಅಪಚಾರ ಆಗಲು ಸಾಧ್ಯವಿಲ್ಲ ಇನ್ನುಕಾಂತಾರ ಪಂಜುರ್ಲಿ ಎಂಬ ಹೆಸರಿನ ಒಂದು ಪಂಜುರ್ಲಿ ಇದೆ.ಇದರ ಬಗ್ಗೆ ತಿಳಿದಿದೆಯೇ ? ಎಂಬ ಶೀರ್ಷಿಕೆ ಯಡಿಯಲ್ಲಿ ಈ ದೈವದ ಮಾಹಿತಿಯನ್ನು ಆ ಸಮಯದಲ್ಲಿ ನೀಡಿದ್ದೆ.ಇದರಿಂದ ದೈವಕ್ಕೆ ಅಒಚಾರ ಆಗಲು ಹೇಗೆ ಸಾಧ್ಯ? ಅಪಚಾರ ಆಗದ ಮೇಲೆ ಸಹನಾ ಕುಂದರ್ ಅವರಿಗೆ ಬಹಳ ನೋವಾದದ್ದು ಯಾಕೆ ಎಂದು ನನಗೆ ಗೊತ್ತಾಗುತ್ತಿಲ್ಲ
ನನ್ನ ಮಾತೃಭಾಷೆ ಕನ್ನಡ ನಾನು ಇರುವುದು ಕನ್ನಡದ ನೆಲ ಬೆಂಗಳೂರಿನಲ್ಲಿ , ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಳಾಗಿ ಕೆಲಸ ಮಾಡುತ್ತಿರುವುದು ಹೀಗಿರುವಾಗ ನಾನು ಕನ್ನಡ ಮಾತನಾಡುತ್ತೇನೆ ,ತುಳು ಮಾತಾಡುದಿಲ್ಲ ( ವಾಸ್ತವದಲ್ಲಿ ನಾನು ತುಳುಭಾಷೆಯಲ್ಲಿಯೂ ಮಾತಾಡ್ತೇನೆ ಭಾಷಣ ಮಾಡ್ತೇನೆ ತುಳು ಭಾಷೆಯಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೇನೆ ತುಳು ಪತ್ರಿಕೆಗೆ ಕಾರಣಿಕದ ದೈವೊಳು ಎಂಬ ಅಂಕಣ ಕೂಡ ಬರೆದಿದ್ದೇನೆ,ತುಳುವೇತರರಿಗೆ ತುಳು ಕಲಿಸುವುದಕ್ಕಾಗಿ ತುಳು ಕಲಿಕಾ ಪಠ್ಯ ರಚಿಸಿ ಉಚಿತ ತುಳು ಸಂಭಾಷಣಾ ಶಿಬಿರಗಳನ್ನು ಆಯೋಜಿಸಿ ಅನೇಕರಿಗೆ ತುಳು ಕಲಿಸಿದ್ದೇನೆ ಕೂಡಾ) ಎಂಬುದು ಸಹನಾರಿಗೆ ಯಾಕೆ ನೋವು ಉಂಟು ಮಾಡಿದೆ ? ನಾನು ಕನ್ನಡ ಮಾತಾಡಿದ್ದರಿಂದ ದೈವಕ್ಕೆ ಏನಾದರೂ ಅಪಚಾರ ಅಗಿದೆಯಾ ? ಯಾಕೆಂದರೆ ದೈವಾರಾಧನೆಗೆ ಅಪಚಾರ ಅಗಿದೆಯೇ ಎಂಬ ವಿಷಯಕ್ಕೆ ಸಂಬಂಧಿಸಿದ ಸುವರ್ಣ ಚಾನೆಲ್ ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಹನಾ ಅವರು ನನ್ನ ಮೇಲೆ ಈ ಆರೋಪವನ್ನು ಮಾಡಿದ್ದರು.
ಎರಡನೆಯ ಆರೋಪಕ್ಕೆ ಬರೋಣ.ಚಾಮುಂಡಿ ದೈವದ ತಂದೆ ತಾಯಿ ಹೆಸರು ಗಾಳಿ ಭದ್ರ ದೇವರು ನೆಲವುಲ್ಲ ಸಂಖ್ಯೆ ಅಲ್ಲ.ಇದು ತಪ್ಪು ಎಂದಿದ್ದಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಚಾಮುಂಡಿ ಎಂದರೆ ಒಂದು ದೈವವಲ್ಲ ಅಗ್ನಿ ಚಾಮುಂಡಿ ಕೆರೆ ಚಾಮುಂಡಿ ವ್ಯಾಘ್ರ ಚಾಮುಂಡಿ ನಾಗ ಚಾಮುಂಡಿ ಗುಡ ಚಾಮುಂಡಿ ಮೊಡಚಾಮುಂಡಿ ಮೊರಸಂಡಿ ಸೇರಿದಂತೆ ಅನೇಕ ದೈವಗಳಿಗೆ ಆರಾಧನೆ ಇದೆ.ಎಲ್ಲ ಚಾಮುಂಡಿ ದೈವಗಳನ್ನು ಚಾಮುಂಡಿ ಎಂದೇ ಸಾಮಾನ್ಯವಾಗಿ ಕರೆಯಲಾಗುತ್ತದೆ. ಕರಿಚಾಮುಂಡಿಯನ್ನು ಕೂಡ ಜೆನರಲ್ ಆಗಿ ಚಾಮುಂಡಿ ಎಂದೇ ಕರೆಯಲಾಗುತ್ತದೆ. ಮಡಪ್ಪಾಡಿಯಲ್ಲಿ ಕರಿ ಚಾಮುಂಡಿ ದೈವದ ಆರಾಧನೆ ಇದ್ದು ಇಲ್ಲಿ ನೇಮ ಆಗುವಾಗ ಹೇಳಿದ ಪಾಡ್ದನದಲ್ಲಿ ಕರಿ ಚಾಮುಂಡಿ ಯ ತಂದೆ ಗಾಳಿ ಭದ್ರ ದೇವರು ನೆಲವುಲ್ಲ ಸಂಖ್ಯೆ ಎಂದಿದೆ.ಇದೇ ಪಾಡ್ದನದಲ್ಲಿ ಇನ್ನೊಂದು ಕಡೆ ತಂದೆ ಕಾನಕಲ್ಲಟೆರಾಯ ತಾಯಿ ನೆಲವುಲ್ಲ ಸಂಖ್ಯೆ ಎಂದಿದೆ.ಕಾನಕಲ್ಲಟೆರಾಯ ಮತ್ತು ಗಾಳಿ ಭದ್ರ ದೇವರು ಇಬ್ಬರೂ ಒಂದೇ ಎಂಬರ್ಥ ಇಲ್ಲಿದೆ.ಈ ಕಥಾನಕವನ್ನು ನಾನು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿ ಚಾಮುಂಡಿ ಮತ್ತು ಸೇರಿಗೆ ದೈವಗಳು ಅಧ್ಯಾಯದಲ್ಲಿವಿವರಿಸಿದ್ದೇನೆ.
ಅದೇ ರೀತಿ ಇದೇ ಪುಸಕದಲ್ಲಿ ಗುಳಿಗ ಮತ್ತು ಸೇರಿಗೆ ದೈವಗಳು ಅಧ್ಯಾಯದಲ್ಲಿ ಗುಳಿಗನ ಹುಟ್ಟಿಗೆ ಸಂಬಂಧಿಸಿದ ಪಾಡ್ದನದಲ್ಲಿ ಗುಳಿಗ ನ ತಂದೆ ಗಾಳಿ ಭದ್ರ ದೇವರು ತಾಯಿ ನೆಲವುಲ್ಲ ಸಂಖ್ಯೆ ಎಂದಿರುವ ಬಗ್ಗೆ ಬರೆದಿದ್ದೇನೆ
ತಂದೆ ತಾಯಿ ಇಬ್ಬರೂ ಈ ಎರಡೂ ದೈವಗಳಿಗೆ ಒಂದೇ ಅಗಿರುವ ಕಾರಣ ಚಾಮುಂಡಿ ಮತ್ತು ಗುಳಿಗ ದೈವಗಳನ್ನು ಅಕ್ಕ ತಮ್ಮ ಎಂದು ಪರಿಕಲ್ಪಿಸಿದ್ದರಲ್ಲಿ ನನಗೇನೂ ಅಪಚಾರ ಕಾಣುತ್ತಿಲ್ಲ.ಇವರಿಬ್ಬರೂ ಅಕ್ಕ ತಮ್ಮ ಎಂಬ ಐತಿಹ್ಯ ಇದ್ದಿರಲೂ ಬಹುದು.ಅದನ್ನು ಆಧರಿಸಿ ರಿಷಬ್ ಶೆಟ್ಟಿಯವರು ಸಿನಿಮಾ ದಲ್ಲಿ ಈ ವಿಷಯವನ್ನು ಅಳವಡಿಸಿಕೊಂಡಿರಬಹುದು.
ಮೂರನೇ ಆರೋಪ ಕಾಂತಾರ ದಲ್ಲಿ ತೋರಿಸಿರುವಂತೆ ದೈವಗಳು ಯಾರನ್ನು ಸಂಹಾರ ಮಾಡುದಿಲ್ಲ ಎಂಬುದು
ವಾಸ್ತವವಾಗಿ ಅನೇಕ ದೈವಗಳು ದುಷ್ಟರನ್ನು ಸಂಹಾರ ಮಾಡಿದ ಕಥಾನಕಗಳಿವೆ.ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದಲ್ಲಿ ಕತ್ತಲೆ ಕಾನದ ಗುಳಿಗ ಚಾಮುಂಡಿಗೆ ದ್ರೋಹ ಎಸಗಿದ ಗಣಪತಿ ಭಟ್ಟ ಎಂಬವನನ್ನು ಸಂಹರಿಸಿದ ಕಥಾನಕ ಇದೆ,ಆಲಿ ಎಂಬ ಮಂತ್ರವಾದಿಯನ್ನು ಸ್ತ್ರೀಯ ರೂಪದಲ್ಲಿ ಬಂದು ನೀರಿನಲ್ಲಿ ಮುಳುಗಿಸಿ ಚಾಮುಂಡಿ ದೈವ ಸಂಹರಿಸಿದ ಕಥಾನಕ ಇದೆ ಇನ್ನೂ ಅನೇಕ ಕಥಾನಕಗಳಿವೆ
ನಾಲ್ಕನೇ ಆರೋಪ ಗುಳಿಗ ದೈವಕ್ಕೆ ಗಡ್ಡ ಇದ್ದಂತೆ ತೋರಿಸಿದ್ದು ಅಪಚಾರ ಎಂದು.
ಅನೇಕ ದೈವಗಳಿಗೆ ಕೃತಕವಾಗಿ ದೊಮೀಸೆ ಗಡ್ಡಗಳನ್ನು ಕಟ್ಟುವ ಸಂಪ್ರದಾಯವಿದೆ ಉದಾಹರಣೆಗೆ ಬೆರ್ಮೆರ್ ದೈವಕ್ಕೆ ದೊಡ್ಡ ಗಡ್ಡ ಮೀಸೆಗಳಿರುತ್ತದೆ ,ಗುಳಿಗ ಕೂಡ ಒಂದು ದೈವವಲ್ಲ.ಗುಳಿಗ ಹೆಸರಿನಲ್ಲಿ ಅಂತ್ರ ಗುಳಿಗ ಮಂತ್ರಗುಳಿಗ ಮಂತ್ರವಾದಿ ಗುಳಿಗ ಸನ್ಯಾಸಿ ಗುಳಿಗ ಕತ್ತಲೆಕಾನದ ಗುಳಿಗ ಅಗ್ನಿ ಗುಳಿಗ ಮುಕಾಂಬಿ ಗುಳಿಗ ಸುಬ್ಬಿಯಮ್ಮ ಗುಳಿಗ ಕಾಲನ್ ಗುಳಿಗ ಮೊದಲಾದ ಅನೇಕ ಗುಳಿಗ ದೈವಗಳಿಗೆ ಆರಾಧನೆ ಇದೆ.ಸನ್ಯಾಸಿ ಗುಳಿಗನಿಗೆ ಗಡ್ಡ ಮೀಸೆ ಜಡೆ ಇರುತ್ತದೆ.ಕೆಲವೆಡೆ ಮಂತ್ರವಾದಿ ಗುಳಿಗನ ಮುಖವಾಡದಲ್ಲಿ ಗಡ್ಡ ಮೀಸೆಯನ್ನು ದ್ಯೋತಿಸುವ ರೇಖೆಗಳಿರುತ್ತದೆ
ಕೇರೞದ ಪಡೆಯಣಿಯಲ್ಲಿ ? ಸಮೂಹ ಆರಾಧನೆ ಇದ್ದು ಇಲ್ಲಿ ಕೆಲವು ಕಡೆ ಗುಳಿಕನ್ ತೆಯ್ಯಂಗೆ ಗಡ್ಡವಿದೆ ಇಲ್ಲಿ ಗಣಪತಿಗೂ ಕೋಲ ಇರುತ್ತದೆ. ಅಲ್ಲದೇ ಇದಕ್ಕೂ ಮೊದಲು ಯಕ್ಷಗಾನ ನಾಟಕಗಳಲ್ಲಿ ದೈವಗಳನ್ನು ತೋರಿಸಿದ್ದು ಅಲ್ಲೆಲ್ಲ ವೇಷಭೂಷಣಗಳಲ್ಲಿ ವ್ಯತ್ಯಾಸ ಇದೆ.ಇದು ಸಿನಿಮಾ ನಿಜವಾದ ಕೋಲ ಅಲ್ಲ ಹಾಗಾಗಿ ಈ ಅರೋಪದಲ್ಲಿ ಹುರುಳಿಲ್ಲ ಎಂದು ನನಗನಿಸುತ್ತದೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಐದನೆಯ ಆರೋಪ ಒಮ್ಮೆಗೆ ಅನೇಕ ದೈವಗಳು ಬರುವುದಿಲ್ಲ ಎಂದು
ಒಂದು ದೈವಕ್ಕೆ ಅದೇ ವೇಷಭೂಷಣದಲ್ಲಿಬ ದರ್ಶನದಲ್ಲಿ ಬೇರೆ ಬೇರೆ ದೈವಗಳಿಗೆ ಸಂಬಂಧಿಸಿದ ಸಣ್ಣ ಸಣ್ಣ ಪಾಡ್ದನ ನುಎಇ ಹೇಳಿ ಅನೇಕ ದೈವಗಳನ್ನು ಆರಾಧಿಸುವ ಕ್ರಮಇದೆ ಉದಾಹರಣೆಗೆ ಜಾಲಾಟದಲ್ಲಿ ನೂರ ಒಂದು ಮಲೆ ದೈವಗಳಿಗೆ ನೇಮ ಆಗುತ್ತದೆ .ಇಲ್ಲಿ ಉಲ್ಳಾಕುಲು ಚಾಮುಂಡಿ ಗುಳಿಗ ಮೊದಲಾದ ಹತ್ತು ಹದಿನೈದು ದೈವಗಳಿಗೆ ಕೋಲ ಕೊಟ್ಟು ಉೞಿದ ದೈವಗಳ ಹೆಸರು ಅಥವಾ ಗಣಗಳು ಎಂದು ಹೇಳಿ ಸಮೂಹದಲ್ಲಿ ಕಟ್ಟು ಕಟ್ಟಲೆ ನೇಮ ನೀಡಿ ಆರಾಧಿಸುವ ಪದ್ದತಿ ಇದೆ ಸಾರತೊಂಜಿ ದೈವೊಲ ಕೋಲದಲ್ಲಿಯೂ ಸಮೂಹ ಆರಾಧನೆ ಇದೆ
ಮಾಟ ಮಂತ್ರಗಳನ್ನು ದೈವಗಳ ಮೇಲೆ ಮಾಡುದಿಲ್ಲ ಹೀಗೆ ತೋರಿಸಿದ್ದು ಅಪಚಾರ ಎಂಬ ಅರೋಪ ಅರನೆಯದು.
ಅನೇಕ ದೈವಗಳನ್ನು ಮಂತ್ರವಾದಿಗಳು ದಿಗ್ಬಂಧನ ಮಾಡಲು ಯತ್ನ ಮಾಡಿ ವಿಫಲರಾಗಿ ದುರಂತವನ್ನಪ್ಪಿದ ದೈವತ್ವ ಪಡೆದು ಅರಾಧಿಸಲ್ಪಡುವ ಕಥಾನಕಗಳಿವೆ.
ಮಂಡೆಕ್ಕಾರ ಕಲ್ಲುರ್ಟಿ ಮೂಲತಃ ಓರಗವ ಬ್ರಾಹ್ಮಣ ಮಂತ್ರವಾದಿಯಾಗಿದ್ದಯ ಕಲ್ಲುರ್ಟಿ ದೈವವನ್ನು ದಿಗ್ಬಂಧನ ಮಾಡಲು ಹೊರಟಾಗ ದೈವ ಆತನನ್ನೇ ಸಂಹರಿಸಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಮುಂದೆ ಆತ ಕಲ್ಲುರ್ಟಿ ದೈವದ ಸೇರಿಗೆಗೆ ಸಂದು ಮಂಡೆಕ್ಕರ ಕಲ್ಲುರ್ಟಿ ಎಂಬ ಹೆಸರಿನಲ್ಲಿ ಅರಾಧನೆ ಪಡೆಯುತ್ತಾನೆ ಚಾಮುಂಡಿ ದೈವವನ್ನು ತಂತ್ರಿಗಳು ದಿಗ್ಬಂಧನ ಮಾಡಿ ಭೂಮಿಯಡಿಯಲ್ಲಿ ಹೂತು ಹಾಕಿದಾಗ ದೈವ ಸಿಡಿದೆದ್ದು ಬಂದಾಗ ಮೂರು ಆಳು/ಮನುಷ್ಯನಷ್ಟು ಆಳದ ಗುಂಡಿ ಉಂಟಾಗುತ್ತದೆ ಹಾಗಾಗಿ ಆ ಉಗ್ರ ದೈವವನ್ನು ಮೂವಾಳಾಂಕುಳಿ ಚಾಮುಂಡಿ ಎಂದು ಕರೆದು ಆರಾಧನೆ ಮಾಡುತ್ತಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಅಜ್ಜೆರ್ ಭಟ್ಟೆರ್ ದೈವದ ಬಗ್ಗೆಯು ಇಂತಹ ಐತಿಹ್ಯವಿದೆ.ಪೊಸಮ್ಮ ದೈವವನ್ನು ಮಂತ್ರವಾದದ ಮೂಲಕ ನಿರ್ನಂದಿಸಲು ಹೊರಟ ಮಂತ್ರವಾದಿಯ ಕಾಲಿಗೆ ದೈವ ಹೊಡೆದು ಆತನಕಾಲು ಮುರಿದ ಐತಿಹ್ಯವಿದೆ.ಹಾಗಾಗಿ ಕಾಂತಾರ ಅಧ್ಯಾಯ ಒಂದರ ಈ ಕಥಾನಕ ತೀರಾ ಅಸಂಗತವಲ್ಲ
ಇನ್ನೂ ಸಿನಿಮಾ ದಿಂದ ನಮ್ಮ ಸಂಸ್ಕೃತಿ ಹರಡುದಿಲ್ಲ ಅದರಿಂದ ಏನೂ ಪ್ರಯೊಜನವಿಲ್ಲ ಎಂಬ ಆರೋಪವಿದೆ.
ಈಗ್ಗೆ ಎರಡು ದಿನಗಳ ಮೊದಲು ಲಂಡನ್ ನಿಂದ ಮನಮೋಹನ್ ಎಂಬವರು ಕರೆ ಮಾಡಿ ನಾನು ಉಡುಪಿಯಲ್ಲಿ ಹುಟ್ಟಿ ಬೆಳೆದವನು ಆದರೂ ಕಾಂತಾರ ಅಧ್ಯಾಯ ಒಂದು ನೋಡುವ ತನಕ ಅಂತ್ರ ಗುೞುಗ ಮಂತ್ರ ಗುಳಿಗ ಕತ್ತಲೆ ಕಾನದ ಗುಳಿಗ ಮೊದಲಾದ ಬೇರೆ ಬೇರೆ ಗುಳಿಗರಿದ್ದಾರೆ ಎಂಬ ವಿಷಯವೇ ಗೊತ್ತಿರಲಿಲ್ಲ ಎಂದು ಮಾತಿನ ನಡುವೆ ಹೇಳಿದ್ದರು.ತುಳು ನಾಡಿನಲ್ಲಿ ಹುಟ್ಟಿ ಬೆಳೆದವರಿಗೆ ಕೂಡ ಈ ಸಿನಿಮಾ ಮೂಲಕ ದೈವಾರಾಧನೆಯ ಅನೆಕ ವಿಚಾರಗಳು ತಿಳಿದುಬಂದಿರುವಾಗ ಹೊರಗಿನವರಿಗೂ ತಿಳಿದು ನಮ್ಮ ಆರಾಧನೆ ಬಗ್ಗೆ ಗೌರವ ಭಕ್ತಿ ಹುಟ್ಟಿರುತ್ತದೆ ,ಕಾಂತಾರ ಬಂದ ನಂತರ ನೂರಾರು ಜನರು ತುಳುನಾಡಿಗೆ ಬಂದ ದೈವ ಕೋಲವನ್ನು ನೋಡಿ ಭಕ್ತಿ ಪರವಶರಾಗಿದ್ದಾರೆ.ಇಂತಹದೊಂದು ಶ್ರೀಮಂತ ಸಂಸ್ಕೃತಿ ಇರುವುದು ಹೊರ ಜಗತ್ತಿಗೆ ಸೂಕ್ತವಾದ ರೂಪದಲ್ಲಿ ಗೊತ್ತಾಗಿದೆ ಎನ್ನುದರಲ್ಲಿ ಯಾವುದೇ ಸಂಶಯವಿಲ್ಲ
ಇನ್ನು ಕೊನೆಯ ಆರೋಪ ಸಿನಿಮಾ ನೋಡಿ ದೈವಾವೇಶವನ್ನು ಅನುಕರಿಸುತ್ತಿದ್ದಾರೆ ಎಂದು.
ಯಕ್ಷಗಾನ ನೋಡಿಯೂ ಜನರು ಮೊದ ಮೊದಲಿಗೆ ಅನುಕರಿಸುತ್ತಿದ್ದರು ನಂತರ ಅನೇಕ ಯಕ್ಷಗಾನ ಗಳು ಬಂದಾಗ ಜನರಿಗೆ ಅದು ವಿಶೇಷ ಎನಿಸಲಿಲ್ಲ ,ಕಾಂತಾರ ಬಹಳ ಜನಪ್ರಿಯವಾಗಿದ್ದು ರಿಷಬ್ ಶೆಟ್ಟಿಯವರ ಅಭಿನಯ ಅತ್ಯದ್ಭುತ ಆಗಿದೆ ಹಾಗಾಗಿ ಜನರು ಇದರತ್ತ ಅಕರ್ಷಿತರಾಗುದು ಸಹಜ ಆದರೆ ಹಾದಿ ಬೀದಿಯಲ್ಲಿ ದೈವದ ಅನುಕರಣೆ ಸರಿಯಾದುದಲ್ಲ ಎಂಬ ಮಾತಿಗೆ ನನ್ನ ಸಹಮತ ಇದೆ..© ಡಾ.ಲಕ್ಷ್ಮೀ ಜಿ ಪ್ರಸಾದ್
ಇನ್ನು ಥಿಯೇಟರ್ ನಲ್ಲಿ ಅವೇಶಕ್ಕೆ ಒಳಗಾಗುದು ಭಕ್ತಿ ಪಾರಮ್ಯದಿಂದ ..ದುರ್ಬಲ ಮನಸ್ಸಿನವರಿಗೆ ಇಂತಹ ಆವೇಶ ಅಗುತ್ತದೆ ಇದು ನಿಜವಾದ ದೈವಾವೇಶವಲ್ಲ.ಒದು ಕ್ಷಣಿಕವಾಗಿ ಬರುವ ಭಾವಾವೇಶ ಅಷ್ಟೇ.
ದೈವವಾವೇಶಕ್ಕೂ ಭಾವಾವೇಶಕ್ಕೂ ಬಹಳ ವ್ಯತ್ಯಾಸ ಇದೆ
ಉದಾಹರಣೆಗೆ ಹೇಳುದಾದರೆ ಒಂದು ಹೈಸ್ಕೂಲ್ ಮಕ್ಕಳು ಭಕ್ತ ಪ್ರಹ್ಲಾದ ನಾಟಕಮಾಡುತ್ತಿರುತ್ತಾರೆ ಅಲ್ಲಿ ಒಂಬತ್ತನೆ ತರಗತಿ ವಿದ್ಯಾರ್ಥಿನಿ ಕಯಾದುವಿನ ಪಾತ್ರವನ್ನೂ ನಾಲ್ಕನೇ ತರಗತಿಯ ವಿದ್ಯಾರ್ಥಿ ಪ್ರಹ್ಲಾದನ ಪಾತ್ರವನ್ನು ಮಾಡಿರುತ್ತಾನೆ .ತಾಯಿ ಕಯಾದು ಮಗನಿಗೆ ವಿಷ ಕೊಡುವ ಸನ್ನಿವೇಶ .ಕಯಾದು ಪಾತ್ರ ಮಾಡಿದ ಹುಡುಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.ಅವಳು ಕಯಾದುವಲ್ಲ.ಅಲ್ಲಿರುವುದುವಾವಳ ಮಗನಲ್ಲ ಕೈಯಲ್ಲಿ ಇರುವುದು ವಿಷವೂ ಅಲ್ಲ.ಅದರೆ ಅ ಕ್ಷಣಕ್ಕೆ ತಾನು ಕಯಾದು ತನ್ನ ಕೈಯಲ್ಲಿ ಇರುವದ್ದು ವಿಷ ,ಅಲ್ಲಿರುವವನು ನನ್ನಮಗ ಎಂದುಕೊಂಡಿರುತ್ತಾಳೆ ಹಾಗಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.ಇದರ ಅರ್ಥ ಕಯಾದುವಿನ ಆತ್ಮ ಅವಳ ಮೈಮೇಲೆ ಬಂದಿದೆ ಎಂದಲ್ಲ.ಅವಳು ಭಾವಾವೇಶಕ್ಕೆ ಒಳಗಾಗಿದ್ದಳು ಅಷ್ಟೇ
ಹೀಗೆ ಸಿನೆ ನೋಡಿ ಭಾವಾವೇಶಕ್ಕೆ ಒಳಗಾಗುದನ್ನು ತಿಳುವಳಿಕೆ ಮೂಡಿಸುದರ ಮೂಲಕ ಕಡಿಮೆ ಮಾಡಬಹುದು. ಇಂತಹ ಭಾವಾವೇಶ ಸಿನಿಮಾ ನೋಡಿದಾಗ ಮಾತ್ರವಲ್ಲ ನಿಜವಾದ ದೈವ ಕೋಲ ಆಗುವಾಗಲೂ ಅನೇಕರಿಗೆ ಉಂಟಾಗುತ್ತದೆ ಅನೇಕ ಕಡೆಗಳಲ್ಲಿ ನಾನು ನೋಡಿದ್ದೇನೆ.ಇದಕ್ಕೆ ಭಕ್ತಿ ಪರವಶತೆ ಹಾಗೂ ಮನೋದೌರ್ಬಲ್ಯ ಕಾರಣವಾಗಿದೆ.ಹೆಸರಿಗಾಗಿ ಬೇಕೆಂದೇ ಮಾಡುವುದನ್ನು ನಾನು ಮಾತ್ರವಲ್ಲ ಯಾರೂ ಒಪ್ಪಲಾರರು
ಇನ್ನೂ ಕಾಂತಾರ ಸಿನಿಮಾ ದಲ್ಲಿ ದೈವಗಳನ್ನು ತೋರಿಸಿದ್ದು ದೈವ ಕಥಾನಕವನ್ನು ತಂದಿದ್ದು ಅಪಚಾರ ಎಂಬ ಆರೋಪ ಹಲವರದು
ಕಾಂತಾರ ಸಿನಿಮಾ ಬರುವ ಮೊದಲೇ ಗಗ್ಗರ ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಸೇರಿದಂತೆ ಅನೇಕ ಸಿನಿಮಾ ಗಳಲ್ಲಿ ದೈವಗಳನ್ನು ದೈವ ಕಥಾನವನ್ನು ತೋರಿಸಿದ್ದಾರೆ ಇದಕ್ಕೂ ಮೊದಲು ನಾಟಕ ಯಕ್ಷಗಾನಗಳಲ್ಲಿ ದೈವಗಳ ಪಾತ್ರಗಳು ದೈವದ ಕಥೆಗಳು ಬಂದಿವೆ.ಸ್ವತಃ ದೈವ ನರ್ತಕರಾದ ದಯಾನಂದ ಕತ್ತಲಸಾರ್ ಅವರು ಯಕ್ಷಗಾನ ಒಂದರಲ್ಲಿ ಕೊರಗ ತನಿಯ ದೈವದ ಪಾತ್ರವನ್ನು ಮಾಡಿದ್ದಾರೆ.ಕಲ್ಕುಡ ಕಲ್ಲುರ್ಟಿ ದೈವಕ್ಕೆ ಸಂಬಂಧಿಸಿದ ಒಂದು ಸಿನಿಮಾವನ್ನು ಬೆಂಬಲಿಸಿ ವೀಡಿಯೋ ಮಾಡಿದ್ದು ನನಗೆ ನೋಡಿದ ನೆನಪಿದೆ.ಯಕ್ಷಗಾನದಂತೆ ಸಿನಿಮಾ ಕೂಡ ಒಂದು ದೃಶ್ಯ ಕಾವ್ಯ.ಯಕ್ಷಗಾನದಲ್ಲಿ ದೈವದ ಪಾತ್ರ ತರುದು ದೈವ ಕಥಾನಕ ತೋರಿಸುದು ಅಪಚಾರವಲ್ಲದಿರುವಾಗ ಕಾಂತಾರ ಸಿನಿಮಾದಲ್ಲಿ ತೋರಿಸುದು ಅಪಚಾರ ಆಗಲು ಸಾಧ್ಯವಿಲ್ಲ. © ಡಾ.ಲಕ್ಷ್ಮೀ ಜಿ ಪ್ರಸಾದ್
ಇನ್ನು ಪೆರಾರದಲ್ಲಿ ದೇವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಬೇಕು ಎಂದು ನುಡಿಯಾದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ
ದೈವ ನರ್ತಕರಾದ ದಯಾನಂದ ಕತ್ತಲಸಾರ್ ಅವರ ದೈವದ ಎಣ್ಣೆ ಬೂಳ್ಯದ ಒಂದು ವೀಡಿಯೋ ವೈರಲ್ ಆಗಿತ್ತು.ಇದನ್ನು ವೀಡಿಯೋ ಮಾಡಿದ ಬಗ್ಗೆ ಹರಡಿದ ಬಗ್ಗೆ ಯಾರ ವಿರೋಧವೂ ಬಂದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.
ಇಲ್ಲಿ ದೈವಕ್ಕೆ ಅಪಚಾರ ಮಾಡಿ ದುಡ್ಡು ಮಾಡಿದರೆ ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ನುಡಿಯಾಗಿದೆಯಂತೆ.ದೈವ ಇಲ್ಲಿ ಅಪಚಾರ ಮಾಡಿದವರ ಬಗ್ಗೆ ಹೇಳಿದೆಯೇ ಹೊರತು ಕಾಂತಾರ ಸಿನೆಮಾ ಬಗ್ಗೆ ಅಥವಾ ರಿಷಬ್ ಶೆಟ್ಟಿಯವರು ಅಪಚಾರ ಮಾಡಿದ್ದಾರೆ ಎಂದಿಲ್ಲ.
ಹಾಗಾಗಿ ದೈವದ ಅನುಮತಿ ಪಡೆದು ದೈವಾರಾಧನೆಗೆ ಯಾವುದೇ ಚ್ಯತಿ ಬರದಂತೆ ತೆರೆಯಲ್ಲಿ ತೋರಿಸಿ ಯಶಸ್ವಿಯಾಗಿದ್ದು ಇದರಲ್ಲಿ ಅಪಚಾರ ಆಗದೇ ಇರುವ ಕಾರಣ ರಿಷಬ್ ಶೆಟ್ಟಿಯವರು Rishab Shetty Films Rishab Shetty ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ನನಗನಿಸುತ್ತದೆ
ಇನ್ನು ದೈವ ಕಟ್ಟಿದಾಗ ನುಡಿದ ನುಡಿಗಳು ನೂರಕ್ಕೆ ನೂರರಷ್ಟು ನಿಜವಾಗಿದೆಯೇ ಎಂಬುದೊಂದು ಪ್ರಶ್ನೆ..ಅನೇಕ ಪ್ರಕರಣಗಳಲ್ಲಿ ದೈವ ನುಡಿದಂತೆಯೇ ಆಗಿರುದಕ್ಕೆ ಅನೇಕ ದೃಷ್ಟಾಂತಗಳು ಸಿಗುತ್ತವೆ
ಎರಡು ಪ್ರಕರಣಗಳಲ್ಲಿ ದೈವ ನುಡಿದಂತೆ ಆಗದೇ ಇರುವದ್ದು ನನ್ನ ಗಮನಕ್ಕೆ ಬಂದಿದೆ
ಯಾಕೆ ಹೀಗೆ ? ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ.ದೈವ ಕಟ್ಟುವವರ ಮಾತು ನಿಜವಾಗ ಬೇಕಾದರೆ ದೈವ ಬಂದು ನುಡಿಸಿರಬೇಕು.ದೈವ ಬಂದು ನುಡಿಸಬೇಕಾದರೆ ದೈವ ಕಟ್ಟುವವರು/ ದೈವ ನರ್ತಕರು ಕಾಯೇನ ವಾಚಾ ಮನಸಾ ಶುದ್ಧ ರಾಗಿರಬೇಕು.ಬಹಳ ಸಾತ್ವಿಕರಾಗಿ ಇರಬೇಕು
ಮಾತಿನಲ್ಲಾಗಲೀ ನಡೆ ನುಡಿಯಲ್ಲಾಗಲೀ ಅಪಚಾರ ಎಸಗಿರಬಾರದು.ಯಾರಗೇ ಆದರೂ ಕೆಟ್ಟ ಮಾತನ್ನು ಬಳಸಿ ಅನ್ಯರನ್ನು ನಿಂದಿಸಿರಬಾರದು.ಬೇರೆಯವರಿಂದ ಬೈಗುಳ ತಿಂದಿರಬಾರದು .ಪೆಟ್ಟು ತಿಂದಿರಬಾರದು ಇತ್ಯಾದಿ ದೈವ ನರ್ತಕರಿಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಪ್ರಚಲಿತವಿದೆ.ದೈವವಾವೇಶವಾಗಲು ಮನಸು ದೇಹ ಶುದ್ದವಾಗಿರಬೇಕು .
ಈ ರೀತಿಯಲ್ಲಿ ಸಾತ್ವಿಕವಾಗಿ ಬದುಕುವ ದೈವ ಕಟ್ಟುವ ದೈವ ನರ್ತಕರ ನಾಲಿಗೆ ಯಲ್ಲಿ ದೈವವೇ ನುಡಿಯುತ್ತದೆ .ಆಗ ಆ ಮಾತುಗಳು ಸತ್ಯವಾಗುತ್ತದೆ ಎಂಬ ನಂಬಿಕೆ ಇದೆ.ಅದರಂತೆ ಜನರು ದೈವ ನುಡಿಗೆ ತಲೆಬಾಗಿ ನಡೆದುಕೊಳ್ಳುತ್ತಾರೆ
ಇನ್ನೂ ದೈವ ಕಟ್ಟಿದಾಗ ದೈವ ಕಟ್ಟಿದ ವ್ಯಕ್ತಿ ಮಾಯವಾದ ಅನೇಕ ನಿದರ್ಶನಗಳಿವೆ.ಸುರತ್ಕಲ್ ಸಮೀಒದ ಕುರುವರಬೆಟ್ಟಿನಲ್ಲಿ ರಾಹು ಗುಳಿಗ ಕಟ್ಟಿದ ವ್ಯಕ್ತಿ ಅವೇಶ ಗೊಂಡು ಗೋಳಿಮರ ಹತ್ತಿ ಮಾಯವಾದ ದೃಷ್ಟಾಂತವಿದೆ.ಅದೇ ರೀತಿ ಕೂಜಿಲು ದೈವವನ್ನು ಕಟ್ಟಿದ ವ್ಯಕ್ತಿ ಕಾಡಿನೊಳಗೆ ಹೋಗಿ ಮಾಯವಾದ ಐತಿಹ್ಯವಿದೆ.ಇಂತಹ ಅನೇಕ ಕಥಾನಗಳು ಐತಿಹ್ಯಗಳಿವೆ ಮಾಯವಾದವರು ಏನಾಗುತ್ತಾರೆ ? ಹೆಚ್ಚಿನ ಮಾಹಿತಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿದೆ - ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684:
#ಕಾಂತಾರ #KantaraChapter1 #kantarareview
Hombale Films
#humblebeginnings
#rishabshetty
No comments:
Post a Comment