Saturday, 22 November 2014

ಕೊನೆ ಓಟ :ಕಂಬಳ ಕಳದಲ್ಲಿ ಕಳವಳ -ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 23 ನವೆಂಬರ್ 2014,ಸಾಹಿತ್ಯಿಕ ಪುರವಣಿ :ಖುಷಿ ಪುಟ 1 ಮತ್ತು 3)



                    copy rights reserved                   ಕಂಬಳ ಕೇವಲ ಕೋಣಗಳ ಓಟವಲ್ಲ   















http://epaper.kannadaprabha.in/PUBLICATIONS%5CKANNADAPRABHABANGALORE%5CKANNADAPRABHAHUBLI/2014/11/23/ArticleHtmls/23112014101004.shtml?Mode=1
ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ.ಆದರೆ ಕಂಬಳ ಇನ್ನು ಮುಂದೆ ಇತಿಹಾಸದ ಪುಟಕ್ಕೆ ಸೇರಿ ಕೇವಲ ನೆನಪು ಮಾತ್ರವಾಗಿ  ಉಳಿಯುತ್ತದೆ !ಪ್ರಾಣಿ ಹಿಂಸೆ ಇದೆ ಎಂಬ ಕಾರಣಕ್ಕೆ ಇದನ್ನು ಪ್ರಸ್ತುತ ನಿಷೇಧಿಸಲಾಗಿದೆ . ಸಾಮಾನ್ಯವಾಗಿ  ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .
ಆಕರ್ಷಕ ಕೋಣಗಳ ಓಟ
.ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ .
ಕಂಬಳದ ಪ್ರಾಚೀನತೆ
 ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಕ್ರಿ.ಶ.1200 (ಶಕ ವರ್ಷ 1281)ಶಾಸನದಲ್ಲಿ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ. ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ. ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ. ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ. ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ. ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ. ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ. ಹೀಗೆ ಕಂಬಳಕ್ಕೆ 800 -9೦೦ ವರ್ಷಗಳ ಇತಿಹಾಸವಿದೆ.
ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ದಾಸ್ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
ಕಂಬಳದ ಮಹತ್ವ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಇದೆ .
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ. ಪೂಕರೆ ಕಂಬದ ವಿಚಾರದಲ್ಲಿ ಯುದ್ಧ ಕೂಡ ಆಗುತ್ತಿತ್ತು.
ಉಳುವ ಕೋಣಗಳಿಗಿಂತ ಭಿನ್ನವಾಗಿ ಸಾಕುವ ಗಿರ್ದೆರ್ಲು ಎಂದು ಕರೆಯುವ ಕಂಬಳ ಓಟದ ಕೋಣಗಳನ್ನು ಉಳಲು ಉಪಯೋಗಿಸುವುದಿಲ್ಲ. ಇವುಗಳಿಗೆ ಹುರುಳಿಯಂಥ ಉತ್ತಮ ಆಹಾರ ನೀಡಿ ಸಾಕುತ್ತಾರೆ. ಪ್ರತಿದಿನ ಕೋಣಗಳನ್ನು ಸ್ವಲ್ಪ ದೂರ ಓಡಿಸಿ, ನೀರಿಗಿಳಿಸಿ, ಈಜಾಡಿಸಿ ಇವುಗಳಿಗೆ ವ್ಯಾಯಾಮ ಮಾಡಿಸಿ, ಸ್ಪರ್ಧೆಯಲ್ಲಿ ಓಡುವಂತೆ ಬಲಿಷ್ಠವಾಗಿ ತರಬೇತುಗೊಳಿಸುತ್ತಾರೆ.ಕೊಂಬುಗಳಿಗೆ, ಮುಖಕ್ಕೆ, ವಿವಿಧ ಆಭರಣ, ಕನ್ನಡಿ ಇತ್ಯಾದಿ ತೊಡಿಸಿ ಬೆನ್ನಿಗೆ ನಯವಾದ ಆಕರ್ಷಕವಾದ ಬಟ್ಟೆಯನ್ನು ಹೊದಿಸಿ ಕೊರಳಿಗೆ ನೊಗ ಮತ್ತು ಅಡ್ಡಹಲಗೆಯನ್ನು ಹುರಿಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಮೂಗುದಾರ ಹಾಕಿ ತಲೆಪಟ್ಟ ಕಟ್ಟಿ ಸಿಂಗರಿಸಿದ, ಓಟದ ಕೋಣಗಳನ್ನು ಕಂಬಳಕ್ಕೆ ಕೊಂಬು, ಕಹಳೆ, ಸುಡುಮದ್ದಿನ ವೈಭವದೊಂದಿಗೆ ಮೆರವಣಿಗೆ ಮಾಡಿ ತರುತ್ತಾರೆ.ಕಂಬಳದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ.ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .
ಕೋಣಗಳನ್ನು ಒಂದೊಂದಾಗಿ ಓಡಿಸುವ ಕ್ರಮ ಇಲ್ಲ.ಎರಡು ಕೋಣಗಳನ್ನು ಒಟ್ಟಿಗೆ ನಿಲ್ಲಿಸಿ ಕೊರಳಿಗೆ ನೊಗ ಕಟ್ಟಿಯೇ ಓಡಿಸುವ ಕ್ರಮ ಬೆಳೆದು ಬಂದಿದೆ. ಕೋಣಗಳು ಬಲಿಷ್ಟವಾಗಿರುವಂತೆ ಓಡಿಸುವಾತ ನಿರ್ದೇಶಿಸಿದಂತೆ ಗುರಿಯೆಡೆಗೆ ಸಾಗುವ ವಿಧೇಯತೆಯೂ ಕೋಣಗಳಿಗೆ ಇರ ಬೇಕಾಗುತ್ತದೆ. ಕಣೆ ಹಲಗೆ ಮತ್ತು ಅಡ್ಡ ಹಲಗೆಯ ಓಟದಲ್ಲಿ ಓಡಿಸುವಾತ ಮತ್ತು ಕೋಣಗಳ ಕೌಶಲ್ಯ ಬಹಳ ಮುಖ್ಯವಾದುದು .
ಕೋಣಗಳನ್ನು ಓಡಿಸುವುದು ಸುಲಭದ ವಿಚಾರವಲ್ಲ. ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು.ಇದಕ್ಕಾಗಿ ವಿಶೇಷ ಪರಿಣತಿ ಪಡೆದಿರಬೇಕಾಗುತ್ತದೆ. ಕೋಣಗಳನ್ನು ಓಡಿಸುವವರನ್ನುಗಿಡೆಪುನಾಯೆಎನ್ನುತ್ತಾರೆ. ಇವರು ಕೋಣಗಳನ್ನು ಓಡಿಸುವ ತಾಂತ್ರಿಕ ಕೌಶಲ್ಯಗಳನ್ನು ತಿಳಿದಿರುವುದು ಮಾತ್ರವಲ್ಲದೆ ಕೋಣಗಳೊಂದಿಗೆ ಆತ್ಮೀಯತೆಯನ್ನು ಬೆಳಸಿಕೊಂಡಿರಬೇಕಾಗುತ್ತದೆ. ಕೋಣಗಳನ್ನು ಓಡಿಸುವಾತ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ
ಕೋಣಗಳನ್ನು ಓಡಿಸಲು ಸಿದ್ಧಪಡಿಸಿದ ಜಾಗವನ್ನು ಕಂಬಳಕರೆ ಎನ್ನುತ್ತಾರೆ. ಕೆಲವೆಡೆ ಜೋಡುಕರೆ ಇರುತ್ತವೆ. ಅದನ್ನು ಜೋಡುಕರೆ ಕಂಬಳ ಎನ್ನುತ್ತಾರೆ. ಇದರಲ್ಲಿ ಕಳದ ಮಧ್ಯಭಾಗದಲ್ಲಿ ಉದ್ದಕ್ಕೆ ದಿಣ್ಣೆಯನ್ನು ನಿರ್ಮಿಸಿ ಏಕಕಾಲದಲ್ಲಿ ಎರಡು ಜೊತೆ ಕೋಣಗಳನ್ನು ಓಡಿಸುವ ವ್ಯವಸ್ಥೆ ಇರುತ್ತದೆ. ಸ್ಪರ್ಧೆಯಲ್ಲಿ ನಿರ್ಣಾಯಕರು ಕೋಣಗಳ ಓಟದ ನಿಯಮಗಳಿಗನುಗುಣವಾಗಿ ತೀರ್ಪು ನೀಡುತ್ತಾರೆ. ಕೋಣಗಳ ಯಜಮಾನರ ಹೆಸರುಗಳನ್ನು ಧ್ವನಿವರ್ಧಕದ ಮೂಲಕ ಹೇಳಿದಂತೆ ಕೋಣಗಳು ಸರದಿ ಪ್ರಕಾರ ಓಡುತ್ತವೆ. ಓಡಿ ಬಂದು ಮಂಜೊಟ್ಟಿಯನ್ನು ಏರಿ ನಿಲ್ಲುತ್ತವೆ.ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ರೋಮಾಂಚಕ ಅನುಭವನ್ನು ಕೊಡುತ್ತದೆ..
ಕಂಬಳ ಕೋಣದ ಅಂಚೆ ಚೀಟಿ
ತನ್ನ ನಾಲ್ಕನೇ ವಯಸ್ಸಿನಿಂದ ಕಂಬಳ ಓಟದಲ್ಲಿ ಓಡುತ್ತಾ 500 ಕ್ಕೂ ಹೆಚ್ಚು ಬಾರಿ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿರುವ  ಕಂಬಳ ಓಟದ ಅನಭಿಷಿಕ್ತ ದೊರೆ ನಾಗರಾಜ ಎಂಬ ಹೆಸರಿನ ಕೋಣ 115 ಬಾರಿ ಬಂಗಾರದ ಪದಕಗಳನ್ನು ಗೆದ್ದು , ತನ್ನನ್ನು ಮಗನಂತೆ ಪೊರೆದ ಒಡೆಯ ಒಡೆಯ ಪಲ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ-2013 ಅನ್ನು ತಂದು ಕೊಟ್ಟಿದೆ.ಕೇಂದ್ರ ಸರಕಾರದ ಅಂಚೆ ಇಲಾಖೆ ಹೊರ ತಂದ ಅಂಚೆ ಚೀಟಿಯಯಲ್ಲಿ ತನ್ನ ಚಿತ್ರದ ಸ್ಥಾನ ಪಡೆದ ಶರವೇಗದ ಸರದಾರ ನಾಗರಾಜನ ಕಂಬಳ ಓಟದ ರೆಕಾರ್ಡ್ ವೇಗ 100 ಮೀಟರ್ ಗೆ 12 ಸೆಕೆಂಡ್ಸ್. ಇದೊಂದು ದಾಖಲೆಯ ಓಟವಾಗಿದೆ .
ಗದ್ದೆಯ ಮದುವೆ
ತುಳುವರಿಗೆ ಗದ್ದೆ ಎಂದರೆ ಬರಿಯ ಬೆಳೆ ಬೆಳೆಯುವ ತಾಣವಲ್ಲ .ಅದನ್ನು ತಮ್ಮಂತೆ ಎಂದು ಭಾವಿಸುವ ಅನನ್ಯ ಆತ್ಮೀಯತೆ ಅವರಿಗೆ ಆದ್ದರಿಂದಲೇ ಇಲ್ಲಿ ಗದ್ದೆಗೂ ಮದುವೆ ಇದೆ.. ಗದ್ದೆಯನ್ನು ಉತ್ತು ಬಿತ್ತನೆಗೆ ತಯಾರು ಮಾಡುವುದನ್ನು ಕಂಬಳ ಕೋರಿ ಎನ್ನುತ್ತಾರೆ .ಕಂಬಳ ಕೋರಿಯಂದು ಗದ್ದೆಯಲ್ಲಿ ಪೂಕರೆ ಕಂಬವನ್ನು ನೆಡುವ ಸಂಪ್ರದಾಯ ಪೂಕರೆ ಕಂಬಳಗಳಲ್ಲಿದೆ ಪೂಕರೆ ಕಂಬಳ ನೇಮಕ್ಕೆ ಬಹಳ ಧಾರ್ಮಿಕ ಮಹತ್ವವಿದೆ. ಸುಮಾರು ಮೂವತ್ತಡಿ ಎತ್ತರದ ಅಡಿಕೆಯ ಮರಕ್ಕೆ ರಂಧ್ರಗಳನ್ನು ಕೊರೆದು ಸಲಿಕೆಗಳನ್ನು ಸಿಕ್ಕಿಸಿ, ಹನ್ನೆರಡು ತ್ರಿಕೋನಾಕಾರದ ನೆಲೆಗಳನ್ನು ಮಾಡಿ ಕಲಶವನ್ನು ಇಟ್ಟು, ಹಳದಿ ಹೂಗಳಿಂದ, ಕೇಪುಳ ಹೂ ಹಾಗೂ ಪಾದೆಯ ಹೂಗಳ ಮಾಲೆಯಿಂದ ಅಲಂಕರಿಸಿದ ಕಂಬವನ್ನುಪೂಕರೆ ಕಂಬಎನ್ನುತ್ತಾರೆ. ಪೂಕರೆ ಹಾಕುವುದನ್ನುಕಂಡೊದ ಮದಿಮೆಅಂದರೆ ಗದ್ದೆಯ ಮದುವೆ ಎನ್ನುತ್ತಾರೆ. ಇಲ್ಲಿ ಸೇಡಿಯಿಂದ ಸಿಂಗರಿಸಿದ ಗದ್ದೆ ಮದುಮಗಳಾದರೆ, ಪೂಕರೆ ಕಂಬವನ್ನು ಮದುಮಗ ಎಂದು ಪರಿಗಣಿಸುತ್ತಾರೆ. ಪೂಕರೆಯ ಕೆಳಗಿನ ಅಂತಸ್ತನ್ನುತೊಟ್ಟಿಲಗೆಣೆಎಂದು ಕರೆಯುತ್ತಾರೆ.ಪೂಕರೆ ಕಂಬವನ್ನು ನಾಗಧ್ವಜ ಎನ್ನುತ್ತಾರೆ.
ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
 ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ.
ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ. ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವುಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ.
ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.
ವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಭೂತಾರಾಧನೆ
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ
ಕಂಬಳ ಕೋರಿಯಂದು ಗದ್ದೆಯ ಅಧಿದೈವ ನಾಗ ಬೆರ್ಮೆರ್ ಹಾಗೂ ಕುಟುಂಬದ ದೈವಗಳಿಗೆ ಆರಾಧನೆ ಇರುತ್ತದೆ.ಕಂಬಳದಲ್ಲಿ ಪೂಕರೆ ಹಾಕುವಾಗ ನಾಗ ಬೆರ್ಮೆರ್ ಒಂದಿಗೆ ಎರು ಬಂಟ ಮತ್ತು ಉರವ ಎಂಬ ದೈವಗಳಿಗೆ ಎಲ್ಲೆಡೆ ಆರಾಧನೆ ಇದೆ.
 ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾಣಿ ಬಬ್ಬು ಹಾಗೂ ಕೋಣಗಳು ಮಾಯವಾದ ಕಥೆಯನ್ನು ಹೇಳುತ್ತವೆ.. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಇಲ್ಲಿ ಮಾಯವಾದ ಮೂಲದ ಮಾಣಿ ಮತ್ತು ಕೋಣಗಳು ಉರವ ಮತ್ತು ಎರು ಬಂಟ ಎಂಬ ದೈವಗಳಾಗಿ ಕಂಬಳ ಗದ್ದೆಯ ಕೋರಿಯಂದು ಆರಾಧಿಸಲ್ಪಡುತ್ತಾರೆ.
ಕಂಬಳ ಕೋರಿಯಂದು ರಾತ್ರಿ ಒಂಜಿ ಕುಂದು ನಲ್ಪ ದೈವಗಳಿಗೆ ಆರಾಧನೆ ಇರುತ್ತದೆ .ಇಲ್ಲಿ ಕುಟುಂಬದ ,ಗ್ರಾಮದ ಮಾಗಣೆಯ ,ಸೀಮೆಯ ಮೂವತ್ತೊಂಬತ್ತು ದೈವಗಳಿಗೆ ಆರಾಧನೆ ಇರುತ್ತದೆ .
. ಕಂಬಳದ ಪ್ರಕಾರಗಳು
ತುಳುನಾಡಿನಲ್ಲಿ ನಾಲ್ಕು ವಿಧದ ಕಂಬಳಗಳು ಪ್ರಚಲಿತವಿದೆ (1) ಪೂಕರೆ ಕಂಬಳ. (2) ಬಾರೆ ಕಂಬಳ (3) ಅರಸು ಮತ್ತು ದೇವರ ಕಂಬಳ (4) ಆಧುನಿಕ ಕಂಬಳ .ಇವುಗಳಲ್ಲಿ ಆಧುನಿಕ ಕಂಬಳ ಹಾಗೂ ಅರಸು ಮತ್ತು ದೇವರ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುತ್ತದೆ. ಬಾರೆ ಕಂಬಳ, ಅರಸು ಮತ್ತು ದೇವರ ಕಂಬಳ ಹಾಗೂ ಪೂಕರೆ ಕಂಬಳಗಳಲ್ಲಿ ಫಲವಂತಿಕೆಯ ಆಚರಣೆಗಳು ಹಾಗೂ ನಾಗ-ಭೂತಾರಾಧನೆಗಳು ಇವೆ.
ಬಾಳೆ ಕಂಬಳದಲ್ಲಿ ಪೂಕರೆಗೆ ಬದಲಾಗಿ ಕಂಬಳ ಗದ್ದೆಯ ನಡುವೆ ಒಂದು ಬಾಳೆಗಿಡವನ್ನು ನೆಡುತ್ತಾರೆ. ಪೂಕರೆ ಕಂಬಳ ಅಥವಾ ದೇವರ ಮತ್ತು ಅರಸು ಕಂಬಳದಂತೆ ಇದರಲ್ಲಿ ವೈಭವದ ಆಚರಣೆಗಳಿಲ್ಲ. ಬಹಳ ಸರಳವಾದ ಆಚರಣೆ ಇದು. ನಿಶ್ಚಿತ ದಿನದಂದು ಮುಗೇರ ಅಥವಾ ನಲಿಕೆಯವರು ಬಂದು ಹೊಂಡ ತೋಡಿ ಹೊಂಡಕ್ಕೆ ಹಾಲು ಹಾಕಿ ಬಾಳೆ ಗಿಡ ನೆಡುತ್ತಾರೆ. ಒಂದು ನಿಶ್ಚಿತ ಸಮಯದ ನಂತರ ಬಾಳೆಗಿಡವನ್ನು ತೆಗೆಯುತ್ತಾರೆ. “ಹಿಂದೆ ಕಂಬಳ ವೈಭವದಿಂದ ನಡೆಯುತ್ತಿತ್ತು. ಈಗ ಸಾಂಕೇತಿಕವಾಗಿ ಬಾಳೆಗಿಡ ಹಾಕುತ್ತಾರೆಎಂದು ಡಾ. ಗಣನಾಥ ಎಕ್ಕಾರು ಅವರು ಅಭಿಪ್ರಾಯಪಟ್ಟಿದ್ದಾರೆ.
ಅತಿ ವೈಭವದಿಂದ ಆಚರಿಸಲ್ಪಡುವ ಅರಸು ಮತ್ತು ದೇವರ ಕಂಬಳಗಳಲ್ಲಿ ಪೂಕರೆ ಕಂಬಳಗಳ ಎಲ್ಲ ಆಚರಣೆಗಳು ಇದರಲ್ಲಿ ಇರುತ್ತವೆ. ಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲ. ಅರಸು ಮತ್ತು ದೇವರ ಕಂಬಳಗಳಲ್ಲಿ ವೈಭವದ ಧಾರ್ಮಿಕ ಆಚರಣೆಗಳೊಂದಿಗೆ ಅದ್ದೂರಿಯ ಕೋಣಗಳ ಓಟದ ಸ್ಪರ್ಧೆ ಕೂಡ ಇರುತ್ತದೆ. ಅರಸು ಮನೆತನದವರು ರೀತಿಯ ಕಂಬಳಗಳನ್ನು ನಡೆಸುತ್ತಾರೆ. ಇದು ಅತ್ಯಂತ ಜನಪ್ರಿಯ ಆಚರಣೆಯಾಗಿದೆ.
ಆಧುನಿಕ ಕಂಬಳ ಕೋಣಗಳ ಸ್ಪರ್ಧೆಗಾಗಿಯೇ ಮೀಸಲಾದ ಕಂಬಳ. ಇದರಲ್ಲಿ ಇತರ ಕಂಬಳಗಳಂತೆ ಯಾವುದೇ ಆರಾಧನೆ ಅಥವಾ ಆಚರಣೆಗಳು ಇರುವುದಿಲ್ಲ. ಆಧುನಿಕ ಕಂಬಳಗಳು ಇಂಥದ್ದೇ ದಿನ ನಡೆಯಬೇಕು ಇತ್ಯಾದಿಯಾದ ಕಾಲದ ನಿರ್ಬಂಧ ಇರುವುದಿಲ್ಲ. ಕಂಬಳಗಳು ನಿಜವಾಗಿ ಗದ್ದೆಯಲ್ಲಿ ಇರುವುದಿಲ್ಲ. ಕೋಣಗಳ ಓಟದ ಸ್ಪರ್ಧೆಗಾಗಿಯೇ ಕೃತಕವಾಗಿ ತಯಾರಿಸಿದ ಕಳದಲ್ಲಿ ಇದು ನಡೆಯುತ್ತದೆ. ಮನೋರಂಜನೆ ಇದರ ಮುಖ್ಯ ಉದ್ದೇಶವಾಗಿರುತ್ತದೆ. ಕಾಂತಾವರದ ಸೂರ್ಯಚಂದ್ರ ಕಂಬಳ, ಬಜಗೋಳಿಯ ಲವ-ಕುಶ ಕಂಬಳ, ಮಂಜೇಶ್ವರದ ಜಯ-ವಿಜಯ ಕಂಬಳ ಮೊದಲಾದುವು ಆಧುನಿಕ ಕಂಬಳಗಳಾಗಿವೆ. ಎಪ್ಪತ್ತರ ದಶಕದ ನಂತರ ಇವು ಪ್ರಸಿದ್ಧಿಗೆ ಬಂದವುಗಳಾಗಿವೆ. ಇದರಲ್ಲಿ ಗೆದ್ದ ಕೋಣಗಳಿಗೆ ಬಂಗಾರದ ಪದಕ, ಪ್ರಶಸ್ತಿಗಳನ್ನು ಕೊಡುತ್ತಾರೆ. ಅರಸು ಮತ್ತು ದೇವರಕಂಬಳಗಳಲ್ಲಿ ಕೂಡ ಕೋಣಗಳ ಓಟದ ಸ್ಪರ್ಧೆ ಇರುತ್ತದೆ.  

ಆಧುನಿಕ ಕಂಬಳದ ಓಟದ ಸ್ಪರ್ಧೆಗಳು
ಆಧುನಿಕ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆಯು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿರುತ್ತವೆ. ಕೋಣಗಳ ಓಟದ ಸ್ಪರ್ಧೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಎಂದು ವಯಸ್ಸನ್ನು ಆಧರಿಸಿ ಎರಡು ವಿಭಾಗಗಳಿರುತ್ತವೆ. ಕೋಣಗಳ ವಯಸ್ಸನ್ನು ಹಲ್ಲುಗಳ ಆಧಾರದಲ್ಲಿ ನಿರ್ಧಾರ ಮಾಡುತ್ತಾರೆ.
ಆಧುನಿಕ ಕಂಬಳದ ಸ್ಪರ್ಧೆಯ ನಾಲ್ಕು ವಿಭಾಗಗಳು (1) ಅಡ್ಡಹಲಗೆ (2) ನೇಗಿಲ ಓಟ (3) ಹಗ್ಗದ ಓಟ (4) ಕಣೆ ಹಲಗೆ

ಅಡ್ಡ ಹಲಗೆ:
ಇದನ್ನು ತುಳುವಿನಲ್ಲಿ ಅಡ್ಡಪಲಾಯಿ ಎಂದು ಕರೆಯುತ್ತಾರೆ. ಹೆಸರಿನಲ್ಲಿಯೇ ಸೂಚಿಸಿರುವಂತೆ ಕೋಣಗಳ ಹಿಂಭಾಗದಿಂದ ಎಳೆದುಕೊಂಡು ಹೋಗುವಂತೆ ಒಂದು ಮರದ ಹಲಗೆಯನ್ನು ಕಟ್ಟುತ್ತಾರೆ. ಕೋಣಗಳ ಹೆಗಲಿಗೆ ಕಟ್ಟಿದ ನೊಗಕ್ಕೆ ಉದ್ದವಾದ ಗೋರುಹಲಗೆಯನ್ನು ಕಟ್ಟುತ್ತಾರೆ. ಓಡಿಸುವಾತನು ತನ್ನೆರಡು ಕಾಲುಗಳನ್ನು ಹಲಗೆಯಲ್ಲಿಟ್ಟುಕೊಳ್ಳುತ್ತಾನೆ. ಆಧಾರಕ್ಕಾಗಿ ಕೈಯಲ್ಲಿ ಕೋಣಗಳ ಬಾಲವನ್ನು ಹಿಡಿದಿರುತ್ತಾನೆ. ಇದರಲ್ಲಿ ಓಡಿಸುವಾತನಿಗೆ ಸಾಕಷ್ಟು ಕೌಶಲ್ಯ ಬೇಕು. ಇಲ್ಲವಾದಲ್ಲಿ ಸಮತೋಲನ ತಪ್ಪಿ ಕೆಳಗೆ ಬಿದ್ದುಹೋಗುತ್ತಾರೆ. ಆಗ ಕೋಣಗಳು ದಿಕ್ಕುತಪ್ಪಿ ಚಲ್ಲಾಪಿಲ್ಲಿಯಾಗಿ ಓಡಿ, ನೆರೆದ ಪ್ರೇಕ್ಷಕರನ್ನು ಕೆಡವಿ ಓಡುವ ಪ್ರಸಂಗಗಳೂ ನಡೆಯುತ್ತವೆ. ಆದ್ದರಿಂದ ವಿಭಾಗದಲ್ಲಿ ಸ್ಪರ್ಧಿಸುವ ಕೋಣಗಳು ಹೆಚ್ಚಿರುವುದಿಲ್ಲ. ಇದರಲ್ಲಿ ಓಟದ ವೇಗದ ಆಧಾರದಲ್ಲಿ ತೀರ್ಪು ನೀಡುತ್ತಾರೆ.
ನೇಗಿಲ ಓಟ:
ತುಳುವಿನಲ್ಲಿ ಇದಕ್ಕೆ ನಾಯೆರ್ದವು (ನಾಯೆರ್=ನೇಗಿಲು) ಎನ್ನುತ್ತಾರೆ. ಇದರಲ್ಲಿ ಕೋಣಗಳ ಹೆಗಲಿನ ನೊಗಕ್ಕೆ ಉಳುವಾಗ ಕಟ್ಟುವಂತೆ ನೇಗಿಲನ್ನು ಕಟ್ಟುತ್ತಾರೆ. ಉಳುಮೆಯ ನೇಗಿಲಿಗಿಂತ ಸರಳವಾದ ಹಗುರವಾದ ನೇಗಿಲನ್ನು ಓಟದಲ್ಲಿ ಬಳಸುತ್ತಾರೆ. ಓಡಿಸುವವನು ನೇಗಿಲನ್ನು ನೆಲದಿಂದ ಮೇಲೆತ್ತದೆಯೇ ಕೋಣಗಳನ್ನು ಓಡಿಸಬೇಕು. ಇದರಲ್ಲಿಯೂ ವೇಗದ ಆಧಾರದಲ್ಲಿ ಬಹುಮಾನ ನೀಡುತ್ತಾರೆ.
ಹಗ್ಗದ ಓಟ:
ತುಳುವಿನಬಲ್ಲುದ ಗಿಡಪುನಹಗ್ಗದ ಓಟವಾಗಿದೆ (ಬಳ್ಳು=ಹಗ್ಗ). ಇದರಲ್ಲಿ ಕೋಣಗಳಿಗೆ ಕಟ್ಟಿದ ನೊಗದ ಮಧ್ಯೆ ಒಂದು ಹಗ್ಗವನ್ನು ಬಿಗಿಯುತ್ತಾರೆ. ಕೋಣ ಓಡಿಸುವಾತ ಹಗ್ಗವನ್ನು ಹಿಡಿದುಕೊಂಡು ಕೋಣಗಳನ್ನು ಓಡಿಸಬೇಕು. ಸ್ಪರ್ಧೆಯಲ್ಲಿ ಕೋಣಗಳಷ್ಟೇ ವೇಗದಲ್ಲಿ ಓಡಿಸುವಾತನೂ ಓಡಬೇಕಾಗುತ್ತದೆ. ಸ್ಪರ್ಧೆಯಲ್ಲಿ ಹಲಗೆ, ನೇಗಿಲಿನಂತಹ ಭಾರದ ನಿರ್ಬಂಧಕಗಳು ಇಲ್ಲದ ಕಾರಣ ಕೋಣಗಳು ಅತ್ಯಂತ ವೇಗವಾಗಿ ಓಡುತ್ತವೆ. ಅನೇಕ ಕೋಣಗಳ ಜೊತೆಯನ್ನು ಒಟ್ಟಿಗೆ ಓಡಿಸುತ್ತಾರೆ. ಯಾವ ಕೋಣಗಳು ಮೊದಲು ಮಂಜೊಟ್ಟಿಯನ್ನು ತಲುಪುತ್ತವೆಯೋ ಕೋಣಗಳನ್ನು ಗೆದ್ದ ಕೋಣಗಳೆಂದು ಘೋಷಿಸಿ ಬಹುಮಾನ ನೀಡುತ್ತಾರೆ. ಮಂಜೊಟ್ಟಿ ಎಂದರೆ ಓಟದ ಕೋಣಗಳು ಓಡಿ ಬಂದು ಗುರಿ ತಲುಪುವ ಜಾಗ. ಕೋಣಗಳು ಗದ್ದೆಗೆ ಇಳಿಯುವ ಇಳಿಜಾರಾದ ಭಾಗವನ್ನು ಕೂಡಮಂಜೊಟ್ಟಿಎನ್ನುತ್ತಾರೆ.
            ಕಣೆ ಹಲಗೆಯ ಓಟ:
ಇದು ಅತ್ಯಂತ ಪ್ರಸಿದ್ಧವಾದ ಕೋಣಗಳ ಓಟದ ಸ್ಪರ್ಧೆ. ಮನಮೋಹಕವಾದುದು ಕೂಡ. ಸ್ಪರ್ಧೆಯು ವಿಶಿಷ್ಟವಾದುದಾಗಿದೆ. ಇತರ ಕಂಬಳ ಓಟದ ಸ್ಪರ್ಧೆಗಳಲ್ಲಿ ಕೋಣಗಳ ಓಟದ ವೇಗ ಆಧಾರವಾಗಿದೆ. ಆದರೆ ಕಣೆಹಲಗೆ ಓಟದ ಸ್ಪರ್ಧೆಯಲ್ಲಿ ಮೇಲೆ ಕಟ್ಟಿದ ನಿಶಾನೆಗೆ ನೀರು ಹಾರಿಸುವ ಮೂಲಕ ಸ್ಪರ್ಧೆ ನಡೆಯುತ್ತದೆ. ಇದರಲ್ಲಿ ಕಂಬಳ ಗದ್ದೆಯ ಓಟದ ಕಳದ ಎರಡೂ ಬದಿಗಳಲ್ಲಿ ಆರೂವರೆ ಕೋಲು ಹಾಗೂ ಏಳೂವರೆ ಕೋಲು ಎತ್ತರದಲ್ಲಿ ಎರಡು ಮೂರು ಮೀಟರ್ ಅಗಲದ ಬಿಳಿ ಬಟ್ಟೆಯನ್ನು ಕಟ್ಟುತ್ತಾರೆ. ಇದನ್ನು ನಿಶಾನೆ ಎನ್ನುತ್ತಾರೆ. ಯಾವ ಕೋಣಗಳು ನಿಶಾನೆಗೆ ನೀರು ಹಾಯಿಸುತ್ತವೆಯೋ ಅವುಗಳಿಗೆ ಬಹುಮಾನ ನೀಡುತ್ತಾರೆ. ನಿಶಾನೆಯ ಜಾಗಕ್ಕೆ ನೀರು ಹಾಯಿಸಲು ಕೋಣ ಓಡಿಸುವವನಿಗೆ ತುಂಬ ಪರಿಣತಿ ಬೇಕು. ನಿಶಾನೆಯ ಸಮೀಪಕ್ಕೆ ಬಂದಾಗ ಆತ ಹಲಗೆಯ ಮೇಲೆ ಹಾರಿ ನೀರು ಹಾಯುವಂತೆ ಮಾಡುತ್ತಾನೆ. ಒಂದು ಜೊತೆ ಕೋಣಗಳು ಕೂಡ ನಿಶಾನೆಯ ಜಾಗಕ್ಕೆ ನೀರು ಹಾಯಿಸದಿದ್ದರೆ ಯಾರಿಗೂ ಬಹುಮಾನವಿಲ್ಲ. ನಿಶಾನೆಗೆ ನೀರು ಹಾಯಿಸಿದ ಎಲ್ಲ ಕೋಣಗಳಿಗೂ ಬಹುಮಾನ ನೀಡುತ್ತಾರೆ. ಇದು ಮನಮೋಹಕ ಓಟವಾದುದರಿಂದ ಇದಕ್ಕೆ ಮಹತ್ವ ಹೆಚ್ಚು.
- ಡಾ .ಲಕ್ಷ್ಮೀ  ಜಿ ಪ್ರಸಾದ ,ಕನ್ನಡ ಉಪನ್ಯಾಸಕಿ ,ಬೆಳ್ಳಾರೆ   

ವರ್ಣಚಿತ್ರಗಳ ವಿವರ
Photo 01 :  ಮಗನಂತೆ ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ ನಾಗರಾಜ ( ಚಿತ್ರ ಕೃಪೆ : ರೋನ್ಸ್ ಬಂಟ್ವಾಳ್ )
Photo 02 :  ಅಲಂಕರಿಸಿ ಕೊಂಬುವಾಲಗದೊಂದಿಗೆ ಮೆರವಣಿಗೆಯಲ್ಲಿ ಹೋಗಲು ಸಿದ್ದವಾಗಿರುವ ಕಂಬಳ ಕೋಣಗಳು ( ಚಿತ್ರ ಕೃಪೆ : ರೋನ್ಸ್ ಬಂಟ್ವಾಳ್ )
Photo 03 :  ಕಂಬಳ ಮದುಮಗನ ಪ್ರತೀಕವಾಗಿರುವ 13 ಅಂಕಣದ ಪೂಕರೆ ಕಂಬ ( ಚಿತ್ರ : ಡಾ.ಲಕ್ಷ್ಮೀ ಜಿ ಪ್ರಸಾದ )
Photo 04 : ಕಂಬಳ ಗದ್ದೆಯಲ್ಲಿ ಆರಾಧಿಸಲ್ಪಡುವ ಕೊರಗ ತನಿಯ ಮತ್ತು ಕಂಬಳದ ಅಧಿ ದೈವ ನಾಗ ಬೆರ್ಮೆರ್ ಭೂತ  ( ಚಿತ್ರ : ಡಾ.ಲಕ್ಷ್ಮೀ ಜಿ ಪ್ರಸಾದ )
Photo 05 :  ಅಡ್ಡ ಹಲಗೆ ಓಟದ ಮನಮೋಹಕ ನೋಟ  ( ಚಿತ್ರ ಕೃಪೆ : ಜಯಪ್ರಕಾಶ್ ಪ್ರಭು ಶಿರ್ವ )
Photo 06 :  ಆಧುನಿಕ ಕಂಬಳದ ಅತ್ಯಂತ ವೇಗದ ಹಗ್ಗದ ಓಟ  ( ಚಿತ್ರ ಕೃಪೆ : ಸತೀಶ್ ಕಾಪಿಕಾಡ್)
Photo 07 :  ನೀರು ಚಿಮ್ಮಿಸುತ್ತಿರುವ ಕಣೆ ಹಲಗೆ ಓಟ  ( ಚಿತ್ರ ಕೃಪೆ : ದಯಾ ಕುಕ್ಕಾಜೆ )
Photo 08 :  ಕಣೆ ಹಲಗೆ ಓಟದಲ್ಲಿ ನಿಶಾನೆಗೆ ನೀರು ಹಾಯಿಸಿ ಗೆಲುವು ಪಡೆದ ಕ್ಷಣ  ( ಚಿತ್ರ ಕೃಪೆ : ಸತೀಶ್ ಕಾಪಿಕಾಡ್)
photo 09 urava bhuta
photo 10 eru banta bhuta
ಆಧಾರ ಗ್ರಂಥಸೂಚಿ :
1. ಈಜೋ ಮಂಜೊಟ್ಟಿಗೋಣ , ಲೇಖಕರು: ಡಾ| ಶಿವರಾಮ ಕಾರಂತ, (ಪ್ರಕಟಣೆ :1976)
2. ಕಂಬಳ ಆಟವೋ? ಆಚರಣೆಯೋ? ಲೇಖಕರು: ಡಾ| ಪುರುಷೋತ್ತಮ ಬಿಳಿಮಲೆ, (ಪ್ರಕಟಣೆ :1988)
3. ತುಳುನಾಡಿನ ಜನಪದ ಆಟಗಳು , ಲೇಖಕರು: ಡಾ| ಗಣನಾಥ ಎಕ್ಕಾರು (ಪ್ರಕಟಣೆ :2000)
4. ದೈವಿಕ ಕಂಬಳ ಕೋಣ , ಲೇಖಕರು: ಡಾ| ಲಕ್ಷ್ಮೀ ಜಿ ಪ್ರಸಾದ  (ಪ್ರಕಟಣೆ :2006)
5. 'Nagaraj ' -  Undisputed Kambala King of DK Moves into Oblivion , (ಪ್ರಕಟಣೆ : Daijiworld 2009)
6. ಕಂಬಳ ಕೋರಿ ನೇಮ , ಲೇಖಕರು: ಡಾ| ಲಕ್ಷ್ಮೀ ಜಿ ಪ್ರಸಾದ  (ಪ್ರಕಟಣೆ :2011)
7. ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ’ (ಪಿ‌ಎಚ್.ಡಿ ಮಹಾ ಪ್ರಬಂಧ ) , ಲೇಖಕರು: ಡಾ| ಲಕ್ಷ್ಮೀ ಜಿ ಪ್ರಸಾದ  (ಪ್ರಕಟಣೆ :2013)


ಕಂಬಳ ಫೋಟೋಸ್









ಕಂಬಳ ಫೋಟೋಸ್

Tuesday, 11 November 2014

ಚಕ್ ದೇ ಇಂಡಿಯಾ ತುಂಬಿದ ನವ ಚೈತನ್ಯ -ಡಾ.ಲಕ್ಷ್ಮೀ ಜಿ ಪ್ರಸಾದ


          
              ( ನನ್ನ ಪ್ರಕಟಿತ ಸಂಶೋಧನಾ ಪ್ರಬಂಧದ ಪರಿಚಯ ,ಹೊಸ ದಿಗಂತ )
 ಇಂದು ಟಿ .ವಿಯಲ್ಲಿ  ಮೇರಿಕೋಮ್ ಸಿನೆಮ ನೋಡಿದೆ .ನೋಡುತ್ತಿದ್ದಂತೆ ಚಕ್ ದೇ ಇಂಡಿಯಾ ಸಿನೆಮ ಮತ್ತು ಗೆಳತಿ ನಿರ್ಮಲಾರ
"ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?.ಹೇಗೋ ಒಂದು ಮುಗಿಸಿ ಬಿಡು ".ಎಂಬ ಮಾತು ನೆನಪಿಗೆ ಬಂತು !ಒಳ್ಳೆಯ ಸಿನೆಮಾಗಳೂ ನಮ್ಮ ಬದುಕಿನಲ್ಲಿ ನವೋತ್ಸಾಹವನ್ನು ತುಂಬುತ್ತವೆ ಎಂದು ನನಗೆ ಅರಿವಾದದ್ದೇ ಅಂದು . 

5-6 ವರ್ಷಗಳ ಹಿಂದೆ ಹಿಂದೆ ಗೆಳತಿ ಕೇಳಿದ ಮಾತು ಇದು ನನ್ನಲ್ಲಿ ..ನಾನು 2005 ರಲ್ಲಿ ಬಿಎಂ ಶ್ರೀ ಪ್ರತಿಷ್ಠಾನ ದ ಸ್ನಾತಕೋತ್ತರ ಸಂಶೋಧನಾ ಅಧ್ಯಯನ ಕೇಂದ್ರದ ಮೂಲಕ ಹಂಪಿ ಕನ್ನಡ ಯೂನಿವರ್ಸಿಟಿ ಯಲ್ಲಿ ಪಿಎಚ್. ಡಿ ಅಧ್ಯಯನಕ್ಕೆ ನೋಂದಣಿ ಪಡೆದಿದ್ದೆ .

ನಾನು ಆಯ್ದುಕೊಂಡ ವಿಷಯ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ .ಆ ವಿಷಯ ಆಯ್ಕೆ ಮಾಡುವಾಗ ನಾನು ತುಂಬಾ ಕ್ಷೇತ್ರಕಾರ್ಯ ಮಾಡಬೇಕಾಗಿ ಬರುತ್ತದೆ ಎಂದು ತಿಳಿದಿತ್ತಾದರೂ ಭೂತಾರಾಧನೆ ಮತ್ತು ನಾಗಾರಾಧನೆ ಎರಡನ್ನೂ ಕ್ಷೇತ್ರ ಕಾರ್ಯ ಮಾಡಬೇಕಾಗುತ್ತದೆ  ಅದು ಎಷ್ಟು ಕಷ್ಟಕರ ಎಷ್ಟು ವಿಸ್ತಾರ ಎಂಬುದರ ಅರಿವಿರಲಿಲ್ಲ .ಏನೋ ಒಂದರಡು ಕಡೆ ಹೋಗಿ ಫೋಟೋ  ಹಿಡಿದು ಬಂದರೆ ಸಾಕು ಎಂದು ಕೊಂಡಿದ್ದೆ !ನೀರಿಗಿಳಿದ ಮೇಲೆ ತಾನೇ ಆಳ ಗೊತ್ತಾಗುವುದು ?ಇಳಿದ ಮೇಲೆ ಚಳಿಯೇನು ಬಿಸಿಯೇನು ಎಂದು ಮುಂದುವರಿಯುದು ಅನಿವಾರ್ಯವಾಗಿತ್ತು ,ಜೊತೆಗೆ ನನಗೆ ಈ ಬಗ್ಗೆ ತೀವ್ರ ಆಸಕ್ತಿ ಕೂಡ ಇತ್ತು .ಆದ್ದರಿಂದಲೋ ಏನೋ ನನಗೆ ಕ್ಷೇತ್ರಕಾರ್ಯ ,ಸಂಶೋಧನೆಗಳು ತೀರ ಅಸಾಧ್ಯ ಎನಿಸಿರಲಿಲ್ಲ .

ಆಗ ನಾನು ಇದ್ದದ್ದು ಬೆಂಗಳೂರಿನಲ್ಲಿ .ಬೆಂಗಳೂರಿನ ಪ್ರಸಿದ್ಧ ವಾದ ಒಂದು  ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ  ಕೆಲಸ ಮಾಡುತ್ತಿದ್ದೆ .
ಒಂದೆಡೆ ಕೆಲಸದ ಒತ್ತಡ ,ಮತ್ತೊಂದೆಡೆ ಮಗ ಶಾಲೆ ಓದಿನ ಜವಾಬ್ದಾರಿ ಇದರೊಂದಿಗೆ ಕ್ಷೇತ್ರ ಕಾರ್ಯ ಸಾಕಾಗಿ ಹೋಗಿತ್ತು.ನನ್ನ ಮಾರ್ಗ ದರ್ಶಕರು ಅಪಾರ ಪಾಂಡಿತ್ಯ ಉಳ್ಳವರು .ಅವರು ನನ್ನಿಂದ ಅತ್ಯಂತ ಉನ್ನತ ಮಟ್ಟದ ಸಂಶೋಧನೆಯನ್ನು ನಿರೀಕ್ಷಿಸುತ್ತಿದ್ದರು.

ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ನನ್ನ ಸಂಶೋಧನೆ ಕುರಿತು ವರಡಿ ಒಪ್ಪಿಸಬೇಕಾಗಿತ್ತು .ಆ ತನಕ ನಾನು ಮಾಡಿದ ಕ್ಷೇತ್ರ ಕಾರ್ಯ ಹಾಗೂ ಇತರ ಕೆಲಸಗಳನ್ನು ಚಾಚೂ ತಪ್ಪದೆ ವಿವರಿಸಿ ಅವರಿಗೆ ಮನದಟ್ಟು ಮಾಡ ಬೇಕಾಗಿತ್ತು .ಸಣ್ಣ ಲೋಪ ದೋಷ ಇದ್ದರೂ ವರದಿಗೆ ಸಹಿ ಮಾಡುತ್ತಿರಲಿಲ್ಲ.

ಜೊತೆಗೆ ನಮಗೆ ಸಾಕಷ್ಟು ಅಭಿಪ್ರಾಯ ವ್ಯತ್ಯಾಸ ಉಂಟಾಗುತ್ತಿತ್ತು ,ಮಾರ್ಗ ದರ್ಶಕರು ಹೇಳಿದರು ಎಂಬ ಕಾರಣಕ್ಕೆ ಆಧಾರವಿಲ್ಲದೆ ನನ್ನ ಸಂಶೋಧನೆ ಸರಿಯಿಲ್ಲ ಎಂದು ಒಪ್ಪಿಕೊಳ್ಳಲಾರದ ಸ್ವಾಭಿಮಾನ ನನ್ನದು .ಅನೇಕ ಹಿತೈಷಿಗಳು ಕೆಲವೊಮ್ಮೆ "ಅವರು ಹೇಳಿದಂತೆ ಬದಲಾಯಿಸಿ ಬಾರೆ ನಿನಗೇನಂತೆ?ಪಿಎಚ್.ಡಿ ಸಿಕ್ರೆ ಆಯ್ತಲ್ವ ಎಂದು 'ಎಂದು ಹೇಳಿದ್ದುಂಟು .ಆದರೆ ನಾನು ಹಾಗೆಲ್ಲ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನ್ದವಳಲ್ಲ!
ನನಗೆ ಸರಿ ಎನಿಸಿದ್ದನ್ನು ಯಾರು ಏನು ಹೇಳಿದರೂ ಬದಲಾಯಿಸಿಕೊಳ್ಳಲಾರೆ!ಹಾಗಾಗಿ ನಮ್ಮಲ್ಲಿ ಸಾಕಷ್ಟು ಚರ್ಚೆ ಆಗುತ್ತಿತ್ತು.

ಹೀಗೆ ಒಂದು ದಿನ ಮಾರ್ಗ ದರ್ಶಕರ ಹತ್ತಿರ ಚರ್ಚೆ ಆಗಿತ್ತು .ಅವರು ಒಂದಷ್ಟು ಬದಲಾವಣೆಯನ್ನು ಹೇಳಿ ತಿದ್ದಿ ಬರೆದು ತಂದರೆ ಮಾತ್ರ ವರದಿಗೆ ಸಹಿ ಮಾಡುವೆ ಎಂದಿದ್ದರು .
ಅದೇ ಸಮಯದಲ್ಲಿ ನನಗೆ ಕ್ಷೇತ್ರ ಕಾರ್ಯಕ್ಕೆ ಚೌಕಾರಿಗೆ ಹೋಗಬೇಕಾಗಿತ್ತು ,ಅದು ಜನವರಿ ತಿಂಗಳು  .ಕಾಲೇಜ್ ನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಾ ಇತ್ತು .ಹಾಗಾಗಿ ರಜೆ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದರು.ನಾನಿದ್ದ ಕಾಲೇಜ್ ಅನುದಾನಿತ ಸಂಸ್ಥೆಯಾಗಿದ್ದು ನಾನು ಅಲ್ಲಿ ಅನುದಾನ ರಹಿತವಾಗಿ ಆಡಳಿತ ಮಂಡಳಿ ನೇಮಿಸಿದ್ದ ಕನ್ನಡ ಉಪನ್ಯಸಕಿಯಾಗಿದ್ದೆ.ನನ್ನಂತೆ ಅನೇಕರು ತಾತ್ಕಾಲಿಕ ನೆಲೆಯಲಿ ಪುಡಿಕಾಸಿಗೆ ದುಡಿಯುತ್ತಿದ್ದೆವು .ಇಲ್ಲಿ ಪರೀಕ್ಷೆ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಕೈ ತುಂಬಾ ವೇತನ ಪಡೆಯುವ ಅನುದಾನಿತ ಉಪನ್ಯಾಸಕರಿಗೆ ತೀರಾ ಕಡಿಮೆ ಕೆಲಸ ಹಾಕಿ ನನ್ನಂತೆ ಇರುವ ಅನುದಾನಿತ ರಹಿತರಿಗೆ ಅತಿ ಹೆಚ್ಚಿನ ಕೆಲಸ ಹಂಚಲಾಗುತ್ತಿತ್ತು .ರಜೆ ಹಾಕಿದರೆ ನನ್ನ ಆ ದಿನದ ಕೆಲಸವನ್ನು ಮಾಡಲು ಯಾರೂ ಒಪ್ಪುವುದಿಲ್ಲ ಈ ಕಾರಣದಿಂದ ನನಗೆ ರಜೆ ಕೊಡಲು ಪ್ರಾಂಶುಪಾಲರು ನಿರಾಕರಿಸಿದ್ದರು .

ಒಂದೆಡೆ ಕ್ಷೇತ್ರಕಾರ್ಯಕ್ಕೆ ಹೋಗಲಾಗುವುದಿಲ್ಲ ಎಂಬ ಚಿಂತೆ ,ಇನ್ನೊಂದೆಡೆ ವರದಿಗೆ ಸಹಿ ಆಗಲಿಲ್ಲ ಎಂಬ ಚಿಂತೆ ,ಅತಿಯಾದ ಕೆಲಸದ ಒತ್ತಡ .ಎಲ್ಲದರಿಂದ ಬೇಸತ್ತು ಸಂಶೋಧನೆಯು ಬೇಡ ಪಿಎಚ್.ಡಿ ಪದವಿಯೂ ಬೇಡ ಎಂಬ ಹತಾಶೆಗೆ ಒಳಗಾಗಿದ್ದೆ.ಸಂಜೆ ಹೊತ್ತು ಮನೆಯ ತಾರಸಿ ಹಟ್ಟಿ ಕಾಲು ಸುಟ್ಟ ಬೆಕ್ಕಿನಂತೆ ಸುತ್ತುತ್ತಾ ಇದ್ದೆ  .ಅದಾಗಲೇ ಗೆಳತಿ ನಿರ್ಮಲಾರ ಫೋನ್ ಬಂತು .

ನಿರ್ಮಲಾ ಡಿ ಟಿ ಪಿ ವರ್ಕ್ ಮಾಡುತ್ತಾ ಇದ್ದರು .ನನ್ನ ಪ್ರಬಂಧದ ಡಿ ಟಿ ಪಿ ಕಾರ್ಯವನ್ನೂ ಅವರಿಗೆ ವಹಿಸಿದ್ದೆ .ವರದಿ ಡಿ ಟಿ ಪಿ ಮಾಡಲು ತಗೊಂಡು ಬರುತ್ತೇನೆ ಎಂದು ಹೇಳಿದ್ದೆ .ನನ್ನ ವರದಿ ಒಪ್ಪಿಗೆ ಆಗದ ಕಾರಣ ಹೋಗಿರಲಿಲ್ಲ .
ಯಾಕೆ ಬಂದಿಲ್ಲ ಎಂದು ಕೇಳಲು ಯಾವುದು ಬೇಡವಾಗಿದೆ ನಾನು ಪಿಎಚ್.ಡಿ ಅಧ್ಯಯನ ಮುಂದುವರಿಸುವುದಿಲ್ಲ ಎಂದು ಹೇಳಿದ್ದೆ .

ಆಗ ನಿರ್ಮಲಾ ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?..ಏನೋ ಒಂದು ಮಾಡಿ ಮುಗಿಸಿಬಿಡಿ ಹೆಂಗೂ ಮುಕ್ಕಾಲಂಶ ಆಗಿದೆ ಇನ್ನು ಸ್ವಲ್ಪ ಮುಗಿಸಿ ಬಿಡಿ ಎಂದರು.
ನನ್ನಿಂದ ಅದನ್ನ ಸಂಪೂರ್ಣ ಮಾಡಲು ಆಗದು.ಎಂದು ಹೇಳಿ ಮಾತು ಮುಗಿಸಿದ್ದೆ .

ತಾರಸಿ ನನಗೆ ತುಂಬಾ ಪ್ರಿಯವಾದ ಜಾಗ ,ಆದರೂ ಆ ದಿನ ನನಗೆ ಅದು ಕೂಡ ಇಷ್ಟವಾಗಲಿಲ್ಲ .ಇಳಿದು ಕೆಳಗೆ ಬಂದು ಮನೆಯಲ್ಲಿ ಟಿವಿ ಹಾಕಿದೆ ,ಪಿಎಚ್.ಡಿ ಸಂಶೋಧನೆ ಸುರು ಮಾಡಿದಲ್ಲಿಂದ ನಾನು ಸಿನೆಮ ,ಕಥೆ ಕಾದಂಬರಿಗಳ ಓದನ್ನು ಬಿಟ್ಟು ಬಿಟ್ಟಿದ್ದೆ ,ಬರವಣಿಗೆಯನ್ನೂ ಬಿಟ್ಟು ಬಿಟ್ಟಿದ್ದೆ ,ತುಸು ಸಮಯ ಸಿಕ್ಕರೂ  ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದೆ,ಹಾಗಾಗಿ ಸಿನೆಮ ನೋಡದೆ ತುಂಬಾ ಸಮಯ ಆಗಿತ್ತು .ನಾನು ಈ ಸಂಶೋಧನೆ ಅಂತ ಎಲ್ಲವನ್ನೂ ಬಿಟ್ಟು ಬಿಟ್ಟೆ ಇನ್ನು ಹಾಗೆ ಮಾಡಲಾರೆ ಇಷ್ಟ ಬಂದಸಿನೆಮ ನೋಡುತ್ತಾ ,ಕುಶಿ ಕಂಡ ಕಥೆ ಕಾದಂಬರಿ ಓದುತ್ತ ಜೀವನವನ್ನು ಎಂಜಾಯ್ ಮಾಡಬೇಕು ಎಂದುಕೊಂಡೆ

ಟಿ ವಿಯಲ್ಲಿ ಚಕ್ ದೇ ಇಂಡಿಯಾ ಸಿನೆಮ ಆಗಷ್ಟೇ ಆರಂಭವಾಗಿತ್ತು .ನೋಡೋಣ ಎಂದು ಕುಳಿತುಕೊಂಡ

ಸಿನೆಮ ನೋಡುತ್ತಾ ನೋಡುತ್ತಾ ಅದರಲ್ಲಿ ತನ್ಮಯಳಾಗಿ ಬಿಟ್ಟೆ ..

ಸಿನೆಮ ಮುಗಿಯುತ್ತಲೇ ನಾನೊಬ್ಬ ಹೊಸ ಮನುಷ್ಯಳಾಗಿದ್ದೆ.ನವ ಉತ್ಸಾಹ ಚೈತನ್ಯ ತುಂಬಿತ್ತು ಮೈ ಮನದಲ್ಲಿ.
ನಾನು ಕೂಡಲೇ ನಿರ್ಧರಿಸಿದೆ ಏನೇ ಆದರೂ ಪಿಎಚ್.ಡಿ ಅಧ್ಯಯನವನ್ನು ಮುಗಿಸಲೇ ಬೇಕು ಎಂದು .ಚೌಕಾರಿಗೆ ಕ್ಷೇತ್ರ ಕಾರ್ಯಕ್ಕೆ ಹೋಗಲೂ ನಿರ್ಧರಿಸಿದೆ .ರಜೆ ಕೊಟ್ಟರೂ ಕೊಡದೆ ಇದ್ದರೂ ನಾನು ಹೋಗುವುದು ಖಂಡಿತ ಎಂದು ನಿರ್ಧಾರ ಮಾಡಿದೆ .
ಕೂಡಲೇ ಗೆಳತಿ ನಿರ್ಮಲಾರಿಗೆ ಫೋನ್ ಮಾಡಿದೆ ,ನಾಳೆ ಬೆಳಗ್ಗೆ ವರದಿ ಯನ್ನು ಡಿ ಟಿ ಪಿ ಮಾಡಲು ತರುತ್ತೇನೆ ಎಂದು ಫೋನ್ ಮಾಡಿದೆ!
 ನಾನು ನನ್ನ ನಿರ್ಧಾರವನ್ನು ಬದಲಾಯಿಸಿ ಅಧ್ಯಯನವನ್ನು ಮುದುವರಿಸಲು ನಿರ್ಧರಿಸಿದ್ದು ಅವರಿಗೂ ಸಂತಸವಾಯಿತು.
ಹೇಳಿದಂತೆ ಮರುದಿನ ಬೆಳಗ್ಗೆ ಹೋಗಿ ನನ್ನ ಮಾರ್ಗ ದರ್ಶಕರು ಸೂಚಿಸಿದ ಬದಲಾವಣೆ ಮಾಡಿಕೊಂಡು ವರದಿ ತಯಾರಿಸಿ ಮಾರ್ಗ ದರ್ಶಕರ ಮನೆಗೆ ಹೋಗಿ ಸಹಿ ಮಾಡಿಸಿ ತಂದು ಸಂಶೋಧನಾ ಕೇಂದ್ರಕ್ಕೆ ಸಲ್ಲಿಸಿದೆ.
ಇನ್ನು ಕ್ಷೇತ್ರಕಾರ್ಯಕ್ಕೆ ಹೋಗಲು ರಜೆ ಕೊಡದೆ ಇದ್ದರೆ ಕಾಲೇಜ್ ಅನ್ನೇ ಬಿಡುವುದು ,ಖಾಸಗಿ ಕಾಲೇಜ್ ಗಳು ಸಾವಿರ ಇವೆ ,

ಹೇಗೂ ಮೂರು ಸ್ನಾತಕೋತ್ತರ ಪದವಿಗಳು ಇವೆ ಎಲ್ಲಾದರೂ ಒಂದು ಕೆಲಸ ಸಿಕ್ಕಿಯೇ ಸಿಗುತ್ತೆ ಎಂದು ನಿರ್ಧರಿಸಿದೆ . ಕಾಲೇಜ್ ಗೆ ಹೋಗಿ ನನಗೆ ಕ್ಷೇತ್ರಕಾರ್ಯಕ್ಕೆ ಹೋಗಲಿಕ್ಕಿದೆ ಆದ್ದರಿಂದ ಮೂರು ದಿನ ಬರಲಾಗದು ಎಂದು ಖಡಾ ಖಂಡಿತವಾಗಿ ಹೇಳಿ ರಜೆ ಅರ್ಜಿ ನೀಡಿದೆ.ಅವರು ಏನೊಂದೂ ಹೇಳುವ ಮೊದಲೇ ಹೊರ ಬಂದೆ .
ಅಂದಿನ ಕೆಲಸ ಮುಗಿಸಿ ರಾತ್ರಿ ಬಸ್ ಹತ್ತಿ ಮಂಗಳೂರಿಗೆ ಬಂದೆ .ಅಲ್ಲಿಂದ ನೇರವಾಗಿ ಸೀತಂಗೋಳಿಯಲ್ಲಿರುವ ಗೆಳತಿ ಅನುಪಮ ಪ್ರಸಾದ ಮನೆಗೆ ಬಂದು ಅಲ್ಲಿಂದ ಚೌಕಾರಿಗೆ ಹೋದೆ .

ಅಲ್ಲಿ ಎರಡು ದಿನ ಹಗಲು ರಾತ್ರಿ ರೆಕಾರ್ಡಿಂಗ್ ಮಾಡಿ ಮೂರನೆಯ ದಿನ ಕೊಡ್ಳಮೊಗರಿಗೆ ಬಂದು ರೆಕಾರ್ಡ್ ಮಾಡಿದೆ .ನಾಲ್ಕನೆಯ ದಿನ ಬೆಳಗ್ಗೆ ಬೆಂಗಳೂರಿಗೆ ಬಂದು ಫ್ರೆಶ್ ಆಗಿ ಕಾಲೇಜ್ ಗೆ ಹೋದೆ .
ಅಲ್ಲಿ ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಇತ್ತು ಮನದೊಳಗೆ !

ಆದರೆ ಅಲ್ಲಿ ಏನೂ ಸಮಸ್ಯೆ ಆಗಲಿಲ್ಲ .ಎಂದಿನಂತೆ ಮತ್ತೆ ಕೆಲ್ಸಕ್ಕೆ ಹಾಜರಾಗಿ ಕರ್ತವ್ಯ ಮುದುವರಿಸಿದೆ.

2009 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದ ಪಡಿಸಿ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್.ಡಿ ಪದವಿಯನ್ನೂ ಪಡೆದೆ .ನನ್ನ ಮಾರ್ಗ ದರ್ಶಕರು ಗುಣ ಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ನನ್ನ ಪ್ರಬಂಧ ನಿಜಕ್ಕೂ ಪ್ರೌಢ ಪ್ರಬಂಧವಾಯಿತು .ಅವರ ಬಿಗುವಾದ ನಿಲುವು ನನಗೆ ತಳ ಮಟ್ಟದ  ಅಧ್ಯಯನವನ್ನು ಮಾಡಲು ಕಲಿಸಿತು.ನನ್ನ ಮಾರ್ಗ ದರ್ಶಕಾರದ ಡಾ.ಎಸ್.ನಾಗರಾಜು ಅವರ  ಪ್ರೌಢಿಮೆ, ಅಗಾಧ ಪಾಂಡಿತ್ಯ ,ತಾಳ್ಮೆ ನಿಜಕ್ಕೂಅನುಕರಣ ಯೋಗ್ಯವಾದುದು
ಅಂದು ನೋಡಿದ ಚಕ್ ದೇ ಇಂಡಿಯಾ ಸಿನೆಮ ನನ್ನಲ್ಲಿ ತುಂಬಾ ಪ್ರಬಾವ ಬೀರಿತ್ತು ,ಅಂದಿನ ಹತಾಶೆ ಏನು ಮಾಡಲಾರೆ ಎನ್ನುವ ಅಧೈರ್ಯ ಎಲ್ಲವೂ ಕ್ಷಣದಲ್ಲಿ ಮಂಗ ಮಾಯವಾಗಿತ್ತು .ಇಂದಿಗೂ ನಾನು ಅಂದು ನನಗೆ ಒಮ್ಮಿಂದೊಮ್ಮೆಗೆ ಪ್ರೇರಣೆ ಉತ್ಸಾಹ ನವ ಚೈತನ್ಯ ನೀಡಿದ ಆ ಸಿನೆಮಾವನ್ನು ನೆನಪಿಸಿಕೊಳ್ಳುತ್ತೇನೆ .

Saturday, 8 November 2014

ಎಕ್ಕಲ ಕಟ್ಟೆಯ ಪೆರಿಯಾಂಡವರ್-ಒಂದು ಅವಲೋಕನ -ಡಾ.ಲಕ್ಷ್ಮೀ ಜಿ ಪ್ರಸಾದ








copy rights reserved
ಏಕೋ ಏನೋ ಸುಮಾರು ದಿನಗಳಿಂದ ಏನನ್ನೂ ಬರೆಯಲು ಒಳ್ಳೆಯ ಮೂಡ್ ಇಲ್ಲ ,ಜೊತೆಗೆ ವಿಪರೀತ ಕೆಲಸದ ಒತ್ತಡ.ಹಾಗಾಗಿ ಏನನ್ನೂ ಬರೆಯಲಾಗಿಲ್ಲ ,ಭೂತಗಳ ಅದ್ಬುತ ಜಗತ್ತು ಬ್ಲಾಗ್ ಗೆಯಾದರೂ ಒಂದೆರಡು ಲೇಖನ ಆದರೂ ಬರೆದಿದ್ದೇನೆ ,ನನ್ನ ಹವ್ಯಕ ಬ್ಲಾಗ್ ಗಿಳಿಬಾಗಿಲಿನ ಬಾಗಿಲು ತೆರೆದು ನೋಡದೇ ಎರಡು ಮೂರು ತಿಂಗಳು ಕಳೆದಿವೆ.

ಇಂದು ಆದರೂ ಪೆರಿಯಾಂಡವರ್ ಬಗ್ಗೆ ಬರೆಯದಿದ್ದರೆ ಮೌಖಿಕವಾಗಿ ನಾನು ಸಂಗ್ರಹಿಸಿದ ಮಾಹಿತಿಗಳೆಲ್ಲ ಮರೆತು ಹೋಗಬಹುದು ಎಂಬ ಭಯ ಇಂದು ಮತ್ತೆ ಬರೆಯಲು ಕುಳಿತು ಕೊಳ್ಳಲು ಪ್ರೇರೇಪಿಸಿತು .

ಕೆಲವು ವಿಷಯಗಳಲ್ಲಿ ನಾನು ಬಹಳ ಅದೃಷ್ಟವಂತೆ .ನಾನು ಹೋದಲ್ಲೆಲ್ಲ ಒಂದು ಈ ತನಕ ಬೇರೆಯವರು ಗಮನ ಹರಿಸದ ಹೊಸ ವಿಚಾರ ಅಧ್ಯಯನಕ್ಕಾಗಿ ನನಗೆ ಕಾದಿರುತ್ತದೆ.

ನಮ್ಮ ಕಾಲೇಜ್ ಗೆ ಹೋಗುವ ದಾರಿಯಲ್ಲಿ  ಕೆಂಗೇರಿ ಸಮೀಪ ಎಕ್ಕಲ ಕಟ್ಟೆ ಪುರಾತನ ಮುನೇಶ್ವರ ದೇವಾಲಯ ಎಂದು ಫಲಕ ಹಾಕಿದ್ದು ನೋಡಿದ್ದೆ.ಅಲ್ಲೇನೂ ದೇವಾಲಯ ಇದ್ದ ಹಾಗೆ ಕಾಣಲಿಲ್ಲ ,ಬದಲಿಗೆ ಏಳೆಂಟು ದೊಡ್ಡ ದೊಡ್ಡ ದಟ್ಟವಾದ ಆಲದ ಮರಗಳು ಸ್ವಲ್ಪ ದೂರದಲ್ಲಿ ತುಸು ಆಳ ಪ್ರದೇಶದಲ್ಲಿ ಕಾಣಿಸುತ್ತಿದ್ದವು .ಒಂದೆರಡು ಏನೋ ಕಟ್ಟೆ ಇದ್ದ ಹಾಗೆ ಕಾಣಿಸಿತ್ತು ,ಒಂದಿನ ಅಲ್ಲಿ ಹೋಗಿ ನೋಡಬೇಕು ಎಂದು ಕೊಂಡಿದ್ದೆ .ಹೆಚ್ಚಾಗಿ ಆಟೋ ರಿಕ್ಷಾದಲ್ಲಿ ಹೋಗಿ ಬರುವ ಕಾರಣ ಅಲ್ಲಿ ಹೋಗಲು ಆಗಿರಲಿಲ್ಲ .ಜೊತೆಗೆ ಮನದೊಳಗಿನ ಆತಂಕ ಅಧೈರ್ಯ ಕೂಡ ಕಾರಣವಾಗಿದೆ ಎಂಬುದು ಸತ್ಯವಾದ ವಿಚಾರ !

ಈ ಮೊದಲೆಲ್ಲ ಒಂದು ಸಣ್ಣ ವಿಚಾರ ಸಿಕ್ಕರೆ ಸಾಕು ಕೂಡಲೇ ಹಿಂದೆ ಮುಂದೆ ನೋಡದೆ ಕ್ಷೇತ್ರಕಾರ್ಯಕ್ಕೆ ಹೋಗಿ ಬಿಡುತ್ತಿದ್ದೆ ..ಯಾವಾಗ ಎರಡು ವರ್ಷದ ಹಿಂದೆ ಡೆಲ್ಲಿ ಹುಡುಗಿಯ ಮೇಲಿನ ಕ್ರೌರ್ಯದ ಸುದ್ದಿ ಓದಿದೆನೋ ಅಂದೇ ಎಂದು ಕೊಂಡಿದ್ದೆ ಇನ್ನು ಒಬ್ಬಳೇ ಎಲ್ಲಿಗೂ ಹೋಗುವ ಸಂಗತಿ ಆಗಲಿಕ್ಕಿಲ್ಲ ಎಂದು , ರಾತ್ರಿಯಲ್ಲಿ ನಡೆಯುವ ಭೂತಾರಾಧನೆ ಹಾಗೂ ಇನ್ನಿತರ ವಿಚಾರಗಳ ಬಗೆಗಿನ  ಕ್ಷೇತ್ರಕಾರ್ಯವನ್ನು ಪೂರ್ಣವಾಗಿ ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ . ನಂತರದ  ಸೌಜನ್ಯ .ರತ್ನ  ಮೊನ್ನೆ ಮೊನ್ನೆಯ ನಂದಿತಾ ನ ಪ್ರಕರಣಗಳು  ಹಗಲು ಕೂಡ ಒಬ್ಬಬ್ಬಳೆ ಓಡಾಡುವ  ಉತ್ಸಾಹ ಹಾಗೂ  ಧೈರ್ಯವನ್ನು  ಇನ್ನಷ್ಟು ಕಡಿಮೆ ಮಾಡಿವೆ .ಹಾಗಾಗಿಯೋ ಏನೋ !ಅಂತೂ  ಅಲ್ಲಿಗೆ ಹೋಗಲು ಆಗಿರಲಿಲ್ಲ .ನಾನೇ  ಚಿಕ್ಕ ವಯಸ್ಸಿನ ಕಾಲೇಜ್ ಗೆ ಹೋಗುವ ಹುಡುಗಿಯಲ್ಲ ಆದರೂ ನಾನೋರ್ವ ಸ್ತ್ರೀ ಅನ್ನುವುದನ್ನು ಮರೆಯಲಾರೆ ,6 ತಿಂಗಳ ಹಸುಳೆಯೆಂದು ಬಿಡದೆ lkg ukg ಕಂದಮ್ಮಗಳನ್ನು ಶಾಲಾ ಕಾಲೇಜ್ ಹುಡುಗಿಯರನ್ನು 85 ವರ್ಷದ ಅಜ್ಜಿಯರನ್ನೂ ಬಿಡದೆ ಕಾಡುವ ಕಾಮುಕರ ಬಗೆ ಎಲ್ಲ ಮಹಿಳೆಯರೂ ಜಾಗರೂಕತೆ ವಹಿಸಲೇ ಬೇಕಾದ ಅನಿವಾರ್ಯತೆ ಬಂದಿದೆ .
ಹಿಂದೊಂದು ಕಾಲವಿತ್ತು 30-35 ವರ್ಷ ಕಳೆದರೆ ನಾವು ಸ್ತ್ರೀಯರು ಇನ್ನು ಸೇಫ್ ಎಂದು ಭಾವಿಸುತ್ತ ಇದ್ದೆವು .ಆದರೆ ಈಗ ಹಾಗಲ್ಲ .85 ವರ್ಷದಅಜ್ಜಿ  ಕೂಡ ಎಚ್ಚರಿಕೆ ವಹಿಸಬೇಕಾದ ಕಾಲ ಬಂದಿದೆ 
ಇರಲಿ

ಮೊನ್ನೆ 3 ನೇ ತಾರೀಕು ಸಂಜೆ ನಾನು ಮತ್ತು ಸ್ನೇಹಿತೆ ಕಲಾವತಿ  ಮಾತನಾಡುತ್ತಾ ನಡೆದು ಕೊಂಡು ಬಂದೆವು .ಆಗ ದಾರಿ ಬದಿಯಲ್ಲಿ  ಇರುವ ಈ ಫಲಕ ಗಮನ ಸೆಳೆಯಿತು .ಅಲ್ಲಿ ಏನಿದೆ ಎಂದು ನೋಡಿಯೇ ಬಿಡುವ ಎಂದು ನಾವು ಮೆಟ್ಟಿಲು ಇಳಿದುಕೊಂಡು ಅಲ್ಲಿಗೆ ಹೋದೆವು .
ಮೊದಲಿಗೆ ಗಮನ ಸೆಳೆದದ್ದು ವಿಸ್ತಾರವಾಗಿ ಬೆಳೆದ ಆಲದ ಮರಗಳು .ಒಂದು ಅಡಿಗೆ ಹತ್ತು ಸಾವಿರ ಬೆಲೆ ಬಾಳುವ ಆ ಪರಿಸರದಲ್ಲಿ ಇಷ್ಟು ದೊಡ್ಡ ಜಾಗ ಗಿಡ ಮರಗಳಿಂದ ಕೂಡಿದ್ದು ಕಂಡು ಅಲ್ಲಿ ಮಾರ ಕಡಿಯಬಾರದು ಎಂಬ ನಂಬಿಕೆ ಇರಬಹುದು ಎಂದೆನಿಸಿತು ನನಗೆ .
ಹೌದು ನನ್ನ ಊಹೆ ಸರಿಯಾಗಿತ್ತು.ಅಲ್ಲಿ ಐದು ಎಕರೆ 28 ಗುಂಟೆ ಭೂಮಿ ಅಲ್ಲಿನ ದೇವರಿಗೆ ಮೀಸಲಾಗಿದೆ .ಅಲ್ಲಿಯ ದೇವರನ್ನು ಮುನೇಶ್ವರ ಎಂದು ಸ್ಥಳೀಯವಾಗಿ ಕರೆದಿದ್ದರೂ  ಮುನೆಶ್ವರನಲ್ಲ .ಪೆರಿಯಾಂಡವರ್ ಅಲ್ಲಿನ ಆರಾಧ್ಯ ದೈವ ಎಂದು ನಂತರ ತಿಳಿಯಿತು .ಇಲ್ಲಿನ ಪೆರಿಯಾಂಡವರ್ ದೇವರ ವಿಗ್ರಹ  ಅಂಗಾತವಾಗಿ ಮಲಗಿದ ಭಂಗಿಯಲ್ಲಿದೆ ಸುಂದರವಾದ ವೀರ ಭಾವವನ್ನು ಸೂಚಿಸುವ.ಮಣ್ಣಿನ ವಿಗ್ರಹ ಇದು .ಒಂದು ಆಲದ ಮರದ ಕಟ್ಟೆಯಲ್ಲಿ ಅಂಗಾತ ಮಲಗಿ ವಿಶ್ರಾಂತಿ ತೆಗೆದು ಕೊಳ್ಳುವ ರೀತಿಯಲ್ಲಿದೆ .
ಅಲ್ಲಿಯ ಅರ್ಚಕ ಆನು ವಂಶಿಕ ಮೊಕ್ತೇಸರರಾದ ಯೋಗಾನಂದ ಅವರು ಅಲ್ಲಿನ ಸ್ದೇವಾಲಯದ ಬಗ್ಗೆ ಮಾಹಿತಿ ನೀಡಿದರು .
ಇಲ್ಲಿ ಮಲಗಿರುವ ವಿಗ್ರಹ ಪೆರಿಯಾಂಡವರ್ ದೇವರದ್ದು .ಈತ ಶಿವನ ಒಂದು ರೂಪ .ಈತನ ವಾಹನ ಕುದುರೆ .
 ಯೋಗಾನಂದ ಅವರ ವಂಶದವರು ಆರು  ತಲೆಮಾರುಗಳ ಹಿಂದೆ ಪಾಳೆಗಾರಾಗಿದ್ದರು.ಅವರು ಹೊನ್ನಿ ಗೌಂಡರ್ ಕ್ಷತ್ರಿಯ ಕುಲಕ್ಕೆ ಸೇರಿದವರು .

ಒಂದು ದಿನ ಬೇಟೆಯಾಡುತ್ತಾ ಎಕ್ಕಲ ಕಟ್ಟೆ ಸಮೀಪದ ಮೇಗಲ ಕೆರೆ ಬಳಿಗೆ ಬರುತ್ತಾರೆ.ಅಲ್ಲಿ ಶಿವನು ಮುಳ್ಳು ಹಂದಿ ರೂಪ ಧರಿಸಿ ನೀರು ಕುಡಿಯಲು ಬರುತ್ತಾನೆ .ಆಗ ಬೇಟೆಗೆ ಬಂದ ಪಾಳೆಗಾರ ಅದು ಶಿವನೆಂದು ತಿಳಿಯದೆ ಅದನ್ನು ಬೇಟೆಯಾಡುತ್ತಾನೆ .
ಆಗ ಅವನ ಕಣ್ಣು ಹೋಗುತ್ತದೆ .ನಂತರ ಅವರಿಗೆ ಮುಳ್ಳು ಹಂದಿ ರೂಪದಲ್ಲಿ ಬಂದಿದ್ದ /ಪೆರಿಯಾಂಡವರ್ /ಶಿವನ ಮೇಲೆ ಬಾಣ ಬಿಟ್ಟ ಕಾರಣ ಕಣ್ಣು ಹೋಯಿತು ಎಂದು .ನಂತರ ಪ್ರಾಯಶ್ಚಿತ್ತವಾಗಿ ಪೆರಿಯಂಡವರ್ ಅನ್ನು ಅಲ್ಲಿ ಆರಾಧಿಸಲು ಪ್ರಾರಂಭಿಸಿದರು .ನಂತರ ಅವರಿಗೆ ದೃಷ್ಟಿ ಮರುಕಳಿಸುತ್ತದೆ .

ಅಲ್ಲಿನ ಪೆರಿಯಾಂಡವರ್ ಗೆ ಗುಡಿ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ .ಆಲದ ಮರದ ಬುಡದಲ್ಲಿ ಆರಾಧನೆ ಮಾಡುತ್ತಾರೆ .
ಅಲ್ಲಿಗೆ ಸಮೀಪದ ಇನ್ನೊಂದು ಆಲದ ಮರದ ಕೆಳಭಾಗದಲ್ಲಿ ಸ್ಥಳೀಯ ದೇವತೆ ಕಾಟೇರಮ್ಮನ ಆರಾಧನೆ ಇದೆ .ಕಾಟೇರಮ್ಮ ನ ವಿಗ್ರಹ ಕೂಡ ಮಣ್ಣಿನದ್ದು,ಮತ್ತು ಪೆರಿಯಾಂಡವರ್ ಅಂತೆ ಅಂಗಾತ ಮಲಗಿದ ಭಂಗಿಯ ವಿಗ್ರಹವಾಗಿದೆ .

ಕಾಟೇರಮ್ಮ ನ ಹೆಸರು ಹೇಳಬಾರದು ಎಂಬನಂಬಿಕೆ ಇದೆ ಆದ್ದರಿಂದ ಕಾಟೇರಮ್ಮ ನನ್ನು ಕಾವೇರಮ್ಮ ಎಂದು ಕರೆಯುತ್ತಾರೆ .ಈ ದೇವತೆ ಪೆರಿಯಾಂಡ ವರ್ ಸಹೋದರಿ ಎಂಬ ನಂಬಿಕೆ ಇದೆ .
ಕಾಟೇರಮ್ಮ ಅಲ್ಲದ ಅಂಗಾಳಮ್ಮ /ಅಂಗಾಳಪರಮೇಶ್ವರಿ .ಕೆಂಪಮ್ಮಮೊದಲಾದ14 ಸ್ತ್ರೀ ದೆವತೆಗಳಿಗೆ ಅಲ್ಲಿಆರಾಧ ನೆ ಇದೆ
ಕರ್ನಾಟಕದಲ್ಲಿ ಪೆರಿಯಾಂಡವರ್ ದೇವಾಲಯ ಇಲ್ಲಿ ಮಾತ್ರ ಇದೆಯಂತೆ .
ಚೆನ್ನೈ ಸಮೀಪದ ತಿರುವನೈಲ್ ನಲ್ಲಿ ಸುಮಾರು 300 ವರ್ಷ ಪ್ರಾಚೀನ ಪೆರಿಯಾಂಡವರ್ ದೇವಾಲಯವಿದೆ
.ಪಾರ್ವತಿ ದೇವಿಯ ಶಾಪಕ್ಕೆ ಒಳಗಾಗಿ ಶಿವ ಮಾನ ರೂಪ ತಾಳುತ್ತಾನೆ.ಎಲ್ಲಿಯೂ ನೆಲೆ ಇಲ್ಲದೆ ಹುಚ್ಚು ಹಿಡಿದಂತೆ ಆಗಿ ಗುತ್ತು ಗುರಿ ಇಲ್ಲದೆ ತಿರುಗಾಡುತ್ತಾ ತಿರುವನೈಲ್ ಗೆ ಬರುತ್ತಾನೆ .ಅಲ್ಲಿ ನೆಲೆ ನಿಲ್ಲುತ್ತಾನೆ .ಅಲ್ಲಿ ಮುಂದೆ ಅವನಿಗೆ ದೇವಾಲಯ ಕಟ್ಟಿಸಿದರು ಎಂಬ ಸ್ಥಳ ಪುರಾಣ /ಐತಿಹ್ಯ ಅಲ್ಲಿ ಪ್ರಚಲಿತವಿದೆ .
ವಾಸ್ತವದಲ್ಲಿ ಈತನೊಬ್ಬ ವೀರಪುರುಷನಿರಬಹುದು ಎಂದೆನಿಸುತ್ತದೆ .ಮಲಗಿದ ಭಂಗಿಯ ಕುರಿತು ಆತನ ಕಣ್ಣಿನ ಉರಿಯನ್ನು ಆಕಾಶಕ್ಕೆ ಹೊರತಾಗಿ ಯಾರಿಗೂ ತಾಳಿಕೊಳ್ಳಲು ಸಾಧ್ಯವಿಲ್ಲ .ಆದ್ದರಿಂದ ಅಂಗಾತ ಮಲಗಿಸಿದ ವಿಗ್ರಹ ಇದೆ ಎಂದು ಹೇಳಿರುವುದಾದರೂ ಅಲೆಯಾರೋ ಒಬ್ಬಾತ ಅಲೆದಾಡುತ್ತಾ ಬಂದು ಸುಸ್ತಾಗಿ  ಮಲಗಿರುವ ಸಾಧ್ಯತೆ ಇದೆ .
ಪೆರಿಯಾಂಡವರ್ ಅನ್ನು ಶಿವ ಎಂದು ಭಾವಿಸುತ್ತಾರೆ ಆದರೆ ಈತನಿಗೆ ಶಿವನಂತೆ ನಂದಿ ವಾಹನವಲ್ಲ ,ಈತನಿಗೆ ಕುದುರೆ ವಾಹನವಾಗಿದೆ .ಹಾಗಾಗಿ ಈತ ಜನಪದ ದೇವತೆಯಾಗಿದ್ದು ಮೂಲತ ಓರ್ವ ವೀರ /ಸಾಂಸ್ಕೃತಿಕ ನಾಯಕನಾಗಿದ್ದು ಕಾಲಾಂತರದಲ್ಲಿ ದೈವ್ವಕ್ಕೆರಿ ಆರಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಕೆನ್ಗೆರಿಯಲ್ಲಿನ ಪೆರಿಯಾಂಡವರ್ ಆರಾಧನೆಯ ಆರಂಭವಾದ ಹಿನ್ನೆಲೆಯಲ್ಲಿ ಬೇಟೆಯಾಡುತ್ತ ಬಂದ ಪಾಳೆಗಾರರ ಪ್ರಸ್ತಾಪವಿದೆ .ಆತನ ವಂಶಜ ಯೋಗಾನಂದ ಅವರು ಹೇಳುವಂತೆ ಇದು ಆರು ತಲೆಮಾರುಗಾ ಹಿಂದೆ ನಡೆದ ಘಟನೆ .ಆದ್ದರಿಂದ ಇದು ಸುಮಾರು 250 -300 ವರ್ಷಗಳ ಹಿಂದೆ ನಡೆದ ಘಟನೆ .ಈ ಕಾಲಾವಧಿಯಲ್ಲಿ ಅಲ್ಲಿ ಯಾರು ಪಾಳೆಗಾರಾಗಿದ್ದರು ?ಅವರು ತಮಿಳು ಮೂಲದವರೇ ?ಎಂದು ತಿಳಿಯಬೇಕಾಗಿದೆ .ತಮಿಳು ನಾಡಿನ ಪೆರಿಯಾಂಡವರ್ ಅನ್ನು ಇಲ್ಲಿ ಆರಾಧಿಸ ಬೇಕಾಗಿದ್ದರೆ ಅವರು ತಮಿಳು ಮೂಲದ ಪಾಳೆಗಾರ ಆಗಿರುವ ಸಾಧ್ಯತೆ ಇದೆ .
 ಪೆರಿಯಾಂಡವರ್ ಗೂ ತುಳುವರ ಅಧಿ ದೈವ ಬೆರ್ಮೆರ್ ಗೂ ಸಾಕಷ್ಟು ಸಾಮ್ಯತೆಗಳಿವೆ .
ನಾಗ ಮಂಡಳದಲಿ ಬರೆಯುವ ಬ್ರಹ್ಮ ಯಕ್ಷನ ಮುಖ ಮತ್ತು ಪೆರಿಯಾಂಡವರ್ ನ ಮುಖ ಭಾವ ಒಂದೇ ರೀತಿ ಇದೆ .ಬೆರ್ಮೆರ್ ಅಂತೆ ಪೆರಿಯಾಂಡವರ್ ಗೂ ಕುದುರೆ ವಾಹನ .ಇರ್ವರಿಗೂ ಬಿಲ್ಲು ಬಾಣಗಳು ಆಯುಧ ವಾಗಿದೆ .
ಬೆರ್ಮೆರ್ ಓರ್ವ ಯಕ್ಷ ಎಂಬ ಅಭಿಪ್ರಾಯವೂ ಇದೆ ,ತುಳುನಾಡಿನ ಮೂಲ ನಿವಾಸಿಗಳನ್ನು ಯಕ್ಷರು ಆಗಿರಬಹುದು ಎಂಬ ಅಭಿಪ್ರಾಯವೂ ಇದೆ ,ಬೆರ್ಮೆರ್ ಅನ್ನು ನಾಗ ಮಂಡಲದಲ್ಲಿ ಯಕ್ಷ ಬ್ರಹ್ಮ ಎಂದು  ರೇಖಿಸಿ ಆಹ್ವಾನಿಸಿ  ಆರಾಧಿಸುತ್ತಾರೆ ,ಕೆಂಗೇರಿಯ ಎಕ್ಕಲ ಕಟ್ಟೆ ಎಂಬ ಪದ ಯಕ್ಷರ ಕಟ್ಟೆಯ ಪರಿವರ್ತಿತ ರೂಪ ಆಗಿರುವ ಸಾಧ್ಯತೆ ಇದೆ ಬೆರ್ಮೆರ್ ಗೆ ಹಿರಿಯ ಎಂಬ ಅರ್ಥವಿದೆ .ಪೆರಿಯ ಎಂದರೆ ಹಿರಿಯ ಎಂಬರ್ಥದಲ್ಲಿ ಬೆರ್ಮೆರ್ ಪದ ನಿಷ್ಪನ್ನವಾಗಿದೆ ,ಬೆರ್ಮೆರ್ ಅನ್ನು ಬ್ರಹ್ಮ ಲಿಂಗೇಶ್ವರನೆಂದು ಶಿವನೊಂದಿಗೆ ಸಮನ್ವಯ ಗೊಳಿಸಲಾಗಿದೆ ,ಅಂತೆಯೇ ಪೆರಿಯಾಂಡವರ್ ಅನ್ನು ಕೂಡ ಶಿವನೊಂದಿಗೆ ತಾದಾತ್ಮ್ಯ ಗೊಳಿಸಿದೆ ಈ ಬಗ್ಗೆ ಇದಮಿತ್ತಂ ಎಂದು ಹೇಳಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ


Monday, 27 October 2014

ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಗಳ ಬಾಳು ಹಸನಾದೀತೇ ?(ಕನ್ನಡ ಪ್ರಭ 28 ಅಕ್ಟೋಬರ್ 2014 )-ಡಾ.ಲಕ್ಷ್ಮೀ ಜಿ ಪ್ರಸಾದ



“ಆತನಿನ್ನೂ ತನ್ನ ಪಿಎಚ್.ಡಿ ಸಂಶೋಧನಾ ಅಧ್ಯಯನವನ್ನು ಮುಗಿಸುತ್ತಾ ಇದ್ದಾನೆ.ಅವನಿಗೆ ವಿಶ್ವ ವಿದ್ಯಾಲಯವೊಂದರಿಂದ ತಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡುವಂತೆ ಆಹ್ವಾನ ಬರುತ್ತದೆ.ಈತನಿನ್ನೂ ಸಂಶೋಧನಾ ಅಧ್ಯಯನ ಮುಂದುವರಿಸುವುದೇ ಅಥವಾ ಉದ್ಯೋಗ ಹಿಡಿಯುವುದೇ ಎಂದು ಆಲೋಚಿಸುತ್ತಾ ಇರುತ್ತಾನೆ.ಅಷ್ಟರಲ್ಲಿ ಅದೇ ವಿಶ್ವ ವಿದ್ಯಾಲಯದಿಂದ “ನೀವೊಮ್ಮೆ ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂದು ನಮ್ಮಲ್ಲಿನ  ಪ್ರಯೋಗಾಲಯವನ್ನುಹಾಗೂ ಇತರ ಸೌಲಭ್ಯಗಳನ್ನು ಪರಿಶೀಲಿಸಿ ನೋಡಿ ,ನಿಮಗೆ ಇಷ್ಟವಾದರೆ ನಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡಿ ಎಂಬ ಒಕ್ಕಣಿಕೆ ಯುಳ್ಳ ಮತ್ತೊಂದು ಆಹ್ವಾನ ಪತ್ರ ಬರುತ್ತದೆ...”
ಎಂತ ಇದು? ಆಶ್ಚರ್ಯವಾಯಿತೇ?! ನಾನು ಕನಸು ಕಾಣುತ್ತಾ ಏನೇನೋ ಕನವರಿಸುತ್ತಿಲ್ಲ , ಇದು ಸತ್ಯ.ಆದರೆ ನಮ್ಮ ದೇಶದಲ್ಲಿ ಅಲ್ಲ !
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ  ತಾಲೂಕಿನ ಕುಗ್ರಾಮ ಮಾಣಿಲದಲ್ಲಿ  ಹುಟ್ಟಿ ಬೆಳೆದು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಮುಂದೆ ಬಯೋ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ಯು.ಎಸ್ .ಎ ಗೆ ತೆರಳಿ ಎಂ.ಎಸ್ ಮಾಡಿ ಪ್ರಸ್ತುತ ಟೆಕ್ಸಾಸ್ ಯೂನಿವರ್ಸಿಟಿಯ ರಿಸರ್ಚ್ ಸೆಂಟರ್ ನಲ್ಲಿ  ಪಿಎಚ್.ಡಿ ಸಂಶೋಧನಾ ಅಧ್ಯಯನದ  ಅಂತಿಮ ಹಂತದಲ್ಲಿರುವ ಭಾರತೀಯ ಯುವಕ ರಾಜೇಶ ರುಪಾಯಿಮೂಲೆ ಇವರಿಗೆ ವಿಶ್ವ ಪ್ರಸಿದ್ಧ ಹಾರ್ವರ್ಡ್ ಯೂನಿವರ್ಸಿಟಿಯಿಂದ ಇಂಥಹ ಒಂದು ಆಹ್ವಾನ ಬಂದಿದೆ.ಅಲ್ಲಿ ಅರ್ಹತೆಯೇ ಮಾನದಂಡ.ಅರ್ಹರನ್ನು ಗುರುತಿಸಿ ತಮ್ಮಲ್ಲಿ ಸಂಶೋಧನೆ ಮಾಡುವಂತೆ ವಿಶ್ವ ವಿದ್ಯಾಲಯ ಸ್ಕಾಲರ್ ಶಿಪ್ ನೀಡಿ   ಆಹ್ವಾನಿಸುತ್ತದೆ. ಮುಂದೊಂದು ದಿನ ಈತ ನೋಬಲ್ ನಂಥಹ ಉನ್ನತ ಸಂಶೋಧನಾ ಪ್ರಶಸ್ತಿಗಳನ್ನು ಪಡೆಯಲೂ ಬಹುದು .
 ರಾಜೇಶ ರುಪಾಯಿಮೂಲೆ
ವಿದೇಶಕ್ಕೆ ಹೋಗಿ ಕಲಿತು  ಅಲ್ಲಿಯೇ ಉದ್ಯೋಗಕ್ಕೆ ಸೇರಿ ಅನೇಕ ಮಹತ್ವದ ಸಾಧನೆಗಳನ್ನು ಮಾಡುವ ,ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವ ಅನೇಕ ಭಾರತೀಯರ ಸುದ್ದಿಯನ್ನು ನಾವು ಆಗಾಗ ಕೇಳುತ್ತೇವೆ.ಆದರೆ ನಮ್ಮಲ್ಲೇ ಕಲಿತು ಇಂಥಹ ಸಾಧನೆಗಳನ್ನು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ?ಈ ಬಗ್ಗೆ ಉತ್ತರ  ಬೇಕಿದ್ದರೆ “ನಮ್ಮಲ್ಲಿನ ವಿಶ್ವ ವಿದ್ಯಾಲಯಗಳು ಹೇಗಿವೆ” ಎಂಬುದನ್ನು  ನೋಡಬೇಕಾಗಿದೆ.
ನಮ್ಮ ವಿಶ್ವ ವಿದ್ಯಾಲಯಗಳು ಹೇಗಿವೆ?
ಇತ್ತೀಚಿಗೆ ಬೆಂಗಳೂರು ಯೂನಿವರ್ಸಿಟಿ ಪಿಎಚ್.ಡಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು .ನನ್ನ ಬುದ್ಧಿವಂತ ಹಳೆ ವಿದ್ಯಾರ್ಥಿನಿ ಒಬ್ಬಳಿಗೆ ಪಿಎಚ್.ಡಿ ಮಾಡುವ ಹಂಬಲ ಇತ್ತು .ಹಾಗೆ ಅವಳಲ್ಲಿ ಅರ್ಜಿ ಸಲ್ಲಿಸಿದೆಯ? ಎಂದು ವಿಚಾರಿಸಿದೆ .ಇಲ್ಲವೆಂದು ತಲೆ ಆಡಿಸಿದಳು ,ಯಾಕೆ ?ಎಂದು ಕೇಳಿದೆ.ಏನೂ ಹೇಳದೆ ತಲೆ ತಗ್ಗಿಸಿದಳು.ನನಗೆ ಅರ್ಥವಾಯಿತು.
ನಮ್ಮ ದೇಶದ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮಾಡುವುದು ಸುಲಭದ ವಿಚಾರವಲ್ಲ .ಬಡವರ ಪಾಲಿಗೆ  ಅದು ಮೃಗ ಮರೀಚಿಕೆಯೇ ಸರಿ. ನಮ್ಮ ವಿಶ್ವ ವಿದ್ಯಾಲಯಗಳಲ್ಲಿ .ಡಾಕ್ಟರೇಟ್ ಅಧ್ಯಯನ ಮಾಡಲು ಇಚ್ಚಿಸಿದರೆ ಆರಂಭದಲ್ಲಿಯೇ ಅರ್ಜಿ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಎರಡು ಎರಡೂವರೆ ಸಾವಿರ ರು ಗಳಷ್ಟು ದುಡ್ಡು ಕಟ್ಟಬೇಕು.ಎಲ್ಲ ವಿಷಯಗಳಲ್ಲಿ ಸೇರಿ  ಒಂದು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಗೆ ಅಧ್ಯಯನಕ್ಕೆ ಅವಕಾಶವಿದ್ದರೆ ಅರ್ಜಿ ಸಲ್ಲಿಸುವವರು ಸಾವಿರಾರು ಮಂದಿ ಇರುತ್ತಾರೆ.ಕನಿಷ್ಠ ಹತ್ತು ಸಾವಿರ ಮಂದಿ ಅರ್ಜಿ ಸಲ್ಲಿಸಿದರೂ ಸಂಗ್ರಹವಾಗುವ ದುಡ್ಡು  ಎರಡು ಮೂರು ಕೋಟಿ.ಆಯ್ಕೆಯಾದ ಒಂದು ಸಾವಿರ ವಿದ್ಯಾರ್ಥಿಗಳಿಂದ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ,ಪ್ರಯೋಗಾಲಯ ಶುಲ್ಕ ,ವಾರ್ಷಿಕ ನಿರ್ವಹಣಾ ಶುಲ್ಕ ಇತ್ಯಾದಿಯಾಗಿ ಪ್ರತಿ ವರ್ಷ ಸಂಗ್ರಹವಾಗುವ ದುಡ್ಡು ಎರಡೂವರೆ ಮೂರು ಕೋಟಿ ರು.
ಅದೆಷ್ಟೋ ಬಡ ಪ್ರತಿಭಾವಂತರಿಗೆ ಡಾಕ್ಟರೇಟ್ ಓದುವ ಮನಸಿದ್ದರೂ ಅರ್ಜಿ ಸಲ್ಲಿಸುವಾಗಲೇ ಕಟ್ಟ ಬೇಕಾಗಿರುವ ದುಬಾರಿ ಶುಲ್ಕ ನೋಡಿಯೇ ಗಾಬರಿಯಾಗಿ ಅಸಾಧ್ಯವೆನಿಸಿ ಕೈ ಚೆಲ್ಲಿರುತ್ತಾರೆ.ಒಂದು ವೇಳೆ ಆಯ್ಕೆಯಾದರೂ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ ಮತ್ತೊಂದು ಮೊದಲೊಂದು ಹೇಳಿ ಕಡಿಮೆ ಎಂದರೆ ಇಪ್ಪತ್ತು ಮೂವತ್ತು ಸಾವಿರ ತುಂಬ ಬೇಕು.ವಿದ್ಯಾರ್ಥಿ ಸಹಾಯ ಧನ ಸಿಕ್ಕದವರಿಗೆ ಮಾತ್ರವಲ್ಲ ಸಿಕ್ಕವರಿಗೆ ಕೂಡ ಇದು ತುಂಬಾ ಭಾರವೆನಿಸುತ್ತದೆ.ಸಹಾಯಧನ ಸಿಕ್ಕದೆ ಇರುವ ಬಡ ಅಭ್ಯರ್ಥಿಗಳಿಗಂತೂ ಇದನ್ನು ಭರಿಸುವುದು ಅಸಾಧ್ಯವೇ ಸರಿ.
ವಿದ್ಯಾರ್ಥಿಗಳ ಕಲಿಕೆಗೆ ಬ್ಯಾಂಕ್ ಗಳು ಸಾಲ ಕೊಡುತ್ತವೆ.ಆದರೆ ಭದ್ರತೆಗೆ ಏನೂ ಇಡಲು ಇಲ್ಲದವರಿಗೆ ಅಲ್ಲೂ ಸಾಲ ಸಿಕ್ಕುವುದಿಲ್ಲ.ನಾಲ್ಕು ಲಕ್ಷ ತನಕದ ಸಾಲಕ್ಕೆ ಯಾವುದೇ ಭದ್ರತೆ ಕೇಳಬಾರದು ಎಂಬ ನಿಯಮವೇನೂ ಇದೆ.ಆದರೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತಿದೆ?ನೋಡಿದವವರಿಲ್ಲ. ಅನುಭವಿಸಿದವರಿಗೆ ಮಾತ್ರ ಇದರ ಕಷ್ಟ  ಗೊತ್ತಾಗುತ್ತದೆ.
ಮೇಲೆ ಉಲ್ಲೇಖಿಸಿದ ಯುವಕ ರಾಜೇಶ್ ಗೆ ವಿದೇಶಕ್ಕೆ ಉನ್ನತ ಅಧ್ಯಯನಕ್ಕೆ ಅವಕಾಶ ಸಿಕ್ಕಾಗ ಆರಂಭದಲ್ಲಿ ದಾಖಲೆಗಳನ್ನು ಪರಿಶೀಲಿಸಿ ,ಭದ್ರತೆ ಎಲ್ಲ ಕೇಳಿ “ಸಾಲ ಕೊಡುತ್ತೇವೆ” ಎಂದು ಒಪ್ಪಿದ ಬ್ಯಾಂಕ್ ಕೊನೆಯ ಕ್ಷಣದಲ್ಲಿ ಸರಿಯಾದ ಕಾರಣವಿಲ್ಲದೇ ಇದ್ದಾಗಲೂ ಯಾವುದೋ ಒಂದು ಕುಂಟು ನೆಪ ಹೇಳಿ ಸಾಲ ಕೊಡಲು ನಿರಾಕರಿಸಿತ್ತು . ಮತ್ತೆ ಅವರ ಬಂಧು ಬಳಗದವರೆಲ್ಲ ಸೇರಿ ಒಮ್ಮೆಗೆ ಹೇಗೋ ದುಡ್ಡು ಹೊಂದಿಸಿ ಕೊಟ್ಟರು ,ಮುಂದೆ ಆತನಿಗೆ ವಿದ್ಯಾರ್ಥಿ ಸಹಾಯ ಧನ ಸಿಕ್ಕ ಕಾರಣ ಸಮಸ್ಯೆಯಾಗಲಿಲ್ಲ.ಆದರೆ ಎಲ್ಲರ ವಿಚಾರವೂ  ಹೀಗೆ ಸುಗಮವಾಗಲು ಸಾಧ್ಯವಿಲ್ಲ.
ಅದಿರಲಿ,ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಇಷ್ಟು ಕೋಟಿಗಟ್ಟಲೆ ದುಡ್ಡು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಯೂನಿವರ್ಸಿಟಿಗಳಿಗೆ  ಯುಜಿಸಿ ಹಾಗೂ ಸರಕಾರದಿಂದಲೂ ಸಹಾಯ ಧನ ಸಿಗುತ್ತದೆ.ಹಾಗಿದ್ದರೂ ಯಾಕೆ ನಮ್ಮ ದೇಶದ ಒಂದೇ ಒಂದು ಯೂನಿವರ್ಸಿಟಿ ಕೂಡಾ ವಿಶ್ವದ ಶ್ರೇಷ್ಠ ಇನ್ನೂರೈವತ್ತು ಯೂನಿವರ್ಸಿಟಿಗಳಲ್ಲಿ ಒಂದೇ ಒಂದು ಸ್ಥಾನ ಪಡೆದಿಲ್ಲ?ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ.ಆದರೆ ಬಡ ಪ್ರತಿಭಾವಂತರಿಗೆ ಯೂನಿವರ್ಸಿಟಿ ಪ್ರವೇಶವೇ ಮೃಗ ಮರೀಚಿಕೆಯಾಗಿದೆ.ಪ್ರವೇಶ ಪಡೆದವರಿಗೂ ಗುಣಮಟ್ಟದ ಮಾರ್ಗ ದರ್ಶನ ,ತರಬೇತಿಗಳು ಸಿಗುತ್ತಿಲ್ಲ.,ಗ್ರಂಥಾಲಯ ಸೌಲಭ್ಯ,ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳು ಕೂಡ ಸರಿಯಾಗಿ ಸಿಗುತ್ತಿಲ್ಲ.ವಿದ್ಯಾರ್ಥಿಗಳು ಕೊಡುವ ದುಡ್ಡು ,ಸಿಗುವ ಸಹಾಯ ಧನ ಎಲ್ಲ ಎಲ್ಲಿ ಹೋಗುತ್ತವೆ?ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಸಿಗುತ್ತಿದ್ದರೆ ಅದೆಷ್ಟೋ ಬಡ ಪ್ರತಿಭಾವಂತರಿಗೆ ಕಲಿಯಲು ಸಾಧ್ಯವಾಗುತ್ತಿತ್ತು .
ಇಷ್ಟೆಲ್ಲಾ ದುಡ್ಡು ಕಟ್ಟಿ ಸೇರಿದ ಅನೇಕ ವಿದ್ಯಾರ್ಥಿಗಳ ಪರಿಸ್ಥಿತಿ ಬಹಳ ಶೋಚನೀಯವಾಗಿರುತ್ತದೆ ವಿದ್ಯಾರ್ಥಿಗಳನ್ನು ದುಡ್ಡಿಗಾಗಿ ಶೋಷಣೆ ಮಾಡುವ ಮಾರ್ಗ ದರ್ಶಕರೂ ಇದ್ದಾರೆ.ಸುಮ್ಮಗೇ ದರ್ಪ ತೋರಿ ಶೋಷಿಸುವವರೂ ಇದ್ದಾರೆ.ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾದವರೂ ಇದ್ದಾರೆ.ಒಂದೆಡೆ ವರ್ಷ ಗಟ್ಟಲೆ  ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಪ್ರಬಂಧ ಸಿದ್ಧ ಪಡಿಸಿದವರಿಗೆ ಯಾವಾವುದೋ ಕುಂಟು ನೆಪಗಳನ್ನು ಹೇಳಿ ಸಲ್ಲಿಸಲು ಅನುಮತಿ ನೀಡದೆ ಇರುವ ಅನೇಕ ಪ್ರಕರಣಗಳಿವೆ.ಒಂದೊಮ್ಮೆ ಪ್ರಬಂಧ ಸಲ್ಲಿಸಿದರೂ ಸಕಾಲದಲ್ಲಿ ಮೌಲ್ಯ ಮಾಪನ ಮಾಡಿಸಿ ,ಮೌಖಿಕ ಪರೀಕ್ಷೆ ಏರ್ಪಡಿಸಿ ಪದವಿ ನೀಡದೆ ಇರುವ ಅನೇಕ ಪ್ರಕರಣಗಳೂ ಇವೆ. ಮಹಾ ಪ್ರಬಂಧ ಸಲ್ಲಿಸಿ ಎರಡು ಮೂರು ವರ್ಷ ಕಳೆದರೂ ಪಿಎಚ್.ಡಿ ಪದವಿ ಸಿಗದವರು ಇರುವಂತೆಯೇ ಪಿಎಚ್.ಡಿ ಅಧ್ಯಯನಕ್ಕೆ ಪ್ರವೇಶ ಪಡೆದ ಏಳೆಂಟು ತಿಂಗಳುಗಳಲ್ಲಿಯೇ  ಪಿಎಚ್.ಡಿ ಪದವಿ ಪಡೆದವರೂ ಇದ್ದಾರೆ! .ಕೆಲ ವರ್ಷಗಳ ಹಿಂದೆ ತುಮಕೂರು ಯೂನಿವರ್ಸಿಟಿ ಯಲ್ಲಿ ಕಾನೂನು ಬಾಹಿರವಾಗಿ ಏಳೆಂಟು ತಿಂಗಳುಗಳಲ್ಲಿಯೇ ಪಿಎಚ್.ಡಿ ಪದವಿ ನೀಡಿದ ಬಗ್ಗೆ ಸುದ್ದಿಯಾಗಿತ್ತು.
ಇಂಥ ಅವ್ಯವಸ್ಥೆಗಳು ಪಿಎಚ್.ಡಿ ಗೆ ಮಾತ್ರ ಸೀಮಿತವಲ್ಲ.ಸ್ನಾತಕ .ಸ್ನಾತಕೋತ್ತರ,ವೈದ್ಯಕೀಯ ,ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣಗಳನ್ನು ಕೂಡ ಬಿಟ್ಟಿಲ್ಲ.ಒಂದೆರಡು ತಿಂಗಳ ಹಿಂದೆ ಮೈಸೂರು ಯೂನಿವರ್ಸಿಟಿಯ ಬಿ.ಎಡ್ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಯಿತು. ಅಲ್ಲಿನ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕೇಳಿದರೆ ಎಂಥವರ ಎದೆ ಕೂಡಾ ದಸಕ್ ಎನ್ನಲೇ ಬೇಕು! ಅನೇಕ ವಿದ್ಯಾರ್ಥಿಗಳಿಗೆ 100% ಅಂಕಗಳು ಬಂದಿವೆ ಎಂದರೆ ಎಲ್ಲ ಪತ್ರಿಕೆಗಳಲ್ಲಿಯೂ ಅಂತರ್ ಮೌಲ್ಯ ಮಾಪನ ಹಾಗೂ  ಲಿಖಿತ ಪರೀಕ್ಷೆಯಲ್ಲಿ  ಪೂರ್ಣ ಅಂಕಗಳು /ನೂರಕ್ಕೆ ನೂರಷ್ಟು ಅಂಕಗಳು ಲಭಿಸಿವೆ!!ಪ್ರಾಜೆಕ್ಟ್ ವರ್ಕ್ .ಅಣು ಬೋಧನೆ ,ಪ್ರಬಂಧ ಮಂಡನೆ ,ಆಂತರಿಕ ಲಿಖಿತ  ಪರೀಕ್ಷೆ ,ಹಾಗೂ ಅಂತಿಮ ಲಿಖಿತ ಪರೀಕ್ಷೆ ಎಲ್ಲದರಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು  ಗಳಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಎಲ್ಲೆಡೆ ಪೂರ್ಣ ಅಂಕಗಳನ್ನು ಗಳಿಸುವುದು ಅಸಾಧ್ಯವಾದ ವಿಚಾರ.ಬೇರೆ ಯೂನಿವರ್ಸಿಟಿಗಳಲ್ಲಿ 94-95 % ಗರಿಷ್ಠ ಅಂಕಗಳು ಬಂದಿವೆ .ಹಾಗಿರುವಾಗ  ಒಂದು ಯೂನಿವರ್ಸಿಟಿಯ ವ್ಯಾಪ್ತಿಯ ಬಿ.ಎಡ್  ಕಾಲೇಜ್ ಗಳಲ್ಲಿ ಮಾತ್ರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಥಹ 100 % ಅಂಕ ಗಳಿಕೆಯ ಅಸಾಧರಣ ಸಾಧನೆ ಮಾಡಿದ್ದಾರೆ ಎಂದರೆ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಸಂಶಯವಾಗುತ್ತದೆ !.
ಕೆಲ ದಿನಗಳ ಹಿಂದೆ ಕರ್ನಾಟಕ ರಾಜ ಮುಕ್ತ ವಿಶ್ವ ವಿದ್ಯಾಲಯಗಳ ಅವ್ಯವಸ್ಥೆಯ ಬಗ್ಗೆ ಸುದ್ದಿ ಬಂದಿತ್ತು.ಒಬ್ಬರಿಗೆ ಒಂದು ಪತ್ರಿಕೆಯಲ್ಲಿ 34 ಅಂಕ ಬಂದಿದೆಯೆಂದು ಮರು ಮೌಲ್ಯ ಮಾಪನಕ್ಕೆ ಹಾಕಿದರೆ ಮರು ಮಾಪನದಲ್ಲಿ 4 ಅಂಕಗಳು ಬಂದುವಂತೆ.ಅದು ಯಾಕೆ ಹೀಗೆ ಎಂದು ಗಾಬರಿಯಾಗಿ ಕೇಳಿದರೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವುದು ಮಾತ್ರ ನಿಮ್ಮ ಜವಾಬ್ದಾರಿ .ಅಂಕ ಕೊಡುವುದು ಮೌಲ್ಯ ಮಾಪಕರು ಅದನ್ನು ಕೇಳುವಂತಿಲ್ಲ ಎಂಬ ಉಡಾಫೆಯ ಉತ್ತರವನ್ನು ಅಧಿಕಾರಿಗಳು ಕೊಟ್ಟರೆಂದು ಓದಿದೆ.ಈ ವಿಶ್ವ ವಿದ್ಯಾಲಯದಲ್ಲಿ ಮೌಲ್ಯ ಮಾಪನವೇ ಮಾಡದೆ ಸುಮ್ಮನೆ ಅಂಕಗಳನ್ನು ಕೊಡುತ್ತಾರೇನೋ ಎಂಬ ಸಂಶಯ ನನಗೂ ಇದೆ.ನಾನು ಇದೇ ಯೂನಿವರ್ಸಿಟಿ ಯಲ್ಲಿ ಕನ್ನಡ ಎಂ.ಎ ಮಾಡಿದ್ದು ನನಗೆ ಮೊದಲ ವರ್ಷ ಫಲಿತಾಂಶ ಬಂದಾಗ ಅಚ್ಚರಿ ಕಾಡಿತ್ತು.ನಾನು ಛಂದಸ್ಸು ಮತ್ತು ಭಾಷಾ ವಿಜ್ಞಾನ ಪತ್ರಿಕೆಯಲ್ಲಿ ಬಹಳ ಚೆನ್ನಾಗಿ ಉತ್ತರಿಸಿದ್ದೆ. ನಾನು 85 -88 ಅಂಕಗಳನ್ನು  ನಿರೀಕ್ಷಿಸಿದ್ದೆ.ಆದರೆ ನನಗೆ ಆ ಪತ್ರಿಕೆಯಲ್ಲಿ ಕೇವಲ 54 (46+9) ಅಂಕ ಬಂದಿತ್ತು .ಹಾಗಾಗಿ ನಾನು ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗೆ ಅರ್ಜಿ ಸಲ್ಲಿಸಿದೆ ಮತ್ತು ನಿ ರೀಕ್ಷಿಸಿದ್ದಕ್ಕಿಂತ ತೀರ ಕಡಿಮೆ ಅಂಕಗಳು ಬಂದಿದ್ದ ಎರಡು ಪತ್ರಿಕೆಗಳನ್ನು ಮರು ಮೌಲ್ಯ ಮಾಪನ ಮಾಡಲು ಕೋರಿ ಶುಲ್ಕ ತುಂಬಿ ಅರ್ಜಿ ಸಲ್ಲಿಸಿದ್ದೆ. ಅದೃಷ್ಟವಶಾತ್ ಮರು ಮೌಲ್ಯ ಮಾಪನದಲ್ಲಿ ನನಗೆ ಛಂದಸ್ಸು ಮತ್ತು ಭಾಷಾ ವಿಜ್ಞಾನದಲ್ಲಿ 30 ಅಂಕಗಳು ಹೆಚ್ಚು ಬಂದು 76+8 = 84 ಅಂಕಗಳು ಸಿಕ್ಕವು .ಇನ್ನೊಂದರಲ್ಲಿಯೂ  20 ಅಂಕಗಳು ಹೆಚ್ಚು ಲಭಿಸಿದ್ದು 52 ಇದ್ದಲ್ಲಿ 72 ಅಂಕಗಳು ಸಿಕ್ಕವು .
ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ಕೈಗೆ ಬಂದಾಗ ನನಗೆ ಆಘಾತವಾಗಿತ್ತು ! ಸ್ನಾತಕೋತ್ತರ ಪದವಿಗಳ ಉತ್ತರ ಪತ್ರಿಕೆಯನ್ನು ಇಬ್ಬರು ಮೌಲ್ಯ ಮಾಪನ ಮಾಡುವುದು ಎಲ್ಲೆಡೆ ಇರುವ ಕ್ರಮ.ಆದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಒಂದು ಮೌಲ್ಯ ಮಾಪನ ಮಾತ್ರ ಮಾಡುವ ಪದ್ಧತಿ ಇದೆ ಎಂದೆನಿಸುತ್ತದೆ.ಆ ಒಂದು ಮೌಲ್ಯ ಮಾಪನವನ್ನೂ ಸರಿಯಾಗಿ ಮಾಡದೆ ಸುಮ್ಮಗೆ ಒಮ್ಮೆ ತಿರುವಿ ಹಾಕಿ ಅಥವಾ ಒಳಭಾಗ ತೆರೆದು ನೋಡದೆಯೇ ಅಂಕಗಳನ್ನು ಅಂಕ ಪತ್ರಿಕೆಯಲ್ಲಿ ನಮೂದಿಸದೆಯೇ ನೇರವಾಗಿ ಅಂಕ ಕೊಡುತ್ತಾರೆ.ಎಂದು ನನ್ನ ಉತ್ತರ ಪತ್ರಿಕೆಗಳ ಪ್ರತಿಯನ್ನು ಗಮನಿಸಿದಾಗ ನನಗೆ ಅರಿವಾಯಿತು.ಎರಡು ಮೌಲ್ಯ ಮಾಪ ಇರುವ ಕಾರಣ ಸ್ನಾತಕೋತ್ತರ ಪದವಿಗಳಲ್ಲಿ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಅಂಕಗಳನ್ನು ನಮೂದಿಸುವುದಿಲ್ಲ.ಆದರೆ ಉತ್ತರ ಪತ್ರಿಕೆಯ ಎರಡನೆಯ ಅಥವಾ ಮೂರನೆಯ ಪುಟದಲ್ಲಿ ಎಲ್ಲ ಪ್ರಶ್ನೆ ಸಂಖ್ಯೆಗಳನ್ನು ಮುದ್ರಿಸಿರುತ್ತಾರೆ.ವಿದ್ಯಾರ್ಥಿ ಯಾವ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ ಅದಕ್ಕೆ ಎಷ್ಟು  ಅಂಕಗಳು ಬಂದಿವೆ ಎಂಬುದನ್ನು ಆಯಾಯ ಪ್ರಶ್ನೆ ಸಂಖ್ಯೆ ಕೆಳಭಾಗದಲ್ಲಿ ತುಂಬಲು ಜಾಗ ಇಡುತ್ತಾರೆ .ಕೊನೆಯಲ್ಲಿ ಒಟ್ಟು ಅಂಕಗಳನ್ನು ಬರೆಯಲು ಸ್ಥಳಾವಕಾಶ ಇರುತ್ತದೆ . ಅದರ ಕೆಳಭಾಗದಲ್ಲಿ ಮೌಲ್ಯ ಮಾಪಕರ ಸಹಿ ಮಾಡುವ ಜಾಗ ಇರುತ್ತದೆ .ಎಡ ಭಾಗದಲ್ಲಿ ಮೌಲ್ಯ ಮಾಪಕರ ಹೆಸರು ಬರೆಯಲು ಜಾಗ ವಿರುತ್ತದೆ.ಮೌಲ್ಯ ಮಾಪಕರು ಇವೆಲ್ಲವನ್ನೂ ತುಂಬಿ ಯಾವ ಪ್ರಶ್ನೆಗೆ ಎಷ್ಟು ಅಂಕಗಳು ಎಂಬುದನ್ನು ನಮೂದಿಸಿ ಟೋಟಲ್ ಹಾಕಿ ಸಹಿ ಮಾಡಬೇಕು.ಆದರೆ ನನ್ನ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳಲ್ಲಿ ಒಂದರಲ್ಲಿ ಮಾತ್ರ  ಉತ್ತರಿಸಿದ ಪ್ರಶ್ನೆಗಳ ಕೆಳಭಾಗದಲ್ಲಿ ಅಂಕಗಳನ್ನು ತುಂಬಿ ಒಟ್ಟು ಮೊತ್ತವನ್ನು ಹಾಕಿದ್ದು ಅದರಲ್ಲಿ  ಮೌಲ್ಯ ಮಾಪಕರ ಸಹಿ ಮತ್ತು ಹೆಸರು ಇದೆ.ಆ ಪತ್ರಿಕೆಯಲ್ಲಿ ನನಗೆ 68 ಅಂಕಗಳು ಬಂದಿದ್ದು ಅಂತರ್ ಮೌಲ್ಯ ಮಾಪನದ 8 ಅಂಕಗಳು ಸೇರಿಸಿ ಒಟ್ಟು 76 ಅಂಕಗಳು ಬಂದಿತ್ತು.ಇದು ನಾನು ಸುಮಾರಾಗಿ ನಿರೀಕ್ಷಿಸಿದ ಅಂಕವೇ ಆಗಿತ್ತು. ಉಳಿದ ಎಲ್ಲ ಪತ್ರಿಕೆಗಳಲ್ಲಿ  ಮೌಲ್ಯ ಮಾಪಕರ ಸಹಿ ಮಾತ್ರ ಇದೆ .ಉತ್ತರಿಸಿದ ಪ್ರಶ್ನೆ ಸಂಖ್ಯೆಗಳಿಗನುಗುಣವಾಗಿ ಅಂಕಗಳನ್ನು ನಮೂದಿಸುವುದು ಬಿಡಿ,ಒಟ್ಟು ಅಂಕಗಳು ಎಷ್ಟು ಎಂದು ಕೂಡ ಹಾಕಿಲ್ಲ !ಮೌಲ್ಯ ಮಾಪಕರ ಹೆಸರು ಕೂಡ ಇಲ್ಲ.ಸಹಿ ಮಾತ್ರ ಇದೆ. ಹಾಗಾಗಿ ನನಗನ್ನಿಸಿದ್ದು ಇಲ್ಲಿ ಮೌಲ್ಯ ಮಾಪನ ಮಾಡುವುದೇ ಇಲ್ಲವೋ ಏನೋ ಎಂದು. ಉತ್ತರ ಪತ್ರಿಕೆಯನ್ನೇ ಸರಿಯಾಗಿ ಮೌಲ್ಯ ಮಾಪನ ಮಾಡದೇ ಇರುವವರು ಇನ್ನು ಆಂತರಿಕ ನಿಬಂಧಗಳನ್ನು ಮೌಲ್ಯ ಮಾಪನ ಮಾಡುತ್ತಾರೆಯೇ ?ತಮಗೆ  ಮನಸಿಗೆ ಬಂದಷ್ಟು ಅಂಕಗಳನ್ನು ಕೊಡುತ್ತಾರೆ ಅಷ್ಟೇ !
ಈ ಮೊದಲು ಮರು ಮೌಲ್ಯ ಮಾಪನವನ್ನು ಸ್ವಲ್ಪ ಜಾಗರೂಕತೆಯಿಂದ ನೋಡಿ ಸರಿಯಾಗಿಯೇ ಮಾಡುತ್ತಿದ್ದರು.ಈಗ ಅದೂ ಇಲ್ಲವಾಗಿದೆ.ಲಕ್ಷಾಂತರ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ  ಓದುತ್ತಾರೆ.ಇವರ ಮೂಲಕ ಯೂನಿವರ್ಸಿಟಿ ಗೆ ಕೊಟ್ಯಂತರ ರು ದುಡ್ಡು ಬರುತ್ತದೆ.ಆದರೆ ಅದಕ್ಕೆ ತಕ್ಕನಾದ ವ್ಯವಸ್ಥೆ ಅಲ್ಲಿಲ್ಲ.ಇರುವುದರಲ್ಲಿಯೇ  ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡುವ  ಎಂಬ ಮನೋಭಾವವೂ ಅಲ್ಲಿಲ್ಲ.ಯಾವುದನ್ನೂ ಹೇಳುವವರು ಕೇಳುವವರು  ಯಾರೂ ಇಲ್ಲ.
 ಯಾಕೆ ಹೀಗೆ ?
ಅಂಗೈ ಹುಣ್ಣಿಗೆ ಕನ್ನಡಿ ಬೇಡ .ಮೊನ್ನೆಯಷ್ಟೇ ನೇಮಕಾತಿಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಅನೇಕ ಆರೋಪಗಳಿಗೆ ಈಡಾಗಿರುವ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಯ ಬಂಧನವಾಗಿದೆ.ಇತ್ತೀಚೆಗಿನ ನಾಲ್ಕೈದು ವರ್ಷಗಳಿಂದ ಶಿಕ್ಷಣದ ಮನೆಯಲ್ಲಿ ಭ್ರಷ್ಟಾಚಾರದ್ದೇ ಯಜಮಾನಿಕೆ ನಡೆಯುತ್ತಿದೆ .ಇತ್ತೀಚೆಗೆ ಮೈಸೂರು  ಯೂನಿವರ್ಸಿಟಿಯಲ್ಲಿ 2006 ರಲ್ಲಿ ನಡೆದ ಅಕ್ರಮ ನೇಮಕಾತಿಯನ್ನು ರದ್ದು ಪಡಿಸಿ ಸರಕಾರ ಆದೇಶ ಹೊರಡಿಸಿತ್ತು. ವಿಶ್ವ ವಿದ್ಯಾಲಯಗಳ ವೀಸಿಗಳಿಗೆ,ಪ್ರೊಫೆಸ್ಸರ್ ಗಳಿಗೆ ತಿಂಗಳಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ವೇತನ ಸಿಗುತ್ತದೆ.ಶಿಕ್ಷಣ ಕ್ಷೇತ್ರಕ್ಕೆ ಪ್ರತಿಭಾವಂತರು ಬರಬೇಕು ಕೊನೆಯ ಪಕ್ಷ ವಿಶ್ವ ವಿದ್ಯಾಲಯಗಳಾದರೂ ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದೇ ಇವರುಗಳಿಗೆ ಹೆಚ್ಚಿನ ವೇತನ ನೀಡಿರುವುದರ ಮೂಲ ಉದ್ದೇಶ . ಅಷ್ಟಿದ್ದರೂ ಇವರಿಗೆ ದುರಾಸೆಯೇಕೆ ?ಸ್ವಾಭಿಮಾನವನ್ನು,ವಿಶ್ವ ವಿದ್ಯಾಲಯದ ಗೌರವವನ್ನೂ ಅಡವಿಟ್ಟು  ಭ್ರಷ್ಟ ದುಡ್ಡಿಗೆ ಕೈಚಾಚುತ್ತಾರಲ್ಲ! ನಿಜಕ್ಕೂ ನೋವಾಗುತ್ತದೆ.ಒಂದು ಕಾಲದಲ್ಲಿ ನಮ್ಮ ದೇಶದ ತಕ್ಷ ಶಿಲಾ ,ನಲಂದಾ ವಿಶ್ವ ವಿದ್ಯಾಲಯಗಳು ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಗಳನ್ನು ಪಡೆದಿದ್ದವು ಆದರೆ ಇಂದು   ನಮ್ಮ  ನೆಲದಲ್ಲಿ ಕುಲಪತಿಯೊಬ್ಬರು ಭ್ರಷ್ಟಾಚಾರ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ.ಇದು ವಿಶ್ವ ವಿದ್ಯಾಲಯಗಳ ಘನತೆಗೆ ನಿಜಕ್ಕೂ ಒಂದು ಕಪ್ಪು ಚುಕ್ಕಿ .ಆದರೆ ಕರ್ನಾಟಕ ವಿಶ್ವ ವಿದ್ಯಾಲಯ ಮಾತ್ರವಲ್ಲ ,ನಮ್ಮಲ್ಲಿನ ಹೆಚ್ಚಿನ ಯೂನಿವರ್ಸಿಟಿಗಳಲ್ಲಿ ಅವ್ಯವಹಾರ ,ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುದ್ದಿ ಸದಾ ಕೇಳುತ್ತಲೇ ಇರುತ್ತೇವೆ .
ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆ ಹಾಗೂ ವ್ಯಾಪಕ ಅವ್ಯವಹಾರ ನಡೆದ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ.ಅದಕ್ಕೂ ಹಿಂದೆ ಬೆಳಗಾವಿ ,ಗುಲ್ಬರ್ಗ ವಿಶ್ವ ವಿದ್ಯಾಲಯಗಳಲ್ಲಿ ಆದ ನೇಮಕಾತಿ ಹಾಗೂ ಇತರ ವಿಚಾರಗಳ ಬಗ್ಗೆ ಕೂಡ ಅಪಸ್ವರಗಳಿವೆ.ರಾಜೀವ ಗಾಂಧಿ ವಿಶ್ವ ವಿದ್ಯಾಲಯ ಸೇರಿದಂತೆ ಕರ್ನಾಟಕದ ಇಪ್ಪತ್ತು ವಿಶ್ವ ವಿದ್ಯಾಲಯಗಳ ಮೇಲೆ ಭ್ರಷ್ಟಾಚಾರ ಅವ್ಯವಹಾರಗಳ ಆರೋಪಗಳಿವೆ.
ಶಿಕ್ಷಣದ ಮನೆಯೇ ಭ್ರಷ್ಟವಾದರೆ ದೇಶದ ಮಕ್ಕಳಿಗೆ ಪ್ರಾಮಾಣಿಕತೆ,ಸಚ್ಚಾರಿತ್ರ್ಯದ ಪಾಠ ಹೇಳುವವರು ಯಾರು ?ಸ್ವಯಂ ಭ್ರಷ್ಟರಾದವರು  ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಾಧ್ಯವೇ ಇಲ್ಲ .
ಏನು ಪರಿಹಾರ ?
2006 ರಲ್ಲಿ ಮೈಸೂರು  ವಿಶ್ವ ವಿದ್ಯಾಲಯಗಳಲ್ಲಿ ಅಕ್ರಮ ನೇಮಕಾತಿ ನಡೆದ ಬಗ್ಗೆ ತನಿಖೆಯಾಗಿದ್ದು ಸರಕಾರ ನೇಮಕಾತಿ ರದ್ದು  ಪಡಿಸಿ ಆದೇಶ ಹೊರಡಿಸಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ .ಮೊನ್ನೆ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಬಿ ವಾಲೀಕಾರ ಅವರು  ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗೆ ಎಲ್ಲ ವಿಶ್ವ ವಿದ್ಯಾಯಗಳಲ್ಲಿನ ಅವ್ಯವಹಾರಗಳ ಬಗ್ಗೆಯೂ  ತನಿಖೆಯಾಗಿ ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾದರೆ ತುಸುವಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು.ಭ್ರಷ್ಟಾಚಾರಿಗಳ ಭಂಡೆದೆ ತುಸುವಾದರೂ ಕಂಪಿಸೀತು.ನಮ್ಮ ವಿಶ್ವ ವಿದ್ಯಾಲಯಗಳು ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತವಾದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ .ಗುಣಮಟ್ಟದ ವೃದ್ಧಿಯ ಮೂಲಕ ನಮ್ಮ ವಿಶ್ವ ವಿದ್ಯಾಲಯಗಳೂ ಕೂಡ ಮುಂದೊಂದು ದಿನ  ಖಂಡಿತವಾಗಿಯೂ ಅಂದಿನ ನಲಂದಾ ತಕ್ಷ ಶಿಲೆಗಳಂತೆ  ಜಗತ್ತಿನಲ್ಲಿ  ಉಕೃಷ್ಟ ಸ್ಥಾನವನ್ನು ಮತ್ತೊಮ್ಮೆ ಗಳಿಸಬಹುದು. ಆದ್ದರಿಂದ ಶಿಕ್ಷಣದ ಮನೆ ಮೊದಲು ಸ್ವಚ್ಛವಾಗಲಿ.
ಡಾ.ಲಕ್ಷ್ಮೀ ಜಿ ಪ್ರಸಾದ
samagramahithi@gmail.com

Monday, 20 October 2014

ಧನುಷ್ಕೋಟಿ ಅಜ್ಜಿಯ ನೆನಪು-ಡಾ.ಲಕ್ಷ್ಮೀ ಜಿ ಪ್ರಸಾದ


ನಿನ್ನೆ ರಶೀದ್ ವಿಟ್ಲ ಅವರು ಬರೆದ ಸರೋಜಮ್ಮನ ವೃತ್ತಾಂತ ಓದಿದಲ್ಲಿಂದ ನನಗೆ ಕಾಡಿದ್ದು ಧನುಷ್ಕೋಟಿ ಅಜ್ಜಿಯ ನೆನಪು .ಸುಮಾರು ಎರಡೂವರೆ ಮೂರು ವರ್ಷಗಳ ಹಿಂದಿನ ವಿಚಾರವಿದು .ನಾನು ನನ್ನ ಎರಡನೆಯ ಡಾಕ್ಟರೇಟ್ ಪದವಿಯ ಅಧ್ಯಯನಕ್ಕಾಗಿ ಆಗಾಗ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಹೋಗಿ ಬರುತ್ತಿದ್ದೆ .ಬೆಳಗ್ಗೆ ಏಳು ಗಂಟೆಯ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಹೋಗಿ ಸಂಜೆ ಚೆನ್ನೈ ಯಿಂದ ಕುಪ್ಪಂ ಗೆ ಐದೂವರೆ ಹೊತ್ತಿಗೆ ಬರುವ ಎಕ್ಸ್ಪ್ರೆಸ್ ಗಾಡಿ ಒಂದರಲ್ಲಿ ಹಿಂದೆ ಬರುತ್ತಿದ್ದೆ .
ಹೀಗೆ ಒಂದು ದಿನ ಹೋಗಿ ಹಿಂದೆ ಬರುವಾಗ (ಬಹುಶ ಅಕ್ಟೋಬರ್ 2011ರಲ್ಲಿ ) ಟ್ರೈನ್ ನಲ್ಲಿ ಓರ್ವ ವೃದ್ಧ ಮಹಿಳೆಯ ಪರಿಚಯ ಆಯಿತು .ಅವರ ಹೆಸರು ಧನುಷ್ಕೋಟಿ ಎಂದು .ಸುಮಾರು 80 ವರ್ಷ ವಯಸ್ಸು .ಮೈ ತುಂಬಾ ಚಿನ್ನದ ಒಡವೆಗಳನ್ನು ಧರಿಸಿದ್ದರು .ಹಾಗಾಗಿ ಸಾಕಷ್ಟು ಧನವಂತರೆ ಇರಬೇಕು.ನಾವು ಮಾಧ್ವ ಬ್ರಾಹ್ಮಣರೆಂದು ಹೇಳಿದ್ದರು. ತುಂಬಾ ಗೊಂದಲದಲ್ಲಿದ್ದ ಹಾಗೆ ಕಾಣುತ್ತಿದ್ದರು.ಒಂದು ಸಣ್ಣ ಡೈರಿ ಯಲ್ಲಿ ಬರೆದಿದ್ದ ವಿಳಾಸವನ್ನು ಓದಿ ಇದು ಎಲ್ಲಿ ಬರುತ್ತೆ ಎಂದು ಕೇಳಿದರು .ಅದು ತಮಿಳಿನಲ್ಲಿತ್ತು.ಹಾಗಾಗಿ ನಾನು ಅಲ್ಲಿ ಕೆಲವರಲ್ಲಿ ತಮಿಳು ಓದಲು ಬರುತ್ತಾ ಎಂದು ವಿಚಾರಿಸಿ ಓದಿ ಹೇಳಲು ತಿಳಿಸಿದೆ .ಅದು ಒಂದು ಗಿರಿನಗರದ ಒಂದು ಕಲ್ಯಾಣ ಮಂಟಪದ ವಿಳಾಸ ಆಗಿತ್ತು .ಅಲ್ಲಿ ಮರುದಿನ ಒಂದು ಮದುವೆ ಇದೆ ಹತ್ತಿರದ ನೆಂಟರದ್ದು,ಅಲ್ಲಿಗೆ ನಾನು ಹೊರಟಿದ್ದೇನೆ ಎಂದು ಅವರು ಹೇಳಿದರು
.ಟ್ರೈನ್ ಇಳಿದು ಅವರು ತಮ್ಮ ಮಗನ /ಮೊಮ್ಮಗನ ಮನೆಗೆ ಹೋಗಬೇಕಾಗಿತ್ತು . .ಅವರು ಚೆನ್ನೈ ಯಲ್ಲಿರುವ ಯಾವುದೊ ಒಂದುಮಠ/ ಅಶ್ರಮಲ್ಲಿರುವುದು (ಪೇಜಾವರ ಸ್ವಾಮೀಜಿಗಳು ನಡೆಸುವದು ಎಂದು ಹೇಳಿದ ನೆನಪು )ಎಂದು ಹೇಳಿ ಸ್ವಾಮಿಜಿಯವರ /ಆಶ್ರಮದ ಫೋನ್ ನಂಬರ್ ಇದೆ ಎಂದು ಹೇಳಿದರು .ಆ ನಂಬರ್ ಗೆ ಫೋನ್ ಮಾಡಿದರೆ ಯಾರೂ ಎತ್ತಲಿಲ್ಲ .ಈ ಅಜ್ಜಿಗೆ ತನ್ನ ಮೊಮ್ಮಗನ ನಂಬರ್ ಬರೆದುಕೊಂಡು ಎಲ್ಲಿ ಇಟ್ಟದ್ದು ಹೇಳಿ ನೆನಪಿರಲಿಲ್ಲ .ತಾನು ಈಗ ಮಗನ ಮನೆಗೆ ಹೋಗಬೇಕು.ಎಂದು ಹೇಳಿ ಒಂದು ಜಯನಗರದ ಯಾವುದೊ ಒಂದು ವಿಳಾಸವನ್ನು ಹೇಳಿದರು.ಅದು ಅವರ ಮಗನ/ಮೊಮ್ಮಗನ ಮನೆ ವಿಳಾಸವಾಗಿದ್ದು ಅವರಿಗೆ ಅದು ಸ್ಮರಣೆಯಲ್ಲಿತ್ತು..ಅವರ ಫೋನ್ ನಂಬರ್ ಅಜ್ಜಿ ಕೈಯಲ್ಲಿ ಇರಲಿಲ್ಲ .ಮಗ ಸೊಸೆ ಒಳ್ಳೆ ಕೆಲಸದಲ್ಲಿದ್ದಾರೆ.ಸೊಸೆ ಗೈನಕಾಲಜಿಸ್ಟ್ ಆಗಿದ್ದಾರೆ ಎಂದೂ ಅವರು ಹೇಳಿದರು.
ತನ್ನನ್ನು ಮಗನ ಮನೆಗೆ ತನಕ ಆಟೋದಲ್ಲಿ ಬಿಡುತ್ತೀರಾ ಎಂದು ನನ್ನಲ್ಲಿ ಕೇಳಿದರು .ರಾತ್ರಿ ಯಾಗಿತ್ತು . ಆದ್ದರಿಂದ ನಾನು ಜೊತೆಗೆ ಬರಲು ಸಾಧ್ಯವಿಲ್ಲ .ಅಟೋ ಹತ್ತಿಸಿ ಬಿಡುತ್ತೇನೆ ಎಂದು ಹೇಳಿದೆ . ಅದೇ ಟ್ರೈನ್ ನಲ್ಲಿ ಸಹೃದಯಿ (ಹೆಸರು ರಾಜೇಶ್ ಶೆಟ್ಟಿ ಎಂದು ನೆನಪು ) ಇದ್ದರು .ಟ್ರೈನ್ ಬೆಂಗಳೂರು ಹತ್ರ ಬರುತ್ತಾ ಇತ್ತು .ತಡ ಆಗಿ ಬಂದ ಕಾರಣ ಸಂಜೆ ಏಳೂವರೆಗೆ ತಲುಪಬೇಕಾದ ಟ್ರೈನ್ ಬೆಂಗಳೂರು ತಲುಪುವಾಗ ರಾತ್ರಿ ಒಂಬತ್ತು ಗಂಟೆ ಆಗಿತ್ತು .ಈ ರಾತ್ರಿಯಲ್ಲಿ ಸರಿಯಾಗಿ ವಿಳಾಸ ಗೊತ್ತಿಲ್ಲದ ,ಕಾಂಟಾಕ್ಟ್ ನಂಬರ್ ಇಲ್ಲದ ವೃದ್ಧ ಮಹಿಳೆಯನ್ನು ಹೀಗೆ ಆಟೋಹತ್ತಿಸಿ ಕಳುಹಿಸಿದರೆ ಅಪಾಯ ಹಾಗಾಗಿ ರೈಲ್ವೇಸ್ ಪೊಲೀಸರಿಗೆ ತಿಳಿಸುವ ಎಂದು ಅವರು (ರಾಜೇಶ್ ?) ತಿಳಿಸಿದರು .ನನಗೂ ಅದೇ ಸರಿ ಎನ್ನಿಸಿತು . ಹಾಗಾಗಿ ನಾವು ಮೆಜೆಸ್ಟಿಕ್ ಇಳಿದ ತಕ್ಷಣ ಅಜ್ಜಿಯನ್ನು ಅಲ್ಲಿನ ಪೊಲೀಸರ ಹತ್ತಿರ ಕರೆದುಕೊಂಡು ಹೋಗಿ ವಿಷಯ ತಿಳಿಸಿದೆವು
ಆಗ ಅವರು ಮೊದಲಿಗೆ ನಮ್ಮ ಗುರುತು ಪರಿಚಯ ಕೇಳಿದರು .ನಾವು ಯಾವುದೊ ಸಂಚು ಮಾಡುತ್ತಿಲ್ಲ ಎಂದು ಮನವರಿಕೆ ಆದಮೇಲೆ ನಮ್ಮ ಫೋನ್ ನಂಬರ್ ತಗೊಂಡು "ಸರಿ ನೀವು ಹೋಗಿ ಈ ಅಜ್ಜಿಯನ್ನು ಅವರ ಮಗನ ಮನೆ ತಲುಪಿಸುತ್ತೇವೆ ನಾವು" ಎಂದು ಭರವಸೆಯನ್ನು ಕೊಟ್ಟರು ಪ್ರಸಾದ್ ರೈಲ್ವೇಸ್ಟೇಷನ್ ಹೊರಗಡೆ ನನ್ನನ್ನು ಕಾಯುತಿದ್ದರು.ನಾವು ನಮ್ಮ ದಾರಿ ಹಿಡಿದು ರಾತ್ರಿ ಹನ್ನೊಂದು ಗಂಟೆ ಮನೆ ಸೇರಿದೆವು .
ಮುಂದೇನೂ ಆ ಅಜ್ಜಿಗೆ ತೊಂದರೆಯಾಗಿರಲಾರದು ಎಂದು ಭಾವಿಸಿದ್ದೇನೆ .ಆದರೆ ನನಗೆ ವೃದ್ಧರ ಸಮಸ್ಯೆ ,ಕಿರುಯರಿಗೆ ವೃದ್ಧರ ಕುರಿತು ಇರುವ ಅವಜ್ನೆಯ ಅರಿವಾದದ್ದು ಅಂದೇ .ಮಗ ಸೊಸೆ ಇಬ್ಬರೂ ಒಳ್ಳೆ ಕೆಲಸದಲ್ಲಿದ್ದರೂ ಆ ಅಜ್ಜಿ ಆಶ್ರಮದಲ್ಲಿ/ಮಠ ಯಾಕಿರಬೇಕಾಯಿತು ?ಮಠ/ಆಶ್ರಮದಿಂದ ಯಾವುದೇ ಜವಾಬ್ದಾರಿ ಇಲ್ಲದೆ ಅವರನ್ನು ಒಬ್ಬರೇ ಯಾಕೆ ಬೆಂಗಳೂರಿಗೆ ಕಳುಹಿಸಿದರು ?ಅವರನ್ನು ಕರೆದುಕೊಂಡು ಹೋಗಲು ಮನೆ ಮಂದಿ ಯಾಕೆ ಬರಲಿಲ್ಲ ?.ಆ ಅಜ್ಜಿ ಮೊಮ್ಮಗನ /ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗ ಆಶ್ರಮದಿಂದ ಹೇಳದೆ ತಪ್ಪಿಸಿಕೊಂಡು ಬಂದಿದ್ದರೇ?ಅಥವಾ ವೃದ್ಧ್ಹಾಪ್ಯದ ಮರೆವು ,ಭ್ರಮೆಗೆ ಒಳಗಾಗಿದ್ದರೆ?ಈ ಎಲ್ಲ ಪ್ರಶ್ನೆಗಳು ಉತ್ತರವಿಲ್ಲದೇ ಸದಾ ಕಾಡುತ್ತಿವೆ .
ಏನೇ ಆದರೂ ವೃದ್ಧಾಪ್ಯದ ಇಳಿಗಾಲದಲ್ಲಿ ತಮ್ಮ ಹೆತ್ತವರನ್ನು ಹೀಗೆ ಅನಾಥ .ಅಸಹಾಯಕ ಪರಿಸ್ಥಿತಿಗೆ ತಳ್ಳುವುದು ಅಕ್ಷಮ್ಯ ಅಪರಾಧ ಅಲ್ಲವೇ ?