Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರು: ಪುಸ್ತಕದೊಲುಮೆಯ ಐಕ



 ಪುಸ್ತಕದೊಲುಮೆಯ ಐಕಾನ್ 


ಐಕ ಎಂಬ ಕಾವ್ಯನಾಮದಲ್ಲಿ ಕವನಗಳನ್ನು ಇನ್ನಿತರ ವಿಚಾರಗಳನ್ನು ಬರೆಯುವ ಕಮಲೇಶ್ ರಾಮಕೃಷ್ಣ Kamaleshagowda Raamakrishnappa ನನಗೆ ಪೇಸ್ ಬುಕ್ ನಲ್ಲಿ ಎರಡು ಮೂರು ವರ್ಷಗಳಿಂದ ಸ್ನೇಹಿತರು.


ಬೆಂಗಳೂರಿನ ಮಾಗಡಿ ರಸ್ತೆ ಕಾಚೋಹಳ್ಳಿಯ ಸಮೀಪ ಇಬರ Ramakrishna palace ಎಂಬ ಸುಸಜ್ಜಿತ ಮದುವೆ ಆರತಕ್ಷತೆ ಇನ್ನಿತರ ಕಾರ್ಯಗಳನ್ನು ನಡೆಸುವ ಸುಸಜ್ಜಿತ ಸಭಾಂಗಣ ಇದೆ.ಈಗಾಗಲೇ 759 ಜನ ಅಭಿಪ್ರಾಯ ದಾಖಲಿಸಿದ್ದು 4.6* ಇದೆ


ಸಭಾಂಗಣಗಳು ಬೆಂಗಳೂರಿನಲ್ಲಿ ಅನೇಕ ಇರಬಹುದು ಆದರೆ ಇಲ್ಲೊಂದು ವಿಶೇಷತೆ ಇದೆ.ಇಲ್ಲಿ ಕಾರ್ಯಕ್ರಮ ಮಾಡಿದವರಿಗೆಲ್ಲರಿಗೂ ಸ್ವತಃ ಸಾಹಿತಿಯೂ ಸಾಹಿತ್ಯ ಪ್ರೇಮಿಯೂ ಆಗಿರುವ  ಕಮಲೇಶ್ ರಾಮಕೃಷ್ಟ ಅವರು ಒಳ್ಳೆಯ ಪುಸ್ತಕಗಳನ್ನು ಸ್ಮರಣಿಕೆಯಾಗಿ ನೀಡ್ತಾರೆ


ಅದಕ್ಕಾಗಿ ಭಾರತಿ ಬಿವಿ ಅವರ ನೂರು ಪುಸ್ತಕಗಳನ್ನು ಖರೀದಿಸಿದ್ದನ್ನು ಗಮನಿಸಿದ್ದೆ.ಇತರರ ಪುಸ್ತಕಗಳನ್ನು ಖರೀದಿಸಿದ್ದರು


ಇದನ್ನವರು fb ಯಲ್ಲಿ ಹಾಕಿದಾಗ ನನ್ನ ಮಾಯ ಮತ್ತು ಜೋಗ " ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕವನ್ನು ತಗೊಳ್ಳಿ ಎಂದೆ.


ನನ್ನದು 2000₹ ಬೆಲೆಯ ಪುಸ್ತಕ ಹಾಗಾಗಿ ಒಂದೆರಡು ಪುಸ್ತಕ ತಗೊಂಡಾರು ಎಂದು ಭಾವಿಸಿದ್ದೆ.


ನಿನ್ನೆ ಅವರು ಪುಸ್ತಕಕ್ಕಾಗಿ ಕರೆ ಮಾಡಿ ಐವತ್ತು ಪುಸ್ತಕ ಬೇಕು ಎಷ್ಟಾಗುತ್ತದೆ ಎಂದಾಗ ನನ್ನ ಕಿವಿಗಳನ್ನೇ ನಾನು ನಂಬಲಿಲ್ಲ


ಅವರ ಪುಸ್ತಕ ಪ್ರೀತಿಗಾಗಿ ನಾನು ಇನ್ನಷ್ಟು ರಿಯಾಯತಿ ದರದಲ್ಲಿ ನೀಡಿದೆ 


ಎಲ್ಲರಲ್ಲೂ ಇಂಥಹ  ಪುಸ್ತಕ ಪ್ರೀತಿ ಇದ್ದರೆ ಬರಹಗಾರರು ನೆಮ್ಮದಿಯಿಂದ ಬರೆಯುತ್ತಿರಬಹುದು 


ಯೂನಿವರ್ಸಿಟಿಗಳಲ್ಲಿ ಎರಡು ಮೂರು ಲಕ್ಷ ವೇತನ ಪಡೆಯುವ ಪ್ರೊಫೆಸರ್ ಗಳು 

ದೊಡ್ಡ ಸಂಘಟನೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ದೊಡ್ಡ ಮಾತನಾಡುವ ವ್ಯಕ್ತಿಗಳು  ಕೂಡ ಇಂಥಹದ್ದೊಂದು ಒಳ್ಳೆಯ  ಕೆಲಸ ಮಾಡಬೇಕಾಗಿದೆ 

ಇವರೆಲ್ಲರ ಎದುರು ಮಾದರಿಯಾಗಿ ನಿಂತಿದ್ದಾರೆ ಐಕ 

ನಿಮ್ಮ‌ಪುಸ್ತಕದೊಲುಮೆಗೆ ನಮೋನಮಃ 🙏

Saturday, 9 December 2023

ಕರಾವಳಿಯ ಸಾವಿರದೊಂದು ದೈವಗಳು‌: ನಮ್ಗಮ ಹೆಮ್ಣೇಮೆಯ ಓದುಗರು ಶ್ ಭಟ್


 ತುಳು ಕನ್ನಡ  ಮಲೆಯಾಳ  ಕರಾವಳಿಯ ಸಂಸ್ಕೃತಿ ದೈವಾರಾಧನೆಯನ್ನು ಸಮರ್ಪಕವಾದ ದಾರಿಯಲ್ಕಿ ಸೂಕ್ತವಾಗಿ ಪರಿಚಯಿಸುವುದಕ್ಕಾಗಿ ತಮಿಳು ತೆಲುಗು ಮಲೆಯಾಳಹಿಂದಿ ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವದ್ದು ನನ್ನ ತಿರುಕನ ಕನಸಿನ ರೀತಿಯ ಕನಸು..ಇದನ್ನು ಸಾಕಾರಗೊಳಿಸುವತ್ತ  ಯಾವುದೇ ಅಪೇಕ್ಷೆ ಇಲ್ಲದೆ ದೈವಗಳ ಮೇಲಿನ ಪ್ರೀತಿ ಅಭಿಮಾನ ಭಕ್ತಿಯಿಂದ ನಮ್ಮ ಜೊತೆಗೆ ಹೆಜ್ಜೆ ಹಾಕಲು ಮುಂದೆ ಬಂದಿರುವ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ತೆಲುಗಿಗೆ ಅನುವಾದಿಸುತ್ತಿರುವ ಆತ್ಮೀಯರಾದ ಗಣೇಶ್ ಭಟ್ ..

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ‌ಹೆಮ್ಮೆಯ ಓದುಗರು - ಮುಳಿಯಾಲ ಪ್ರಸನ್ನ ಭಟ್


 ಖ್ಯಾತ ಜ್ಯೋತಿಶಾಸ್ತ್ರಜ್ಞ  ವಿದ್ವಾಂಸರಾದ  ಮುಳಿಯಾಲ ಪ್ರಸನ್ನ ಭಟ್ ಅವರ  ಸಹೋದರರಾದ ಗಣೇಶ್ ಪ್ರಸಾದ್ ಭಟ್ ,ಅವರ ಮಡದಿ, ಪಾವನ,ಅವರ ತಂದೆ ತಾಯಿ‌ ಮತ್ತು ಡಾ.ಅನ್ನಪೂರ್ಣ ನಮ್ಮ ಮನೆಗೆ ಬಂದಿದ್ದರು.ಮುಳಿಯಾಲ .

ಪ್ರಸನ್ನ ಭಟ್ ಮತ್ತು ,ಹಿರಣ್ಯ ವೆಂಕಟೇಶ್ವರ ಭಟ್ ಅವರಿಗಾಗಿ ಮೂರು ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ತಗೊಂಡರು.

ಅಪರೂಪದ ಅತಿಥಿಗಳು ಬಂದು ನಮಗೆ ಬಹಳ ಸಂತಸವಾಯಿತು 


ಯಾರ ಬದುಕೂ ಶಾಶ್ವತವಲ್ಲ.ಇಂತಹ ಸಂತಸದ ಕ್ಷಣಗಳೇ ಅಜರಾಮರ..

ನಾನೂ ಒಂದಿನ ಸಾಯಲಿಕ್ಕಿದೆ.ಸತ್ತ ನಂತರ ನನ್ನನ್ನು ನೋಡಲು ಬಂದರೂ,ಬಾರದಿದ್ದರೂ , ಹೂಹಾರ ನೀಡಿದರೂ ನೀಡದಿದ್ದರೂ,ಹಾಡಿ ಹೊಗಳಿದರೂ ,ತೆಗಳಿದರೂ ನನಗೆ ಗೊತ್ತಾಗುವುದಿಲ್ಲ‌ಹಾಗಾಗಿ ನನಗೆ ಅದ್ಯಾವುದೂ ಬೇಡ..ಇರುವಾಗ ಬಂದು ಅರ್ಧ ಕಪ್  ಕಾಫಿ ಕುಡಿದು ಬಾಯಿ ತುಂಬಾ ಮಾತನಾಡುವ ಬನ್ನಿ ಎಂಬುದೇ ನನ್ನ ಆಶಯ..

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ‌ಹೆಮ್ಮೆಯ ಓದುಗರು : ಕೃಷ್ಣ ಭಟ್ ಕದ್ರಿ

 



ನಮ್ಮ ಹೆಮ್ಮೆಯ ಓದುಗರು

ಮಂಗಳೂರಿನ ಕೃಷ್ಣ ಭಟ್ ಕದ್ರಿ Krishna Kadri

ನಮ್ಮ‌ ಮೊದಲ ಓದುಗರು : ರಾವಳಿಯ ಸಾವಿರದೊಂದು ದೈವಗಳು-


 ನಮ್ಮ‌ ಹೆಮ್ಮೆಯ  ಮೊದಲ ಓದುಗರು


ಇವರು ವೈಶಾಲಿ ಮೇಡಂ,ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸದ ಉಪನ್ಯಾಸಕಿಯಾಗಿದ್ದಾರೆ

ಭೂತಾರಾಧನೆಯಲ್ಲಿ ಇತಿಹಾಸದ ಎಳೆಗಳ ಬಗ್ಗೆ ಪಿಎಚ್ ಡಿ ಮಾಡುದು ಇವರ ಕನಸು...

ಈ ವಿಷಯವನ್ನು ಮಂಗಳೂರು ವಿಶ್ವವಿದ್ಯಾಲಯಗಳ ಇತಿಹಾಸ ವಿಭಾಗದ ಪಿಎಚ್ ಡಿ ಆಯ್ಕೆ ಸಮಿತಿಯವರು ಒಪ್ಪಿಲ್ಲ.ಹಾಗಾಗಿ ಬೇರೆ ವಿಶ್ವ ವಿದ್ಯಾಲಯದಲ್ಲಿ ಮಾಡಲಾಗುತ್ತದಾ ಎಂದು ಪ್ರಯತ್ನ ಮಾಡ್ತಿದ್ದಾರೆ.

ನೆಟ್ ಪರೀಕ್ಷೆ ಪಾಸಾಗಿರುವ ಕಾರಣ ಇವರಿಗೆ ಪಿಎಚ್ ಡಿ ಪದವಿ ಅನಿವಾರ್ಯವಲ್ಲ.ಆದರೆ ಈ ಬಗ್ಗೆ ಅಧ್ಯಯನ ಮಾಡಲು ಅವರಿಗೆ ಇಷ್ಟ ಇದೆ

ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟ ಮಾಡಲು ಹೊರಟಾಗ ಮೊದಲು ಬುಕ್ ಮಾಡಿದವರು ಇವರು.

ಇವರಿಗೆ ಮಂಗಳೂರು ಯೂನಿವರ್ಸಿಟಿಯಲ್ಲಿ ಸಂದರ್ಶನ ಇದ್ದ ಕಾರಣ ಪುಸ್ತಕ ಬಿಡುಗಡೆಯ ಮೊದಲೇ ಇವರಿಗೆ ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸಿಕೊಟ್ಟಿದ್ದೆ.

ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ,ಯಾವುದೇ ಮೀಸಲಾತಿ ಇಲ್ಲದೇ ಇದ್ದರೂ ಜೆನರ ಲ್  ಮೆರಿಟ್ ಮೇಲೆ ಆಯ್ಕೆಯಾಗಿ ತಮ್ಮ‌ಕನಸಿನ  ಪ್ರಾಧ್ಯಾಪಕ ಹುದ್ದೆಯನ್ನು ಗಳಿಸಿಕೊಂಡ ಪ್ರತಿಭಾನ್ವಿತೆ ಇವರು 

ಪುಸ್ತಕವನ್ನು ಬಹುವಾಗಿ ಮೆಚ್ಚಿದ್ದಾರೆ

Sunday, 3 December 2023

ಯಮರಾಜನಿಗೊಂದು ಥ್ಯಾಂಕ್ಸ್ ಹೇಳಲಿಕ್ಕಿದೆ..ಯಾಕೆ ಗೊತ್ತೇ ? - ಡಾ.ಲಕ್ಷ್ಮೀ ಜಿ ಪ್ರಸಾದ್


ಯಮರಾಜನಿಗೊಂದು ತ್ಯಾಂಕ್ಸ್ ಹೇಳಲಿಕ್ಕಿದೆ..ಯಾಕೆ ಗೊತ್ತೇ ? 

 ಅದು 2015 ರ ನವೆಂಬರ್ ತಿಂಗಳಿನ ಒಂದು ದಿನ,ತಾರೀಖು ಮರೆತು ಹೋಗಿದೆ ನನಗೆ 


ಮಗ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಾಇದ್ದ.ಮಧ್ಯಾವಧಿ ರಜೆಯಲ್ಲಿ ಹಾಸ್ಟೆಲಿನಿಂದ ಮನೆಗೆ ಬಂದಿದ್ದ.


ಆಗ ನಾವು ಮೊದಲಿದ್ದ ಸಣ್ಣ ಮನೆಯಲ್ಲಿ ಇದ್ದೆವು


ಎರಡು ಬೆಡ್ ರೂಮಿನ ಸಣ್ಣ ಮನೆ.ಒಂದು ಬೆಡ್ ರೂಮ್ ನಮ್ಮ ಪುಸ್ತಕಗಳನ್ಮು ಇನ್ನಿತರ ವಸ್ತುಗಳನ್ನು ತುಂಬಿಡುವ ಜಾಗವಾಗಿತ್ತು.


ಇನ್ನೊಂದು ರೂಮು,ಹಾಲ್ ಮಾತ್ರ ಬಳಕೆಗೆ ಸಿಗುತ್ತಾ ಇತ್ತು


ಪ್ರಸಾದ್ ಮತ್ತು ಮಗ ಹಾಲಿನಲ್ಲಿ ಮಲಗಿ ನಡು ರಾತ್ರಿ ತನಕ ಪಟ್ಟಾಂಗ ಹೊಡೆಯುತ್ತಾ ಇದ್ದರು


ರಾತ್ರಿ ಹನ್ನೆರಡು ಕಳೆದಾಗ ಮಾತನಾಡಿದ್ದು ಸಾಕು..ಮಲಗಿ ಇನ್ನು..ಜೀವನ ಇಡೀ ಇದೆ ಮಾತನಾಡಲು ಎಂದು ಸ್ವಲ್ಪ ಗದರಿ ಹೇಳಿದೆ ಅದಕ್ಕೆ ಮೊದಲು ಮಲಗಿ ಮಲಗಿ ಇನ್ನು ಎಂದು ಹೇಳಿ ಹೇಳಿ  ಸಾಕಾಗಿತ್ತು.ಒಂದೆರಡು ಕ್ಷಣ ಮಾತು ನಿಲ್ಲಿಸ್ತಾ ಇದ್ದರು ನಂತರ ಪಿಸು ಮಾತು ಶುರುವಾಗಿ ಜೋರಾಗುತ್ತಾ ಇತ್ತು


ಹಾಗಾಗಿ ನಾ‌ನೂ ಸ್ವಲ್ಪ ಕೃತಕ ಕೋಪ ತರಿಸಿಕೊಂಡು ತುಸು ಗಟ್ಟಿಯಾಗಿಯೇ ಹೇಳಿದೆ.ಇಬ್ಬರೂ ಮಾತು ನಿಲ್ಲಿಸಿದರು


ನನಗೂ ನಿದ್ರೆ ಬಂತು.


ಕಣ್ಣಿಗೆ ನಿದ್ರೆ ಹಿಡಿದು ಹೆಚ್ಚು ಹೊತ್ತಾಗಿರಲಿಲ್ಲ.ಏನೋ ವಿಚಿತ್ರ ಸದ್ದು ಕೇಳಿಸಿ ಎಚ್ಚರಾಯಿತು.ಅಷ್ಟರಲ್ಲಿ ಮಗ ಲೈಟ್ ಹಾಕಿ ಅಮ್ಮ ಅಪ್ಪನಿಗೆ ಏನೋ ಆಗಿದೆ ಬಾಎಂದು ಕೂಗಿ ಕರೆದ.


ನೋಡಿದರೆ ಪ್ರಸಾದ್ ಗೆ ಎಚ್ಚರವಿರಲಿಲ್ಲ.ಬಾಯಿಯಲ್ಲಿ ರಕ್ತ ಬಂದಿತ್ತು.ಎದೆಗೆ ಕಿವಿಗೊಟ್ಟರೆ ಹೃದಯ ಬಡಿತದ ಸದ್ದು ಕೇಳಲಿಲ್ಲ.ಉಸಿರಾಡುತ್ತಲೂ ಇರಲಿಲ್ಲ.ಮಗ ಕೂಡಲೇ ಎದೆ ಒತ್ತಿ ಸಿಪಿಆರ್ ಕೊಟ್ಟ ಜೊತೆಗೆ ಒಂದು ಬದಿಗೆ ಮಲಗಿಸಿದಾಗ ಬಾಯಿಯಿಮದ ರಕ್ತ ಎಲ್ಲ ಹೊರಗೆ ಬಂತು


ಮತ್ತೆ ಪುನಃ ಮಗ ಸಿಪಿ ಆರ್ ಜೊತೆಗೆ ಬಾಯಿ ಮೂಲಕ ಉಸಿರು ನೀಡಿದ.ನಾಲ್ಕೈದು ನಿಮಿಷ ಮಾಡುತ್ತಲೇ ಇದ್ದ.


ಈ ಹೊತ್ತಿನಲ್ಲಿ ಸಮೀಪ ಪಾರ್ಟಿಸ್ ಹಾಸ್ಪಿಟಲ್ ನ ಅಂಬುಲೆನ್ಸ್ ಗೆ ಕರೆ ಮಾಡಲು ಹೊರಟರೆ ನಂಬರೇ ಸಿಗುತ್ತಾ ಇಲ್ಲ


ಆತಂಕದ ಕ್ಷಣದಲ್ಲಿ ಕಣ್ಣು ಕತ್ತಲಾಗುದು ಮೈಂಡ್ ಬ್ಲಾಂಕ್ ಆಗುದೆಂದರೆ ಏನೆಂದು ಆಗಲೇ ಗೊತ್ತಾದದ್ದು ನನಗೆ


ನಂತರ ಅರವಿಂದನೆ 108 ಕ್ಕೆ ಕರೆ ಮಾಡು ಎಂದ.ಅವನು ನಿರಂತರ ಬಾಯಿ ಮೂಲಕ ಉಸಿರಾಟ ಮತ್ತು ಸಿಪಿಆರ್ ಕೊಡುತ್ತಲೇ ಇದ್ದ


ದುರದೃಷ್ಟಕ್ಕೆ ಕರೆಂಟ್ ಬೇರೆ ಹೋಯ್ತು..ಏನಾಗ್ತಿದೆ ಎಂದು ಕಾಣಲಾರದಾಯಿತು.ಅಂತೂ ಕತ್ತಲಲ್ಲಿ ಪರದಾಡಿ ಮೊಬೈಲ್ ಹುಡುಕಿ ತರುವಷ್ಟರಲ್ಲಿ ಪ್ರಸಾದ್ ದೊಡ್ಡದಾಗಿ ಸದ್ದು ಮಾಡಿ ಉಸಿರೆಳೆದುಕೊಂಡರು.ನಂತರ ಉಸಿರಾಡಲು ಶುರು ಮಾಡಿದರು‌.ಎದೆ ಕೂಡ ಅದಾಗಿಯೇ ಬಡಿಯಲು ಆರಂಭಿಸಿತು.


ಸ್ವಲ್ಪ ಹೊತ್ತಿಗೆ ಮನೆ ಎದುರಿನ ರಸ್ತೆಯಲ್ಲಿ ಬಂದ ಆಂಬುಲೆನ್ಸ್  ಮನೆ ದಾಟಿ ಮುಂದೆ ಹೋಯಿತು


ಅರವಿಂದ ಓಡಿ ಹೋಗಿ ಅದನ್ನು ಹಿಂದೆ ತರಲು ಹೋದ


ಪ್ರಸಾದರಿಗೆ ಎಚ್ಚರ ಬಂದ ಹಾಗೆ ಅನಿಸಿ ಅವರ ಮುಖಕ್ಕೆ ಮೊಬೈಲ್ ಲೈಟ್ ಹಾಕಿದೆ..ಪ್ಚೀ.ಎಂದು ತುಸು ರೇಗಿ ಇನ್ನೊಂದು ಬದಿಗೆ ಮುಖ ಮಾಡಿ ಮಲಗಿದರು.


ಅವರಿಗೆ ಎಚ್ಚರ ಬಂದದ್ದು ಕನ್ಫರ್ಮ್ ಆಯಿತು


ಅಷ್ಟರಲ್ಲಿ ಅಂಬುಲೆನ್ಸ್ ನಿಂದ ಸಿಸ್ಟರ್ ಬಂದು ಪರಿಕ್ಷಿಸಿದರು.ಏನಾಯಿತು ಕೇಳಿದರೆ ಪ್ರಸಾದ್ ಉತ್ತರಿಸಲಿಲ್ಲ.ತಿರುಗಿ ಮಲಗಿದರು.


ನಂತರ ಅವರಿಗೆ ವಿಷಯ ತಿಳಿಸಿ ಮತ್ತೆ ಪುನಃ ಹಾಗೆ ಆದರೆ ಕಷ್ಟ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿ ಬರುವ ಎಂದು ಹೇಳಿದೆವು


ಅವರೇ ಬಂದು ಅಂಬುಲೆನ್ಸ್ಏರಿದರು.ನಾನು ಸಿಕ್ಕಿದ ಡ್ರೆಸ್ ಹಾಕಿಕೊಂಡು ಮಗನ ಜೊತೆ ಹೋದೆ


ಎಮರ್ಜೆನ್ಸ್ ಕೇರ್ ಗೆ ಹೋಗಿ ವಿಷಯ ತಿಳಿಸಿದೆವು


ಪ್ರಸಾದರಿಗೆ ಏನಾಗಿತ್ತು ಎಂದು ಗೊತ್ತಾಗಿರಲಿಲ್ಲ


ಈಗ ನೋಡುವಾಗ ಯಾವುದೇ ಸಮಸ್ಯೆ ಕಾಣ್ತಿಲ್ಲ ಸಿಟಿ ಸ್ಕಾನ್ ಇನ್ನಿತರ ಟೆಸ್ಟ್ ಮಾಡಿ ನೊಡ್ತೇವೆ ಎಂದು ಅಬ್ಸರ್ ವೇಷನ್ ಗಾಗಿ ಐಸಿಯುಗೆ ಶಿಪ್ಟ್ ಮಾಡಿದರು


ನಾನು ಮಗ ಹೊರಗೆ ಕಾಯ್ತಾ ಇದ್ದೆವು


ಅರ್ಧ ಒಂದು ಗಂಟೆಯ ನಂತರ ವೈದ್ಯರು ಕರೆದು ಸಿಟಿ ಸ್ಕಾನಿಂಗ್ ನಾರ್ಮಲ್ ಇದೆ‌.ನಾಳೆ ಹೃದಯ ತಜ್ಞರು ನರ ರೋಗ ತಜ್ಞರು ಬಂದು ನೋಡ್ತಾರೆ ಎಂದರು.ಅಲ್ಲಿಯೇ ಕಾಯುವ ಲಾಂಜ್ ನಲ್ಲಿ ಒಂದು ಸಣ್ಣ ಕಾಟ್ ನಲ್ಲಿ ನಾನು‌ ಮಗ ಕೈಕಾಲು ಮುದುರಿಕೊಂಡು ಮಲಗಿದೆವು


ಆತಂಕ ಕಡಿಮೆಯಾಗಿ ಸಣ್ಣಕೆ ಕಣ್ಣಿಗೆ ನಿದ್ರೆ ಹತ್ತಿತ್ತು.


ಅಷ್ಟರಲ್ಲಿ ಗಾರ್ಡ್ ಬಂದು ಎಬ್ಬಿಸಿದರು.

ಏನು ಎಂದು ಕೇಳಿದೆ.ತಾಯಿ ಮಗನಾ ಕೇಳಿದರು ನಮ್ಮಿಬ್ಬರನ್ನು ನೋಡುತ್ತಾ ..ಹೌದೆಂದೆ...ಸರಿ ಸರಿ ಮಲಗಿ ಎಂದು ಹೊರಗೆ ಹೋದರು.ಮಗ ಪಿಯುಸಿ ಓದುತ್ತಿದ್ದರೂ ಭರ್ತಿಯಾಗಿ ಬೆಳದಿದ್ದು 24 -25 ರ ಯುವಕನಂತೆ ಕಾಣುತ್ತಿದ್ದ.ನನ್ನ ಕಾಲ ಬುಡದಲ್ಲಿ ಮುದುರಿ‌ ಮಲಗಿದ್ದದು ನೋಡಿ  ಗಾರ್ಡ್ ಗೆ ಏನೋ ಗೊಂದಲವಾಗಿ ಎಬ್ಬಿಸಿದ್ದಿರಬೇಕು


ಅಷ್ಟರಲ್ಲಿ ಬೆಳಕಾಯಿತು


ಪ್ರಸಾದ್ ಅಫೀಸಿಗೆ ಸುದ್ದಿ ತಿಳಿಸಿದೆ ಅವರ ಬಾಸ್ ಆಫೀಸಿನ ಇಬ್ಬರು ಸ್ಟಾಫನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು


ಬೇರೆ ಬೇರೆ ತಜ್ಣ ವೈದ್ಯರುಗಳೆಲ್ಲ ಬಂದು ನಾನಾವಿಧ ಪರೀಕ್ಷೆಗಳನ್ನು ಮಾಡಿದರು.


ಎಲ್ಲವೂ ನಾರ್ಮಲ್.ಎರಡು ದಿನಗಳಲ್ಲಿ‌ಮನೆಗೆ ಬಂದೆವು.


ಆ ದಿನ ಆದದ್ದೇನು ಎಂದು ವೈದ್ಯರಿಗೂ ಗೊತ್ತಾಗಿರಲಿಲ್ಲ.


ಅದೇ ಮೊದಲು‌ ಮತ್ತು ಕೊನೆ..ಮತ್ತೆ ಆಗಲಿಲ್ಲ


ಆದರೆ ಒಂದು ಕಾಕತಾಳೀಯ ವಿಚಾರ ನಡೆದಿತ್ತು


ಈ ಘಟನೆ ನಡೆದ ಮರುದಿನ ಪ್ರಸಾದರದೇ ವಯಸ್ಸಿನ ದೊಡ್ಡ ಮಾವನವರ ಮಗ ಮೈದುನ ಅಶೋಕ ಭಟ್ ಪಂಜಿಗದ್ದೆ  ಆಕ್ಸಿಡೆಂಟಿನಲ್ಲಿ ತೀರಿ ಹೋಗಿದ್ದ 


ಯಮರಾಯ ಗೊಂದಲವಾಗಿ ನಮ್ಮನೆಗೆ ಬಂದು ಇವನಲ್ಲ ಎಂದರಿತು ಹಿಂದೆ ಹೋಗಿ ಮೈದುನನ ಆಯುಷ್ಯ ಮುಗಿದಿದೆ ಎಂದವನ ಪ್ರಾಣವನ್ನು ಹಿಡಿದುಕೊಂಡು ಹೋದನೇ ?


ಅದೇನೇ ಇರಲಿ‌‌.ನಮ್ಮನ್ನು ಬಿಟ್ಟು ಹೋದ ಯಮರಾಜನಿಗೆ ನಮನ..


ಮುಂದೆ ಎಂದಾದರೂ ಬರುವನಲ್ಲ..ಆಗವನಿಗೆ ಒಂದು ತ್ಯಾಂಕ್ಸ್ ಹೇಳಲಿಕ್ಕಿದೆ.ಅಕಾಲದಲ್ಲಿ ಕೊಂಡೊಯ್ಯದೆ ಬದುಕಲು ಬಿಟ್ಟದ್ದಕ್ಕಾಗಿ


ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರೂ ಸಾಯಲೇ ಬೇಕು.ಅದು ವಿಧಿ ನಿಯಮ ಅದನ್ನು ಮೀರಲು ಸಾಧ್ಯವಿಲ್ಲ.ಅದರೆ ಮಕ್ಕಳು ಮರಿಗಳ ಜವಾಬ್ದಾರಿ ಕಳೆದಕೊಳ್ಳುವ ತನಕ ಬದುಕುದೂ ಕೂಡ ನಮ್ಮ ಕರ್ತವ್ಯ.


ಅದಕ್ಕಾಗಿ ಕಾಲ‌ಕಾಲಕ್ಕೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು.ಅಗತ್ಯವಿದ್ದರೆ ತಜ್ಣ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳಬೇಕು


ನಿಯತವಾದ ವ್ಯಾಯಾಮ ಹಿತ ಮಿತವಾದ ಆಹಾರ ಸ್ವೀಕರಿಸಬೇಕು


ಎಲ್ಲವನ್ನು  ಮಾಡಿದರೂ ಕೆಲವೊಮ್ಮೆ ಉಹಿಸದೇ ಇದ್ದದ್ದು ಘಟಿಸಿಹೋಗುತ್ತದೆ.ಆಗ ಉಳಿದವರು ಯಾರೂ ಈ ಭೂಮಿಯಲ್ಲಿ ಶಾಶ್ವತರಲ್ಲ. ಬದುಕನ್ನು ಧೈರ್ಯವಾಗಿ ಎದುರಿಸಬೇಕು 

Friday, 1 December 2023

ದೀಪ ಹಿಡಿದು ಬಂದವರು ಯಾರು ? ರಕ್ತೇಶ್ವರಿ ದೈವವೇ ? . ಡಾ.ಲಕ್ಷ್ಮೀ ಜಿ ಪ್ರಸಾದ್


ರಕ್ತೇಶ್ವರಿ ದೈವ ಚಿತ್ರ ಕೃಪೆ ನಾಗರಾಜ ಭಟ್ 

ದೀಪ ಹಿಡಿದು ಬಂದವರು ಯಾರು ? - ಡಾ.ಲಕ್ಷ್ಮೀ ಜಿ ಪ್ರಸಾದ್

ಕೆಲವು ವಿಚಾರಗಳು ಅನುಭವ ವೇದ್ಯವಾದವುಗಳು

ಇತರರಿಗೆ ಇದನ್ನು ನಂಬುವುದು ಕಷ್ಟವಾಗಬಹುದು.ನಂಬಿದರೂ ನಂಬದಿದ್ದರೂ ನಡೆದಂಥಹ ನಿಜ ವಿಚಾರವನ್ನು ನಾನಿಲ್ಲಿ ತಿಳಿಸುವೆ

ಇದು ಸುಮಾರು ನಲುವತ್ತು ವರ್ಷಗಳ ಹಿಂದೆ ನಡೆದ ಘಟನೆ.‌

ನನ್ನ ತಂದೆ ಮನೆ ಕೋಳ್ಯೂರು ವಾರಣಾಸಿಯಿಂದ ನನ್ನ ಅಜ್ಜನ ಮನೆ ಹೊಸಮನೆಗೆ ಹೋಗಲು‌ ಪಳ್ಳದ ಪದವಿನ ಕಾಲು ದಾರಿ ಇತ್ತು .ಈಗ ವಾಹನ ಹೋಗುವ ಮಣ್ಣಿನ  ರಸ್ತೆ ನಿರ್ಮಾಣ ಆಗಿದೆ

ಮೊದಲು ಈ ದಾರಿಯಲ್ಲಿ ನಾವು ನಡೆದುಕೊಂಡು ಹೋಗಿ ಬರುತ್ತಿದ್ದೆವು.ಇಲ್ಲಿ ರಾತ್ರಿ ಹೋಗುವಾಗ ಸೂಟೆ ಹಿಡಿದ ದೈವ ರಕ್ತೇಶ್ವರಿ ಕಾಣಿಸುತ್ತದೆ ಎಂಬ ನಂಬಿಕೆ ಇತ್ತು

ಒಮ್ಮೆ ರಾತ್ರಿ ಹೊತ್ತು  ನಮ್ಮ‌ಪರಿಚಯದ ಗಣೇಶಣ್ಣ ಎಂಬವರು ಸೈಕಲಿನಲ್ಲಿ  ಈ ದಾರಿಯಲ್ಲಿ ಬರುವಾಗ ಸೈಕಲ್ ಗಕ್ಕೆಂದು ನಿಂತಿತಂತೆ.ಸೈಲಿನ ಲೈಟ್ ಆಫ್ ಆಯಿತಂತೆ.ಎಷ್ಟು ಯತ್ನ ಮಾಡಿದರೂ ಸೈಕಲ್ ಚಲಿಸಲಿಲ್ಲವಂತೆ‌.ಆಗ ಅವರು ಅಲ್ಲಿಯೇ ಸೈಕಲಿನಿಂದ ಇಳಿದು ಸುತ್ತ ಮುತ್ತ ನೋಡಿದಾಗ ಸೂಟೆ ಉರಿಯುವುದು ಕಾಣಿಸಿತಂತೆ.ಅವರು ಅಮ್ಮಾ ರಕ್ತೇಶ್ವರಿ ಕಾಪಾಡು ಎಂದು ಕೈ ಮುಗಿದರಂತೆ.ಅಗ ಸೈಕಲ್ ಲೈಟ್ ಆನ್ ಆಯಿತು ನಂತರ ಅವರು ಸೇಫ್ ಆಗಿ ಮನೆ ತಲುಪಿದರು ಎಂದು ಅವರೇ ಹೇಳಿದ ಘಟನೆ ನನ್ನ ಕಿವಿಗೂ ಬಿದ್ದಿತ್ತು

ನಾನು ಸುಮಾರು  ಆರು ಏಳನೆಯ ತರಗತಿ ಓದುತ್ತಿರುವ ಸಮಯದಲ್ಲಿ ಇದೇ ಪಳ್ಳದ ಪದವಿನಲ್ಲಿ ಮೈ ನವಿರೇಳುವ ಘಟನೆ ನಡೆದಿತ್ತು

ಅ ಕಾಲದಲ್ಲಿ ನಾವು ನಮ್ಮ ಸಮಯ ವಯಸ್ಕರೆಲ್ಲ ರಜೆಯಲ್ಲಿ ಬಜಂಟ್ ( ಒಣ ಸೆಗಣಿಯ ಮುದ್ದೆ) ಹೆಕ್ಕಲು ಗುಡ್ಡೆ ಗೆ ಹೋಗುವುದು ಸಾಮಾನ್ಯ ವಿಚಾರ ಆಗಿತ್ತು. ನಮಗೆ ಇದೇನೂ ಬೇಸರದ ವಿಚಾರವಲ್ಲ.ಆಟ ಆಡಿಕೊಂಡುದಾರಿಯಲ್ಲಿ ಸಿಕ್ಕ  ಕೇಪುಳದ ಹಣ್ಣು ಮುಳ್ಳು ಹಣ್ಣು ಚೂರಿ ಹಣ್ಣು ತಿಂದುಕೊಂಡು ಬಜಂಟ್ ಹುಡುಕಿ ಹೆಕ್ಕಿ ಗೋಣಿ ಅಥವಾ ಕುರುವೆಗೆ ಹಾಕಿ ತರ್ತಿದ್ದೆವು

ದಾರಿಯಲ್ಲಿ ಐರೋಳು ಸೊಪ್ಪು ಸಿಕ್ಕರೆ ಅದನ್ನು ಕಿತ್ತು ತರುತ್ತಿದ್ದೆವು.ಇದಕ್ಕೆ ಹಲಸಿನ ಬೀಜ ಹಾಕಿ‌ ಮಾಡುವ ಪಲ್ಯದ ರುಚಿ ನೆನೆದರೆ ಈಗಲೂ ನನ್ನ ಬಾಯಿಯಲ್ಲಿ ನೀರು ಒಸರುತ್ತದೆ

ಅಂತೆಯೇ ಕಾನ‌ಕಲ್ಲಟೆಕಾಯಿ ಸಿಕ್ಕರೂ ಕೊಯ್ದು ತರುತ್ತಿದ್ದೆವು.ಇದರ ಮಜ್ಜಿಗೆ ಹುಳಿ ಬಹಳ ರುಚಿಯಾದದ್ದು

ಜೊತೆಗೆ ಯಾರಿಗೆ ಹೆಚ್ಚು ಬಜಂಟ್ ಸಿಕ್ತದೆ ಎಂಬುದರಲ್ಲೂ ಸ್ಪರ್ಧೆ ಇತ್ತು

ನಾವು ಕೆಲವೊಮ್ಮೆ ಪಳ್ಳದ ಪದವಿಗೆ ಬಜಂಟು ಹೆಕ್ಕಲು ಬಂದದ್ದಿದೆ.ಇಲ್ಲಿ ಸ್ವಲ್ಪ ಒಳಭಾಗದಲ್ಲಿ ಒಂದು ಪಳ್ಳ( ಹಳ್ಳ) ಇದೆ.ಇಲ್ಲಿ ಬಂದು ನೀರಾಟ ಆಡಿದ್ದೂ ಇದೆ.ಇದರ ಬದಿಯಲ್ಲಿ ಒಂದು ದೊಡ್ಡ ಗೋಳಿ‌ಮರ ಇತ್ತು.ಅದನ್ನು ಹತ್ತಿ ಆಟವಾಡಿದ್ದೂ ಇದೆ

ಬಜಂಟ್ ಒಲೆ ಉರಿಸಲು ಬಹಳ ಉಪಕಾರಿಯಾಗಿತ್ತು.ಹಾಗಾಗಿ ಹೆಚ್ಚು ಕಡಿಮೆ ಎಲ್ಲರ ಮನೆಯ ಮಕ್ಕಳೂ ಬಜಂಟ್ ಹೆಕ್ಕುತ್ತಿದ್ದರು


ಸುಮಾರು ನಲುವತ್ತು ವರ್ಷದ ಹಿಂದೆ  ಡಿಸೆಂಬರ್ ತಿಂಗಳಿನಲ್ಲಿ . ಈ ಪಳ್ಳದ ಪದವಿಗೆ ಒಂದು ಹತ್ತು ಹನ್ನೊಂದು ವರ್ಷದ ಹುಡುಗಿ ಹುಡುಗಿಯರ ಗುಂಪು ಬಂದಿತ್ತು.ಒಬ್ಬೊಬ್ಬರು ಒಂದೊಂದು ಕಡೆಗೆ ಹೋಗಿ ಹೆಕ್ಕಿ ಒಂದು ಕಡೆ ಸೇರಿ ಮನೆ ಕಡೆ ನಡೆಯುವುದು ಕ್ರಮ.ಹಾಗೆಯೇ ಇವರೆಲ್ಲ ಚದುರಿ ಬೇರೆ ಬೇರೆ ಕಡೆ ಹೋದರು.ಇವರಲ್ಲಿ ಒಂದು ಪರ ಊರಿನ ಹತ್ತು ಹನ್ನೊಂದು ವರ್ಷದ ಹುಡುಗಿ ಇದ್ದಳು.ಇವಳ ಅಕ್ಕನ‌ಮನೆ ಕಳಿಯೂರು.ಅಕ್ಕನ ಬಾಣಂತನ ಮುಗಿಸಿ ಬಾವನ ಮನೆಗೆ ಬಂದಾಗ ಅಕ್ಕನಿಗೆ  ಸಹಾಯ ಮಾಡಲು ಇವಳು ಜೊತೆಗೆ ಬಂದಿದ್ದಳು.

ಇವಳು ಬಜಂಟ್ ಹೆಕ್ಕಿ ಸುಸ್ತಾಗಿ ನೀರು ಕುಡಿಯಲೋ ಕೈ ಕಾಲು ತೊಳೆಯಲೋ ಏನೋ..ಈ ನೀರಿನ ಪಳ್ಳಕ್ಕೆ ಬಂದಳು

ಈ ಪಳ್ಳದಲ್ಲಿ ನಡುವಿಗೆ ಹೋದರೆ ಕೆಸರು ಇದೆ.ಅದೇ ಪರಿಸರದ ನಮಗೆ ಹಿರಿಯರು ನಮಗೆ ಹೇಳಿದ್ದರು.ನಾವು ಯಾರೂ ನೀರಿಗೆ ಇಳಿದರೂ ನಡುವಿಗೆ ಹೋಗುತ್ತಿರಲಿಲ್ಲ © ಡಾ‌.ಲಕ್ಷ್ಮೀ ಜಿ‌ ಪ್ರಸಾದ್

ಈ ಹುಡುಗಿ ಈ ಪರಿಸರಕ್ಕೆ ಹೊಸಬಳಾದ ಕಾರಣವೋ ಏನೋ ನೀರಿಗಿಳಿದು ಮುಂದೆ ನಡುವಿಗೆ ಬಂದಿದ್ದಳು.ಅವಳದೇಹ  ಕೆಸರಿನಲ್ಲಿ ಮುಳುಗಿ ಕೊರಳಿನ ಮೇಲ್ಭಾಗ ಮಾತ್ರ ನೀರಿನಿಂದ ಮೇಲೆ ಉಳಿಯಿತು.ಅವಳು‌ಅತ್ತು ಕೂಗಾಡಿದರೂ ದೂರ ಚದುರಿದ್ದ ಇತರ ಹುಡುಗರಿಗೆ ಕೇಳಿಸಲಿಲ್ಲ.ಸಂಜೆಯಾದಾಗ ಎಲ್ಲರೂ ಒಟ್ಡು ಸೇರಿದರೂ ಈ ಹುಡುಗಿಯ ಪತ್ತೆ ಇಲ್ಲ.ಅಲ್ಲೇ ಅವರು ಹುಡುಕಾಡಿದರೂ ಕಾಣಿಸಲಿಲ್ಲ.ಮನೆಗೆ ಹೋಗಿರಬಹುದೆಂದು ಭಾವಿಸಿ ಎಲ್ಲರೂ ಅವರವರ ಮನೆ ಸೇರಿದರು.

ರಾತ್ರಿಯಾದರೂ ಬಾರದ ಹುಡುಗಿಯನ್ನು ಮನೆ ಮಂದಿ ಹುಡುಕಿದರೂ ಎಲ್ಲೂ ಸಿಗಲಿಲ್ಲ

ಹೀಗೆ ಮೂರು ರಾತ್ರಿ ಅವಳು ಕೆಸರಿನಲ್ಲಿ ಮುಳುಗಿಯೇ ಇದ್ದಳು.

ನಾಲ್ಕನೆಯ ದಿನ ಅವಳ ಬಾವನ ಪರಿಚಿತರೊಬ್ಬರು ಪಳ್ಳದ ಪದವಿನ ದಾರಿಯಾಗಿ ಕಟ್ಟದ ಕೋಳಿಯೊಂದನ್ನು ಹಿಡಿದುಕೊಂಡು ಕೋಳಿ ಕಟ್ಟಕ್ಕೆ ಹೋಗುವಾಗ ಕೋಳಿ ಕೈ ತಪ್ಪಿಸಿ ಓಡಿತು.ಇವರೂ ಅದನ್ನು ಹಿಡಿಯಲು ಓಡಿದರು.ಆ ಕೋಳಿ ಓಡುತ್ತಾ ಅಲ್ಲಿನ ಪಳ್ಳದ ಸಮೀಪ ಬಂತು.ಇವರು ಅಲ್ಲಿಗೆ ತಲುಪುವಷ್ಟರಲ್ಲಿ ಅದು ಅಲ್ಲಿದ್ದ ಮರ ಹತ್ತಿ ಕುಳಿತಿತು.ಅದು ಮರದ ಕೊಂಬೆಯಿಂದ ಕೊಕ್ಕು ಉದ್ದಕ್ಕೆ ಚಾಚಿ ಬಗ್ಗೆ ಕೆಳಗೆ ನೋಡುತ್ತಾ ಇತ್ತು.ಯಜಮಾನ ಕರೆದರೂ ಬರಲಿಲ್ಲ. ಇದೇನು ಬಗ್ಗಿ ನೋಡುತ್ತಿದೆ ಎಂದು ಇವರೂ ಪಳ್ಳದ ಕಡೆ ಬಗ್ಗಿ ನೋಡಿದರು.ಆಗ ಹಕ್ಕಿಯ ಸಣ್ಣ ದ್ವನಿಯಂತೆ ಈ ಹುಡುಗಿಯ ಧ್ವನಿ ಕೇಳಿಸಿತು.ಕೊರಳಿನ ಮೇಲ್ಭಾಗ ಮಾತ್ರ ಕಾಣುವ ಮನುಷ್ಯಾಕೃತಿ ಕಂಡು ಮೊದಲಿಗೆ ಇವರಿಗೂ ಭಯವಾಯಿತು.ನಂತರ ಇವರ ಪರಿಚಯದವರ ಹುಡುಗಿ ಕಾಣೆಯಾದದ್ದು ನೆನಪಿಗೆ ಬಂದು ಅವಳು ಇವಳೇ ಇರಬೇಕೆಂದು ಕಷ್ಟ ಪಟ್ಟು ಸಮೀಪ ಹೋಗಿ ಅವಳನ್ನು ಕೆಸರಿನಿಂದ ಎತ್ತಿ ಹೊರ ತಂದರು.ಅವಳ ಕಾಲುಗಳೆಲ್ಲ‌ ಬಿಳಿಯಾಗಿ‌ ಮರಗಟ್ಟಿ ಹೋಗಿತ್ತು. ಇವರು ಅವಳನ್ನು ಹರಗಲ ಮೇಲೆ ಹೊತ್ತು ತಂದು ಅವಳ ಅಕ್ಕನ‌ಮನೆಗೆ ತಂದರು‌.ನಂತರ ಅವಳಿಗೆ ಚಿಕಿತ್ಸೆ ಕೊಡಿಸಿ ಮನೆಯವರು ಬದುಕಿಸಿದರು.

ಈ ಸಮಯದಲ್ಲಿ ಅವಳ ಸಂಬಂಧಿಕರು ನಮಗೆ ಪರಿಚಯದವರೂ ಆಗಿದ್ದವರೊಬ್ಬರು " ನಿಕ್ಕ್ ರಾತ್ರೆ ಪೋಡಿಗೆ ಆತುಜ್ಜಿಯಾ ? ಚಳಿ ಆತುಜ್ಜಿಯಾ ? ( ನಿನಗೆರಾತ್ರಿ ಭಯವಾಗಲಿಲ್ವ? ಚಳಿಯಾಗಲಿಲ್ವ ?ಎಂದು ಕೇಳಿದ್ದರು © ಡಾ‌ ಲಕ್ಷ್ಮೀ ಜಿ ಪ್ರಸಾದ್ 

ಆಗ ಅವಳು " ರಾತ್ರೆ ಆನಗ ಒರ್ತಿ ಅಜ್ಜಿ ದೀಪ ಪತ್ತೊಂಡು ಬತ್ತು ಎನ್ನ ಕೈತಲ್ ಕುಳ್ಳೊಂದಿತ್ತೆರ್.‌ಎಂಕ್ ದಾಲ ಪೋಡಿಗೆ ಆತುಜ್ಜಿ .‌ಚಳಿಲ ಆತುಜ್ಜಿ( ರಾತ್ರಿಯಾಗುವಾಗ ಒರ್ವ ಅಜ್ಜಿ ದೀಪ ಉರಿಸಿಕೊಂಡು ಬಂದು ನನ್ನ ಸಮೀಪ ಕುಳಿತುಕೊಳ್ಳುತ್ತಿದ್ದರು.ನನಗೆ ಭಯವು ಆಗಲಿಲ್ಲ ಚಳಿಯೂ ಆಗಲಿಲ್ಲ ) ಎಂದು ಆ ಹುಡುಗಿ ಹೇಳಿದ್ದಳು

ಅ ಹುಡುಗಿ ದೊಡ್ಡವಳಾಗಿ ನಂತರ ಅವಳಿಗೆ ಮದುವೆಯಾಗಿ‌ತ್ತು ಈಗ  ಮಕ್ಕಳು ಮೊಮ್ಮಕ್ಕಳೂ ಆಗಿರಬಹುದು  

ಆದರೆ ಇಂದಿಗೂ ನಮಗೆ ಕಾಡುವ ಪ್ರಶ್ನೆ..ಅವಳ ಜೊತೆಗೆ ರಾತ್ರಿ ದೀಪ ಹಿಡಿದು ಕುಳಿತ ಅಜ್ಜಿ ಯಾರು ? ಹಗಲು ಆಕೆ ಎಲ್ಲಿಗೆ ಹೋದರು‌? 

ಆಕೆ ರಕ್ತೇಶ್ವರಿ ದೈವ .ಕೋಳಿಯನ್ನು ಅಲ್ಕಿಗೆ ಬರುವಂತೆ ಮಾಡಿ ರಕ್ಷಣೆ ಮಾಡಿದ್ದೂ ರಕ್ತೇಶ್ವರಿ ದೈವ ಎಂದು ನಮ್ಮ‌ಹಿರಿಯರು ಊರವರು ಹೇಳುತ್ತಿದ್ದರು.

ನಮಗೆ ಗೊತ್ತಿಲ್ಲದೇ ಇರುವ ಇಂತಹ ಅನೇಕ ವಿಚಾರಗಳಿವೆ

ದೈವ ದೇವರುಗಳ ಮಹಿಮೆಯನ್ನು ನಾವು ಪೂರ್ಣವಾಗಿ ಅರಿಯಲಾರೆವು..

ತೇನ ವಿನಾ ತೃಣಮಪಿ ನ ಚಲತಿ 

( ದೇವರ ಆಣತಿಯ ಹೊರತಾಗಿ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ) - ಡಾ.ಲಕ್ಷ್ಮೀ ಜಿ ಪ್ರಸಾದ್