Tuesday 17 October 2023

ಬಾಲೆ ಮಧುರಗೆ ಮದಿಮಾಲ್

 ಬಾಲೆ ಮಧುರಗೆ ಮದಿಮಾಲ್ : ಪಾಡ್ದನ ಹಾಡಿದವರು ಶಾರದಾ ಜಿ ಬಂಗೇರ

ಸಂಗ್ರಹ,ಲಿಪ್ಯಂತರ ಅನುವಾದ ಮತ್ತು ಪ್ರಕಟಣೆ.ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಧುರಗೆ ಮದುಮಗಳು


ಮದುವೆಗಿಂತ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ವಿಚಾರ ದೇಯಿ ಬೈದೆತಿ ಪಾಡ್ದನದಲ್ಲಿದೆ. ಅಂತಹ ಪದ್ಧತಿಯ ಕುರಿತು ರಚಿಸಲ್ಪಟ್ಟ ಪಾಡ್ದನವಿದು. ಏಳು ಜನ ಅಕ್ಕ ತಂಗಿಯರಲ್ಲಿ ಮಧುರಗೆ ಹಿರಿಯವಳು. ಆರು ಜನ ತಂಗಿಯರಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತದೆ. ಮಧುರಗೆ ಮದುವೆಯಾಗದೆ ಉಳಿದಾಗ ಆರು ಜನ ತಂಗಿಯರು ಹಾಗೂ ಮನೆ ಮಂದಿ ಒಟ್ಟಾಗಿ ಚರ್ಚಿಸಿ “ಅವಳ ಕಣ್ಣು ಕಟ್ಟಿ ಕಾಡಿಗೆ ಬಿಡಬೇಕು” ಎಂದು ನಿಶ್ಚಯಿಸುತ್ತಾರೆ. ದೊಡ್ಡಪ್ಪನ ಮಗನಿಗೆ ನೂಲ ಮದುವೆ(ಉಪನಯನ) ಎಂದು ಹೇಳಿ ಅವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಾಗ ಕಾಡಿನಲ್ಲಿ ಬಿಟ್ಟು ತಂದೆ ಹಿಂದಿರುಗುತ್ತಾರೆ. ಅವಳ ತಾಯಿ ‘ತನ್ನ ಮಗಳನ್ನು ಒಂದು ನೆಲೆಗೆ ಮುಟ್ಟಿಸುವಂತೆ’ ದೈವಗಳಲ್ಲಿ ಪ್ರಾರ್ಥಿಸುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್

ಜುಮಾದಿ ದೈವವು ಮೂರ್ತೆ ತೆಗೆಯುವ ಬೈದ್ಯನ ರೂಪದಲ್ಲಿ ಬಂದು ಅವಳನ್ನು ಕರೆದೊಯ್ದು ಕದ್ರಿಯ ಬಂಗೇರ ಅರಸನಿಗೆ ಒಪ್ಪಿಸುತ್ತದೆ. ಆತ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಮಧುರಗೆಯ ಕಥೆ ಸುಖಾಂತವಾಗಿದೆಯಾದರೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಕಾಡಿನಲ್ಲಿ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬಿಡುತ್ತಿದ್ದ ಅನಿಷ್ಟ ಪದ್ಧತಿಯ ಕುರಿತು ತಿಳಿಸುತ್ತದೆ. ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಕಾಡಿನ ದಾರಿಯಲ್ಲಿ ಬಂದ ಯಾರೋ ಕರುಣಾಳು ವ್ಯಕ್ತಿಗಳು ಅವಳನ್ನು ಕರೆದುಕೊಂಡು ಹೋಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸಿರಬಹುದು. ಕಾಲಾಂತರದಲ್ಲಿ ಜುಮಾದಿಯ ಮಹಿಮೆ ಸೇರಿರಬಹುದು.© ಡಾ.ಲಕ್ಷ್ಮೀ ಜಿ‌ ಪ್ರಸಾದ್



ಭಾರತ ದೇಶದಾದ್ಯಂತ ಪ್ರಚಲಿತವಿದ್ದ ಸತಿ ಪದ್ಧತಿಯ ಬಗ್ಗೆ ತುಳು ಪಾಡ್ದನಗಳು ಮೌನ ತಾಳಿವೆ. ಇದರಿಂದ ಸತಿಪದ್ಧತಿ ತುಳುನಾಡಿನಲ್ಲಿ ಅಷ್ಟಾಗಿ ಪ್ರಚಲಿತವಿರಲಿಲ್ಲ. ಇಂಥದೊಂದು ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಇರಲಿಲ್ಲ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತಲೂ ಕ್ರೂರವಾದ ಮದುವೆಯಾಗದ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದ ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಪ್ರಚಲಿತವಿತ್ತು ಎನ್ನುವುದಕ್ಕೆ ಈ ಪಾಡ್ದನ ಸಾಕ್ಷಿಯಾಗಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್



ಡೆನ್ನಾರ ಡೆನ್ನಾ ಡೆನ್ನಾನಾ ಓಯೇಯೇ ಡೆನ್ನಾನಾ

ಕೊಂಟಾಡದ ಬೀಡಿನಲ್ಲಿ ಇದ್ದಾರೆ

ಕೋಚಣ್ಣ ಆಳ್ವರು ಇದ್ದಾರೆ

ಅವರಿಗೆ ಮೋಹದ ಪ್ರೀತಿಯ ಮಡದಿ ಕುಂತ್ಯಮ್ಮ ದೈಯಾರು

ಡೆನ್ನಾ ಡೆನ್ನಾನಾ ಓಯೋಯೋ ಡೆನ್ನಾನ ಡೆನ್ನಾ ಡೆನ್ನಾ ಡೆನ್ನಾನಯೇ

ಅವರಿಗೆ ಹುಟ್ಟಿದ ಬೆಳೆಯುವ ಹೆಣ್ಣು ಮಕ್ಕಳು

ಏಳು ಜನ ಹೆಣ್ಣು ಮಕ್ಕಳು

ಚಿಕ್ಕ ಚಿಕ್ಕ ಹುಡುಗಿಯರನ್ನು ದೊಡ್ಡ ದೊಡ್ಡ ರಾಜ್ಯಕ್ಕೆ 

ಅರಸು ಬಲ್ಲಾಳರಿಗೆ ಕೊಟ್ಟಿದ್ದಾರೆ

ಎಲ್ಲರಿಂದ ಹಿರಿಯವಳು ಮಧುರೆಗೆ ಮದುಮಗಳು

ಉಳಿದುಕೊಂಡು ಉಳಿದು ಬರುವಾಗ

ಯಾರಮ್ಮ ಮದುಮಗಳೆ ಕೇಳಿದೆಯ

ಕೊಂತ್ಯಮ್ಮ ದೇವಿಯನ್ನು ಕರೆದರು

ನಮ್ಮ ಸೋದರಳಿಯ ಇದ್ದಾನೆ ಅವನಾದರೆ

ಕದಿರೆಯ ಬೀಡಿನಲ್ಲಿ ಬಂಗೇರ ಅರಸು

ಅವನಲ್ಲಿ ಒಂದು ಮಾತು ಕೇಳು 

 ಮಗಳನ್ನು ಮದುವೆ ಆಗುವನೋ

ಕೋಚಣ್ಣ ಆಳ್ವರು ಹೇಳಿದರು 

 ಆ ದಿನ ಹೋಗಿ ಮರುದಿನ ಬಂದಾಗ

ಬೆಳಗಿನ ಜಾವದಲ್ಲಿ ಏಳುವರು

 ಕುಂತ್ಯಮ್ಮ ಮಡದಿ ಹೇಳುವರು

ಯಾರಯ್ಯ ಒಡೆಯ ಯಾರಯ್ಯ ಮದುಮಗ

ನಾನು ಹೋಗುವೆ ನಾನು ಬಂಗೇರನ

ಹತ್ತಿರ ಬಂದು ಮಾತು ಕೇಳುವೆಂದು ಹೇಳಿದರು

ಬೇಗನೆ ಹೋಗಿ ಬೇಗ ಬಾ 

 ಎಂದು ಕೋಚಣ್ಣ ಆಳ್ವರು ಹೇಳಿದರು

ಯಾರಮ್ಮ ಮಧುರಗ ಮಧುರಗ ಕೇಳಿದೆಯಾ

ನಾನು ಒಂದು ದೇವಸ್ಥಾನಕ್ಕೆ ಹೋಗುವೆ © ಡಾ.ಲಕ್ಷ್ಮೀ ಜಿ ಪ್ರಸಾದ್ 

ಕದಿರೆಯ ದೇವಸ್ಥಾನಕ್ಕೆ ಹೋಗುವೆ

ಎಂದು ಕದಿರೆಯ ಬೀಡಿಗೆ ಹೋಗುವಾಗ

ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ

ಯಾರದು ಕೆಲಸದವರೇ ಕರೆಯುವನು

ಅದು ಯಾರು ಬರುವುದೆಂದು ನೋಡಿ ಎಂದು

ಏಳೇಳು ಮಾಳಿಗೆಯ ಉಪ್ಪರಿಗೆಯಲ್ಲಿ ಕುಳಿತು

ಬಂಗೇರ ಅರಸು ನೋಡುತ್ತಾರೆ

 ಯಾರದು ಬರುವುದು ನನ್ನ ಅತ್ತೆ

ಸೋದರ ಮಾವನ ಮಡದಿ ಎಂದು ಹೇಳಿದನು

ಕವುಚಿ ಹಾಕಿದ ಕಲ್ಲಿನ ಮರಿಗೆಯನ್ನ

ಮೊಗಚಿ ಹಾಕಿ ತಂದರು 

 ಆಕಾಶದ ಏತ ಕೊಡಿಸಿದರು

ಪಾತಾಳದಿಂದ ಹನಿ ನೀರು ತೆಗೆಸಿದರು

ತಾಮ್ರದ ಸೌಟು ನೀರು ತರಿಸಿದರು

ಕದಿರೆಯ ಬಂಗೇರ ಅರಸುಗಳು

ಯಾರಯ್ಯ ಅತ್ತೆಯವರೇ ಅತ್ತೆಯವರೇ ಬಟ್ಟೆಯಲ್ಲಿ

ಮುಖದ ಬೆವರು ಒರಸಿರಿ ಎಂದು ಹೇಳಿದ

ಬಂಗೇರ ಅರಸುಗಳು ಹೇಳುವಾಗ

ಏನು ಬಂದಿರಿ ಅತ್ತೇಂದು ಕೇಳಿದರು

ಒಳ್ಳೆಯದಕ್ಕೆ ಬಂದಿರೋ ಕೆಟ್ಟದಕ್ಕೆ ಬಂದಿರೋ

ಬAದವರು ಕುಳಿತುಕೊಳ್ಳಿ ಎಂದು ಹೇಳಿದರು

ಊಟ ಮಾಡಿ ಎಂದು ಹೇಳಿದರು 

 ಕದ್ರಿಯ ಬಂಗೇರ ಅರಸುಗಳು

ನಾನು ಬಂದ ಕಾರ್ಯವ ಹೇಳಿ 

 ನಾನು ಊಟ ಮಾಡುವೆಂದು

ಹೇಳಿದರು ಮದುಮಗಳು ಕುಂತ್ಯಮ್ಮ ದೈಯಾರು

ಯಾರಯ್ಯ ಬಂಗೇರ ಅರಸುಗಳು 

 ನಮ್ಮ ಪ್ರೀತಿಯ ಮೋಹದ ಮಗಳು

ಮಧುರಗೆ ಮದುಮಗಳು ಇನ್ನು ಇದ್ದಾಳೆ

ಬಂದ ಬಂದ ಸಂಬAಧ ಕೂಡಿ ಬರುವುದಿಲ್ಲ

ಕಣ್‌ಕಟ್ಟಿನ ಹಾಗೇ ಆಗುತ್ತದೆ

ನೀನಾದರು ಅವಳನ್ನು ಮದುವೆ ಆಗಬೇಕು ಎಂದು

ಕುAತ್ಯಮ್ಮ ದೇವಿ ಕೇಳುವಾಗ 

 ಯಾರಮ್ಮ ಅತ್ತೆಯೇ ಕೇಳಿರಿ

ಒಳ್ಳೆ ಒಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ

ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ 

 ಕೆಂಚು ಕೂದಲ ಮೇಳ್ಳೆಗಣ್ಣಿನ

ತಿರುಚಿನ ಕಾಲುಗಳ ದೊಡ್ಡ ಹೊಟ್ಟೆಯ ಹುಡುಗಿಯನ್ನು

ನನಗೆ ಇಟ್ಟು ಕಟ್ಟುವಿರಾ ಎಂದು ಕೇಳುವರು

ಕದಿರೆಯ ಬಂಗೇರ ಅರಸುಗಳು

ಇಲ್ಲ ಮಗ ಬಂಗೇರ ನೀನಗಾಗುವಂಥ ಹೆಣ್ಣು ಎಂದು  © ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ಅಷ್ಟಾಗಿ ಕೇಳಿದರು ಕುಂತ್ಯಮ್ಮ ದೈಯಾರು

ಕಣ್ಣಿನಲ್ಲಿ ನೀರು ತಂದುಕೊAಡರು

ಹಾಗಾದರೆ ಅಂಥ ಹೆಣ್ಣನು ಕಲ್ಲು ಕಟ್ಟಿ

ಹೊಂಡಕ್ಕೆ ಹಾಕಿ ಅತ್ತೆಯವರೇ 

 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಬಂಧಿಸಿ

ಕತ್ತಲಿನ ರಾಜ್ಯಕ್ಕೆ ಬಿಡಿ ಎಂದು 

 ಹೇಳಿದರು ಬಂಗೇರ ಅರಸುಗಳು

ಹೇಳಿದ ಮಾತನ್ನು ಕೇಳಿದರು ಕುಂತ್ಯಮ್ಮ

ಇಳಿದುಕೊAಡು ಊರಿಗೆ ಬರುವರು

ಡೆನ್ನಾನ್ನಾ ಡೆನ್ನ ಡೆನ್ನಾನಾ ಮದುಮಗ

ಯಾರಯ್ಯ ಮದುಮಗ ಕೇಳಿರಿ 

 ನಾನು ಹೋದೆ ಕದಿರದ ಬೀಡಿಗೆ

ಬಂಗೇರ ಅರಸರ ಹತ್ತಿರ ಮಾತನಾಡಿದೆ

ಅವನು ಹೇಳಿದ ಮಾತು ಕೇಳಿದಾಗ

ಜೀವ ಇಟ್ಟುಕೊಂಡು ಬದುಕುವುದೇ ಬೇಡವೆನಿಸಿತು

ಒಳ್ಳೊಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ

ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ ಉಳಿದೊಂದು

ಅವಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲ ರಾಜ್ಯಕ್ಕೆ

ಬಿಡಿ ಎಂದು ಹೇಳಿದ ಬಂಗೇರ ಅರಸು

ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಾ

ಕೊಂಡಾಟAದ ಬೀಡಿನಲ್ಲಿ ಇದ್ದಾರೆ ರಾಯರು

ಕೋಚಣ್ಣ ಆಳ್ವರು ಕುಂತ್ಯಮ್ಮ ದೈಯಾರು

ಅವರಿಗೆ ಹುಟ್ಟಿ ಬೆಳೆದ ಮಕ್ಕಳು 

 ಏಳು ಜನ ಹೆಣ್ಣು ಮಕ್ಕಳು

ಎಲ್ಲರಿಗಿಂತ ಹಿರಿಯವಳು ಮಧುರಗೆ ಮದುಮಗಳು

ಬೆಳೆದೊಂದು ಮಗಳನ್ನು ಏನು ಮಾಡುವುದೆಂದು

ಎಲ್ಲರು ಒಟ್ಟಿಗೆ ಸೇರಿ ಒಟ್ಟಿಗೆ ಕೇಳುವಾಗ

ನಮ್ಮ ದೊಡ್ಡಪ್ಪನ ಮಗನಿಗೆ ನೂಲಮದುವೆ೧

ಇದೆಯೆಂದು ಹೇಳಿ ಸಿಂಗಾರ ಮಾಡಿರಿ ತಾಯಿ

ಹೇಳುವರು ಹೆಣ್ಣುಗಳು ಆರು ಜನ ಹೆಣ್ಣು ಮಕ್ಕಳು © ಡಾ‌.ಲಕ್ಷ್ಮೀ ಜಿ ಪ್ರಸಾದ್ 

ತಂಗಿಯರು ಹೇಳುವಾಗ 

 ಯಾರಯ್ಯ ತಾಯಿ ಯಾರಯ್ಯ ತಾಯಿ

ಕವುಚಿ ಮಲಗಿ ಉಸಿರು ಬಿಟ್ಟರೆ

ಒಂದು ಕೋಲು ಮಣ್ಣು ಅಡಿಗೆ ಹೋಗುತ್ತದೆ

ಮೊಗಚಿ ಮಲಗಿ ಉಸಿರು ಬಿಟ್ಟರೆ 

 ಮಾಡಿನ ಮುಳಿ ಹಾರುತ್ತದೆ. 

ದೊಡ್ಡವಳಾದ ಹೆಣ್ಣನ್ನು ಮನೆಯಲ್ಲಿ

ಇಡಲು ಬಾರದೆಂದು ಹೇಳಿದರು 

 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ

ಕತ್ತಲೆ ಕಾಡಿಗೆ ಬಿಟ್ಟು ಬನ್ನಿ ಎಂದು ಹೇಳಿದರು

ಯಾರಯ್ಯ ತಾಯಿ ತಾಯಿ ಕೇಳಿರಿ 

 ತಂದೆಗೆ ಹೇಳಿರೆಂದು ಹೇಳಿದರು

ಆರು ಜನ ಹೆಣ್ಣು ಮಕ್ಕಳು ಕುಳಿತು

ಕೇಳುವರು ಮಧುರಗೆ ಮದುಮಗಳು

ಯಾರು ಮಗ ಮಧುರಗ ಯಾರಮ್ಮ ಮಧುರಗೆ

ನಮ್ಮ ದೊಡ್ಡಪ್ಪನ ಮಗನಿಗೆ ನೂಲ ಮದುವೆ

ಉಂಟು ಎಂದು ಹೇಳಿದರು 

 ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುವರು

ತಂದೆಯ ಒಟ್ಟಿಗೆ ಹೋಗು ಎಂದು 

 ಆರು ಜನ ತಂಗಿಯರು ತಾಯಿಯರು

ಒಟ್ಟಿಗೆ ಸೇರಿ ಹೇಳುವಾಗ 

 ಕಣ್ಣಿನಲ್ಲಿ ದುಃಖ ಪಡುವಳು ಮಗಳು

ಹೊಟ್ಟೆಯಲ್ಲಿ ಕಾವೇರಿ ಮಾಡುವಳು

ಆಯಿತೆಂದು ಹೇಳುವುದಿಲ್ಲ ಆಗದೆಂದು ಹೇಳುವುದಿಲ್ಲ

ಬಾಯಿತೆರೆದು ಹೇಳುವುದಿಲ್ಲ 

 ಕೊರಳು ಕೆಳಗೆ ಹಾಕಿ ಕಡುದುಃಖ

ಬಿಡುವಳು ಮಗಳು ಮಧುರಗೆ ಮದುಮಗಳು

ಯಾರು ಮಗಳೆ ಮದುಮಗಳೆ ಮಧುರಗ

ಎಂದರು ತಾಯಿ ಬೆಳ್ಳಿಯ ತಟ್ಟೆಗೆ 

 ಬಂಗಾರಿನ ಚಮಚ ಹಿಡಿದುಕೊಂಡು

ತಲೆಗು ಮೈಗೂ ಸ್ನಾನ ಮಾಡು ಮಗಳೆ

ತಲೆಗೆ ಎಣ್ಣೆ ಹಾಕಿಕೋ ಎಂದರು 

 ತಾಯಿ ಕುಂತ್ಯಮ್ಮ ಹೇಳಿದರು

ಬಿಸಿನೀರು ಕಾಯಿಸಿದರು 

 ಬೇಗನೆ ಅಡಿಗೆ ಮಾಡಿದರು

ನೀರು ಕಾದು ಬಿಸಿಯಾಗಲು 

 ಮಧುರಗೆ ಮದುಮಗಳನ್ನು ಕರೆದರು

ಬಿಸಿನೀರು ಆಗಿದೆ ಅಡಿಗೆ ಆಗಿದೆ

ಎಂದು ಇನ್ನು ಬೇಗ ಎಂದು ಹೇಳಿದರು

ತಲೆಗೆ ಮೈಗೆ ಸ್ನಾನ ಮಾಡು ಮಗಳೆ ಮಧುರಗ

ಚಿನ್ನದಲ್ಲಿ ಸಿಂಗಾರ ಮಾಡುವೆಂದು ಹೇಳುವರು

ನನಗೆ ಯಾಕೆ ಸೀರೆ ರವಕೆ ತಾಯಿಯವರೆ

ಕತ್ತಲೆ ಕಾಡಿಗೆ ಹೋಗುವವಳಿಗೆ

ಎಂದು ಹೇಳುವಳು ಮಧುರಗೆ ಮದುಮಗಳು

ಹೇಳುವಾಗ ತಾಯಿ ಕುಂತ್ಯಮ್ಮ ಹೇಳುವರು

ಯಾರು ಮಗಳೆ ಮಧುರಗ ಯಾರು ಮಗ ಮಧುರಗ

ನಿನ್ನ ದೊಡ್ಡಪ್ಪನ ಮಗನ ಉಪನಯನ 

 ಇದೆ ಎಂದು ಹೇಳುವರು

ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುತ್ತಾರೆ

ಎಂದು ಹೇಳುವರು ಕುಂತ್ಯಮ್ಮ ದೈಯಾರು

ಬಿಸಿನೀರು ತಣ್ಣೀರು ಎರೆದರು ಅವರು 

 ಚಿನ್ನದ ಒಡವೆ ತಂದರು

ಚಿನ್ನದೊಡವೆ ಅವಳ ಕೊರಳಿಗೆ ಹಾಕಿದರು

ರೇಷ್ಮೆಗಿಂತ ಮೇಲಿನ ರೇಷ್ಮೆ ಸೀರೆಯನ್ನು ತಂದರು

ಉಡಿಸಿದರು ಇನ್ನು ಬೇಗ ಬರುವಾಗ

ಹೊಟ್ಟೆಗೆ ಉಣ್ಣುವುದಿಲ್ಲ ಬಾಯಿ ತೆರೆಯುವುದಿಲ್ಲ

ತಲೆ ಕೆಳಹಾಕಿ ಕಣ್ಣಿನಲ್ಲಿ ನೀರು ತುಂಬುತ್ತಾಳೆ

ಯಾರು ಮಗಳೆ ಯಾರು ಮಗಳೆ ಮಧುರಗ

ಹೊತ್ತು ಹೋಗುತ್ತದೆ ವೇಳೆ ಆಗುತ್ತದೆ

ಸಮಯಕ್ಕೆ ಹೋಗಬೇಕೆಂದು ಹೇಳುವರ

ತಂದೆ ಕೋಚಣ್ಣಾಳ್ವರು ಬರುವರು

ಕೋಚಣ್ಣಾಳ್ವರು ಇನ್ನು ಬೇಗ ಬಂದರು

ಬೇಗ ಅಲಂಕಾರ ಮಾಡಿ ಊಟ ಹಾಕು

ಕುಂತ್ಯಮ್ಮ ದೈಯಾರೆಂದು ಹೇಳಿದರು

ಅಲಂಕಾರ ಸಮ್ಮಾನ ಮಾಡಿದರು ಕುಂತ್ಯಮ್ಮ

ಚಿನ್ನದಲ್ಲಿ ಶ್ರೇಷ್ಠವಾದ ಚಿನ್ನದ ಒಡವೆ

ರೇಷ್ಮೆ ಸೀರೆಯಲ್ಲಿ ಒಳ್ಳೆಯ ಸೀರೆಯನ್ನು

ಉಡಿಸಿ ಕಳುಹಿಸಿದರು ಹೋಗು ಮಗ

ಈವತ್ತೊಂದು ದಿನ ಕುಳಿತು ನಾಳೆಯೆ ಬನ್ನಿ ಎಂದು

ತಾಯಿ ಕುಂತ್ಯಮ್ಮ ಹೇಳುವಾಗ

ಯಾರಮ್ಮ ತಾಯಿ ತಾಯಿಯವರೇ ಹೇಳುವಳು

ನನಗೆ ಯಾಕೆ ಸೀರೆ ರವಿಕೆ 

 ಕತ್ತಲೆ ಕಾಡಿಗೆ ಹೋಗುವವಳಿಗೆ

ನನಗೆ ಯಾಕೆ ಸುಳ್ಳು ಹೇಳುತ್ತೀರಿ ತಾಯಿಯವರೇ

ನಾನು ಕೂಡ ನಿನ್ನ ಮಗಳೆಯೆ? ಕೇಳುವಳು

ಅತ್ತುಕೊಂಡು ದುಃಖಿಸಿಕೊಂಡು ಹೊರಡುವಳು ಮಗಳು

ನಿಮ್ಮ ಹೆಣ್ಣು ಮಕ್ಕಳು ನನ್ನ ತಂಗಿಯರು ದೊಡ್ಡ ದೊಡ್ಡ

ಅರಸು ಬಲ್ಲಾಳರುಗಳು ಒಟ್ಟಿಗೆ ಸೇರುವ ಹೊತ್ತೊಂದು

ಬರುವುದು ಎಂದು ಹೇಳಿದಳು ಮಧುರಗೆ ಮದುಮಗಳು

ಕಣ್ಣಿನಲ್ಲಿ ಕಡುದುಃಖ ಮಾಡಿಕೊಂಡು ಹೊರಟಾಗ

ಹೋಗುವ ಮಗಳೆ ಮದುಮಗಳೆ ಬಾ ಎಂದು 

ಕರೆದುಕೊಂಡು ಹೋಗುವರು ತಂದೆ ಕೋಚಣ್ಣಾಳ್ವರು

ಕಾಡಿನ ನಡುವೆ ಹೋಗುವಾಗ ರಾತ್ರಿ ಕತ್ತಲು ಆಗುವಾಗ

ಯಾರಯ್ಯ ತಂದೆಯವರೇ ತಂದೆಯವರೇ

ನನಗೆ ಆಯಾಸ ಬಾಯಾರಿಕೆ ಆಗುತ್ತಿದೆ

ನಾವು ಸ್ವಲ್ಪ ಕುಳಿತುಕೊಳ್ಳುವ ಎಂದು ಹೇಳುವಾಗ

ಆಯಿತು ಮಗಳೆ ಎಂದು ಹೇಳಿ ಕಾಲು ನೀಡಿ 

ಕುಳಿತುಕೊಳ್ಳುವರು ತಂದೆ ಕೋಚಣ್ಣಾಳ್ವರು

ಸ್ವಲ್ಪ ಮಲಗಿ ನಿದ್ರೆ ಮಾಡುವೆ ಮತ್ತೆ

ಹೋಗುವ ಎಂದು ಹೇಳಿದರು ಮದುರೆಗ ಮದುಮ್ಮಗಳು

ಡೆನ್ನಾ ಡೆನ್ನಾ ಡೆನ್ನಾನಾ ಓಯೇಯೇ ಮದುಮಗ ಕೇಳಿರಿ

ಮಗಳನ್ನು ಎಲ್ಲಿಗೆ ಕರೆದುಕೊಂಡು ಹೋದಿರಿ

ಎಲ್ಲಿ ಬಿಟ್ಟು ಬಂದಿರಿ ಎಂದು ಮಡದಿ 

 ಕುಂತ್ಯಮ್ಮ ದೆಯ್ಯಾರು ಕೇಳುವಾಗ

ಕಣ್ಣಿನಲ್ಲಿ ಕಡು ದುಃಖ ಮಾಡಿದರು 

 ಹೊಟ್ಟೆಯಲ್ಲಿ ಕಾವೇರಿ ಸುರಿದರು

ಏಳು ಜನ ಹೆಣ್ಣು ಮಕ್ಕಳನ್ನು ಏಳು ಕೋಟಿ ಕೊಟ್ಟು

ಏಳು ಸಂಬAಧ ಕಟ್ಟಬೇಕೆಂದು ಎಣಿಸಿದ್ದೆ ನಾನು

ಒಂದು ಮಗಳಿಗೆ ಸಂಬAಧ ಕೂಡಿ ಬರಲಿಲ್ಲ ಹೇಳಿದರು

ಕುಂತ್ಯಮ್ಮ ದೈಯಾರು ಅಷ್ಟು ಮಾತು ಕೇಳಿದರು

ಓಡೋಡಿ ಹೋಗುವರು ಕುಂತ್ಯಮ್ಮ

ಯಾರಯ್ಯ ದೈವಗಳೆ ಯಾರಯ್ಯ ದೇವರೆ

ನನ್ನ ಒಂದು ಮಗಳಿಗೆ ಒಳ್ಳೆಯ ದಾರಿ ತೋರಿಸು

ಎಂದು ಹೇಳಿದರು ಕುಂತ್ಯಮ್ಮ ದೈಯಾರು

ದೊಡ್ಡ ಒಂದು ಮನೆಗೆ ಎತ್ತಿಸಿ ಅವಳನ್ನು

ರಕ್ಷಣೆ ಮಾಡಿ ಎಂದು ಕೇಳಿದರು  ಯಾರಮ್ಮ ಕುಂತ್ಯಮ್ಮ ಕೇಳಿದೆಯಾ

ಒಂದು ಕಾಡಿನಲ್ಲಿ ಹೋಗುವಾಗ ಅವಳಿಗೆ 

 ನಿದ್ರೆ ಬೇಗ ಬಂತು

ತAದೆಯವರೆ ಮಲಗುವೆ ಎಂದು ಹೇಳಿದಳು ಮಗಳು

ಕಾಲು ನೀಡಿ ಮಲಗಿಸಿದೆ  

ಮೆಲ್ಲನೆ ಎದ್ದು ಕಣ್ಣಿಗೆ ಬಟ್ಟೆ ಕಟ್ಟಿ

ಬಿಟ್ಟು ಬಂದೆ ಎಂದು ಹೇಳಿದರು

ಡೆನ್ನ ಡೆನ್ನಾ ಡೆನ್ನಾನ್ನಾ ಓಯೇಯೆ ಡೆನ್ನಾನ್ನಾ

ಆ ಹೊತ್ತಿಗೆ ಮಗಳು ಮಧುರೆಗೆ 

 ಯಾರಯ್ಯ ತಂದೆಯವರೆ ಎಲ್ಲಿದ್ದೀರಿ

ಎಂದು ಹೇಳಿ ಎಚ್ಚರಾಗುವಾಗ ಅತ್ತುಕೊಂಡು

ಅತ್ತುಕೊAಡು ಬೊಬ್ಬೆ ಹಾಕುವಾಗ

ತಾಳೆಯ ಮೂರ್ತೆ ಮಾಡುವ ಬೈದ್ಯಬ ರೂಪದಲ್ಲಿ © ಡಾ‌‌.ಲಕ್ಷ್ಮೀ ಜಿ‌ ಪ್ರಸಾದ್ 

ಜುಮಾದಿ ದೈವವು ಬರುತ್ತದೆ

ಯಾರಮ್ಮ ಮದುಮಗಳೆ ಯಾರಮ್ಮ ಮದುಮಗಳೆ

ನಿನ್ನ ಮಾವ ನಾನೆಂದು ಹೇಳಿ 

 ನಿನ್ನ ಕಣ್ಣಿನ ಬಟ್ಟೆಯನ್ನು ಬಿಚ್ಚಿ

ನಿನ್ನನ್ನು ಕರೆದುಕೊಂಡು ಹೊಗುವೆ

ನನ್ನೊಂದು ಊರಿಗೆ ಮನೆಗೆ ಎಂದು ಹೇಳಿದರು೩

ಕಣ್ಣಿನ ಬಟ್ಟೆ ಬಿಡಿಸಿರಿ ಮಾವ 

 ಕೈಯ ಬಂಧನ ಬಿಡಿಸಿರಿ ಎಂದು

ಮಧುರಗೆ ಹೇಳಿ ಅತ್ತುಕೊಂಡು 

 ಕೆಳಿದಾಗ ಬೇಸರ ಮಡುವಾಗ

ನಿನ್ನನ್ನು ನನ್ನೊಂದು ಕೊಟಡಿಗೆ 

ಕರೆದುಕೊಂಡು ಹೋಗುವೆಂದು

ಬಾರಮ್ಮ ಮದುಮಗಳೆ ಬಾ ಎಂದು 

ಕರೆದುಕೊಂಡುಹೋಗುತ್ತದೆ ತಾಳೆಯ

 ಮೂರ್ತದಾರನ ವೇಷದ ಜುಮಾದಿ ದೈವ

ಆ ಹೊತ್ತಿಗೆ ಕೊಂಡು ಹೋಗಿ ಅಲ್ಲಿ

ಚಾವಡಿಯಲ್ಲಿ ಕುಳ್ಳಿರಿಸಿ ಯಾರಯ್ಯ ಬಂಗೇರ ಅರಸುಗಳೆ

ನಿನಗಾಗುವಂಥ ಹೆಣ್ಣನ್ನು ಕರೆದುಕೊಂಡು ಬಂದಿದ್ದೇನೆ

ಚಾವಡಿ ನಡುವಿನಲ್ಲಿ ನೋಡಿರಿ ಎಂದಾಗ

ಓಡೋಡಿ ಬರುವರು ಬಂಗೇರರು 

 ಕದಿರೆಯ ಬಂಗೇರ ಅರಸುಗಳು

ಒಂದು ಕೈಯಲ್ಲಿ ಹಿಡಿದರು ಬಂಗೇರರು

ಕದಿರೆಯ ಬಂಗೇರ ಅರಸುಗಳು

ಇಂದು ಹಿಡಿದ ಕೈಯನ್ನು ಯಾವತ್ತಿಗೂ ಬಿಡಲಾರೆ © ಡಾ‌.ಲಕ್ಷ್ಮೀ ಜಿ ಪ್ರಸಾದ್ 

ಹೇಳುವರು ಒಳಗೆ ಕರೆದುಕೊಂಡು ಹೋಗುವರು

ಡೆನ್ನನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಯೇ

ಶಾರದಾ ಜಿ ಬಂಗೇಋ ಮೌಖಿಕ ಸಾಹಿತ್ಯ - ಡಾ.ಲಕ್ಷ್ಮೀ ಜಿ ಪ್ರಸಾದ್ ಅವರ ಕೃತಿಯ ಆಯ್ದ ಭಾಗ..copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್ 

1 comment: