Saturday 14 October 2023

ಕರಾವಳಿಯ ಸಾವಿರದೊಂದು ದೈವಗಳು : ತುಳುನಾಡಿನ ಅಧ್ಯಯನದಲ್ಲಿ ಒಂದು ಹೊಸ ಮೈಲುಗಲ್ಲು- ಸಂತೋಷ್ ಕುಮಾರ್ ಮುದ್ರಾಡಿ

 

ಡಾ.ಲಕ್ಷ್ಮೀ ಜಿ ಪ್ರಸಾದರ    ಸಾವಿರದೊಂದು ದೈವಗಳು : ತುಳುನಾಡಿನ ಅಧ್ಯಯನದಲ್ಲಿ ಒಂದು ಹೊಸ ಮೈಲುಗಲ್ಲು- ಸಂತೋಷ್ ಕುಮಾರ್ ಮುದ್ರಾಡಿ 


ಕರಾವಳಿಯ ಸಾವಿರದ ದೈವಗಳು ಎನ್ನುವ ಕೃತಿಯಿಂದ ಲಕ್ಷ್ಮಿ ಜಿ ಪ್ರಸಾದ್ ಅವರು ತುಳುನಾಡಿನಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಪ್ರಾಚೀನ ಭಾರತ ಇತಿಹಾಸದಲ್ಲಿ ಎಲ್ಲವೂ ಕೂಡ ಮೌಖಿಕವಾದ ಪರಂಪರೆಯಿಂದ ಬಂದದ್ದು. ಕಾಲ ಕಳೆದಂತೆ ಅದನ್ನು ದಾಖಲಿಸಿಡಬೇಕು ಎನ್ನುವ ವಿಶೇಷವಾದ ಮುಂದಿನ ಪೀಳಿಗೆಯ ಹಿತಾಸಕ್ತಿಯನ್ನು ಬಯಸಿದ ಮಹನೀಯರು ಅದನ್ನು ತಮಗೆ ಗೊತ್ತಿರುವ ಲಿಪಿಯ ಮೂಲಕ ಬರೆದಿಟ್ಟಿದ್ದಾರೆ. ಇದು ಪರಿವರ್ತನೆಯ ನಿಯಮ.ಇದು ವೈದಿಕ ಸಾಹಿತ್ಯ ಬೆಳೆದು ಬಂದ ರೀತಿ.


ದೈವದ ವಿಚಾರದಲ್ಲಿಯೂ ಕೂಡ ಇಲ್ಲಿಯತನಕ ಮೌಖಿಕವಾದ ಪರಂಪರೆಗಳೇ ನಮ್ಮಲ್ಲಿರುವುದು. ಇದು ಹೀಗೆ ಅದು ಹಾಗೆ ಎನ್ನುವ ಇದಮಿತ್ತಮ್ ಎನ್ನುವುದು ದೈವದ ವಿಚಾರದಲ್ಲಿ ಇಲ್ಲಿಯ ತನಕ ಇರಲಿಲ್ಲ.ಆದರೆ ಇದಕ್ಕೂ ಕೂಡ ಲಿಖಿತವಾದ ಒಂದು ರೂಪ ರೇಖೆಯನ್ನು ಕೊಡಬೇಕು ಆ ಮೂಲಕ ಮುಂದಿನ ಪೀಳಿಗೆಯವರಿಗೆ ದಾರಿದೀಪವಾಗಬೇಕು ಎನ್ನುವ ಉದಾತ್ತ ಧ್ಯೇಯದಿಂದ ಋಷಿ ತುಲ್ಯರಾಗಿ ಸಾಧನೆಯ ತಪಸ್ಸಿನಿಂದ ಈ ಗ್ರಂಥ ಇವರಿಂದ ಹೊರಹೊಮ್ಮಿದೆ.


 ನಡೆಯುತ್ತಿರುವ ಕಾಲದಲ್ಲಿ ಯಾವುದೇ ವಿಚಾರದಲ್ಲಿರಲಿ ಹೊಸ ಸೃಷ್ಟಿಯನ್ನು ಮಾಡಬೇಕಾದರೆ ಕೇವಲ ಉತ್ಸಾಹ ಮಾತ್ರ ಸಾಕಾಗುವುದಿಲ್ಲ ಕೆಚ್ಚೆದೆಯ ಧೈರ್ಯವು ಅದಕ್ಕೆ ಬೇಕು. ಅದರೊಟ್ಟಿಗೆ ತ್ಯಾಗ ಹಾಗೂ ತಾಳ್ಮೆ ಇದ್ದರೆ ಮಾತ್ರ ಅದು ಪೂರ್ಣತೆಯನ್ನು ಕೂಡ ಪಡೆದುಕೊಳ್ಳುತ್ತದೆ. ಈ ಗ್ರಂಥದ ವೈಶಾಲ್ಯತೆಯನ್ನು ಕಂಡಾಗ ಇವರ ಧೈರ್ಯ, ತ್ಯಾಗ, ತಾಳ್ಮೆ, ಈ ಮೂರು ಕೂಡ ಎದ್ದು ಕಾಣುತ್ತದೆ.


ದೈವ, ಕೋಲಗಳು ಕೇವಲ ತುಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಕರಾವಳಿಯ ಆಚೆಯೂ ಕೂಡ ಈ ಆಚರಣೆಗಳು ಇವೆ ಎಂಬುದನ್ನು ಮುಂದಿನ ಪೀಳಿಗೆಗೆ ದಾಖಲೆಯ ರೂಪದಲ್ಲಿ ಇರುವ ದೊಡ್ಡ ಗ್ರಂಥ.ಎಲ್ಲಿಯೂ ಜಾತಿ ಜಾತಿಗಳ ತಾಕಲಾಟವಿಲ್ಲ. ದೈವ ಜಾತಿ ಹಾಗೂ ಧರ್ಮವನ್ನು ಮೀರಿ ನಿಂತ ಬಗೆಯನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಕೇವಲ ಕಣ್ಣುಗಳಿದ್ದರೆ ಸಾಲುವುದಿಲ್ಲ ಅದರೊಟ್ಟಿಗೆ ದೈವದ ಅನುಗ್ರಹ ಹಾಗೂ ಮಾಯ ಹಾಗೂ ಜೋಗದ ಬೆಳಕು ಬೇಕು. ಅದಿದ್ದರೆ ಮಾತ್ರ  ಇಂತಹ ಗ್ರಂಥ ಹೊರಬರಲು ಸಾಧ್ಯ.

ಇವರ ಜೋಳಿಗೆಯಲ್ಲಿ ಲೆಕ್ಕೇಸರಿಯೂ ಇದ್ದಾಳೆ ರಕ್ತೇಶ್ವರಿಯೂ ಇದ್ದಾಳೆ. ಪಂಜೂರ್ಲಿಯೂ ಇದೆ ವಾರಾಹಿಯೂ ಇದೆ.

ಈಗೀಗ ತುಳುನಾಡಿನಲ್ಲಿ ದೈವದ ವಿಚಾರದಲ್ಲಿ ಯಾವುದೇ ಸಾಧನೆಗಳನ್ನು ಮಾಡದೆಯೂ ಕೇವಲ ಕಂಡ, ಕೇಳಿದ ವಿಚಾರಗಳನ್ನು ದೊಡ್ಡ ಅಧ್ಯಯನ ಎನ್ನುವಂತೆ ತೋರಿಸಿಕೊಡುತ್ತಿದ್ದಾರೆ.ಮಾತನಾಡುವುದಕ್ಕಿಂತ ಸಾವಿರ ಪಟ್ಟು ಕಷ್ಟ ಬರೆಯುವುದು. ಅಂಥಹಾ ವಾಚಾಲಿಗಳು ಇವರ ಬರಹವನ್ನು ನೋಡಿ ನಾವೆಷ್ಟು ಕೆಳಗಿದ್ದೇವೆ ಎನ್ನುವುದನ್ನು ಕಂಡು ಕೊಳ್ಳಬೇಕು.ಈ ಗ್ರಂಥವನ್ನು ನೋಡುವುದಕ್ಕಿಂತಲೂ ಮೊದಲು ಈ ಗ್ರಂಥ ಬರೆಯುವ ಮೊದಲು ಇವರು ಪಡೆದ ಅಧ್ಯಯನವನ್ನು ಒಮ್ಮೆ ಕಣ್ಣಾಡಿಸಬೇಕು.


ಭವ್ಯವಾದ ಪಂಚಾಂಗದಿಂದ ಕಟ್ಟಿದ ಮನೆ ಗಟ್ಟಿಯಾಗಿ ನಿಲ್ಲುತ್ತದೆ. ಅದೇ ರೀತಿ ಇಂತಹ ಅಧ್ಯಯನಪೂರ್ಣ ವ್ಯಕ್ತಿಗಳಿಂದ ಮಾತ್ರ ಇಂತಹ ವಿಚಾರಗಳನ್ನು ನಿರೀಕ್ಷಿಸಲು ಸಾಧ್ಯ.


ಸಾವಿರದ ದೈವಗಳು ಎನ್ನುವ ಗ್ರಂಥದ ವಿಸ್ತಾರ ಇನ್ನೂ ಹೆಚ್ಚಲಿ. ದೈವದ ಆರಾಧನೆಗೆ ತೀರ ಹತ್ತಿರವಿರುವಂತೆ ಕಾಣುವ ಇನ್ನಿತರ ರಾಜ್ಯಗಳ ಆರಾಧನೆಗಳು ಕೂಡ ಇದರ ಎರಡನೆಯ ಭಾಗವಾಗಿ ಕಾಣಲ್ಪಡಲಿ. ಭಾರತದ ಉದ್ದಗಲಕ್ಕೂ ದೇವರ ಆರಾಧನೆ ಒಂದು ಸೂತ್ರದಂತೆ ನಿಂತಿರುವ ಹಾಗೆ ಈ ದೈವಾರಾಧನೆಯೂ ಕೂಡ ಒಂದಕ್ಕೊಂದು ಪೂರಕವಾಗಿ ಬೆಳೆದು ನಿಂತ ಬಗೆ ನಿಮ್ಮಿಂದ ಬೆಳಕಿಗೆ ಬರಲಿ. ಆ ಮೂಲಕ ನಮ್ಮ ಹಿರಿಯರ ರಾಷ್ಟ್ರ ಪೂರಕವಾದ ಆರಾಧನೆಗಳು ಮುಂದಿನ ಪೀಳಿಗೆಗೆ ಗೊತ್ತಾಗಬೇಕು.


ನಿಮ್ಮ ಸಾಧನೆಗಳ ಸರಮಾಲೆಗಳು ಸಾವಿರವಾಗಲಿ. ನಿಮಗೆ ನನ್ನ ಸಾವಿರ ಸಾವಿರದ ನಮನಗಳು....



|| ✍️|| ಸಂತೋಷ್ ಕುಮಾರ್ ಮುದ್ರಾಡಿ ||

No comments:

Post a Comment