Sunday, 10 December 2023

ಅತ್ಮ‌ಕಥೆಯ ಬಿಡಿ ಭಾಗಗಳು - ನವ ಚೇತನ ಎಂವ ಚೈತನ್ಯದ ಚಿಲುಮೆ


 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.


. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

No comments:

Post a Comment